ರಾತ್ರಿ ಸಮಯದಲ್ಲಿ ಮಲಗಿದ್ದ ನಾಯಿ ಹಿಡಿಯಲು ಬಂದ ಚಿರತೆಯ ವಿರುದ್ಧ ಹೋರಾಡಿ ಅದರನ್ನೇ ಹಿಮ್ಮೆಟ್ಟಿಸಿದ ನಾಯಿಯ ಶೌರ್ಯದ ವಿಡಿಯೊವೊಂದು ವೈರಲ್ ಆಗಿದೆ. ಈ ಘಟನೆ ಉತ್ತರಾಖಂಡದ ರುದ್ರಪ್ರಯಾಗದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ರುದ್ರಪ್ರಯಾಗದ ವಿಕಾಸ ಭವನ ಕಚೇರಿ ಸಮೀಪದ ಮನೆಯೊಂದರಲ್ಲಿ ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದೆ. ರಾತ್ರಿ ಕತ್ತಲಿನ ನಡುವೆ ಮನೆಯ ಆವರಣಕ್ಕೆ ನುಗ್ಗಿದ ಚಿರತೆ, ಗಾಢ ನಿದ್ರೆಯಲ್ಲಿದ್ದ ಸಾಕು ನಾಯಿಯ ಮೇಲೆ ಏಕಾಏಕಿ ದಾಳಿ ಮಾಡಿದೆ.
ಆದರೆ ಚಿರತೆ ದಾಳಿಗೆ ನಾಯಿ ಒಮ್ಮೆಗೇ ಹೆದರಿದಂತೆ ಕಂಡರೂ ಹಿಂದೆ ಸರಿಯಲಿಲ್ಲ. ಬದಲಿಗೆ ಧೈರ್ಯದಿಂದ ಪ್ರತಿದಾಳಿ ನಡೆಸಿದೆ.
ಮನೆಯ ಬಾಗಿಲಿನಿಂದ ಕೆಲವೇ ಅಡಿ ದೂರದಲ್ಲಿ ಚಿರತೆ ಮತ್ತು ನಾಯಿಯ ನಡುವೆ ತೀವ್ರ ಕಾಳಗ ನಡೆದಿದೆ. ಗಾತ್ರ ಹಾಗೂ ಬಲದಲ್ಲಿ ಚಿರತೆ ಬಲಶಾಲಿಯಾಗಿದ್ದರೂ, ನಾಯಿ ಮಾತ್ರ ಕಿಂಚಿತ್ತೂ ಜಗ್ಗದೆ ಚಿರತೆ ವಿರುದ್ಧ ನಿರಂತರವಾಗಿ ಹೋರಾಡಿದೆ.
ನಾಯಿಯ ತೀವ್ರ ಪ್ರತಿರೋಧದಿಂದ ಕಂಗೆಟ್ಟ ಚಿರತೆ ಕೊನೆಗೆ ಕಾಳಗದಿಂದ ಹಿಂದೆ ಸರಿದು ಮನೆಯ ಆವರಣದಿಂದ ಪರಾರಿಯಾಗಿದೆ. ಅಷ್ಟೇ ಅಲ್ಲ, ನಾಯಿ ಕೂಡ ಚಿರತೆಯನ್ನು ಬೆನ್ನಟ್ಟಿಕೊಂಡು ಓಡಿದೆ. ಬಳಿಕ ವಿಡಿಯೋದಲ್ಲಿ ಮನೆಯ ಬಾಗಿಲಿನಿಂದ ವ್ಯಕ್ತಿಯೊಬ್ಬರು ಹೊರಗೆ ಬರುವ ದೃಶ್ಯವೂ ಕಂಡುಬರುತ್ತದೆ.
ಚಿರತೆಯ ದಾಳಿಯಿಂದ ನಾಯಿ ಬದುಕುಳಿದಿದ್ದರೂ, ತಡರಾತ್ರಿಯಲ್ಲಿ ನಡೆದ ಈ ಭೀಕರ ಘಟನೆ ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ.
ಕಳೆದ ಕೆಲವು ವಾರಗಳಿಂದ ವಸತಿ ಪ್ರದೇಶಗಳ ಸುತ್ತಮುತ್ತ ಚಿರತೆಗಳ ಓಡಾಟ ಹಾಗೂ ಕಾಣಿಸಿಕೊಳ್ಳುವ ಪ್ರಕರಣಗಳು ಹೆಚ್ಚಾಗಿವೆ ಎಂದು ನಿವಾಸಿಗಳು ತಿಳಿಸಿದ್ದಾರೆ.
ಚಿರತೆಗಳ ಸಂಚಾರದಿಂದ ಕುಟುಂಬಗಳು ಮಾತ್ರವಲ್ಲದೆ ಸಾಕುಪ್ರಾಣಿಗಳ ಸುರಕ್ಷತೆಯೂ ಅಪಾಯದಲ್ಲಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಮಂಗಳವಾರದ ದಾಳಿಯ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ರಾತ್ರಿ ವೇಳೆಯಲ್ಲಿ ಈ ಪ್ರದೇಶದಲ್ಲಿ ಗಸ್ತು ಹೆಚ್ಚಿಸಬೇಕು ಹಾಗೂ ಚಿರತೆಯ ಚಲನವಲನವನ್ನು ಸಕ್ರಿಯವಾಗಿ ಪತ್ತೆಹಚ್ಚಿ ಸೆರೆ ಹಿಡಿಯಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ