ದುಬೈನಲ್ಲಿ ನಡೆದ ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಐದು ವಿಕೆಟ್‌ಗಳಿಂದ ಸೋಲಿಸಿದ ಬಳಿಕ, ಭಾರತೀಯ ಕ್ರಿಕೆಟ್ ತಂಡ ಏಷ್ಯಾ ಕಪ್ ಟ್ರೋಫಿಯನ್ನು ಪಾಕಿಸ್ತಾನದ ಸಚಿವರೂ ಆಗಿರುವ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಮೋಹ್ಸಿನ್ ನಕ್ವಿ ಅವರಿಂದ ಸ್ವೀಕರಿಸಲು ನಿರಾಕರಿಸಿದೆ.
ಬಿಸಿಸಿಐ ಈ ಬಗ್ಗೆ ನವೆಂಬರ್‌ನಲ್ಲಿ ನಡೆಯುವ ಐಸಿಸಿ ಸಭೆಯಲ್ಲಿ ತೀವ್ರ ಆಕ್ಷೇಪ ದಾಖಲಿಸಲು ನಿರ್ಧರಿಸಿದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ.
“ಟ್ರೋಫಿ ವಿತರಣೆ ವಿಷಯಕ್ಕೆ ಬಂದಾಗ, ಭಾರತ ವಿರೋಧಿ ಹೇಳಿಕೆಗೆ ಹೆಸರಾಗಿರುವ ವ್ಯಕ್ತಿಯಿಂದ ಟ್ರೋಫಿ ಪಡೆಯಲು ಭಾರತ ಸಮ್ಮತಿಸದು,” ಎಂದು ಸೈಕಿಯಾ ಸ್ಪಷ್ಟಪಡಿಸಿದರು. “ಟೀಮ್ ಇಂಡಿಯಾ ಟ್ರೋಫಿಯನ್ನು ಸ್ವೀಕರಿಸದೆ ಇರುವ ನಿರ್ಧಾರ ತೆಗೆದುಕೊಂಡಿದ್ದು ಸತ್ಯ, ಆದರೆ ಅದರಿಂದಾಗಿ ಆ ವ್ಯಕ್ತಿ ಟ್ರೋಫಿ ಮತ್ತು ಪದಕಗಳನ್ನು ತನ್ನ ಹೋಟೆಲ್‌ಗೆ ಕೊಂಡೊಯ್ಯುವ ಹಕ್ಕು ಅವರಿಗೆ ಇಲ್ಲ. ಇದು ತುಂಬಾ ಬಾಲಿಶ ನಡತೆ ಎಂದು ಟೀಕಿಸಿದ್ದಾರೆ.
ಮೋಹ್ಸಿನ್ ನಕ್ವಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ನ ಮುಖ್ಯಸ್ಥರಾಗಿರುವುದರ ಜೊತೆಗೆ ಪಾಕಿಸ್ತಾನದ ಗೃಹ ಸಚಿವರೂ ಆಗಿದ್ದಾರೆ. ಭಾರತ ಹೇಳಿಕೆ ನೀಡುವುದರಲ್ಲಿ ಕುಖ್ಯಾತರಾಗಿದ್ದಾರೆ.
ಭಾರತದ ತಂಡವು ಎಲ್ಲಾ ಎಂಟು ಪಂದ್ಯಗಳನ್ನು ಗೆದ್ದು ಅತ್ಯುತ್ತಮ ಪ್ರದರ್ಶನ ನೀಡಿದೆ. ವಿಶೇಷವಾಗಿ ಪಾಕಿಸ್ತಾನ ವಿರುದ್ಧ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು ನಮ್ಮ ದೇಶದ ಕ್ರೀಡಾ ಸಾಧನೆಗೆ ದೊಡ್ಡ ಸಾಕ್ಷಿಯಾಗಿದೆ ಎಂದು ಸೈಕಿಯಾ ಹೇಳಿದರು.
ಪಹಲ್ಗಾಮ್ ದಾಳಿ ಹಿನ್ನೆಲೆಯಲ್ಲಿ ಪಾಕಿಸ್ತಾನ ವಿರುದ್ಧ ಟೂರ್ನಿಯನ್ನೇ ಬಹಿಷ್ಕರಿಸುವಂತೆ ಕೆಲವೊಂದು ವಲಯಗಳಿಂದ ವಿರೋಧ ವ್ಯಕ್ತವಾಗಿದ್ದರೂ, ಕೇಂದ್ರ ಸರ್ಕಾರದ ನಿಟ್ಟಿನಲ್ಲಿ ಬಿಸಿಸಿಐ ಈ ಟೂರ್ನಿಯಲ್ಲಿ ಭಾಗವಹಿಸಲು ತೀರ್ಮಾನಿಸಿತು ಎಂದು ಸೈಕಿಯಾ ತಿಳಿಸಿದರು. ಪಾಕಿಸ್ತಾನ ವಿರುದ್ಧ ಮೂರು ಗೆಲುವುಗಳೊಂದಿಗೆ ಈ ಯಶಸ್ಸು ದೇಶದ ಜನತೆಗೆ ಸಂತೋಷ ತಂದಿದೆ ಎಂದು ಸೈಕಿಯಾ ಅಭಿಪ್ರಾಯಪಟ್ಟರು.
ಟ್ರೋಫಿ ಪ್ರದಾನ ಸಮಾರಂಭ ಪ್ರಾರಂಭವಾಗುವ ಮೊದಲು ಭಾರಿ ಬಿಕ್ಕಟ್ಟು ಉಂಟಾಯಿತು. ಪಿಸಿಬಿ ಮುಖ್ಯಸ್ಥರಾದ ನಕ್ವಿ ಪ್ರಶಸ್ತಿಗಳನ್ನು ನೀಡಬೇಕಿದ್ದ ಇತರ ಗಣ್ಯರೊಂದಿಗೆ ಒಂದು ಗಂಟೆಗೂ ಹೆಚ್ಚು ಕಾಲ, ವೇದಿಕೆಯ ಮೇಲೆ ನಿಂತಿದ್ದರು. ಭಾರತೀಯ ತಂಡವು ಹತ್ತಿರದಲ್ಲಿ ನಿಂತಿತ್ತು ಮತ್ತು ಪಾಕಿಸ್ತಾನಿ ತಂಡವು ಡ್ರೆಸ್ಸಿಂಗ್ ಕೋಣೆಯಲ್ಲಿತ್ತು. ವರದಿಯ ಪ್ರಕಾರ, ಪಾಕಿಸ್ತಾನ ಸಚಿವರು ಟ್ರೋಫಿಯನ್ನು ಹಸ್ತಾಂತರಿಸುತ್ತಾರೆ ಎಂದು ಭಾರತೀಯರಿಗೆ ತಿಳಿಸಲಾಯಿತು ಮತ್ತು ಅವರು ಅದನ್ನು ಸ್ಪಷ್ಟವಾಗಿ ತಿರಸ್ಕರಿಸಿತು. ತಾವು ಅವರ ಜೊತೆ ಸಂವಹನ ನಡೆಸಲು ಬಯಸುವುದಿಲ್ಲ ಎಂದು ಹೇಳಿದರು.
ಭಾರತೀಯ ಬೋರ್ಡ್ (BCCI) ನಿಂದ ಈ ಬಗ್ಗೆ ಬೆಂಬಲ ಪಡೆದ ಟೀಂ ಇಂಡಿಯಾ, ನಕ್ವಿಯ ಬಳಿ ಟ್ರೋಫಿ ಪಡೆಯುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿತು. ಅವರು ಬೇರೆಯವರಿಂದ ಟ್ರೋಫಿ ಸ್ವೀಕರಿಸಲು ಸಿದ್ದರಾಗಿದ್ದರು ಆದರೆ ನಕ್ವಿಯಿಂದ ಸ್ವೀಕರಿಸುವುದಿಲ್ಲ ಎಂದು ತಿಳಿಸಲಾಯಿತು.
ಭಾರತವು ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಉಪಾಧ್ಯಕ್ಷ ಖಾಲಿದ್ ಅಲ್ ಜರೂನಿ ಅವರಿಂದ ಟ್ರೋಫಿಯನ್ನು ಪಡೆಯಲು ಸಿದ್ಧವಾಗಿತ್ತು, ಅವರು ನಖ್ವಿ ಅವರೊಂದಿಗೆ ವೇದಿಕೆಯನ್ನು ಹಂಚಿಕೊಂಡಿದ್ದರು, ಆದರೆ ನಕ್ವಿ ಅವರಿಗೆ ಪ್ರಶಸ್ತಿ ನೀಡಲು ಬಿಡಲಿಲ್ಲ.
ಟ್ರೋಫಿ ಪ್ರದಾನ ಸಮಾರಂಭ ಪ್ರಾರಂಭವಾಗಲು ನಖ್ವಿ ಒಂದು ಬದಿಯಲ್ಲಿ ನಿಂತಾಗ, ಭಾರತೀಯ ಆಟಗಾರರು ಅವರಿಂದ 15 ಗಜಗಳ ಒಳಗೆ ನಿಂತಿದ್ದರು, ತಮ್ಮ ಸ್ಥಾನಗಳಿಂದ ವೇದಿಕೆಯತ್ತ ಹೋಗಲು ನಿರಾಕರಿಸಿದರು.
ನಖ್ವಿ ವೇದಿಕೆ ಏರುತ್ತಿದ್ದಂತೆ, ಬಲವಂತವಾಗಿ ಟ್ರೋಫಿ ಪ್ರದಾನ ಮಾಡಲು ಮುಂದಾದರೆ ಭಾರತದ ತಂಡ ಟ್ರೋಫಿಯನ್ನು ಸ್ವೀಕರಿಸುವುದಿಲ್ಲ ಮತ್ತು ಅಧಿಕೃತವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರಿಗೆ ತಿಳಿಸಲಾಯಿತು. ನಖ್ವಿ ಕಾಯುತ್ತಿದ್ದಾಗ, ಇದ್ದಕ್ಕಿದ್ದಂತೆ, ಆಯೋಜಕರಲ್ಲಿ ಯಾರೋ ಒಬ್ಬರು ಟ್ರೋಫಿಯನ್ನು ಡ್ರೆಸ್ಸಿಂಗ್ ಕೋಣೆಯೊಳಗೆ ತೆಗೆದುಕೊಂಡು ಹೋದರು.


ನಿಮ್ಮ ಕಾಮೆಂಟ್ ಬರೆಯಿರಿ