ಶೇ.50 ರಷ್ಟು ಸುಂಕ ಹೇರಿಕೆ ; ಇರಾನಿಗೆ ಶಸ್ತ್ರಾಸ್ತ್ರ ಪೂರೈಸುವ ರಾಷ್ಟ್ರಗಳಿಗೆ ಡೊನಾಲ್ಡ್ ಟ್ರಂಪ್ ಎಚ್ಚರಿಕೆ

ವಾಷಿಂಗ್ಟನ್: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ನಡುವೆ ಎರಡು ವಾರಗಳ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಪರ ನಿಲ್ಲುವ ರಾಷ್ಟ್ರಗಳಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಇರಾನ್‌ಗೆ ಮಿಲಿಟರಿ ಉಪಕರಣಗಳನ್ನು ಪೂರೈಸುವ ಯಾವುದೇ ದೇಶವು ಅಮೆರಿಕಕ್ಕೆ ರಫ್ತು ಮಾಡುವ ಎಲ್ಲಾ ಸರಕುಗಳ ಮೇಲೆ ಶೇ. 50 ರಷ್ಟು ಸುಂಕವನ್ನು (Tariff) ವಿಧಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಾದ ‘ಟ್ರೂತ್ ಸೋಶಿಯಲ್’ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಅವರು, ಈ ನಿಯಮವು ಯಾವುದೇ ವಿನಾಯಿತಿ ಇಲ್ಲದೆ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಯುರೇನಿಯಂ ಪುಷ್ಟೀಕರಣ ಸ್ಥಗಿತಕ್ಕೆ ಇರಾನ್ ಸಮ್ಮತಿ
ವ್ಯಾಪಕ ಮಾತುಕತೆಗಳ ಭಾಗವಾಗಿ ಇರಾನ್ ತನ್ನ ಯುರೇನಿಯಂ ಪುಷ್ಟೀಕರಣ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲು ಒಪ್ಪಿಕೊಂಡಿದೆ ಎಂದು ಟ್ರಂಪ್ ತಿಳಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಇರಾನ್ ಮೇಲಿನ ನಿರ್ಬಂಧಗಳನ್ನು ಸಡಿಲಿಸುವ ಮತ್ತು ಸುಂಕದ ವಿನಾಯಿತಿ ನೀಡುವ ಕುರಿತು ಚರ್ಚೆಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.
ಇರಾನ್‌ನಲ್ಲಿ ನಡೆದ ಆಡಳಿತ ಬದಲಾವಣೆಯನ್ನು (Regime Change) “ಅತ್ಯಂತ ಉತ್ಪಾದಕ” ಎಂದು ಬಣ್ಣಿಸಿರುವ ಟ್ರಂಪ್, ಅಮೆರಿಕವು ಇರಾನ್‌ನೊಂದಿಗೆ ನಿಕಟವಾಗಿ ಕೆಲಸ ಮಾಡಲಿದೆ ಎಂದು ಹೇಳಿದ್ದಾರೆ. ಇರಾನ್‌ನಲ್ಲಿ ಭೂಗತವಾಗಿರುವ ಪರಮಾಣು ಕೇಂದ್ರಗಳ ಅವಶೇಷಗಳನ್ನು ಹೊರತೆಗೆಯಲು ಅಮೆರಿಕ ಸಹಾಯ ಮಾಡಲಿದೆ ಎಂದು ಅವರು ಹೇಳಿದ್ದಾರೆ.
ಇರಾನ್ ತನ್ನ ‘ಹಾರ್ಮುಜ್ ಜಲಸಂಧಿ’ಯನ್ನು (Strait of Hormuz) ಸಂಪೂರ್ಣವಾಗಿ ಮತ್ತು ಸುರಕ್ಷಿತವಾಗಿ ಮುಕ್ತಗೊಳಿಸಲು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಎರಡು ವಾರಗಳ ಕದನ ವಿರಾಮಕ್ಕೆ ಅಸ್ತು ಎನ್ನಲಾಗಿದೆ.
ಇರಾನ್ ಕಳುಹಿಸಿರುವ 10 ಅಂಶಗಳ ಪ್ರಸ್ತಾವನೆಯು ಶಾಂತಿ ಮಾತುಕತೆಗೆ ಸೂಕ್ತ ಆಧಾರವಾಗಿದೆ ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಮುಖ ಸುದ್ದಿ :-   ಟ್ರಂಪ್ ಹತ್ಯೆ ಮಾಡಿದವರಿಗೆ ₹96 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿದ ಇರಾನ್ ಬೆಂಬಲಿತ ಇರಾಕಿನ ಬಂಡುಕೋರರ ಗುಂಪು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement