ತಮಿಳುನಾಡು : ವಿಜಯ ನೇತೃತ್ವದ ಟಿವಿಕೆಗೆ ವಿಸಿಕೆ ಬೆಂಬಲ ; ಸರ್ಕಾರ ರಚನೆಗೆ ಹಾದಿ ಸುಗಮ

ಚೆನ್ನೈ : ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ ಅವರ ‘ಸಂಖ್ಯಾಬಲದ ಆತಂಕ’ ಕೊನೆಗೂ ಮುಗಿದಿದ್ದು, ತಮಿಳುನಾಡಿನಲ್ಲಿ ಸರ್ಕಾರ ರಚನೆ ಹಾದಿ ಸುಗಮವಾಗಿದೆ.
ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ 118 ಆಗಿದ್ದು, ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಮೈತ್ರಿಕೂಟವು ಈ ಮೊದಲು 116 ಸದಸ್ಯರ ಬಲ ಹೊಂದಿತ್ತು. ಈಗ ವಿಸಿಕೆ (VCK) ಬೆಂಬಲ ನೀಡುವುದಾಗಿ ಹೇಳಿದ್ದರಿಂದ ಮೈತ್ರಿಕೂಟದ ಒಟ್ಟು ಬಲ 118ಕ್ಕೆ ಏರಿದೆ. ಇದರಿಂದ ಸರ್ಕಾರ ರಚನೆಯ ಹಾದಿ ಸುಗಮವಾಗಿದೆ.
ಟಿವಿಕೆ ಸ್ಥಾನಗಳು 107, ಕಾಂಗ್ರೆಸ್‌ನ 5, ಎಡಪಕ್ಷಗಳ 4 ಶಾಸಕರು ಸೇರಿ 116 ಸದಸ್ಯರ ಬಲವಿತ್ತು. ಈಗ ಇಬ್ಬರು ಶಾಸಕರನ್ನು ಹೊಂದಿರುವ ವಿಸಿಕೆ ಬೆಂಬಲ ಘೋಷಿಸಿದ್ದರಿಂದ ಸ್ಥಾನಗಳ ಸಂಖ್ಯೆ 118ಕ್ಕೆ ಏರಿದೆ.
ವಿಸಿಕೆ ಪಕ್ಷದ ಅಧ್ಯಕ್ಷ ಡಾ. ತೋಲ್ ತಿರುಮಾವಳವನ್ ಪರವಾಗಿ ಶಾಸಕಾಂಗ ಪಕ್ಷದ ನಾಯಕ ವನ್ನಿ ಅರಸು ಅವರು ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರಿಗೆ ಬೆಂಬಲದ ಪತ್ರ ರವಾನಿಸಿದ್ದಾರೆ. “ತಮಿಳುನಾಡಿನ ಜನತೆಗೆ ಸ್ಥಿರ ಮತ್ತು ಪ್ರಜಾಸತ್ತಾತ್ಮಕ ಆಡಳಿತವನ್ನು ನೀಡುವ ಉದ್ದೇಶದಿಂದ, ಸಿ. ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಸರ್ಕಾರಕ್ಕೆ ನಮ್ಮ ಇಬ್ಬರು ಶಾಸಕರು ಬೇಷರತ್ ಬೆಂಬಲ ನೀಡುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಪ್ರಮುಖ ಸುದ್ದಿ :-   8 ವರ್ಷಗಳ ಪ್ರೇಮದಲ್ಲಿ ಬಿರುಕು ; ಯುವತಿ ಆತ್ಮಹತ್ಯೆ, ಮೃತದೇಹಕ್ಕೆ ಪ್ರಿಯಕರ ಮಂಗಳಸೂತ್ರ ಕಟ್ಟಬೇಕು ಎಂದು ಕುಟುಂಬಸ್ಥರ ಪಟ್ಟು...

ಸಚಿವ ಸಂಪುಟದ ಸರ್ಕಸ್: ಯಾರಿಗೆ ಏನು?
ಬೆಂಬಲ ಸಿಕ್ಕಿದೆಯಾದರೂ ಸಚಿವ ಸಂಪುಟ ರಚನೆಯಲ್ಲಿ ವಿಜಯ ಅವರಿಗೆ ಕೆಲವು ಸವಾಲುಗಳಿವೆ. ಎಡಪಕ್ಷಗಳು ವಿಜಯ ಸರ್ಕಾರಕ್ಕೆ ಬೇಷರತ್ ಬೆಂಬಲ ನೀಡಿದ್ದರೂ, ಸಂಪುಟ ಸೇರದೆ ಹೊರಗಿನಿಂದ ಬೆಂಬಲ ನೀಡಲು ನಿರ್ಧರಿಸಿವೆ. ಬೆಂಬಲ ನೀಡಲು ಕಾಂಗ್ರೆಸ್ ಕೆಲವು ಷರತ್ತುಗಳನ್ನು ವಿಧಿಸಿದೆ. ಮೂಲಗಳ ಪ್ರಕಾರ, ಕಾಂಗ್ರೆಸ್ ಎರಡು ಸಚಿವ ಸ್ಥಾನಗಳ ನಿರೀಕ್ಷೆಯಲ್ಲಿದೆ.
ಈಗ ವಿಜಯ ಅವರು ತಮ್ಮ ಬೆಂಬಲಿಗ 118ಕ್ಕೂ ಹೆಚ್ಚು ಶಾಸಕರ ಸಹಿ ಇರುವ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಿ, ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ. ಈ ಪ್ರಕ್ರಿಯೆ ಮುಗಿಯುತ್ತಿದ್ದಂತೆ ರಾಜ್ಯಪಾಲರು ಸರ್ಕಾರ ರಚಿಸಲು ವಿಜಯ ಅವರಿಗೆ ಅಧಿಕೃತ ಆಹ್ವಾನ ನೀಡಲಿದ್ದಾರೆ.
ದಶಕಗಳ ಕಾಲ ದ್ರಾವಿಡ ಪಕ್ಷಗಳ ಏಕಸ್ವಾಮ್ಯವಿದ್ದ ತಮಿಳುನಾಡಿನಲ್ಲಿ, ಇದೀಗ ವಿಜಯ ನೇತೃತ್ವದ ಸಮ್ಮಿಶ್ರ ಸರ್ಕಾರ ಯಾವ ರೀತಿ ಆಡಳಿತ ನೀಡಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement