ಕಠ್ಮಂಡು: “ಗ್ರಾಮವೇ ಕೊಚ್ಚಿಹೋಗಿದೆ… ನದಿಯು ಎಲ್ಲವನ್ನೂ ನುಂಗಿದೆ… ಮಕ್ಕಳನ್ನು ಕರೆದುಕೊಂಡು ಓಡಿ ಹೋಗಿ!”
ಬುಧವಾರ ಬೆಳಿಗ್ಗೆ 9:20ಕ್ಕೆ ಬಂದ ಈ ದೂರವಾಣಿ ಕರೆ ನೇಪಾಳದ ತ್ರಿಶೂಲಿ ಕಣಿವೆಯಲ್ಲಿರುವ ತ್ರಿಭುವನ್ ತ್ರಿಶೂಲಿ ಪ್ರೌಢಶಾಲೆಯ ಮುಖ್ಯಶಿಕ್ಷಕ ರಾಜೇಂದ್ರ ದವಾಡಿ ಅವರ ಬದುಕಿನ ಅತ್ಯಂತ ನಿರ್ಣಾಯಕ ಕ್ಷಣವಾಗಿ ಪರಿಣಮಿಸಿತು. ಆ ಕ್ಷಣದಲ್ಲಿ ಅವರು ತೆಗೆದುಕೊಂಡ ಒಂದು ತ್ವರಿತ ನಿರ್ಧಾರ 1,643 ಮಕ್ಕಳಿಗೆ ಮರುಜನ್ಮ ನೀಡಿತು.
ಆ ದಿನ ಶಾಲೆಯಲ್ಲಿ ಎಂದಿನಂತೆ ಪಾಠ ನಡೆಯುತ್ತಿತ್ತು. ತರಗತಿ ಕೊಠಡಿಗಳಲ್ಲಿ ಮಕ್ಕಳ ಕಲರವ ಕೇಳಿಬರುತ್ತಿತ್ತು. ಶಿಕ್ಷಕರು ಬೋಧನೆಯಲ್ಲಿ ತೊಡಗಿದ್ದರು. ಶಾಲೆಯ ಆವರಣದಲ್ಲಿ ಯಾವುದೇ ಆತಂಕದ ಸುಳಿವೂ ಇರಲಿಲ್ಲ. ಆದರೆ ಕೆಲ ಕಿಲೋಮೀಟರ್ ದೂರದಲ್ಲಿ ಪ್ರಕೃತಿ ತನ್ನ ರೌದ್ರ ರೂಪ ತಾಳಿತ್ತು.
ಹಿಮನದಿಯ ಹಿಮ ಮತ್ತು ಕಲ್ಲಿನ ಭಾರೀ ರಾಶಿಯೊಂದು ಕುಸಿದು ಬಿದ್ದ ಪರಿಣಾಮ ಪರ್ವತ ಪ್ರದೇಶದ ನದಿಗಳು ಉಕ್ಕಿ ಹರಿಯುತ್ತಿದ್ದವು. ಕಲ್ಲು, ಹಿಮ, ಮಣ್ಣು, ಮರಗಳು ಮತ್ತು ಅವಶೇಷಗಳನ್ನು ಹೊತ್ತು ತಂದ ಪ್ರವಾಹ ತನ್ನ ದಾರಿಯಲ್ಲಿ ಸಿಕ್ಕಿದ್ದ ಎಲ್ಲವನ್ನೂ ನುಂಗುತ್ತಾ ಮುನ್ನುಗ್ಗುತ್ತಿತ್ತು. ಆ ಪ್ರವಾಹದ ದಿಕ್ಕಿನಲ್ಲೇ ರಾಜೇಂದ್ರ ದವಾಡಿ ಅವರ ಶಾಲೆಯೂ ಇತ್ತು.
47 ವರ್ಷದ ಇಂಗ್ಲಿಷ್ ಶಿಕ್ಷಕರಾದ ದವಾಡಿ ಅವರಿಗೆ ಅಂದು ಶಾಲೆಯ ಸಂಪೂರ್ಣ ಜವಾಬ್ದಾರಿ ಇತ್ತು. ಶಾಲೆಯಲ್ಲಿ 1,643 ಮಕ್ಕಳು ಇದ್ದರು. ಅವರ ಜೀವದ ಹೊಣೆಗಾರಿಕೆ ಈಗ ಅವರ ಹೆಗಲ ಮೇಲಿತ್ತು.
ಮೊದಲಿಗೆ ಅವರಿಗೆ ಶಾಲೆ ಸುರಕ್ಷಿತವಾಗಿದೆ ಎಂಬ ನಂಬಿಕೆ ಇತ್ತು. ಯಾಕೆಂದರೆ ಮೂರು ಅಂತಸ್ತಿನ ಕಾಂಕ್ರೀಟ್ ಕಟ್ಟಡವಾಗಿದ್ದ ಶಾಲೆ ನದಿಯಿಂದ ಸುಮಾರು 60 ಮೀಟರ್ ಎತ್ತರದಲ್ಲಿತ್ತು. ಹೀಗಾಗಿ ಅಪಾಯ ಶಾಲೆಯವರೆಗೆ ತಲುಪುವುದಿಲ್ಲ ಎಂದು ಅವರು ಭಾವಿಸಿದ್ದರು.
ಆದರೆ ಕೆಲವೇ ಕ್ಷಣಗಳಲ್ಲಿ ಅವರ ನಿರ್ಧಾರ ಬದಲಾಯಿತು. ಯಾಕೆಂದರೆ ಆತಂಕದಿಂದ ಓಡಿಬಂದ ಒಬ್ಬ ಪೋಷಕರು, “ನೀರಿನ ಮಟ್ಟ ಭಯಾನಕ ವೇಗದಲ್ಲಿ ಏರುತ್ತಿದೆ ಎಂದು ಎಚ್ಚರಿಸಿದರು. ಆ ಮಾತು ಕೇಳುತ್ತಿದ್ದಂತೆಯೇ ದವಾಡಿ ಅವರ ಮನಸ್ಸಿನಲ್ಲಿ ಅಪಾಯದ ಗಂಟೆ ಮೊಳಗಿತು.
ಅವರು ಕ್ಷಣವೂ ತಡಮಾಡಲಿಲ್ಲ. ಶಾಲೆಯ ಗಂಟೆ ಬಾರಿಸಲು ಸೂಚಿಸಿದರು. ತರಗತಿಗಳನ್ನು ತಕ್ಷಣ ಖಾಲಿ ಮಾಡಲಾಯಿತು. ಶಿಕ್ಷಕರು ಮಕ್ಕಳನ್ನು ಹೊರಗೆ ಕರೆತಂದರು. ಶಾಲಾ ಬಸ್ ಚಾಲಕರಿಗೆ ಕರೆ ಮಾಡಿ ವಾಹನಗಳ ಸಮೇತ ಬರುವಂತೆ ಸೂಚಿಸಿದರು. ಆದರೆ ಒಂದು ಬಸ್ಗೆ ಸಂಪರ್ಕ ಸಾಧ್ಯವಾಗಲಿಲ್ಲ. ಆದರೆ ಅಷ್ಟರಲ್ಲೇ ಅದು ಸೇತುವೆ ದಾಟುತ್ತಿರುವುದು ಅವರ ಕಣ್ಣಿಗೆ ಬಿತ್ತು.
ಭಯ, ಕಣ್ಣೀರು ಮತ್ತು ಜೀವ ಉಳಿಸಿಕೊಳ್ಳುವ ಓಟ
ಅಷ್ಟರೊಳಗೆ ಮಕ್ಕಳಿಗೂ ಅಪಾಯದ ಅರಿವು ಮೂಡತೊಡಗಿತ್ತು. ಕೆಲವರು ಭಯದಿಂದ ಅಳುತ್ತಿದ್ದರು. ಕೆಲವರು ಶಿಕ್ಷಕರ ಕೈ ಹಿಡಿದು ನಿಂತಿದ್ದರು. ಇನ್ನೂ ಕೆಲವರು ಏನಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಒಬ್ಬ ಬಾಲಕಿ ತೀವ್ರ ಆತಂಕಕ್ಕೊಳಗಾಗಿ ನಡುಗತೊಡಗಿದ್ದಳು. ಆಕೆಯನ್ನು ತಕ್ಷಣವೇ ಬೈಕ್ನಲ್ಲಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಯಿತು. ಉಳಿದ ಮಕ್ಕಳು ಶಿಕ್ಷಕರ ಮಾರ್ಗದರ್ಶನದಲ್ಲಿ ಬೆಟ್ಟದ ಮೇಲ್ಭಾಗದತ್ತ ಓಡತೊಡಗಿದರು.
ರಾಜೇಂದ್ರ ದವಾಡಿ ಮಾತ್ರ ಎಲ್ಲರೂ ಹೊರಬಂದಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾ ಕೊನೆಯವರೆಗೂ ಶಾಲೆಯ ಆವರಣದಲ್ಲೇ ಉಳಿದರು. ಕೊನೆಯ ವಿದ್ಯಾರ್ಥಿಯೂ ಸುರಕ್ಷಿತವಾಗಿ ಹೊರಬಂದು ಬೆಟ್ಟ ಏರಿದ ನಂತರವೇ ಅವರು ಅಲ್ಲಿಂದ ಹೊರಬಂದರು. ಕೊನೆಗೆ ಮಕ್ಕಳೆಲ್ಲರೂ ಎತ್ತರದ ಪ್ರದೇಶದಲ್ಲಿದ್ದ ಒಂದು ದೊಡ್ಡ ಮರದ ಕೆಳಗೆ ಆಶ್ರಯ ಪಡೆದರು.ಅಲ್ಲಿಂದಲೇ ಅವರು ತಮ್ಮ ಶಾಲೆಯತ್ತ ಕಣ್ಣಿಟ್ಟಿದ್ದರು.
ಕಣ್ಣೆದುರೇ ಮಣ್ಣಾದ ನೂರಾರು ಕನಸುಗಳ ಶಾಲೆ
ಕೆಲವೇ ಕ್ಷಣಗಳಲ್ಲಿ ಭೀಕರ ಪ್ರವಾಹದ ಅಲೆಗಳು ಶಾಲೆಯ ಪಕ್ಷದ ನದಿಗೆ ಮುನ್ನುಗ್ಗಿತು. ಮೊದಲು ಶಾಲೆಯ ಸುತ್ತಲಿನ ಪ್ರದೇಶ ನೀರಿನಲ್ಲಿ ಮುಳುಗಿತು. ಬಳಿಕ ಅಬ್ಬರಿಸುತ್ತಿದ್ದ ಪ್ರವಾಹದ ಹೊಡೆತಕ್ಕೆ ಶಾಲೆಯ ಕಟ್ಟಡ ತತ್ತರಿಸಿತು. ಮಕ್ಕಳು ನೋಡುತ್ತಿದ್ದಂತೆಯೇ ಮೂರು ಅಂತಸ್ತಿನ ಕಟ್ಟಡ ಕುಸಿಯತೊಡಗಿತು. ತರಗತಿ ಕೊಠಡಿಗಳು, ಬೆಂಚುಗಳು, ಪುಸ್ತಕಗಳು, ಶಾಲಾ ದಾಖಲೆಗಳು, ಮಕ್ಕಳ ಕನಸುಗಳನ್ನು ಹೊತ್ತಿದ್ದ ಗೋಡೆಗಳು—ಎಲ್ಲವೂ ಪ್ರವಾಹದ ಹೊಡೆತಕ್ಕೆ ಕೊಚ್ಚಿಹೋದವು.ಮಕ್ಕಳ ಕಣ್ಣೆದುರೇ ಅವರ ಶಾಲೆಯು ನೀರು ಮತ್ತು ಮಣ್ಣಿನಲ್ಲಿ ಮಿಶ್ರಣವಾಯಿತು.
ಆದರೆ ಒಂದು ಸಮಾಧಾನದ ಸಂಗತಿ ಇತ್ತು. ಆ ಮಕ್ಕಳೆಲ್ಲರೂ ಅಪಾಯದಿಂದ ಪಾರಾಗಿದ್ದರು.
ಇಬ್ಬರು ಸಿಬ್ಬಂದಿಯನ್ನು ಕಸಿದುಕೊಂಡ ಪ್ರವಾಹ
ದವಾಡಿ ಅವರ ಸಮಯಪ್ರಜ್ಞೆಯಿಂದ 1,643 ಮಕ್ಕಳು ಹಾಗೂ ಬಹುತೇಕ ಎಲ್ಲ ಶಿಕ್ಷಕರು ಸುರಕ್ಷಿತರಾದರು. ಆದರೆ ಇಬ್ಬರು ಸಿಬ್ಬಂದಿಗೆ ಅದೃಷ್ಟ ಕೈಹಿಡಿಯಲಿಲ್ಲ.
32 ವರ್ಷದ ಸಾಮಾಜಿಕ ಇತಿಹಾಸ ಶಿಕ್ಷಕ ಸಂತೋಷ ಪರಿಯಾರ್ ಉಪಾಹಾರ ತಯಾರಿಸಲು ನದಿಯ ತೀರದಲ್ಲಿದ್ದ ತಮ್ಮ ಬಾಡಿಗೆ ಕೊಠಡಿಗೆ ತೆರಳಿದ್ದರು. ಅಲ್ಲಿಯೇ ಅವರು ಪ್ರವಾಹಕ್ಕೆ ಸಿಲುಕಿ ಕೊಚ್ಚಿಹೋದರು. ಶಾಲೆಯ ಬಾಗಿಲುಗಳನ್ನು ಮುಚ್ಚಲು ಹಿಂದಿರುಗಿದ್ದ ಶಾಲಾ ಪರಿಚಾರಕ ಸುಲ್ತಾನ್ ಲಾಮಾ ಕೂಡ ಪ್ರವಾಹಕ್ಕೆ ಬಲಿಯಾದರು.
‘ನಾನು ಮಾಡಿದ್ದು ನನ್ನ ಕರ್ತವ್ಯ’
ಈ ಘಟನೆಯ ಬಳಿಕ ಸ್ಥಳೀಯರು ರಾಜೇಂದ್ರ ದವಾಡಿ ಅವರನ್ನು ತಮ್ಮ ಮಕ್ಕಳ ಜೀವ ಉಳಿಸಿದ ʼಹೀರೋʼ ಎಂದು ನೋಡುತ್ತಿದ್ದಾರೆ. ಆದರೆ ದವಾಡಿ ಮಾತ್ರ ಆ ಹೊಗಳಿಕೆಯನ್ನು ಸರಳವಾಗಿ ತಳ್ಳಿಹಾಕುತ್ತಾರೆ. ಪ್ರವಾಹದ ಬಳಿಕ ಮಣ್ಣಿನ ರಾಶಿಯಾಗಿ ಬದಲಾಗಿರುವ ಶಾಲೆಯ ಅವಶೇಷಗಳ ಮುಂದೆ ನಿಂತು “ನಾನು ಇನ್ನೇನು ಮಾಡಬಹುದಿತ್ತು?” ಎಂದು ಅವರು ಕೇಳುವ ಪ್ರಶ್ನೆ ಕೇಳುತ್ತಾರೆ. ಅವರ ಈ ಮಾತುಗಳಲ್ಲಿ ಹೆಮ್ಮೆಯಿಲ್ಲ. ಕೇವಲ ಒಬ್ಬ ಶಿಕ್ಷಕನ ಕರ್ತವ್ಯ ಪ್ರಜ್ಞೆ ಮಾತ್ರ ಇದೆ.
ಪ್ರಕೃತಿಯ ಕೋಪದ ಹಿಂದೆ ಏನಿತ್ತು?
ತಜ್ಞರ ಪ್ರಕಾರ, ಟಿಬೆಟ್ ಗಡಿಯ ಸಮೀಪದ ಲ್ಹೆಂಡೆ ಖೋಲಾ ನದಿಯ ಮೇಲ್ಭಾಗದಲ್ಲಿ ಲಾಂಗ್ಟಾಂಗ್ ಲಿರುಂಗ್ ಶಿಖರದಿಂದ ಭಾರೀ ಪ್ರಮಾಣದ ಹಿಮ ಮತ್ತು ಕಲ್ಲಿನ ರಾಶಿಯೊಂದು ಕುಸಿದು ಸುಮಾರು 1,200 ಮೀಟರ್ ಆಳಕ್ಕೆ ಬಿದ್ದ ಪರಿಣಾಮ ಈ ಮಹಾ ಪ್ರವಾಹ ಸೃಷ್ಟಿಯಾಯಿತು.
ಕೆನಡಾದ ಕ್ಯಾಲ್ಗರಿ ವಿಶ್ವವಿದ್ಯಾಲಯದ ಭೂರೂಪಶಾಸ್ತ್ರಜ್ಞ ಡೇನಿಯಲ್ ಶುಗರ್ ಅವರ ಅಂದಾಜಿನಂತೆ, ಕುಸಿದ ಹಿಮ-ಕಲ್ಲಿನ ರಾಶಿ ಸುಮಾರು 50 ಎಕರೆ ಪ್ರದೇಶವನ್ನು ಆವರಿಸಿತ್ತು.
ಈ ಪ್ರದೇಶಕ್ಕೆ ಇಂತಹ ದುರಂತಗಳು ಹೊಸದಲ್ಲ. 2015ರಲ್ಲಿ ಸಂಭವಿಸಿದ್ದ 7.8 ತೀವ್ರತೆಯ ಭೂಕಂಪದ ಬಳಿಕ ಉಂಟಾದ ಹಿಮಕುಸಿತ ಲಾಂಗ್ಟಾಂಗ್ ಗ್ರಾಮದ 300ಕ್ಕೂ ಹೆಚ್ಚು ಜನರನ್ನು ಜೀವಂತ ಸಮಾಧಿ ಮಾಡಿತ್ತು. ಆ ಭೂಕಂಪದಲ್ಲಿ ದಕ್ಷಿಣ ಏಷ್ಯಾದಾದ್ಯಂತ 8,962 ಮಂದಿ ಮೃತಪಟ್ಟಿದ್ದರು.ಹನ್ನೊಂದು ವರ್ಷಗಳ ಬಳಿಕ ಅದೇ ಪ್ರದೇಶ ಮತ್ತೊಮ್ಮೆ ಪ್ರಕೃತಿಯ ಭೀಕರ ಕೋಪಕ್ಕೆ ತುತ್ತಾಗಿದೆ.
ಈ ಮಹಾಪ್ರವಾಹದಲ್ಲಿ ನೇಪಾಳದಲ್ಲಿ 750ಕ್ಕೂ ಹೆಚ್ಚು ಮಂದಿ ಮತ್ತು ಟಿಬೆಟ್ನಲ್ಲಿ 16 ಮಂದಿ ಮೃತಪಟ್ಟಿದ್ದಾರೆ. ಸಾವಿರಾರು ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ಕಟ್ಟಡಗಳು, ಸೇತುವೆಗಳು, ರಸ್ತೆಗಳು ಮತ್ತು ವಿದ್ಯುತ್ ಸ್ಥಾವರಗಳು ಪ್ರವಾಹದ ಅಬ್ಬರಕ್ಕೆ ನಾಶವಾಗಿವೆ. ಆದರೆ ಈ ಭೀಕರ ವಿನಾಶದ ಮಧ್ಯೆಯೂ ಒಂದು ಕಥೆ ಜನರ ಮನದಲ್ಲಿ ಆಶಾಕಿರಣ ಮೂಡಿಸಿದೆ. ಅದು ರಾಜೇಂದ್ರ ದವಾಡಿ ಎಂಬ ಶಿಕ್ಷಕರ ಕಥೆ. ಒಂದು ಎಚ್ಚರಿಕೆಯ ಕರೆ ಬಂದಾಗ ಗಾಬರಿಯಾಗದೆ, ಸಮಯ ವ್ಯರ್ಥ ಮಾಡದೆ, ಸರಿಯಾದ ನಿರ್ಧಾರ ತೆಗೆದುಕೊಂಡ ಅವರು 1,643 ಮಕ್ಕಳ ಜೀವ ಉಳಿಸಿದರು.
ಪ್ರವಾಹ ಸಾವಿರಾರು ಕುಟುಂಬಗಳ ಬದುಕನ್ನು ಕಸಿದುಕೊಂಡಿರಬಹುದು. ಅನೇಕ ಕನಸುಗಳನ್ನು ಕೊಚ್ಚಿಕೊಂಡು ಹೋಗಿರಬಹುದು. ಆದರೆ ಒಬ್ಬ ಶಿಕ್ಷಕನ ಸಮಯಪ್ರಜ್ಞೆ, ಕರ್ತವ್ಯನಿಷ್ಠೆ ಮತ್ತು ಮಾನವೀಯತೆ 1,643 ಮಕ್ಕಳ ಕನಸುಗಳಿಗೆ ಹೊಸ ಜೀವ ನೀಡಿತು. ಆ ಕಾರಣಕ್ಕೇ ಇಂದು ನೇಪಾಳದ ದುರಂತದ ನಡುವೆ ರಾಜೇಂದ್ರ ದವಾಡಿ ಎಂಬ ಹೆಸರು ಸಾವಿರಾರು ಪೋಷಕರ ಕೃತಜ್ಞತೆಯ ಕಣ್ಣೀರಿನಲ್ಲಿ ಜೀವಂತವಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ