ದಕ್ಷಿಣ ಅಫ್ಘಾನಿಸ್ತಾನದ ಕಂದಹಾರ್ ಆಕಾಶದಲ್ಲಿ ಹಾರಾಡುತ್ತಿದ್ದ ಆ ವಿಮಾನ ಯಾರಿಗೂ ಕಾಣಿಸುತ್ತಿರಲಿಲ್ಲ. ರಾತ್ರಿಯ ಕತ್ತಲಲ್ಲಿ ವಿಲೀನವಾಗುವ ಅದರ ವಿನ್ಯಾಸ, ಸದ್ದಿಲ್ಲದ ಎಂಜಿನ್ ಮತ್ತು ಗಡಿಗಳನ್ನು ಮೀರಿ ಮಾಹಿತಿ ಕಲೆಹಾಕುವ ಅತ್ಯಾಧುನಿಕ ಸಂವೇದಕಗಳು (Sensors) ಅದಕ್ಕಿದ್ದವು. ಅದು ಅಮೆರಿಕದ ಹೆಮ್ಮೆಯ RQ-170 ಸೆಂಟಿನೆಲ್ (Sentinel) ಡ್ರೋನ್. ಮಿಲಿಟರಿ ವಲಯದಲ್ಲಿ ಇದನ್ನು ಪ್ರೀತಿಯಿಂದ “ಬೀಸ್ಟ್ ಆಫ್ ಕಂದಹಾರ್” (Beast of Kandahar) ಎಂದು ಕರೆಯಲಾಗುತ್ತಿತ್ತು. ಆದರೆ, 2011ರ ಆ ಒಂದು ದಿನ ನಡೆದ ಘಟನೆ ಇಡೀ ವಿಶ್ವದ ಡ್ರೋನ್ ತಂತ್ರಜ್ಞಾನದ ಇತಿಹಾಸವನ್ನೇ ಬದಲಿಸಿತು.
ಇರಾನ್ ಪಾಲಾದ ಅಮೆರಿಕದ ರಹಸ್ಯ ಆಯುಧ
2011ರ ಡಿಸೆಂಬರ್ 4ರಂದು ಇರಾನ್ ಒಂದು ಅಚ್ಚರಿಯ ಘೋಷಣೆ ಮಾಡಿತು. ತನ್ನ ವಾಯುಪ್ರದೇಶದೊಳಗೆ ಅತಿಕ್ರಮಣ ಮಾಡಿದ್ದ ಅಮೆರಿಕದ ಅತ್ಯಾಧುನಿಕ ಸ್ಟೆಲ್ತ್ (ರಾಡಾರ್‌ಗೆ ಸಿಗದ) ಡ್ರೋನ್ ಅನ್ನು ತಾನು ವಶಪಡಿಸಿಕೊಂಡಿರುವುದಾಗಿ ಜಗತ್ತಿಗೆ ಸಾರಿತು. ಈ ಸುದ್ದಿಯಿಂದ ವಾಷಿಂಗ್ಟನ್ ನಡುಗಿಹೋಯಿತು. ಅಫ್ಘಾನಿಸ್ತಾನದ ಗಡಿಯಿಂದ ಸುಮಾರು 225 ಕಿಲೋಮೀಟರ್ ದೂರದ ಕಾಶ್ಮಾರ್ ಎಂಬಲ್ಲಿ ಈ ಡ್ರೋನ್ ಪತ್ತೆಯಾಗಿತ್ತು.
ಇರಾನ್ ವಿಜ್ಞಾನಿಗಳು ಡ್ರೋನ್‌ನ ಜಿಪಿಎಸ್ (GPS) ವ್ಯವಸ್ಥೆಯನ್ನು ಹ್ಯಾಕ್ ಮಾಡಿ, ಅದು ತನ್ನದೇ ನೆಲೆಗೆ ಮರಳುತ್ತಿದೆ ಎಂಬ ಭ್ರಮೆ ಹುಟ್ಟಿಸಿ, ಸುರಕ್ಷಿತವಾಗಿ ಇರಾನ್ ನೆಲದ ಮೇಲೆ ಇಳಿಯುವಂತೆ ಮಾಡಿದ್ದರು (Electronic Hijacking).
ಆದರೆ, ಅಮೆರಿಕ ಇದನ್ನು ತಾಂತ್ರಿಕ ದೋಷ ಎಂದು ಕರೆದಿದೆ. ಉಪಗ್ರಹ ಸಂಪರ್ಕ ಕಡಿತಗೊಂಡು ಡ್ರೋನ್ ದಾರಿ ತಪ್ಪಿರಬಹುದು ಎಂದು ಪೆಂಟಗನ್ ಅಧಿಕಾರಿಗಳು ವಾದಿಸಿದ್ದರು. “ಇದು ಶತ್ರುಗಳ ದಾಳಿಯಿಂದ ಬಿದ್ದಿದೆ ಎನ್ನಲು ಯಾವುದೇ ಪುರಾವೆಗಳಿಲ್ಲ” ಎಂದು ಹೇಳಿತು.
ʼಬೀಸ್ಟ್ ಆಫ್ ಕಂದಹಾರ್’ ಏಕೆ ಅಷ್ಟು ಮುಖ್ಯವಾಗಿತ್ತು?
RQ-170 ಸೆಂಟಿನೆಲ್ ಅಥವಾ ‘ಬೀಸ್ಟ್ ಆಫ್ ಕಂದಹಾರ್’ ಕೇವಲ ಒಂದು ಡ್ರೋನ್ ಆಗಿರಲಿಲ್ಲ. ಅದು ಅಮೆರಿಕದ ರಹಸ್ಯ ಪತ್ತೇದಾರಿ ಸಂಸ್ಥೆ ಸಿಐಎ (CIA)ನ ಕಣ್ಣಾಗಿತ್ತು. ಇದು ಬಿ-2 ಬಾಂಬರ್ ವಿಮಾನದ ಮಾದರಿಯಲ್ಲೇ ‘ಬ್ಯಾಟ್-ವಿಂಗ್’ (ಬಾವಲಿ ರೆಕ್ಕೆ) ಆಕಾರ ಹೊಂದಿತ್ತು. ರಾಡಾರ್ ಸಿಗ್ನಲ್‌ಗಳನ್ನು ಹೀರಿಕೊಳ್ಳುವ ವಿಶೇಷ ಲೇಪನ ಇದರ ಮೇಲಿತ್ತು.
2011ರಲ್ಲಿ ಪಾಕಿಸ್ತಾನದ ಅಬೋಟಾಬಾದ್‌ನಲ್ಲಿ ಅಡಗಿದ್ದ ಒಸಾಮಾ ಬಿನ್ ಲಾಡೆನ್ ಮೇಲಿನ ದಾಳಿಗೂ ಮುನ್ನ, ತಿಂಗಳುಗಟ್ಟಲೆ ಆ ಪ್ರದೇಶದ ಮೇಲೆ ನಿರಂತರ ಕಣ್ಗಾವಲು ಇಟ್ಟಿದ್ದು ಇದೇ RQ-170 ಡ್ರೋನ್‌ಗಳು. ದಾಳಿಯ ನೇರ ದೃಶ್ಯಗಳನ್ನು ಅಂದಿನ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ತಲುಪಿಸಿದ್ದು ಕೂಡ ಇವೇ ಎಂದು ಅನೇಕ ವರದಿಗಳು ಹೇಳುತ್ತವೆ.
ರಿವರ್ಸ್ ಇಂಜಿನಿಯರಿಂಗ್: ಅಮೆರಿಕದ ತಂತ್ರಜ್ಞಾನ ಇರಾನ್ ಕೈಗೆ
ಈ ಡ್ರೋನ್ ಇರಾನ್ ಕೈಗೆ ಸಿಕ್ಕಿದ್ದು ಅಮೆರಿಕಕ್ಕೆ ದೊಡ್ಡ ಹೊಡೆತವಾಗಿತ್ತು. ಅಮೆರಿಕದ ಎಫ್-35 ಫೈಟರ್ ಜೆಟ್‌ನಲ್ಲಿ ಬಳಸುವಂತಹ ಸ್ಟೆಲ್ತ್ ತಂತ್ರಜ್ಞಾನದ ರಹಸ್ಯಗಳು ಇರಾನ್ ವಿಜ್ಞಾನಿಗಳಿಗೆ ಲಭ್ಯವಾದವು. ರಾಡಾರ್‌ಗಳ ಕಣ್ಣಿಗೆ ಮಣ್ಣೆರಚುವ ಇದರ ವಿಶೇಷ ಲೇಪನ (Coating) ಮತ್ತು ವಿನ್ಯಾಸ ಇರಾನ್ ಪಾಲಾಯಿತು. ಇದು ಎಫ್-35 ನಂತಹ ಬಿಲಿಯನ್ ಡಾಲರ್ ವೆಚ್ಚದ ವಿಮಾನಗಳ ರಹಸ್ಯವನ್ನೂ ಅಪಾಯಕ್ಕೀಡುಮಾಡಿತು.
ಒಬಾಮ ಅವರು ಡ್ರೋನ್ ಅನ್ನು ಮರಳಿ ನೀಡುವಂತೆ ಕೇಳಿಕೊಂಡರೂ ಇರಾನ್ ಅದನ್ನು ನಿರಾಕರಿಸಿತು. ಬದಲಾಗಿ, ಆ ಡ್ರೋನ್‌ನಲ್ಲಿದ್ದ ದೃಶ್ಯಗಳನ್ನು ಬಿಡುಗಡೆ ಮಾಡಿ ಅಮೆರಿಕಕ್ಕೆ ಸವಾಲು ಹಾಕಿತು. ಅಲ್ಲಿಂದಲೇ ಇರಾನ್‌ನ ‘ರಿವರ್ಸ್ ಇಂಜಿನಿಯರಿಂಗ್’ (ತಂತ್ರಜ್ಞಾನದ ಮರುಸೃಷ್ಟಿ) ಪರ್ವ ಆರಂಭವಾಯಿತು.
ಇರಾನ್‌ನ ‘ಶಾಹಿದ್’ ಸರಣಿಯ ಉದಯ
ಅಮೆರಿಕದ ಸೆಂಟಿನೆಲ್ ಡ್ರೋನ್ ಮಾದರಿಯಲ್ಲೇ ಇರಾನ್ ತನ್ನದೇ ಆದ ಡ್ರೋನ್‌ಗಳನ್ನು ತಯಾರಿಸಿತು. ಶಾಹಿದ್-171 ಸಿಮೋರ್ಗ್ ಮತ್ತು ಸಾಯೆಘೆ ಇವು ನೋಡಲು ಹೂಬಹೂ RQ-170 ನಂತೆಯೇ ಇದ್ದವು. ಈ ಡ್ರೋನ್‌ಗಳು ಬಾಂಬ್‌ಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನೂ ಹೊಂದಿದ್ದವು.
ಶಾಹಿದ್-129 ಡ್ರೋನ್ ಎಂಬುದು ಇಸ್ರೇಲ್‌ನ ಹರ್ಮ್ಸ್ 450 ಮಾದರಿಯನ್ನು ಹೋಲುವ ಮಧ್ಯಮ ಎತ್ತರದ ಡ್ರೋನ್ ಆಗಿದ್ದು, ಇರಾನ್ ಇದನ್ನು ದೊಡ್ಡ ಮಟ್ಟದಲ್ಲಿ ಉತ್ಪಾದಿಸಿತು.
ಇಂದು ವಿಶ್ವದ ಗಮನ ಸೆಳೆದಿರುವುದು ಇರಾನ್‌ನ ಶಾಹಿದ್-136. ಇದೊಂದು ‘ಕಾಮಿಕಾಜೆ’ ಅಥವಾ ‘ಸುಸೈಡ್ ಡ್ರೋನ್’. ಇದು ಅತ್ಯಂತ ಅಗ್ಗದ ದರದ (ಸುಮಾರು $20,000 ರಿಂದ $30,000) ಡ್ರೋನ್ ಆಗಿದ್ದು, ಗುರಿಗೆ ಅಪ್ಪಳಿಸಿ ಸ್ಫೋಟಗೊಳ್ಳುತ್ತದೆ. ಉಕ್ರೇನ್ ಯುದ್ಧದಲ್ಲಿ ರಷ್ಯಾ ಇದನ್ನು ವ್ಯಾಪಕವಾಗಿ ಬಳಸುತ್ತಿದೆ.
ಇರಾನ್ ಮಾದರಿಯನ್ನೇ ನಕಲು ಮಾಡಿ ಅಮೆರಿಕ ತಿರುಗೇಟು…!
ಕಾಲಚಕ್ರ ಈಗ ಉಲ್ಟಾ ತಿರುಗಿದೆ. 2011ರಲ್ಲಿ ಅಮೆರಿಕದ ತಂತ್ರಜ್ಞಾನವನ್ನು ಇರಾನ್ ನಕಲು ಮಾಡಿತ್ತು. ಈಗ ಅಮೆರಿಕವು ಇರಾನ್‌ನ ಅಗ್ಗದ ಡ್ರೋನ್ ತಂತ್ರಜ್ಞಾನವನ್ನು ನಕಲು ಮಾಡುತ್ತಿದೆ..!
ಅಮೆರಿಕದ ಸೈನ್ಯವು ಈಗ LUCAS (Low-cost Uncrewed Combat Attack System) ಎಂಬ ಡ್ರೋನ್ ಅಭಿವೃದ್ಧಿಪಡಿಸಿದೆ. ಇದು ನೋಡಲು ಇರಾನ್‌ನ ಶಾಹಿದ್-136 ನಂತೆಯೇ ಇದೆ. ಒಂದು MQ-9 ರೀಪರ್ ಡ್ರೋನ್ ಬೆಲೆ $16 ಮಿಲಿಯನ್ ಆಗಿದ್ದರೆ, ಈ LUCAS ಡ್ರೋನ್ ಬೆಲೆ ಕೇವಲ $35,000.
2011ರಲ್ಲಿ ಕಂದಹಾರ್‌ನಿಂದ ಹಾರಿದ್ದ ಆ ಒಂದು ಡ್ರೋನ್ ಇಂದು ಜಾಗತಿಕ ಯುದ್ಧ ನೀತಿಯನ್ನೇ ಬದಲಿಸಿದೆ. ದುಬಾರಿ ಮತ್ತು ಬೃಹತ್ ವಿಮಾನಗಳಿಗಿಂತ, ಅಗ್ಗದ ಮತ್ತು ಸಾವಿರಾರು ಸಂಖ್ಯೆಯಲ್ಲಿ ಹಾರಬಲ್ಲ ಸಣ್ಣ ಡ್ರೋನ್‌ಗಳು ಭವಿಷ್ಯದ ಯುದ್ಧಗಳನ್ನು ನಿರ್ಧರಿಸಲಿವೆ ಎಂಬುದು ಈಗ ಸಾಬೀತಾಗಿದೆ. ಅಮೆರಿಕದ ‘ಬೀಸ್ಟ್’ ಇರಾನ್ ಕೈ ಸೇರಿ, ಈಗ ಮತ್ತೆ ಅಮೆರಿಕಕ್ಕೇ ಹೊಸ ರೂಪದಲ್ಲಿ ಮರಳಿ ಬಂದಿರುವುದು ತಂತ್ರಜ್ಞಾನದ ಇತಿಹಾಸದಲ್ಲಿ ಒಂದು ವಿಚಿತ್ರ ವಿದ್ಯಮಾನ.


ನಿಮ್ಮ ಕಾಮೆಂಟ್ ಬರೆಯಿರಿ