ಓವಲ್ ಕಚೇರಿಗೆ ಬಂದು ಟ್ರಂಪ್‌ ಭೇಟಿ ಮಾಡಲು ಕಾದು ಕಾದು ಸುಸ್ತಾದ ಪಾಕಿಸ್ತಾನ ಪ್ರಧಾನಿ-ಸೇನಾ ಮುಖ್ಯಸ್ಥ…!

ವಾಷಿಂಗ್ಟನ್‌ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭೇಟಿಗೆ ಓವಲ್ ಕಚೇರಿಗೆ ಆಗಮಿಸಿದ್ದ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಪಾಕಿಸ್ತಾನ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರು ಟ್ರಂಪ್‌ ಅವರ ಭೇಟಿಗಾಗಿ ಕೆಲಕಾಲ ಕಾಯುವಂತೆ ಮಾಡಲಾಯಿತು.
ಭೇಟಿಗೆ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ, ಅಮೆರಿಕ ಅಧ್ಯಕ್ಷ ಟ್ರಂಪ್‌, ಇಬ್ಬರು ಪಾಕಿಸ್ತಾನಿ ನಾಯಕರು ಎಲ್ಲಿದ್ದಾರೆಂದು ಗೊತ್ತಿಲ್ಲ ಎಂಬಂತೆ ವರ್ತಿಸಿದರು. ಸಭೆಗೆ “ತಡವಾಗಿ” ಬಂದಿರುವುದನ್ನು ಒಪ್ಪಿಕೊಂಡ ಅವರು, “ಅವರು ಈಗ ಈ ಕೊಠಡಿಯಲ್ಲಿರಬಹುದು, ತಡವಾಗಿ ಬಂದಿರುವುದರಿಂದ ನನಗೆ ತಿಳಿದಿಲ್ಲ… ಅವರು ವಾಸ್ತವವಾಗಿ ಸುಂದರವಾದ ಓವಲ್ ಕಚೇರಿಯಲ್ಲಿ ಎಲ್ಲೋ ಇರಬಹುದು” ಎಂದು ಟ್ರಂಪ್ ಹೇಳಿದರು. ಶೆಹಬಾಜ್ ಷರೀಫ್ ಮತ್ತು ಅಸಿಮ್ ಮುನೀರ್ ಇಬ್ಬರನ್ನೂ “ಶ್ರೇಷ್ಠ ವ್ಯಕ್ತಿಗಳು” ಎಂದು ಟ್ರಂಪ್ ಬಣ್ಣಿಸಿದರು.

ಷರೀಫ್ ಸ್ಥಳೀಯ ಸಮಯ ಗುರುವಾರ ಸಂಜೆ 5 ಗಂಟೆಗೆ ಸ್ವಲ್ಪ ಮೊದಲು ಶ್ವೇತಭವನಕ್ಕೆ ಆಗಮಿಸಿದರು ಎಂದು ಅಸೋಸಿಯೇಟೆಡ್ ಪ್ರೆಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ, ಆದರೆ ಆಗ ಟ್ರಂಪ್ ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕುತ್ತಿದ್ದರು. ಷರೀಪ್‌ ಹಾಗೂ ಅಸಿಮ್ ಮುನೀರ್ ಜೊತೆ ಅವರ ಸಭೆ ಮುಚ್ಚಿದ ಬಾಗಿಲುಗಳ ಹಿಂದೆ ನಡೆಯಿತು ಎಂದು ವರದಿಯಾಗಿದೆ, ನಂತರ ಪಾಕಿಸ್ತಾನಿ ನಿಯೋಗವು ಸಂಜೆ 6:18 ರ ಸುಮಾರಿಗೆ ಶ್ವೇತಭವನದಿಂದ ನಿರ್ಗಮಿಸಿದೆ. ಆದಾಗ್ಯೂ, ಡೊನಾಲ್ಡ್ ಟ್ರಂಪ್ ಮತ್ತು ಷರೀಫ್ ಮತ್ತು ಮುನೀರ್ ಅವರ ಜೊತೆಗಿನ ಭೇಟಿಯ ಯಾವುದೇ ಅಧಿಕೃತ ಫೋಟೊಗಳನ್ನು ಶ್ವೇತಭವನ ಇನ್ನೂ ಬಿಡುಗಡೆ ಮಾಡಿಲ್ಲ.
ಶೆಹಬಾಜ್ ಷರೀಫ್ ಮತ್ತು ಅಸಿಮ್ ಮುನೀರ್ ಅವರು ಡೊನಾಲ್ಡ್ ಟ್ರಂಪ್‌ ಅವರ ಭೇಟಿಗಾಗಿ ಎಷ್ಟು ಸಮಯ ಕಾಯಬೇಕಾಯಿತು ಎಂಬುದು ಸ್ಪಷ್ಟವಾಗಿಲ್ಲವಾದರೂ, ಸಭೆಯು ಸುಮಾರು 30 ನಿಮಿಷಗಳಷ್ಟು ತಡವಾಯಿತು ಎಂದು ಪಾಕಿಸ್ತಾನ ಪ್ರಧಾನಿ ಕಚೇರಿ ತಿಳಿಸಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ವ್ಯಾಪಾರ ಮಾತುಕತೆಗಳು ಮತ್ತು ಆಮದುಗಳ ಮೇಲೆ ಶೇಕಡಾ 50 ರಷ್ಟು ಸುಂಕ ಹೆಚ್ಚಿಸಿದ್ದರ ಬಗ್ಗೆ ಭಾರತ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆಯ ಮಧ್ಯೆ ಪಾಕ್‌ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಅಸಿಮ್ ಮುನೀರ್ ಅವರ ಡೊನಾಲ್ಡ್ ಟ್ರಂಪ್ ಅವರ ಭೇಟಿಯಾಗಿದೆ.
ಡೊನಾಲ್ಡ್ ಟ್ರಂಪ್ ಅವರು ಅಧಿಕಾರ ವಹಿಸಿಕೊಂಡ ನಂತರ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಟ್ರಂಪ್‌ ಶ್ವೇತಭವನದಲ್ಲಿ ಆತಿಥ್ಯ ವಹಿಸಿರುವುದು ಇದೇ ಮೊದಲು. ಆದಾಗ್ಯೂ, ಟ್ರಂಪ್ ಈ ಹಿಂದೆ ಜೂನ್‌ನಲ್ಲಿ ಶ್ವೇತಭವನದಲ್ಲಿ ಅಸಿಮ್ ಮುನೀರ್ ಅವರಿಗೆ ಔತಣಕೂಟ ಆಯೋಜಿಸಿದ್ದರು.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (UNGA) 80 ನೇ ಅಧಿವೇಶನದಲ್ಲಿ ಭಾಗವಹಿಸಲು ಅಮೆರಿಕದಲ್ಲಿರುವ ಪಾಕ್‌ ಪ್ರಧಾನಿ ಷರೀಫ್‌ ಅವರು ಅಮರಿಕ ಅಧ್ಯಕ್ಷ ಟ್ರಂಪ್ ಅವರನ್ನು ಭೇಟಿ ಮಾಡಲು ನ್ಯೂಯಾರ್ಕ್‌ನಿಂದ ವಾಷಿಂಗ್ಟನ್ ಡಿಸಿಗೆ ಪ್ರವಾಸ ಕೈಗೊಂಡರು. ಪಾಕಿಸ್ತಾನದ ಪ್ರಧಾನಿ ಶುಕ್ರವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ವೇದಿಕೆಯಿಂದ ಭಾಷಣ ಮಾಡಲಿದ್ದಾರೆ.

ಪ್ರಮುಖ ಸುದ್ದಿ :-   ವಿಡಿಯೋ | ಅಮೆರಿಕ ಯುದ್ಧನೌಕೆಗಳ ಮೇಲಿನ ದಾಳಿಗೆ ಪ್ರತಿಯಾಗಿ ಇರಾನಿನ 3 ತೈಲ ಟ್ಯಾಂಕರ್‌ ಧ್ವಂಸಗೊಳಿಸಿದ ಅಮೆರಿಕ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement