ತೆಹ್ರಾನ್: ಅಮೆರಿಕ ಹಾಗೂ ಇಸ್ರೇಲ್ ಜೊತೆಗಿನ ಇರಾನ್ ಯುದ್ಧದ ಹಿನ್ನೆಲೆಯಲ್ಲಿ ಆಯಕಟ್ಟಿನ ಹಾರ್ಮುಜ್ ಜಲಸಂಧಿ ಬಹುತೇಕ ಮುಚ್ಚಲ್ಪಟ್ಟಿದ್ದರೂ, ಕೆಲವು ದೇಶಗಳ ಹಡಗುಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ ಎಂದು ಇರಾನ್ ಉಪ ವಿದೇಶಾಂಗ ಸಚಿವ ಮಜೀದ್ ತಖ್ತ್-ರಾವಂಚಿ ತಿಳಿಸಿದ್ದಾರೆ.
ಸುದ್ದಿಸಂಸ್ಥೆ ಎಎಫ್‌ಪಿ (AFP)ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, “ಹಲವು ದೇಶಗಳು ಹಾರ್ಮುಜ್ ಜಲಸಂಧಿಯ ಮೂಲಕ ಸಂಚರಿಸುವ ಬಗ್ಗೆ ಈಗಾಗಲೇ ನಮ್ಮೊಂದಿಗೆ ಮಾತುಕತೆ ನಡೆಸಿವೆ ಮತ್ತು ನಾವು ಅವರಿಗೆ ಸಹಕರಿಸುತ್ತಿದ್ದೇವೆ,” ಎಂದು ಅವರು ಹೇಳಿದ್ದಾರೆ.
ಆದರೆ, ಇರಾನ್ ವಿರುದ್ಧದ ದಾಳಿಯಲ್ಲಿ ಭಾಗಿಯಾದ ದೇಶಗಳಿಗೆ ಈ ರಿಯಾಯಿತಿ ಇಲ್ಲ ಎಂದು ಅವರು ಎಚ್ಚರಿಸಿದ್ದಾರೆ. “ನಮ್ಮ ದೇಶದ ಮೇಲಿನ ಆಕ್ರಮಣದಲ್ಲಿ ಕೈಜೋಡಿಸಿದ ರಾಷ್ಟ್ರಗಳು ಹಾರ್ಮುಜ್ ಜಲಸಂಧಿಯ ಮೂಲಕ ಸುರಕ್ಷಿತವಾಗಿ ಸಾಗುವ ಲಾಭವನ್ನು ಪಡೆಯಬಾರದು ಎಂಬುದು ನಮ್ಮ ನಿಲುವು,” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಅಮೆರಿಕದ ಆರೋಪಕ್ಕೆ ತಿರುಗೇಟು:
ಇದೇ ವೇಳೆ, ಜಲಸಂಧಿಯಲ್ಲಿ ಇರಾನ್ ನೌಕಾಪಡೆ ಸ್ಫೋಟಕ ಮೈನ್‌ಗಳನ್ನು (Mines) ಅಳವಡಿಸುತ್ತಿದೆ ಎಂಬ ಅಮೆರಿಕದ ಆರೋಪವನ್ನು ರಾವಂಚಿ ಖಾಡಾಖಂಡಿತವಾಗಿ ನಿರಾಕರಿಸಿದ್ದಾರೆ. ಇರಾನ್‌ನ 28 ಮೈನ್ ಅಳವಡಿಸುವ ಹಡಗುಗಳ ಮೇಲೆ ದಾಳಿ ಮಾಡಲಾಗಿದೆ ಎಂಬ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ಇದು ಸಂಪೂರ್ಣ ಸುಳ್ಳು, ಅಂತಹ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ,” ಎಂದಿದ್ದಾರೆ.
ಇರಾನ್ ನೌಕಾಪಡೆಯೊಂದಿಗೆ ಸೂಕ್ತ ಸಮನ್ವಯ ಸಾಧಿಸಿದರೆ ಹೆಚ್ಚಿನ ಹಡಗುಗಳಿಗೆ ಸಂಚಾರಕ್ಕೆ ಅವಕಾಶ ನೀಡುವುದಾಗಿ ಇರಾನ್ ತಿಳಿಸಿದೆ.
ಶಾಂತಿಯ ಆಶಯ:
ತಮ್ಮ ದೇಶದ ಮೇಲೆ ಪದೇ ಪದೇ ಯುದ್ಧ ಹೇರಬಾರದು ಎಂಬುದು ಇರಾನ್‌ನ ಆಶಯವಾಗಿದೆ ಎಂದು ಸಚಿವರು ತಿಳಿಸಿದರು. ಕಳೆದ ಜೂನ್‌ನಲ್ಲಿ ಯುದ್ಧ ಆರಂಭವಾದ 12 ದಿನಗಳ ನಂತರ ತಾತ್ಕಾಲಿಕ ಕದನ ವಿರಾಮ ಏರ್ಪಟ್ಟಿತ್ತು, ಆದರೆ ಎಂಟು-ಒಂಬತ್ತು ತಿಂಗಳ ನಂತರ ಎದುರಾಳಿಗಳು ಮತ್ತೆ ಸಂಘಟಿತರಾಗಿ ದಾಳಿ ಮಾಡಿದರು ಎಂದು ಅವರು ಈ ಸಂದರ್ಭದಲ್ಲಿ ನೆನಪಿಸಿಕೊಂಡರು.
ಹಾರ್ಮುಜ್ ಜಲಸಂಧಿಯ ಮೂಲಕ ಸುರಕ್ಷಿತವಾಗಿ ಹಡಗುಗಳನ್ನು ಸಾಗಿಸಲು ಅವಕಾಶ ನೀಡಿದ ದೇಶಗಳಲ್ಲಿ ಭಾರತವೂ ಸೇರಿದೆ ಎಂದು ವರದಿಯಾಗಿದೆ. ಆದಾಗ್ಯೂ, ವಿದೇಶಾಂಗ ಸಚಿವಾಲಯವು ” ಏನನ್ನೂ ಹೇಳುವುದು ಅಕಾಲಿಕ” ಎಂದು ಹೇಳಿದೆ.
ಇಂಧನ ಸರಬರಾಜು ಮತ್ತು ಹಡಗುಗಳ ಸುರಕ್ಷತೆಯ ಬಗ್ಗೆ ವಿದೇಶಾಂಗ ಸಚಿವ ಎಸ್. ಜೈಶಂಕರ ಇತ್ತೀಚಿನ ದಿನಗಳಲ್ಲಿ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ ಅವರೊಂದಿಗೆ ಮೂರು ಬಾರಿ ಮಾತನಾಡಿದ್ದಾರೆ.
ಬುಧವಾರದ ವೇಳೆಗೆ 778 ಭಾರತೀಯ ನಾವಿಕರನ್ನು ಹೊಂದಿರುವ ಕನಿಷ್ಠ 28 ಭಾರತದ ಧ್ವಜ ಹೊಂದಿರುವ ಹಡಗುಗಳು ಜಲಸಂಧಿಯ ಪಶ್ಚಿಮ ಮತ್ತು ಪೂರ್ವಕ್ಕೆ ಕಾರ್ಯನಿರ್ವಹಿಸುತ್ತಿದ್ದವು ಎಂದು ಸಚಿವಾಲಯ ತಿಳಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ