ಆಘಾತಕಾರಿ ಘಟನೆ | ರಸ್ತೆ ಜಗಳ ; ಕುಟುಂಬದ ಮೇಲೆ ಕಾರು ಹರಿಸಿದ ಡಿಎಂಕೆ ನಾಯಕನ ಪುತ್ರ, ಓರ್ವ ಸಾವು

ಕೃಷ್ಣಗಿರಿ : ತಮಿಳುನಾಡಿನಲ್ಲಿ ನಡೆದ ‘ರೋಡ್ ರೇಜ್’ (ರಸ್ತೆ ಜಗಳ) ಘಟನೆಯೊಂದರಲ್ಲಿ, ಕುಟುಂಬವೊಂದರ ನಾಲ್ವರ ಮೇಲೆ ಕಾರು ಹರಿಸಿದ ಆರೋಪದ ಮೇಲೆ ಡಿಎಂಕೆ (DMK) ನಾಯಕನ 20 ವರ್ಷದ ಪುತ್ರನನ್ನು ಬಂಧಿಸಲಾಗಿದೆ. ಈ ಘಟನೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ.
ಮುಖ್ಯ ಆರೋಪಿಯನ್ನು ಆದಿತ್ಯ ಎಂದು ಗುರುತಿಸಲಾಗಿದ್ದು, ಘಟನೆಯ ಸಮಯದಲ್ಲಿ ವಾಹನದಲ್ಲಿದ್ದ ಆತನ ಸ್ನೇಹಿತರಾದ ರಿತಿಕ್ ಕುಮಾರ ಮತ್ತು ಹರೀಶ ಎಂಬುವವರನ್ನು ಸಹ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.
ಮೃತಪಟ್ಟ ವ್ಯಕ್ತಿಯನ್ನು ಕೃಷ್ಣಗಿರಿ ಜಿಲ್ಲೆಯ ನಿವಾಸಿ, ಸಹಾಯಕ ಕಾರ್ಮಿಕ ನಿರೀಕ್ಷಕ ಶಿವಮೂರ್ತಿ ಎಂದು ಗುರುತಿಸಲಾಗಿದೆ.

ಪೊಲೀಸರ ಪ್ರಕಾರ, ಆದಿತ್ಯ ಕಾರು ಚಲಾಯಿಸುತ್ತಿದ್ದಾಗ ಶಿವಮೂರ್ತಿ ಅವರ ಮನೆಯ ಹೊರಗೆ ನಿಲ್ಲಿಸಿದ್ದ ದ್ವಿಚಕ್ರ ವಾಹನವೊಂದು ರಸ್ತೆಗೆ ಅಡ್ಡಲಾಗಿ ಇತ್ತು. ಆದಿತ್ಯ ಸತತವಾಗಿ ಹಾರ್ನ್ ಮಾಡಿದಾಗ, ಶಿವಮೂರ್ತಿ ಮತ್ತು ಅವರ ಕುಟುಂಬದವರು ಬೈಕ್‌ ಅನ್ನು ಸರಿಸಲು ಹೊರಬಂದರು. ಈ ವೇಳೆ ವಾಗ್ವಾದ ನಡೆದಿದೆ. ಜಗಳದ ನಡುವೆ, ಆದಿತ್ಯ ತನ್ನ ಕಾರನ್ನು ಶಿವಮೂರ್ತಿ, ಅವರ ಮಗ ಕಿರುಬಾಕರನ್, ಸೊಸೆ ಅಮ್ಸವಲ್ಲಿ ಮತ್ತು ಮೊಮ್ಮಗಳು ನಿಲಾನಿ ಅವರ ಮೇಲೆ ಹರಿಸಿದ್ದಾನೆ ಎನ್ನಲಾಗಿದೆ. ಕಾರು ಜೋರಾಗಿ ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡ ಶಿವಮೂರ್ತಿ ಮೃತಪಟ್ಟಿದ್ದಾರೆ.

ಪ್ರಮುಖ ಸುದ್ದಿ :-   ಉದ್ಧವ್‌ಗೆ ಭಾರಿ ಹಿನ್ನಡೆ ; ಶಿಂಧೆ ಬಣದ ಜೊತೆ ಶಿವಸೇನೆ(ಯುಬಿಟಿ) 6 ಸಂಸದರ ವಿಲೀನಕ್ಕೆ ಲೋಕಸಭೆ ಸ್ಪೀಕರ್ ಅನುಮೋದನೆ

ಮೃತ ಶಿವಮೂರ್ತಿ ಅವರ ಪುತ್ರ ಕಿರುಬಾಕರನ್ ಮಾತನಾಡಿ, “ಆರೋಪಿಗಳು ಬಂದಾಗ ನಮ್ಮ ದ್ವಿಚಕ್ರ ವಾಹನ ಮನೆಯ ಹೊರಗೆ ಇತ್ತು. ಅವರು ಅತಿಯಾಗಿ ಹಾರ್ನ್ ಮಾಡತೊಡಗಿದರು. ಆ ಹುಡುಗರು ಅಮಲಿನಲ್ಲಿದ್ದರು ಮತ್ತು ನಮ್ಮ ವಾಹನವನ್ನು ಜಖಂಗೊಳಿಸಿದರು,” ಎಂದು ಆರೋಪಿಸಿದ್ದಾರೆ.
“ನನ್ನ ತಂದೆ ಅವರೊಂದಿಗೆ ತಾಳ್ಮೆಯಿಂದ ಮಾತನಾಡುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಅವರಲ್ಲೊಬ್ಬ ನಮ್ಮ ಮೇಲೆ ಕಾರು ಹರಿಸಿದ. ಕಾರು ಡಿಕ್ಕಿ ಹೊಡೆದಿದ್ದರಿಂದ ತಂದೆ ಸಾವಿಗೀಡಾಗಿದ್ದಾರೆ,” ಎಂದು ಅವರು ನೋವು ತೋಡಿಕೊಂಡಿದ್ದಾರೆ.

ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಘಟನೆಯ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.
ಆದಿತ್ಯನ ತಂದೆ ಕೃಷ್ಣಗಿರಿ ಜಿಲ್ಲೆಯ ಡಿಎಂಕೆ ನಾಯಕ ಎಂಬುದನ್ನು ಪೊಲೀಸರು ಖಚಿತಪಡಿಸಿದ್ದಾರೆ. ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಂತ್ರಸ್ತ ಕುಟುಂಬದವರು ಒತ್ತಾಯಿಸಿದ್ದಾರೆ.
ಈ ಘಟನೆಯನ್ನು ಖಂಡಿಸಿರುವ ರಾಜ್ಯ ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್, ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಪ್ರಶ್ನಿಸಿದ್ದಾರೆ. ಡಿಎಂಕೆ ಪದಾಧಿಕಾರಿಗಳು ಪ್ರಭಾವಿಗಳಾಗಿದ್ದು, ಎಲ್ಲಿ ಬೇಕಾದರೂ ಏನು ಬೇಕಾದರೂ ಮಾಡಲು ಸಿದ್ಧರಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement