ಪ್ರಸ್ತುತ ನಡೆಯುತ್ತಿರುವ ಅಮೆರಿಕ-ಇರಾನ್ ಸಂಘರ್ಷವು ಭಾರಿ ಉಲ್ಬಣದತ್ತ ಸಾಗುತ್ತಿದ್ದು, ಕೊಲ್ಲಿಯ ಪ್ರಮುಖ ಆರ್ಥಿಕ ಶಕ್ತಿಗಳಾದ ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಈಗ ಯುದ್ಧದಲ್ಲಿ ಭಾಗಿಯಾಗುವ ಹಾದಿಯಲ್ಲಿವೆ ಎಂಬ ಸೂಚನೆಗಳು ಸಿಗುತ್ತಿವೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಹೇಳಿದೆ.
ಇತ್ತೀಚಿನ ಬೆಳವಣಿಗೆಗಳ ಪ್ರಕಾರ, ಇರಾನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯಲ್ಲಿ ಈ ಎರಡೂ ದೇಶಗಳು ಅಮೆರಿಕ ಮತ್ತು ಇಸ್ರೇಲ್ ಜೊತೆ ಕೈಜೋಡಿಸಲು ಮುಂದಾಗುತ್ತಿರುವುದನ್ನು ತೋರಿಸುತ್ತಿವೆ ಎಂದು ವರದಿ ಹೇಳಿದೆ. ಕಳೆದ ಕೆಲವು ವಾರಗಳಿಂದ ಇರಾನ್ ನಡೆಸುತ್ತಿರುವ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳು ಕೇವಲ ಇಸ್ರೇಲ್ ಮತ್ತು ಅಮೆರಿಕದ ನೆಲೆಗಳನ್ನು ಮಾತ್ರವಲ್ಲದೆ, ಕೊಲ್ಲಿ ರಾಷ್ಟ್ರಗಳ ಮೇಲೆಯೂ ನೇರ ಪರಿಣಾಮ ಬೀರಿರುವುದರಿಂದ ಈ ಬದಲಾವಣೆ ಕಂಡುಬಂದಿದೆ.
ಸೌದಿ ಅರೇಬಿಯಾವು ತನ್ನ ಪ್ರಮುಖ ವಾಯುನೆಲೆಗಳಲ್ಲಿ ಒಂದಾದ ಕಿಂಗ್ ಫಹದ್ ವಾಯುನೆಲೆಯನ್ನು ಬಳಸಲು ಅಮೆರಿಕದ ಮಿಲಿಟರಿಗೆ ಅನುಮತಿ ನೀಡಿದೆ. ಆರಂಭದಲ್ಲಿ ನೇರವಾಗಿ ಭಾಗಿಯಾಗಲು ಹಿಂದೇಟು ಹಾಕಿದ್ದ ಸೌದಿ ಅರೇಬಿಯಾದ ಈ ನಡೆ ಅತ್ಯಂತ ಮಹತ್ವದ್ದಾಗಿದೆ. ಇದೇ ವೇಳೆ, ಯುಎಇ ಕೂಡ ತನ್ನ ಗಡಿಯೊಳಗೆ ನಡೆಯುತ್ತಿದ್ದ ಇರಾನ್ ಕಾರ್ಯಾಚರಣೆಗಳನ್ನು ನಿಯಂತ್ರಿಸುವ ಮೂಲಕ ಪೂರಕ ಕ್ರಮಗಳನ್ನು ಕೈಗೊಂಡಿದೆ.
ಈಗ ಇದು ಏಕೆ ಮುಖ್ಯ?
ಫೆಬ್ರವರಿ 28ರಂದು ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿಯೊಂದಿಗೆ ಆರಂಭವಾದ ಈ ಸಂಘರ್ಷದಲ್ಲಿ, ಇರಾನ್ ಈ ಭಾಗದ ಇತರದೇಶಗಳ ಮೇಲೆ ಪ್ರತೀಕಾರದ ದಾಳಿಗಳನ್ನು ನಡೆಸುತ್ತಿದ್ದು, ಅವುಗಳ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡಿದೆ.
ಈ ದಾಳಿಗಳು ಸೌದಿ ಅರೇಬಿಯಾ ಮತ್ತು ಯುಎಇ ತಮ್ಮ ನಿರ್ಧಾರವನ್ನು ಬದಲಿಸುವಂತೆ ಮಾಡಿದೆ. ಆರಂಭದಲ್ಲಿ ಸಂಘರ್ಷದಿಂದ ದೂರವಿದ್ದ ಈ ದೇಶಗಳು, ಈಗ ಪ್ರಾದೇಶಿಕ ಭದ್ರತೆ, ಆರ್ಥಿಕ ಅಸ್ಥಿರತೆ ಮತ್ತುೀ ಪ್ರದೇಶದಲ್ಲಿ ಇರಾನ್ನ ಬೆಳೆಯುತ್ತಿರುವ ಪ್ರಭಾವದ ಆತಂಕದಿಂದಾಗಿ ಅಮೆರಿಕದೊಂದಿಗೆ ವ್ಯೂಹಾತ್ಮಕವಾಗಿ ಕೈಜೋಡಿಸುತ್ತಿವೆ ಎನ್ನಲಾಗಿದೆ.
ಆರಂಭದಲ್ಲಿ ಸೌದಿ ಅರೇಬಿಯಾ ಮತ್ತು ಯುಎಇ ಮೊದಲಾದ ದೇಶಗಳು ಅಮೆರಿಕದ “ಆಪರೇಷನ್ ಎಪಿಕ್ ಫ್ಯೂರಿ” ಮತ್ತು ಇಸ್ರೇಲಿ “ಆಪರೇಷನ್ ರೋರಿಂಗ್ ಲಯನ್” ಸೇನಾ ಕಾರ್ಯಾಚರಣೆಯು ಇರಾನಿನ ಪರಮಾಣು ಮತ್ತು ಕ್ಷಿಪಣಿ ಸಾಮರ್ಥ್ಯಗಳನ್ನು ನಿಗ್ರಹಿಸುವಲ್ಲಿ ಪರಿಣಾಮಕಾರಿಯಾಗುತ್ತವೆಯೇ ಎಂದು ಪ್ರಶ್ನಿಸಿದ್ದವು. ಆದಾಗ್ಯೂ, ಇತ್ತೀಚಿನ ವಾರಗಳಲ್ಲಿ ತಮ್ಮ ದೇಶಗಳ ಮೇಲೆ ಇರಾನ್ ಪದೇಪದೇ ಕ್ಷಿಪಣಿ ಮತ್ತು ಡ್ರೋನ್ ದಾಳಿ ಮಾಡಿದ್ದರಿಂದ ಈ ಪ್ರದೇಶದ ಪ್ರಾದೇಶಿಕ ಚಿಂತನೆಯನ್ನು ಮರುರೂಪಿಸಿದೆ. ಕತಾರ್ನ ರಾಸ್ ಲಫಾನ್ ಅನಿಲ ಕೇಂದ್ರದ ಮೇಲೆ ಪ್ರಮುಖ ದಾಳಿ ಸೇರಿದಂತೆ ಕೊಲ್ಲಿ ದೇಶಗಳ ಇಂಧನ ಘಟಕಗಳು ಮತ್ತು ಪ್ರಮುಖ ನಗರ ಪ್ರದೇಶಗಳು ಹಾನಿಗೊಳಗಾಗಿವೆ. ಈ ದಾಳಿಗಳು ಇಂಧನ ಉತ್ಪಾದನೆ, ಹಡಗು ಸಾಗಣೆ ಮತ್ತು ಪ್ರವಾಸೋದ್ಯಮದಂತಹ ಪ್ರಮುಖ ಕೈಗಾರಿಕೆಗಳಿಗೆ ತೊಂದರೆಯಾಗಿದೆ. ಇದು ಈ ದೇಶಗಳುತಮ್ಮ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮಾಡಿತು.
ವರದಿಯ ಪ್ರಕಾರ, ಆರ್ಥಿಕ ಅಸ್ಥಿರತೆಯು ಈ ಪರಿಸ್ಥಿತಿಯ ಅನಿವಾರ್ಯತೆಯನ್ನು ಇನ್ನಷ್ಟು ಹೆಚ್ಚಿಸಿದೆ. ವಿಶ್ವದ ಅತ್ಯಂತ ಪ್ರಮುಖ ಇಂಧನ ಸಾಗಣೆ ಮಾರ್ಗಳಲ್ಲಿ ಒಂದಾದ ಹಾರ್ಮುಜ್ ಜಲಸಂಧಿಯ (Strait of Hormuz) ಮೂಲಕ ಸಂಚಾರವನ್ನು ನಿರ್ಬಂಧಿಸಲು ಇರಾನ್ ಮುಂದಾಗಿದ್ದರಿಂದ ಈ ದೇಶಗಳ ತೈಲ ಹಡಗುಗಳ ಸಂಚಾರಕ್ಕೆ ತೊಂದರೆಯಾಗಿದೆ ಮತ್ತು ಜಾಗತಿಕ ಮಾರುಕಟ್ಟೆಗಳನ್ನು ಆತಂಕಕ್ಕೆ ತಳ್ಳಿದೆ.
ಅಲ್ಲದೆ, ಈ ಹಡಗು ಮಾರ್ಗದ ಮೇಲೆ ತನ್ನ ಹಕ್ಕನ್ನು ಸ್ಥಾಪಿಸುವ ಸಂಕೇತವಾಗಿ ಇರಾನ್ ಈಗ ‘ಸಾರಿಗೆ ಶುಲ್ಕ’ (transit fees) ವಿಧಿಸುವ ಬಗ್ಗೆ ಪ್ರಸ್ತಾಪಿಸಿದೆ. ಸಂಪೂರ್ಣವಾಗಿ ತೈಲದ ಮೇಲೆ ಅವಲಂಬಿತವಾಗಿರುವ ಕೊಲ್ಲಿ ರಾಷ್ಟ್ರಗಳ ಆರ್ಥಿಕತೆಗೆ ಇದು ನೇರ ಬೆದರಿಕೆಯಾಗಿದ್ದು, ಅವರ ಆದಾಯ ಮತ್ತು ಸ್ಥಿರತೆಗೆ ಧಕ್ಕೆ ತಂದಿದೆ. ಇನ್ನು ಮುಂದೆ ಸುಮ್ಮನೆ ಎಚ್ಚರಿಕೆಯಿಂದ ದೂರ ಉಳಿಯುವ ವೆಚ್ಚವು, ಯುದ್ಧದಲ್ಲಿ ನಿರ್ಣಾಯಕವಾಗಿ ಭಾಗವಹಿಸುವುದರಿಂದ ಉಂಟಾಗುವ ಅಪಾಯಕ್ಕಿಂತಲೂ ಹೆಚ್ಚಾಗಿದೆ ಎಂದು ಅಧಿಕಾರಿಗಳು ನಂಬಿದ್ದಾರೆ.
ಪೂರ್ಣ ಪ್ರಮಾಣದ ತೊಡಗಿಕೊಳ್ಳುವಿಕೆಯಲ್ಲ
ಇಷ್ಟೆಲ್ಲಾ ಬೆಳವಣಿಗೆಗಳ ಹೊರತಾಗಿಯೂ, ಈ ಎರಡೂ ದೇಶಗಳು ತಮ್ಮ ಮಿಲಿಟರಿಯನ್ನು ನೇರವಾಗಿ ಯುದ್ಧಭೂಮಿಗೆ ಇಳಿಸಿಲ್ಲ. ಬದಲಾಗಿ, ಈ ದೇಶಗಳು ಅಮೆರಿಕದ ಕಾರ್ಯಾಚರಣೆಗಳಿಗೆ ಪೂರಕ ಬೆಂಬಲ ನೀಡುವುದು (ಲಾಜಿಸ್ಟಿಕಲ್ ಸಪೋರ್ಟ್) ಮತ್ತು ಇರಾನ್ ಮೇಲೆ ಒತ್ತಡ ಹೇರುವುದಕ್ಕೆ ಸೀಮಿತವಾಗಿವೆ.
ಸದ್ಯದ ಬೆಳವಣಿಗೆ ಏನೆಂದರೆ, ಪೂರ್ಣ ಪ್ರಮಾಣದ ಯುದ್ಧಕ್ಕೆ ಅಧಿಕೃತವಾಗಿ ಇಳಿಯದೆ ಅಮೆರಿಕ ನೇತೃತ್ವದ ಕಾರ್ಯಾಚರಣೆಗಳಿಗೆ ಬೆಂಬಲ ನೀಡುವುದಾಗಿದೆ ಎಂದು ವರದಿಗಳು ತಿಳಿಸಿವೆ. ಆದಾಗ್ಯೂ, ಇರಾನ್ ತನ್ನ ಆಕ್ರಮಣಕಾರಿ ಧೋರಣೆಯನ್ನು ಮುಂದುವರಿಸಿದರೆ ಈ ದೇಶಗಳು ಯುದ್ಧದಲ್ಲಿ ಸಂಪೂರ್ಣವಾಗಿ ಇಳಿಯಬೇಕಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಒಂದು ವೇಳೆ ಸೌದಿ ಅರೇಬಿಯಾ ಮತ್ತು ಯುಎಇ ಅಧಿಕೃತವಾಗಿ ಯುದ್ಧಕ್ಕೆ ಪ್ರವೇಶಿಸಿದರೆ, ಈಗಾಗಲೇ ಅಸ್ಥಿರವಾಗಿರುವ ಈ ಪ್ರದೇಶದ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು ಮತ್ತು ಹೆಚ್ಚಿನ ದೇಶಗಳು ಈ ಯುದ್ಧದ ಸುಳಿಗೆ ಸಿಲುಕಬಹುದು ಎಂಬ ಆತಂಕ ವ್ಯಕ್ತವಾಗಿದೆ.
ಈ ಬೆಳವಣಿಗೆಗಳ ನಡುವೆಯೇ, ಅಮೆರಿಕ ಮತ್ತು ಇರಾನ್ ನಡುವೆ ಮುಂದೆ ಯಾವುದೇ ಒಪ್ಪಂದ ಏರ್ಪಟ್ಟರೂ, ಅದು ಇರಾನ್ನ ಮಿಲಿಟರಿ ಶಕ್ತಿಯನ್ನು ಸಂಪೂರ್ಣವಾಗಿ ಕುಗ್ಗಿಸುವಂತಿರಬೇಕು ಎಂದು ಕೊಲ್ಲಿ ರಾಷ್ಟ್ರಗಳು ಅಮೆರಿಕ ಮೇಲೆ ಒತ್ತಡ ಹೇರುತ್ತಿವೆ. ಇರಾನ್ ಕಡೆಯವರೊಂದಿಗೆ ನಡೆದ “ಫಲಪ್ರದ ಮಾತುಕತೆಗಳ” ನಂತರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ನ ಇಂಧನ ಘಟಕಗಳ ಮೇಲಿನ ದಾಳಿಯನ್ನು ತಾತ್ಕಾಲಿಕವಾಗಿ ಐದು ದಿನಗಳ ಕಾಲ ಸ್ಥಗಿತಗೊಳಿಸುವುದಾಗಿ ಘೋಷಿಸಿದ ಬೆನ್ನಲ್ಲೇ ಈ ಒತ್ತಾಯ ಕೇಳಿಬಂದಿದೆ.
ತೈಲ ಪೂರೈಕೆ ಮಾರ್ಗಗಳಲ್ಲಿನ ತೊಂದರೆಗಳು, ಏರುತ್ತಿರುವ ಇಂಧನ ಬೆಲೆಗಳು ಮತ್ತು ಹಲವಾರು ದೇಶಗಳಲ್ಲಿನ ಹೆಚ್ಚಿದ ಮಿಲಿಟರಿ ಚಟುವಟಿಕೆಗಳಿಂದಾಗಿ ಇಡೀ ಕೊಲ್ಲಿ ಪ್ರದೇಶವು ಈಗಾಗಲೇ ಆತಂಕದಲ್ಲಿದೆ. ಒಂದು ವೇಳೆ ಈ ಸಂಘರ್ಷದಲ್ಲಿ ಕೊಲ್ಲಿ ರಾಷ್ಟ್ರಗಳ ಪಾಲ್ಗೊಳ್ಳುವಿಕೆಯು ಈ ಯುದ್ಧದ ದಿಕ್ಕನ್ನೇ ಬದಲಿಸಬಹುದು.


ನಿಮ್ಮ ಕಾಮೆಂಟ್ ಬರೆಯಿರಿ