ತಿರುವಳ್ಳೂರು (ತಮಿಳುನಾಡು): ಆರಂಭದಲ್ಲಿ ಹಾವಿನ ಕಚ್ಚಿದ್ದರಿಂದ ಸಾವು ಸಂಭವಿಸಿದೆ ಎಂದು ಭಾವಿಸಲಾಗಿದ್ದ ಪ್ರಕರಣವೊಂದು ಕೋಲ್ಡ್ ಬ್ಲಡೆಡ್ ಮರ್ಡರ್ ಎಂದು ಗೊತ್ತಾದ ನಂತರ ಪೊಲೀಸರೇ ದಂಗಾಗಿದ್ದಾರೆ. ದೊಡ್ಡ ಮೊತ್ತದ ವಿಮೆ ಹಣವನ್ನು ಪಡೆಯಲು ಸ್ವಂತ ಮಕ್ಕಳೇ ತಂದೆಯನ್ನು ಕೊಲೆ ಮಾಡಿರುವ ಘಟನೆ ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಪೋತತ್ತೂರುಪೆಟ್ಟೈ ಗ್ರಾಮದ ನಿವಾಸಿ, ಸರ್ಕಾರಿ ಶಾಲೆಯ ಪ್ರಯೋಗಾಲಯ ಸಹಾಯಕರಾಗಿದ್ದ 56 ವರ್ಷದ ಇ.ಪಿ. ಗಣೇಶನ್ ಕಳೆದ ಅಕ್ಟೋಬರ್‌ನಲ್ಲಿ ತಮ್ಮ ಮನೆಯಲ್ಲಿ ಮೃತಪಟ್ಟಿದ್ದರು. ಮೃತದೇಹದ ಮೇಲೆ ಹಾವು ಕಚ್ಚಿದ ಗುರುತುಗಳಿದ್ದ ಕಾರಣ, ಕುಟುಂಬದವರು ಇದು ಆಕಸ್ಮಿಕ ಸಾವು ಎಂದು ಹೇಳಿದ್ದರು. ಪೊಲೀಸರು ಸಹ ಇದನ್ನು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು.
ಕೊನೆಗೂ ಬಯಲಾದ ಸಂಚು:
ಗಣೇಶನ್ ಹೆಸರಿನಲ್ಲಿದ್ದ ಕೋಟ್ಯಂತರ ರೂಪಾಯಿಗಳ ವಿಮಾ ಪಾಲಿಸಿಯನ್ನು ಪರಿಶೀಲಿಸುವಾಗ ವಿಮಾ ಕಂಪನಿಯು ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿತು. ಗಣೇಶನ್ ಹೆಸರಿನಲ್ಲಿ ಇತ್ತೀಚೆಗಷ್ಟೇ ಭಾರಿ ಮೊತ್ತದ ವಿಮೆ ಮಾಡಿಸಲಾಗಿತ್ತು ಮತ್ತು ಫಲಾನುಭವಿಗಳ ನಡವಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಇದನ್ನು ಕಂಪನಿಯು ಪೊಲೀಸರ ಗಮನಕ್ಕೆ ತಂದಿತು. ಈ ಕುರಿತು ಮಾಹಿತಿ ಪಡೆದ ಪೊಲೀಸರು ವಿಶೇಷ ತನಿಖಾ ತಂಡವನ್ನು (SIT) ರಚಿಸಿ ತನಿಖೆ ಆರಂಭಿಸಿದರು.
ತನಿಖೆಯಲ್ಲಿ ಬೆಳಕಿಗೆ ಬಂದ ಭಯಾನಕ ಸತ್ಯಗಳು:
“ಮಕ್ಕಳು ತಮ್ಮ ತಂದೆಯ ಹೆಸರಿನಲ್ಲಿ ಸುಮಾರು 3 ಕೋಟಿ ರೂಪಾಯಿಗಳ ವಿಮೆಯನ್ನು ಮಾಡಿಸಿದ್ದರು” ಎಂದು ತಿರುವಳ್ಳೂರು ಎಸ್‌ಪಿ ವಿವೇಕಾನಂದ ಶುಕ್ಲಾ ತಿಳಿಸಿದ್ದಾರೆ. ಆ ವಿಮೆ ಹಣ ಪಡೆಯುವ ಸಲುವಾಗಿ ತಂದೆಯನ್ನು ಕೊಲ್ಲಲು ಸಂಚು ರೂಪಿಸಿದ್ದ ಮಕ್ಕಳು, ಹಾವಿನ ವ್ಯಾಪಾರಿಗಳ ಸಹಾಯದಿಂದ ವಿಷಪೂರಿತ ಹಾವುಗಳನ್ನು ತರಿಸಿದ್ದರು. ಗಣೇಶನ್ ಸಾವಿಗೆ ಒಂದು ವಾರ ಮೊದಲು ನಾಗರ ಹಾವಿನಿಂದ ತಂದೆಯ ಕಾಲಿಗೆ ಕಚ್ಚಿಸಿದ್ದರು. ಆದರೆ ಅದು ಪ್ರಾಣಾಪಾಯ ಉಂಟುಮಾಡಿರಲಿಲ್ಲ. ಹೀಗಾಗಿ ಅವರಿಗೆ ಬಚಾವ್ ಆದರು.
ಮೊದಲ ಯತ್ನ ವಿಫಲವಾದ ಕಾರಣ, ನಂತರ ಅತ್ಯಂತ ವಿಷಕಾರಿಯಾದ ಕಟ್ಟುಹಾವು (Krait) ತರಿಸಿದ್ದರು. ಮುಂಜಾನೆ ವೇಳೆ ನಿದ್ರೆಯಲ್ಲಿದ್ದ ತಂದೆಯ ಕುತ್ತಿಗೆಗೆ ಆ ಹಾವು ಕಚ್ಚಿಸಿ ಕೊಲೆ ಮಾಡಿದ್ದರು.ಕೊಲೆಯ ನಂತರ, ಮನೆಯೊಳಗೆ ಹಾವು ಬಂದಿದೆ ಎಂದು ನಂಬಿಸಲು ಆ ಹಾವನ್ನು ಮನೆಯಲ್ಲೇ ಸಾಯಿಸಲಾಗಿತ್ತು. ಅಲ್ಲದೆ, ತಂದೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಉದ್ದೇಶಪೂರ್ವಕವಾಗಿ ವಿಳಂಬ ಮಾಡಲಾಗಿತ್ತು ಎಂಬುದು ತನಿಖೆ ವೇಳೆ ದೃಢಪಟ್ಟಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗಣೇಶನ್ ಅವರ ಇಬ್ಬರು ಪುತ್ರರು ಮತ್ತು ಹಾವನ್ನು ಪೂರೈಸಲು ಸಹಾಯ ಮಾಡಿದ ನಾಲ್ವರು ಸೇರಿದಂತೆ ಒಟ್ಟು ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ತನಿಖೆ ಮುಂದುವರಿದಿದೆ.


ನಿಮ್ಮ ಕಾಮೆಂಟ್ ಬರೆಯಿರಿ