
ನವದೆಹಲಿ: ಭಾರತೀಯ ವಾಯುಪಡೆ ನಡೆಸಿದ ‘ಆಪರೇಷನ್ ಸಿಂಧೂರ’ ದಾಳಿಯ ವೇಳೆ ಪಾಕಿಸ್ತಾನವು ಅಮೆರಿಕದ ಸಹಾಯಕ್ಕಾಗಿ ಅಂಗಲಾಚಿತ್ತು ಎಂಬ ಆಘಾತಕಾರಿ ವಿಷಯ ಈಗ ಬಹಿರಂಗವಾಗಿದೆ. ಅಮೆರಿಕ ಸರ್ಕಾರದ ಫಾರಾ (FARA) ಕಾಯ್ದೆಯಡಿ ಸಲ್ಲಿಕೆಯಾದ ದಾಖಲೆಗಳು ಪಾಕಿಸ್ತಾನದ ಸುಳ್ಳು ಮತ್ತು ಅಪಪ್ರಚಾರವನ್ನು ಜಗತ್ತಿನ ಮುಂದೆ ತೆರೆದಿಟ್ಟಿವೆ.
ಭಾರತದ ವಾಯುದಾಳಿಯಿಂದ ಕಂಗೆಟ್ಟಿದ್ದ ಪಾಕಿಸ್ತಾನವು, ತನ್ನ ವಾಯುನೆಲೆಗಳು ಮತ್ತು ಉಗ್ರರ ಶಿಬಿರಗಳನ್ನು ಉಳಿಸಿಕೊಳ್ಳಲು ಅಮೆರಿಕದ ಮೊರೆ ಹೋಗಿತ್ತು. ಭಾರತವು ತನ್ನ ಕಾರ್ಯಾಚರಣೆಯನ್ನು ಕೇವಲ ‘ತಾತ್ಕಾಲಿಕವಾಗಿ ನಿಲ್ಲಿಸಿದೆ’ (Paused) ಮತ್ತು ಮತ್ತೆ ದಾಳಿ ನಡೆಸಬಹುದು ಎಂಬ ತೀವ್ರ ಭೀತಿಯಲ್ಲಿ ಪಾಕಿಸ್ತಾನವಿತ್ತು ಎಂದು ಎನ್‌ಡಿಟಿವಿ (NDTV) ವರದಿ ಮಾಡಿದೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರು 26 ಅಮಾಯಕರನ್ನು ಹತ್ಯೆ ಮಾಡಿದ್ದರು. ಇದಕ್ಕೆ ಪ್ರತಿಕಾರವಾಗಿ ಭಾರತವು ಮೇ ತಿಂಗಳಲ್ಲಿ ಈ ಬೃಹತ್ ಸೇನಾ ಕಾರ್ಯಾಚರಣೆ ನಡೆಸಿತ್ತು.

ಮೇ 7 ರಂದು ಭಾರತ ನಡೆಸಿದ ದಾಳಿಯಲ್ಲಿ ಪಾಕಿಸ್ತಾನದ ಭೂಭಾಗದಲ್ಲಿದ್ದ ಸುಮಾರು 100ಕ್ಕೂ ಹೆಚ್ಚು ಉಗ್ರರು ಹತರಾಗಿದ್ದರು. ಇದರ ಬೆನ್ನಲ್ಲೇ ಮೇ 10 ರಂದು ಕದನ ವಿರಾಮ ಘೋಷಣೆಯಾಗುವವರೆಗೆ ಎರಡೂ ದೇಶಗಳ ನಡುವೆ ಸಣ್ಣ ಮಟ್ಟದ ಯುದ್ಧದ ವಾತಾವರಣ ನಿರ್ಮಾಣವಾಗಿತ್ತು.
ಪಾಕಿಸ್ತಾನವು ಈ ಹಿಂದೆ ಭಾರತದ ದಾಳಿಯಿಂದ ತನಗೆ ಯಾವುದೇ ಹಾನಿಯಾಗಿಲ್ಲ ಎಂದು ಸುಳ್ಳು ಹೇಳುತ್ತಾ ಬಂದಿತ್ತು. ಆದರೆ ಅಮೆರಿಕದ ದಾಖಲೆಗಳು ಈಗ ಪಾಕಿಸ್ತಾನವು ಎಷ್ಟು ಹತಾಶ ಸ್ಥಿತಿಯಲ್ಲಿತ್ತು ಎಂಬುದನ್ನು ಸಾಬೀತುಪಡಿಸಿವೆ.
“ಭಾರತದ ಪ್ರಧಾನಿ ಮೋದಿ ಅವರು ಸೇನಾ ಕಾರ್ಯಾಚರಣೆಯನ್ನು ಕೇವಲ ಸ್ಥಗಿತಗೊಳಿಸಿದ್ದಾರೆ (Paused), ದಾಳಿಗಳು ಮತ್ತೆ ಆರಂಭವಾಗಬಹುದು ಎಂಬ ಆತಂಕ ನಮಗಿದೆ,” ಎಂದು ಪಾಕಿಸ್ತಾನದ ಪರವಾಗಿ ಲಾಬಿ ಮಾಡುವ ‘ಸ್ಕ್ವೈರ್ ಪ್ಯಾಟನ್ ಬೋಗ್ಸ್’ ಎಂಬ ಸಂಸ್ಥೆ ಅಮೆರಿಕಕ್ಕೆ ಸಲ್ಲಿಸಿದ ದಾಖಲೆಯಲ್ಲಿ ಉಲ್ಲೇಖಿಸಿದೆ.
ಭಾರತವು ಕದನ ವಿರಾಮ ಕೋರಿತ್ತು ಎಂಬುದು ಪಾಕಿಸ್ತಾನದ ಸುಳ್ಳು ಪ್ರಚಾರವಾಗಿತ್ತು. ವಾಸ್ತವದಲ್ಲಿ, ಭಾರತದ ಮಿಲಿಟರಿ ಶಕ್ತಿಯ ಮುಂದೆ ತತ್ತರಿಸಿದ್ದ ಪಾಕಿಸ್ತಾನಿ ಕಮಾಂಡರ್‌ಗಳೇ ಹೆಚ್ಚಿನ ಹಾನಿ ತಪ್ಪಿಸಲು ಕದನ ವಿರಾಮಕ್ಕಾಗಿ ಅಂಗಲಾಚಿದ್ದರು.
ಟ್ರಂಪ್ ಸಹಾಯಕ್ಕೆ ಮೊರೆ
ಪ್ರಧಾನಿ ಮೋದಿ ಅವರು “ಆಪರೇಷನ್ ಸಿಂಧೂರವನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ” ಎಂದು ಘೋಷಿಸಿದ ಬೆನ್ನಲ್ಲೇ, ಭಯಭೀತಗೊಂಡ ಪಾಕಿಸ್ತಾನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಧ್ಯಸ್ಥಿಕೆಯನ್ನು ಕೋರಿತ್ತು.
ಜುಲೈನಲ್ಲಿ ಸಂಸತ್ತಿನಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, “ಪಾಕಿಸ್ತಾನ ಮತ್ತೆ ದುಸ್ಸಾಹಸಕ್ಕೆ ಕೈಹಾಕಿದರೆ ತಕ್ಕ ಪ್ರತಿಕ್ರಿಯೆ ಎದುರಿಸಬೇಕಾಗುತ್ತದೆ. ಆಪರೇಷನ್ ಸಿಂಧೂರ ಇನ್ನೂ ಸಕ್ರಿಯವಾಗಿದೆ ಮತ್ತು ಭಾರತದ ಸಂಕಲ್ಪ ದೃಢವಾಗಿದೆ,” ಎಂದು ಎಚ್ಚರಿಸಿದ್ದರು.
ಪಾಕಿಸ್ತಾನಿ ರಾಜತಾಂತ್ರಿಕರು ಮತ್ತು ರಕ್ಷಣಾ ಅಧಿಕಾರಿಗಳು ಅಮೆರಿಕದ ಸಂಸದರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸುಮಾರು 50ಕ್ಕೂ ಹೆಚ್ಚು ಸಭೆಗಳನ್ನು ನಡೆಸಲು ಹರಸಾಹಸ ಪಟ್ಟಿದ್ದರು ಎಂಬುದು ಜನವರಿ 6ರಂದು ಎನ್‌ಡಿಟಿವಿ ವರದಿ ಮಾಡಿದ ದಾಖಲೆಗಳಿಂದ ತಿಳಿದುಬಂದಿದೆ.
ಮಧ್ಯಸ್ಥಿಕೆ ನಿರಾಕರಿಸಿದ ಭಾರತ
ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಮಧ್ಯಸ್ಥಿಕೆಯ ಬಗ್ಗೆ ಪದೇ ಪದೇ ಹೇಳಿಕೆ ನೀಡಿದ್ದರೂ, ಭಾರತ ಮಾತ್ರ ಅಧಿಕೃತವಾಗಿ ಎಂದಿಗೂ ಅಮೆರಿಕದ ಮಧ್ಯಸ್ಥಿಕೆಯನ್ನಾಗಲಿ ಅಥವಾ ಕದನ ವಿರಾಮದ ವಿಷಯವನ್ನಾಗಲಿ ಪ್ರಸ್ತಾಪಿಸಿರಲಿಲ್ಲ ಎಂಬುದು ಈಗ ದೃಢಪಟ್ಟಿದೆ.
ಪಾಕಿಸ್ತಾನವು ಜಾಗತಿಕ ವೇದಿಕೆಯಲ್ಲಿ ತನ್ನನ್ನು ಬಲಿಪಶು ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸಿತ್ತಾದರೂ, ತೆರೆಮರೆಯಲ್ಲಿ ಭಾರತದ ದಾಳಿಗೆ ಹೆದರಿ ಅಮೆರಿಕದ ಸಹಾಯಕ್ಕಾಗಿ ಅಂಗಲಾಚಿತ್ತು ಎಂಬುದು ಈ ದಾಖಲೆಗಳಿಂದ ಸಾಬೀತಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ