ವಿಡಿಯೊ | ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಕಾಮುಕ ; ಆತನಿಗೆ ಕಚ್ಚಿ-ಓಡಿಸಿ ಮಹಿಳೆ ರಕ್ಷಿಸಿದ ಬೀದಿನಾಯಿಗಳು!

ತುಡಿಯಲೂರು : ಸಾಕುನಾಯಿಗಳು ಯಜಮಾನನಿಗೆ ನಿಷ್ಠೆ ತೋರುವುದು ಹೊಸದೇನಲ್ಲ. ಆದರೆ, ತಮಗೊಂದಿಷ್ಟು ಪ್ರೀತಿ ತೋರಿಸಿ, ತುತ್ತು ಅನ್ನ ನೀಡಿದವರ ಜೀವ ರಕ್ಷಣೆಗೆ ಬೀದಿ ನಾಯಿಗಳು ಮಹಿಳೆಯನ್ನು ಕಾಮುಕನಿಂದ ಕಾಪಾಡಲು ಹೋರಾಡಿದ ಅಪರೂಪದ ಘಟನೆಯೊಂದು ತಮಿಳುನಾಡಿನ ಕೊಯಮತ್ತೂರಿನ ತುಡಿಯಲೂರಿನಲ್ಲಿ ನಡೆದಿದೆ !
ರೈಲ್ವೆ ಮೇಲ್ಸೇತುವೆ ಬಳಿ ಅಸಹಾಯಕ, ಬುದ್ಧಿಮಾಂದ್ಯ ಮಹಿಳೆಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ ಕಾಮುಕನೊಬ್ಬನಿಗೆ ರಸ್ತೆಯಲ್ಲೇ ಸರಿಯಾದ ಪಾಠ ಕಲಿಸಿ, ಮಹಿಳೆಯನ್ನು ಸಂಭವನೀಯ ಅಪಾಯದಿಂದ ಕಾಪಾಡಿದ ಬೀದಿ ನಾಯಿಯ ಸಾಹಸ ಈಗ ಇಡೀ ದೇಶದ ಗಮನ ಸೆಳೆದಿದೆ.
ತುಡಿಯಲೂರು ರೈಲ್ವೆ ಸೇತುವೆಯ ಸಮೀಪ ವಾಸವಾಗಿದ್ದ ಬುದ್ಧಿಮಾಂದ್ಯ ಮಹಿಳೆಯೊಬ್ಬರಿಗೆ ಆ ಪ್ರದೇಶದಲ್ಲಿದ್ದ ಎರಡು ಬೀದಿ ನಾಯಿಗಳು ನಿತ್ಯವೂ ಸಂಗಾತಿಯಾಗಿದ್ದವು. ಎರಡು ಬೀದಿ ನಾಯಿಗಳು ನಿತ್ಯವೂ ನೆರಳಿನಂತೆ ಜತೆಗಿರುತ್ತಿದ್ದವು. ಘಟನೆ ನಡೆದ ತಡರಾತ್ರಿ, ಮಹಿಳೆ ರಸ್ತೆಬದಿ ಏಕಾಂಗಿಯಾಗಿದ್ದನ್ನು ಕಂಡ ಕಾಮುಕನೊಬ್ಬ ದುಷ್ಟ ಆಲೋಚನೆಯಿಂದ ಆಕೆಯತ್ತ ವಕ್ರದೃಷ್ಟಿ ಬೀರಿದ್ದಾನೆ. ತನ್ನ ದುಷ್ಟಕೃತ್ಯಕ್ಕೆ ಅಡ್ಡವಾಗಿದ್ದ ನಾಯಿಗಳನ್ನು ಬೆದರಿಸಲು ಆತ ಕಲ್ಲು ತೂರಿ ಅವುಗಳನ್ನು ಮೊದಲು ದೂರ ಅಟ್ಟಿದ್ದಾನೆ. ಆದರೆ, ಆ ನಾಯಿಗಳು ಓಡಿಹೋಗಿ ಸುಮ್ಮನೆ ಕೂರಲಿಲ್ಲ; ಸ್ವಲ್ಪ ದೂರ ಓಡಿದಂತೆ ಮಾಡಿ ಮತ್ತೆ ಹಿಂತಿರುಗಿ, ಆತನ ದುಷ್ಕೃತ್ಯವನ್ನು ತಡೆಯಲು ನಿರಂತರವಾಗಿ ಬೊಗಳಲು ಆರಂಭಿಸಿವೆ.

ಪ್ರಮುಖ ಸುದ್ದಿ :-   ತಿರುಪತಿ ದೇವಾಲಯದ ಉಪ ಇಒ ಮನೆಯಲ್ಲಿ ಅಂದಾಜು 5 ಕೋಟಿ ರೂ. ಅಕ್ರಮ ಆಸ್ತಿ ಪತ್ತೆ !

ತಡರಾತ್ರಿಯಲ್ಲಿ ನೈಜ ಹೀರೋಗಳಾದ ಬೀದಿ ನಾಯಿಗಳು
ನಾಯಿಗಳ ಎಚ್ಚರಿಕೆಯನ್ನು ಲೆಕ್ಕಿಸದೆ ಆತ ಮಹಿಳೆಯ ಮೇಲೆ ದೌರ್ಜನ್ಯ ಎಸಗಲು ಮುಂದಾಗಿದ್ದಾನೆ. ಆಗ ಬುದ್ಧಿಮಾಂದ್ಯ ಮಹಿಳೆ ಭಯದಿಂದ ಜೋರಾಗಿ ಚೀರಾಡಿದ್ದಾಳೆ. ಆದರೆ ತಡರಾತ್ರಿಯಾಗಿದ್ದರಿಂದ ಸಹಾಯಕ್ಕೆ ಯಾರೂ ಬರಲಿಲ್ಲ, ಆದರೆ ಆಕೆಯ ರಕ್ಷಣೆಗೆ ಎರಡು ಬೀದಿ ನಾಯಿಗಳು ಧಾವಿಸಿದವು.
ಮಹಿಳೆಯ ಚೀರಾಟ ಕೇಳಿದ ತಕ್ಷಣವೇ ಜಾಗರೂಕರಾದ ನಾಯಿಗಳು ಕ್ಷಣ ಮಾತ್ರದಲ್ಲಿ ಬೊಗಳಲು ಆರಂಭಿಸಿವು. ಒಂದು ನಾಯಿ ನೇರವಾಗಿ ಧಾವಿಸಿ ಕಾಮುಕನ ಕಾಲನ್ನು ಕಚ್ಚಿ ಜಗ್ಗಾಡಿದರೆ, ಮತ್ತೊಂದು ನಾಯಿ ದೂರದಿಂದ ಆತನತ್ತ ಬೊಗಳಿ ಭಯ ಸೃಷ್ಟಿಸಿತು. ಆದರೂ ಬಿಡದ ಕಾಮುಕ ಮಹಿಳೆಗೆ ತೊಂದರೆ ಕೊಡುತ್ತಲೇ ಇದ್ದ. ಕೊನೆಗೆ ಒಂದು ನಾಯಿ ಆತನ ಮೇಲೆ ದಾಳಿ ನಡೆಸಿ ಆತನಿಗೆ ಕಚ್ಚಿತು. ಇದರಿಂದ ಕಂಗಾಲಾದ ಕಾಮುಕ ಹೆದರಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಆತ ಓಡುತ್ತಿದ್ದರೂ ಬಿಡದ ಒಂದು ನಾಯಿ ಆತನನ್ನು ದೂರದವರೆಗೂ ಅಟ್ಟಿಸಿಕೊಂಡು ಹೋಗಿ ಓಡಿಸುವ ಮೂಲಕ ಮಹಿಳೆಯನ್ನು ಕಾಪಾಡಿದೆ.

ಸಿಸಿಟಿವಿಯಲ್ಲಿ ಬಯಲಾಯ್ತು ಶ್ವಾನಗಳ ಶೌರ್ಯ
ವಿಪರ್ಯಾಸವೆಂದರೆ, ಈ ಭೀಕರ ಘಟನೆ ನಡೆದರೂ ಯಾರಿಗೂ ಇದರ ಸುಳಿವು ಸಿಕ್ಕಿರಲಿಲ್ಲ. ಆದರೆ ಸ್ಥಳೀಯ ಅಂಗಡಿಯೊಂದಕ್ಕೆ ಸಂಬಂಧಿಸಿದ ಬೇರೊಂದು ದೂರಿನ ತನಿಖೆಗಾಗಿ ತುಡಿಯಲೂರು ಪೊಲೀಸರು ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾಗ ಈ ಘಟನೆ ಬೆಳಕಿಗೆ ಬಂದಿದೆ.
ಸಿಸಿಟಿವಿಯಲ್ಲಿ ಘಟನೆಯ ಭೀಕರತೆ ಹಾಗೂ ಬೀದಿ ನಾಯಿಗಳ ಸಾಹಸ ಕಂಡು ಪೊಲೀಸರು ಕ್ಷಣಕಾಲ ದಂಗಾಗಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.
ಮನುಷ್ಯರೇ ಮಾನವೀಯತೆ ಮರೆತು ಮೃಗಗಳಂತೆ ವರ್ತಿಸುತ್ತಿರುವ ಈ ಕಾಲದಲ್ಲಿ, ತಮಗೆ ಪ್ರೀತಿ ನೀಡುತ್ತಿದ್ದ ಮಹಿಳೆಯ ಮಾನ ಹಾಗೂ ಪ್ರಾಣ ಉಳಿಸಿದ ಈ ಎರಡು ಬೀದಿ ನಾಯಿಗಳ ಸಾಹಸ ಮತ್ತು ಕೃತಜ್ಞತೆ ಈಗ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

ಪ್ರಮುಖ ಸುದ್ದಿ :-   ಇಸ್ರೋ ಐತಿಹಾಸಿಕ ಸಾಧನೆ ; ಭಾರತದ ಮೊದಲ ಭೂ ವೀಕ್ಷಣಾ ಉಪಗ್ರಹ ಉಡಾವಣೆ : ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಇಸ್ರೋ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement