ಬೀದರ | ಕೆಡಿಪಿ ಸಭೆಯಲ್ಲಿ ಸಚಿವರ ಮುಂದೆಯೇ ಕೈಕೈ ಮಿಲಾಯಿಸಿದ ಕಾಂಗ್ರೆಸ್-ಬಿಜೆಪಿ ಶಾಸಕರು ; ವೀಡಿಯೊ ವೈರಲ್‌…!

ಬೀದರ : ಗಡಿ ಜಿಲ್ಲೆ ಬೀದರಿನಲ್ಲಿ ಇಂದು, ಸೋಮವಾರ (ಜನವರಿ ೫) ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (KDP) ಪ್ರಗತಿ ಪರಿಶೀಲನಾ ಸಭೆ ಚರ್ಚೆಗೆ ಗ್ರಾಸವಾಗಿದೆ. ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲೇ ಇಬ್ಬರು ಜನಪ್ರತಿನಿಧಿಗಳು ಪರಸ್ಪರ ಕೈಕೈ ಮಿಲಾಯಿಸುವ ಹಂತಕ್ಕೆ ಹೋದ ಘಟನೆ ವರದಿಯಾಗಿದೆ.
ಹುಮ್ನಾಬಾದ್ ಕ್ಷೇತ್ರದ ಅರಣ್ಯ ಭೂಮಿ ಒತ್ತುವರಿ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಯುತ್ತಿದ್ದ ವೇಳೆ ಈ ಗದ್ದಲ ಆರಂಭವಾಯಿತು ಎಂದು ಹೇಳಲಾಗಿದೆ. ಬಿಜೆಪಿ ಶಾಸಕ ಸಿದ್ದು ಪಾಟೀಲ ಮತ್ತು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ (MLC) ಭೀಮರಾವ್ ಪಾಟೀಲ ನಡುವೆ ಮಾತಿನ ಚಕಮಕಿ ಆರಂಭವಾಗಿ ಅದು ವಿಕೋಪಕ್ಕೆ ಹೋಯಿತು. ಜಮೀನು ಒತ್ತುವರಿ ವಿಚಾರದಲ್ಲಿ ಇಬ್ಬರು ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದರಿಂದ ಸಭೆಯಲ್ಲಿದ್ದ ಗಂಭೀರ ವಾತಾವರಣ ಕ್ಷಣಾರ್ಧದಲ್ಲಿ ಬಿಸಿಯೇರಿತು.

ಸಭೆಯ ವಿಡಿಯೋ ತುಣುಕುಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ವಿಡಿಯೋದಲ್ಲಿ ಕಂಡುಬರುವಂತೆ ಇಬ್ಬರೂ ನಾಯಕರು ಪರಸ್ಪರ ಏಕವಚನದಲ್ಲಿ ನಿಂದಿಸಿಕೊಳ್ಳುತ್ತಾ, ಕೂಗಾಡಿದ್ದಾರೆ. ಒಂದು ಹಂತದಲ್ಲಿ ಆಕ್ರೋಶಗೊಂಡ ಕಾಂಗ್ರೆಸ್ ವಿಧಾನ ಪರಿಷತ್‌ ಸದಸ್ಯ ಭೀಮರಾವ್ ಪಾಟೀಲ ಅವರು ತಮ್ಮ ಆಸನದಿಂದ ಎದ್ದು, ಹುಮ್ನಾಬಾದ್ ಶಾಸಕ ಸಿದ್ದು ಪಾಟೀಲ ಅವರತ್ತ ಹೋಗಿ ಕೈ ಎತ್ತಿದರು. ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಮತ್ತು ಇತರ ಜನಪ್ರತಿನಿಧಿಗಳು ಮಧ್ಯಪ್ರವೇಶಿಸಿ ಭೀಮರಾವ್ ಪಾಟೀಲ ಅವರನ್ನು ತಡೆದು ಹಿಡಿದಿದ್ದರಿಂದ ಸಂಭವಿಸಬಹುದಾದ ಭೌತಿಕ ಸಂಘರ್ಷ ತಪ್ಪಿದೆ.

ಪ್ರಮುಖ ಸುದ್ದಿ :-   ವಿಡಿಯೊ | ದಾಂಡೇಲಿಯ ರೆಸಾರ್ಟ್‌ನಲ್ಲಿ ಜಿಪ್‌ಲೈನ್ ದುರಂತ: 40 ಅಡಿ ಎತ್ತರದಿಂದ ಬಿದ್ದು ಯುವಕನಿಗೆ ಗಂಭೀರ ಗಾಯ

ಸಭೆ ಅನಿರ್ದಿಷ್ಟಾವಧಿ ಮುಂದೂಡಿಕೆ:
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಸಮ್ಮುಖದಲ್ಲೇ ಈ ಘಟನೆ ನಡೆದಿದ್ದು, ಸಚಿವರು ಎಷ್ಟೇ ಸಮಾಧಾನಪಡಿಸಲು ಯತ್ನಿಸಿದರೂ ಗದ್ದಲ ಹತೋಟಿಗೆ ಬರಲಿಲ್ಲ. ಇಬ್ಬರು ನಾಯಕರು ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡ ಹಿನ್ನೆಲೆಯಲ್ಲಿ, ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಗಮನಿಸಿದ ಸಚಿವರು ಕೆಡಿಪಿ ಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲು ಆದೇಶಿಸಿದರು. ಜವಾಬ್ದಾರಿಯುತ ಸ್ಥಾನದಲ್ಲಿರುವ ಜನಪ್ರತಿನಿಧಿಗಳ ಈ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಪ್ರಮುಖ ಸುದ್ದಿ :-   ಮೂರು ತಿಂಗಳ ಬಳಿಕ ಸಮಾಧಿ ಅಗೆದು ತಾಯಿಯ ಶವವನ್ನು ಬೈಕ್​ನಲ್ಲಿ ತಂದ ಮಕ್ಕಳು...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement