ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ಅಮೆರಿಕ ತೊರೆಯಿರಿ ಅಥವಾ ರಾಜೀನಾಮೆ ಕೊಡಿ : ಎಚ್‌1ಬಿ ವೀಸಾದಾರರಿಗೆ ಐಬಿಎಂ ಸೂಚನೆ ; ಭಾರತೀಯರ ಮೇಲೆ ಪರಿಣಾಮವೇನು?

 ನ್ಯೂಯಾರ್ಕ್‌: ಅಮೆರಿಕದಲ್ಲಿ ಉದ್ಯೋಗ ಮಾಡುತ್ತಿರುವ ಭಾರತೀಯ ತಂತ್ರಜ್ಞಾನ ವಲಯದ ಉದ್ಯೋಗಿಗಳಿಗೆ ಜಾಗತಿಕ ತಂತ್ರಜ್ಞಾನ ದೈತ್ಯ ಐಬಿಎಂ (IBM) ಹೊಸ ಆಘಾತ ನೀಡಿದೆ. ತನ್ನ ಕನ್ಸಲ್ಟಿಂಗ್ ವಿಭಾಗದ ಬಹುತೇಕ ಹುದ್ದೆಗಳಿಗೆ ಇನ್ನು ಮುಂದೆ ಅಮೆರಿಕದ ಉದ್ಯೋಗ ವೀಸಾ ಮತ್ತು ಗ್ರೀನ್‌ಕಾರ್ಡ್ ಪ್ರಾಯೋಜಕತ್ವ ನೀಡುವುದನ್ನು ಸ್ಥಗಿತಗೊಳಿಸಲು ಕಂಪನಿ ನಿರ್ಧರಿಸಿದೆ. ಇದರಿಂದ ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ಭಾರತೀಯ ವೃತ್ತಿಪರರು ಅನಿಶ್ಚಿತತೆಗೆ ಸಿಲುಕುವ ಸಾಧ್ಯತೆಯಿದೆ.
ಐಬಿಎಂನ ಈ ನಿರ್ಧಾರದಿಂದ ಪ್ರಭಾವಿತರಾಗುವ ಉದ್ಯೋಗಿಗಳಿಗೆ ಅಮೆರಿಕದ ಹೊರಗೆ ತೆರಳಿ ಅದೇ ಕಂಪನಿಯಲ್ಲಿ ಕೆಲಸ ಮುಂದುವರಿಸುವ ಅಥವಾ ಉದ್ಯೋಗ ತೊರೆಯುವ ಆಯ್ಕೆಯನ್ನು ನೀಡಲಾಗಿದೆ. ಈ ಪ್ರಕ್ರಿಯೆಯನ್ನು 2026ರ ಡಿಸೆಂಬರ್ 31ರೊಳಗೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ.
ಐಬಿಎಂನ ಅತಿದೊಡ್ಡ ವ್ಯವಹಾರ ವಿಭಾಗವಾಗಿರುವ ಐಬಿಎಂ ಕನ್ಸಲ್ಟಿಂಗ್‌ನಲ್ಲಿ ಜಾಗತಿಕವಾಗಿ 1.50 ಲಕ್ಷಕ್ಕೂ ಅಧಿಕ ಉದ್ಯೋಗಿಗಳಿದ್ದಾರೆ. ಆದರೆ, ಕಂಪನಿಯ ಈ ನಿರ್ಧಾರದಿಂದ ನಿಖರವಾಗಿ ಎಷ್ಟು ಮಂದಿ ಉದ್ಯೋಗಿಗಳು ಪ್ರಭಾವಿತರಾಗಲಿದ್ದಾರೆ ಹಾಗೂ ಅವರಲ್ಲಿ ಅಮೆರಿಕದಲ್ಲಿ ಕೆಲಸ ಮಾಡುತ್ತಿರುವವರ ಸಂಖ್ಯೆ ಎಷ್ಟಿದೆ ಎಂಬುದನ್ನು ಐಬಿಎಂ ಬಹಿರಂಗಪಡಿಸಿಲ್ಲ.

ವಿಶೇಷವಾಗಿ ಎಚ್‌-1ಬಿ (H-1B) ವೀಸಾದಡಿ ಅಮೆರಿಕದಲ್ಲಿ ಕೆಲಸ ಮಾಡುತ್ತಿರುವವರು ಹಾಗೂ ಗ್ರೀನ್‌ಕಾರ್ಡ್‌ಗಾಗಿ ಕಾಯುತ್ತಿರುವ ವಿದೇಶಿ ಉದ್ಯೋಗಿಗಳಿಗೆ ಈ ನಿರ್ಧಾರ ದೊಡ್ಡ ಹೊಡೆತ ನೀಡುವ ಸಾಧ್ಯತೆಯಿದೆ. ಏಕೆಂದರೆ, ಅಮೆರಿಕದಲ್ಲಿ ಉದ್ಯೋಗ ಮುಂದುವರಿಸಲು ಮತ್ತು ಶಾಶ್ವತ ನಿವಾಸದ ಅನುಮತಿ ಪಡೆಯಲು ಬಹುತೇಕ ವಿದೇಶಿ ವೃತ್ತಿಪರರು ತಮ್ಮ ಉದ್ಯೋಗದಾತ ಕಂಪನಿಗಳ ವೀಸಾ ಪ್ರಾಯೋಜಕತ್ವವನ್ನೇ ಅವಲಂಬಿಸಿರುತ್ತಾರೆ.
ಮಾಧ್ಯಮ ವರದಿಗಳ ಪ್ರಕಾರ, ಪ್ರಭಾವಿತ ಉದ್ಯೋಗಿಗಳಿಗೆ ತಮ್ಮ ಆಯ್ಕೆಯನ್ನು ತಿಳಿಸಲು ಮೂರು ವಾರಗಳ ಕಾಲಾವಕಾಶ ನೀಡಲಾಗಿದೆ. ಅಮೆರಿಕದ ಹೊರಗೆ ವರ್ಗಾವಣೆಯಾಗಲು ಒಪ್ಪಿಕೊಳ್ಳದ ಉದ್ಯೋಗಿಗಳಿಗೆ ಮೂರು ತಿಂಗಳ ವೇತನಕ್ಕೆ ಸಮಾನವಾದ ಪರಿಹಾರ (Severance Pay) ನೀಡಲಾಗುತ್ತದೆ. ಅಂತಹ ಉದ್ಯೋಗಿಗಳಿಗೆ 2026ರ ಡಿಸೆಂಬರ್ 31 ಕೊನೆಯ ಕೆಲಸದ ದಿನವಾಗಿರಲಿದೆ.

ವೀಸಾ ಪ್ರಾಯೋಜಕತ್ವ ಸ್ಥಗಿತಗೊಳಿಸಲು ಐಬಿಎಂ ನಿರ್ಧರಿಸಿದ್ದೇಕೆ?
ತನ್ನ ನಿರ್ಧಾರಕ್ಕೆ ಬದಲಾಗುತ್ತಿರುವ ವ್ಯವಹಾರಿಕ ಅಗತ್ಯಗಳು ಹಾಗೂ ಕೌಶಲ ಹೊಂದಿರುವ ಉದ್ಯೋಗಿಗಳ ಲಭ್ಯತೆಯನ್ನು ಐಬಿಎಂ ಕಾರಣವಾಗಿ ನೀಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಐಬಿಎಂ ವಕ್ತಾರರು, ಅಮೆರಿಕದಲ್ಲಿ ಕೌಶಲ ಹೊಂದಿರುವ ಉದ್ಯೋಗಿಗಳ ಕೊರತೆಯನ್ನು ನೀಗಿಸಲು ಈ ಹಿಂದೆ ಕಂಪನಿ ಹೆಚ್ಚಿನ ಕೌಶಲದ ವಿದೇಶಿ ಉದ್ಯೋಗಿಗಳಿಗೆ ಅವಕಾಶ ಕಲ್ಪಿಸುವ ವೀಸಾ ಪ್ರೊಗ್ರಾಂ ಬಳಸಿಕೊಳ್ಳುತ್ತಿತ್ತು. ಆದರೆ, ಕಳೆದ ಹಲವು ವರ್ಷಗಳಿಂದ ಇಂತಹ ಕಾರ್ಯಕ್ರಮಗಳಲ್ಲಿ ಕಂಪನಿಯ ಪಾಲ್ಗೊಳ್ಳುವಿಕೆ ಕ್ರಮೇಣ ಕಡಿಮೆಯಾಗುತ್ತ ಬಂದಿದೆ ಎಂದು ತಿಳಿಸಿದ್ದಾರೆ.
ಆದರೆ, ಐಬಿಎಂ ತನ್ನ ಎಲ್ಲ ವ್ಯವಹಾರ ವಿಭಾಗಗಳಲ್ಲೂ ವೀಸಾ ಪ್ರಾಯೋಜಕತ್ವವನ್ನು ಸಂಪೂರ್ಣವಾಗಿ ನಿಲ್ಲಿಸುವುದಾಗಿ ಘೋಷಿಸಿಲ್ಲ. ಸದ್ಯದ ನಿರ್ಧಾರವು ಐಬಿಎಂ ಕನ್ಸಲ್ಟಿಂಗ್ ವಿಭಾಗದ ಬಹುತೇಕ ಹುದ್ದೆಗಳಿಗೆ ಮಾತ್ರ ಅನ್ವಯಿಸುತ್ತದೆ. ಇನ್ನೊಂದೆಡೆ, ಐಬಿಎಂನ ಕನ್ಸಲ್ಟಿಂಗ್ ವ್ಯವಹಾರವೂ ಬೆಳವಣಿಗೆಯ ದೃಷ್ಟಿಯಿಂದ ಸವಾಲುಗಳನ್ನು ಎದುರಿಸುತ್ತಿದೆ. 2024ರಿಂದ ಈ ವಿಭಾಗದ ಕಾರ್ಯಕ್ಷಮತೆ ಬಹುತೇಕ ಸ್ಥಗಿತಗೊಂಡಿದ್ದು, ಹೆಚ್ಚಿನ ಬೆಳವಣಿಗೆ ದಾಖಲಿಸಿಲ್ಲ. ಇದೇ ಸಂದರ್ಭದಲ್ಲಿ ಐಬಿಎಂ ತನ್ನ ವ್ಯವಹಾರವನ್ನು ಸಾಫ್ಟ್‌ವೇರ್ ಆಧಾರಿತ ಕಂಪನಿಯಾಗಿ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯತಂತ್ರ ಬದಲಾವಣೆ ಮಾಡುತ್ತಿದೆ. ರೆಡ್‌ಹ್ಯಾಟ್ (Red Hat), ಹ್ಯಾಶಿಕಾರ್ಪ್ (HashiCorp) ಮತ್ತು ಕಾನ್ಫ್ಲುಯೆಂಟ್ (Confluent) ಕಂಪನಿಗಳ ಸ್ವಾಧೀನವೂ ಈ ಬದಲಾವಣೆಯ ಭಾಗವಾಗಿದೆ.

ಭಾರತಕ್ಕೆ ಮರಳಲು ಅಥವಾ ವರ್ಗಾವಣೆಯಾಗಲು ಅವಕಾಶ?
ಐಬಿಎಂನಲ್ಲಿ ಉದ್ಯೋಗ ಮುಂದುವರಿಸಲು ಬಯಸುವ ಉದ್ಯೋಗಿಗಳಿಗೆ ಅಮೆರಿಕದ ಹೊರಗಿನ ದೇಶಗಳಿಗೆ ವರ್ಗಾವಣೆಯಾಗುವುದು ಒಂದು ಆಯ್ಕೆಯಾಗಿದೆ. ಈ ಹಿನ್ನೆಲೆಯಲ್ಲಿ ಭಾರತವು ಉದ್ಯೋಗಿಗಳ ವರ್ಗಾವಣೆಗೆ ಪ್ರಮುಖ ತಾಣವಾಗಿ ಹೊರಹೊಮ್ಮುವ ಸಾಧ್ಯತೆಯಿದೆ.
‘ರೆಸ್ಟ್ ಆಫ್ ವರ್ಲ್ಡ್’ (Rest of World) ವರದಿಯ ಪ್ರಕಾರ, ನವೆಂಬರ್ 19ರಂದು ಐಬಿಎಂನ ಉದ್ಯೋಗಾವಕಾಶಗಳ ವೆಬ್‌ಸೈಟ್‌ನಲ್ಲಿ ಅಮೆರಿಕದ ಹೊರಗಿನ ದೇಶಗಳಲ್ಲಿ ಕನ್ಸಲ್ಟಿಂಗ್ ವಿಭಾಗದ ಒಟ್ಟು 1,278 ಹುದ್ದೆಗಳು ಖಾಲಿ ಇದ್ದವು. ಈ ಪೈಕಿ ಬರೋಬ್ಬರಿ 1,125 ಹುದ್ದೆಗಳು ಭಾರತದಲ್ಲಿದ್ದವು. ಸಿಂಗಾಪುರದಲ್ಲಿ 23 ಹಾಗೂ ಬ್ರಿಟನ್‌ನಲ್ಲಿ 18 ಹುದ್ದೆಗಳು ಖಾಲಿ ಇದ್ದವು. ಅಮೆರಿಕದಲ್ಲಿಯೂ ಕನ್ಸಲ್ಟಿಂಗ್ ವಿಭಾಗದ 89 ಉದ್ಯೋಗಾವಕಾಶಗಳನ್ನು ಕಂಪನಿ ಪ್ರಕಟಿಸಿತ್ತು.
ಈ ಖಾಲಿ ಹುದ್ದೆಗಳು ಅಮೆರಿಕದಿಂದ ಬೇರೆ ದೇಶಗಳಿಗೆ ವರ್ಗಾವಣೆಯಾಗಲು ಬಯಸುವ ಕೆಲವು ಉದ್ಯೋಗಿಗಳಿಗೆ ಐಬಿಎಂನಲ್ಲೇ ತಮ್ಮ ವೃತ್ತಿಜೀವನ ಮುಂದುವರಿಸಲು ಅವಕಾಶ ಕಲ್ಪಿಸಬಹುದು. ಆದರೆ, ಪ್ರಭಾವಿತ ಉದ್ಯೋಗಿಗಳಲ್ಲಿ ಎಷ್ಟು ಮಂದಿಗೆ ವಿದೇಶಗಳಲ್ಲಿ ಕೆಲಸ ನೀಡಲಾಗುತ್ತದೆ ಹಾಗೂ ಈಗಿನ ಹುದ್ದೆ, ವೇತನ ಮತ್ತು ಸೌಲಭ್ಯಗಳಿಗೆ ಸಮಾನವಾದ ಅವಕಾಶಗಳು ದೊರೆಯಲಿವೆಯೇ ಎಂಬುದನ್ನು ಕಂಪನಿ ಸ್ಪಷ್ಟಪಡಿಸಿಲ್ಲ.
ವರ್ಷಗಳಿಂದ ಅಮೆರಿಕದಲ್ಲೇ ನೆಲೆಸಿರುವ ಉದ್ಯೋಗಿಗಳಿಗೆ ಬೇರೆ ದೇಶಕ್ಕೆ ವರ್ಗಾವಣೆಯಾಗುವುದು ಸುಲಭದ ನಿರ್ಧಾರವಲ್ಲ. ಇದರಿಂದ ವೇತನ, ಜೀವನಶೈಲಿ, ವಾಸಸ್ಥಳ ಹಾಗೂ ಕುಟುಂಬದ ಜವಾಬ್ದಾರಿಗಳಲ್ಲೂ ದೊಡ್ಡ ಬದಲಾವಣೆಗಳಾಗುವ ಸಾಧ್ಯತೆಯಿದೆ.

ಅಮೆರಿಕದ ವೀಸಾ ನಿಯಮಗಳ ಬದಲಾವಣೆಯೂ ಭಾರತೀಯರಿಗೆ ಆತಂಕ
ಐಬಿಎಂನ ಈ ನಿರ್ಧಾರವು ಅಮೆರಿಕದ ಉದ್ಯೋಗಾಧಾರಿತ ವಲಸೆ ಕಾರ್ಯಕ್ರಮಗಳ ಮೇಲೆ ಅಲ್ಲಿನ ಆಡಳಿತವು ಹೆಚ್ಚಿನ ನಿಗಾ ವಹಿಸುತ್ತಿರುವ ಸಮಯದಲ್ಲೇ ಹೊರಬಿದ್ದಿದೆ.
ಎಚ್‌-1ಬಿ ವೀಸಾ ಯೋಜನೆಯು ಅಮೆರಿಕದ ಕಂಪನಿಗಳಿಗೆ ವಿಶೇಷ ಕೌಶಲ ಅಗತ್ಯವಿರುವ ಉದ್ಯೋಗಗಳಿಗೆ ವಿದೇಶಿ ವೃತ್ತಿಪರರನ್ನು ನೇಮಿಸಿಕೊಳ್ಳಲು ಅವಕಾಶ ನೀಡುತ್ತದೆ. ಈ ಯೋಜನೆಯ ಪ್ರಮುಖ ಫಲಾನುಭವಿಗಳಲ್ಲಿ ಭಾರತೀಯ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಿಗಳೂ ಸೇರಿದ್ದಾರೆ.
ಆದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ಈ ವೀಸಾ ವ್ಯವಸ್ಥೆಯನ್ನು ಮತ್ತಷ್ಟು ಕಠಿಣಗೊಳಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಂಡಿದೆ. ಹೊಸ ಎಚ್‌-1ಬಿ ಅರ್ಜಿಗಳ ಪೈಕಿ ಕೆಲವು ನಿರ್ದಿಷ್ಟ ಅರ್ಜಿಗಳಿಗೆ 1 ಲಕ್ಷ ಡಾಲರ್ ಶುಲ್ಕ ವಿಧಿಸುವ ಪ್ರಸ್ತಾವನೆ ಹಾಗೂ ವೀಸಾ ಆಯ್ಕೆ ಪ್ರಕ್ರಿಯೆಯಲ್ಲಿ ಹೆಚ್ಚಿನ ವೇತನ ಪಡೆಯುವ ಉದ್ಯೋಗಗಳಿಗೆ ಆದ್ಯತೆ ನೀಡುವ ಬದಲಾವಣೆಗಳು ಇದರಲ್ಲಿ ಸೇರಿವೆ.
ಇದರ ಜತೆಗೆ, ಉದ್ಯೋಗಾಧಾರಿತ ವಲಸೆ ಕಾರ್ಯಕ್ರಮಗಳ ದುರ್ಬಳಕೆ ಆರೋಪದ ಹಿನ್ನೆಲೆಯಲ್ಲಿ ವಿವಿಧ ಕಂಪನಿಗಳ ವಿರುದ್ಧವೂ ಅಮೆರಿಕದ ಆಡಳಿತ ಕ್ರಮಗಳನ್ನು ಕೈಗೊಂಡಿದೆ.
ಕಳೆದ ತಿಂಗಳು ಮೈಕ್ರೋಸಾಫ್ಟ್, ಅಡೋಬ್ ಹಾಗೂ ಕಾಗ್ನಿಜೆಂಟ್, ಇನ್ಫೋಸಿಸ್ ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಸೇರಿದಂತೆ ಹಲವು ತಂತ್ರಜ್ಞಾನ ಹೊರಗುತ್ತಿಗೆ ಕಂಪನಿಗಳು ಪರ್ಮನೆಂಟ್ ಲೇಬರ್ ಸರ್ಟಿಫಿಕೇಶನ್ (Permanent Labour Certification) ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಕ್ಕೆ ನಿರ್ಬಂಧಗಳನ್ನು ಎದುರಿಸಿದ್ದವು. ಅಮೆರಿಕದಲ್ಲಿ ಉದ್ಯೋಗದ ಆಧಾರದ ಮೇಲೆ ಗ್ರೀನ್‌ಕಾರ್ಡ್ ಪಡೆಯಲು ಬಯಸುವ ವಿದೇಶಿ ಉದ್ಯೋಗಿಗಳಿಗೆ ಈ ಕಾರ್ಯಕ್ರಮ ಪ್ರಮುಖ ಮಾರ್ಗವಾಗಿದೆ.

ಭಾರತೀಯ ವೃತ್ತಿಪರರ ಮೇಲೆ ಐಬಿಎಂ ನಿರ್ಧಾರದ ಪರಿಣಾಮವೇನು?
ಐಬಿಎಂನ ಈ ನಿರ್ಧಾರವು ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ವೃತ್ತಿಪರರು ತಮ್ಮ ವೃತ್ತಿಜೀವನವನ್ನು ಉದ್ಯೋಗದಾತ ಕಂಪನಿಗಳ ವೀಸಾ ಪ್ರಾಯೋಜಕತ್ವದ ಮೇಲೆ ಎಷ್ಟರಮಟ್ಟಿಗೆ ಅವಲಂಬಿಸಿದ್ದಾರೆ ಎಂಬುದನ್ನು ಮರುಪರಿಶೀಲಿಸುವಂತೆ ಮಾಡಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಿನಲ್ಲಿ, ಐಬಿಎಂನ ಈ ನಿರ್ಧಾರವು ಅಮೆರಿಕದಲ್ಲಿ ಉದ್ಯೋಗ ಮಾಡುತ್ತಿರುವ ಭಾರತೀಯ ಐಟಿ ವೃತ್ತಿಪರರ ವೀಸಾ ಭದ್ರತೆ, ಉದ್ಯೋಗದ ಭವಿಷ್ಯ ಹಾಗೂ ಗ್ರೀನ್‌ಕಾರ್ಡ್ ಕನಸಿನ ಮೇಲೆ ಹೊಸ ಅನಿಶ್ಚಿತತೆಯನ್ನು ಸೃಷ್ಟಿಸಿದೆ. ಕಂಪನಿಯಲ್ಲೇ ಮುಂದುವರಿಯಬೇಕಾದರೆ ದೇಶ ಬದಲಾಯಿಸುವ ಅನಿವಾರ್ಯತೆ ಎದುರಾಗಬಹುದಾದ ಹಿನ್ನೆಲೆಯಲ್ಲಿ ಸಾವಿರಾರು ಉದ್ಯೋಗಿಗಳು ಮುಂದಿನ ದಿನಗಳಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement