
ಮಸ್ಕತ್: ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ತಾರಕಕ್ಕೇರಿರುವ ಬೆನ್ನಲ್ಲೇ, ಒಮಾನ್ ಕೊಲ್ಲಿಯಲ್ಲಿ ಸ್ಫೋಟಕ ತುಂಬಿದ ಡ್ರೋನ್ ಬೋಟ್ ತೈಲ ನೌಕೆಯೊಂದಕ್ಕೆ ಡಿಕ್ಕಿ ಹೊಡೆದಿದೆ. ಈ ಭೀಕರ ದಾಳಿಯಲ್ಲಿ ಭಾರತೀಯ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಪ್ರಚಲಿತ ಸಂಘರ್ಷದಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟಿರುವುದು ಇದೇ ಮೊದಲು.
ಒಮಾನ್‌ನ ಅಧಿಕೃತ ಸುದ್ದಿ ಸಂಸ್ಥೆಯ ಪ್ರಕಾರ, ಮಸ್ಕತ್ ಕರಾವಳಿಯ ಸಮೀಪ ಈ ದಾಳಿ ನಡೆದಿದೆ. ಮಾರ್ಷಲ್ ಐಲ್ಯಾಂಡ್ಸ್ ಧ್ವಜದ ಅಡಿಯಲ್ಲಿ ಸಾಗುತ್ತಿದ್ದ ‘MKD VYOM’ ಎಂಬ ತೈಲ ನೌಕೆಯನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ. ಸ್ಫೋಟಕಗಳನ್ನು ಹೊತ್ತಿದ್ದ ಮಾನವರಹಿತ ಬೋಟ್ (Unmanned Boat) ನೌಕೆಗೆ ಡಿಕ್ಕಿ ಹೊಡೆದ ಪರಿಣಾಮ ಈ ಸಾವು ಸಂಭವಿಸಿದೆ. ಹಡಗಿನಲ್ಲಿದ್ದ ಇತರ ಸಿಬ್ಬಂದಿ ಸ್ಥಿತಿ ಮತ್ತು ಹಡಗಿಗೆ ಆಗಿರುವ ಹಾನಿಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ಭಾರತೀಯ ರಾಯಭಾರ ಕಚೇರಿಯ ಕಾರ್ಯಾಚರಣೆ
ಈ ಘಟನೆಯ ಬೆನ್ನಲ್ಲೇ ಒಮಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸ್ಥಳೀಯ ಅಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿದೆ. ‘MV Skylight’ ಎಂಬ ನೌಕೆಗೆ ಸಂಬಂಧಿಸಿದಂತೆ ನಾಪತ್ತೆಯಾಗಿರುವ ಸಿಬ್ಬಂದಿ ಹುಡುಕಾಟಕ್ಕಾಗಿ ಕಾರ್ಯಾಚರಣೆ ನಡೆಯುತ್ತಿದೆ ಎಂದು ಕಚೇರಿ ತಿಳಿಸಿದೆ.
“ನಾಪತ್ತೆಯಾದ ಸಿಬ್ಬಂದಿ ಪತ್ತೆಗಾಗಿ ಒಮಾನ್ ಅಧಿಕಾರಿಗಳು ನಡೆಸುತ್ತಿರುವ ಶೋಧ ಕಾರ್ಯವನ್ನು ನಾವು ಹತ್ತಿರದಿಂದ ಗಮನಿಸುತ್ತಿದ್ದೇವೆ. ರಕ್ಷಿಸಲ್ಪಟ್ಟ ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕಳುಹಿಸುವ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲಾ ನೆರವು ಮತ್ತು ಸಮನ್ವಯವನ್ನು ಸಾಧಿಸಲಾಗುತ್ತಿದೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಬಾಂಗ್ಲಾದೇಶದ ಇಬ್ಬರು ನಾಗರಿಕರ ಸಾವು
ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿರುವ ಈ ಸಂಘರ್ಷಕ್ಕೆ ಬಾಂಗ್ಲಾದೇಶದ ಇಬ್ಬರು ನಾಗರಿಕರು ಸಾವಿಗೀಡಾಗಿದ್ದಾರೆ. ಇವರಲ್ಲಿ ಒಬ್ಬರು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ನಲ್ಲಿ ಮತ್ತು ಮತ್ತೊಬ್ಬರು ಬಹ್ರೇನ್‌ನಲ್ಲಿ ಮೃತಪಟ್ಟಿದ್ದಾರೆ ಎಂದು ಬಾಂಗ್ಲಾದೇಶ ಸರ್ಕಾರ ದೃಢಪಡಿಸಿದೆ. ಅಲ್ಲದೆ, ಪ್ರಾದೇಶಿಕ ಉದ್ವಿಗ್ನತೆಯಿಂದಾಗಿ ಬಾಂಗ್ಲಾದೇಶಕ್ಕೆ ಸಂಬಂಧಿಸಿದ ನೌಕೆಯೊಂದು ಜೆಬೆಲ್ ಅಲಿ ಬಂದರಿನಲ್ಲಿ ಸಿಲುಕಿಕೊಂಡಿದೆ.


ನಿಮ್ಮ ಕಾಮೆಂಟ್ ಬರೆಯಿರಿ