ಮತ್ತೆ ಸಂಘರ್ಷ ನಡೆದರೆ ನಾವು ಕೋಲ್ಕತ್ತಾ ಮೇಲೆ ದಾಳಿ ಮಾಡ್ತೇವೆ…’: ಭಾರತಕ್ಕೆ ಬೆದರಿಕೆ ಹಾಕಿದ ಪಾಕ್ ರಕ್ಷಣಾ ಸಚಿವ

ಸಿಯಾಲ್ಕೋಟ್: ಭಾರತದೊಂದಿಗೆ ಭವಿಷ್ಯದಲ್ಲಿ ಯಾವುದೇ ರೀತಿಯಸಂಘರ್ಷ ಉಂಟಾದಲ್ಲಿ, ಪಾಕಿಸ್ತಾನ ಈ ಬಾರಿ ಕೋಲ್ಕತ್ತಾವನ್ನು ಟಾರ್ಗೆಟ್‌ ಮಾಡಲಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಶನಿವಾರ ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ.
ಸಿಯಾಲ್ಕೋಟ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಭಾರತವು ಈ ಬಾರಿಯೂ ಯಾವುದೇ ‘ಫಾಲ್ಸ್ ಫ್ಲಾಗ್ ಆಪರೇಷನ್’ (ನಕಲಿ ಕಾರ್ಯಾಚರಣೆ) ನಡೆಸಲು ಪ್ರಯತ್ನಿಸಿದರೆ, ನಾವು ಅದನ್ನು ಕೋಲ್ಕತ್ತಾದವರೆಗೂ ಕೊಂಡೊಯ್ಯುತ್ತೇವೆ,” ಎಂದು ಹೇಳಿಕೆ ನೀಡಿದ್ದಾರೆ.
ಭಾರತವು ನಕಲಿ ಕಾರ್ಯಾಚರಣೆಯ ಯೋಜನೆಯನ್ನು ರೂಪಿಸುತ್ತಿದೆ ಎಂದು ಆಸಿಫ್ ಆರೋಪಿಸಿದ್ದಾರೆ.

ಆದರೆ, ತಮ್ಮ ಈ ಹೇಳಿಕೆಗೆ ಯಾವುದೇ ಪುರಾವೆಗಳನ್ನು ಅವರು ಒದಗಿಸಿಲ್ಲ. ಅಂತಹ ಸನ್ನಿವೇಶ ಹೇಗಿರಬಹುದು ಎಂದು ವಿವರಿಸಿದ ಅವರು, “ಭಾರತವು ತನ್ನದೇ ಜನರನ್ನು ಬಳಸಿ ಅಥವಾ ತನ್ನ ವಶದಲ್ಲಿರುವ ಪಾಕಿಸ್ತಾನಿಗಳನ್ನು ಬಳಸಿ, ಎಲ್ಲೋ ಕೆಲವು ಶವಗಳನ್ನು ಹಾಕಿ, ‘ಇವರು ಭಯೋತ್ಪಾದಕರು ಮತ್ತು ಇಂಥ ಕೆಲಸ ಮಾಡಿದ್ದಾರೆ’ ಎಂದು ಬಿಂಬಿಸಬಹುದು,” ಎಂದು ಆರೋಪಿಸಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಆಸಿಫ್ ಅವರು ಭಾರತದ ಯಾವುದೇ ದಾಳಿಗೆ ಪಾಕಿಸ್ತಾನದ ಪ್ರತಿಕ್ರಿಯೆಯು “ವೇಗವಾಗಿ, ಲೆಕ್ಕಾಚಾರದಿಂದ ಮತ್ತು ನಿರ್ಣಾಯಕವಾಗಿ ಇರಲಿದೆ” ಎಂದು ಹೇಳಿದ್ದರು. ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಆಸಿಫ್ ಈ ಮಾತುಗಳನ್ನು ಆಡಿದ್ದರು. ಪಕ್ಕದ ದೇಶದಿಂದ ಯಾವುದೇ ರೀತಿಯ “ದುಸ್ಸಾಹಸ” ನಡೆದರೆ ಅದಕ್ಕೆ “ನಿರ್ಣಾಯಕ” ಪ್ರತಿಕ್ರಿಯೆ ನೀಡಲಾಗುವುದು ಎಂದು ರಾಜನಾಥ್ ಸಿಂಗ್ ಎಚ್ಚರಿಸಿದ್ದರು.

ಹಳೆಯ ಸಂಘರ್ಷದ ಹಿನ್ನೆಲೆ
2025ರಲ್ಲಿ ಉಭಯ ದೇಶಗಳ ನಡುವೆ ನಡೆದ ನಾಲ್ಕು ದಿನಗಳ ಸುದೀರ್ಘ ಸಂಘರ್ಷದ ಸುಮಾರು ಒಂದು ವರ್ಷದ ನಂತರ ಈ ಹೊಸ ವಾಕ್ಸಮರ ಆರಂಭವಾಗಿದೆ. ಪಾಕಿಸ್ತಾನದ ಈ ಹೇಳಿಕೆಯು ಅದರ ಸೇನೆಯ ಹಿಂದಿನ ನಿಲುವುಗಳನ್ನೇ ಪ್ರತಿಧ್ವನಿಸುತ್ತಿದೆ. ಆಗಸ್ಟ್ 2025 ರಲ್ಲಿ, ಐಎಸ್ಪಿಆರ್ (ISPR) ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಅಹಮದ್ ಶರೀಫ್ ಚೌಧರಿ ಅವರು ‘ದಿ ಎಕನಾಮಿಸ್ಟ್’ಗೆ ನೀಡಿದ ಸಂದರ್ಶನದಲ್ಲಿ, “ಭಾರತವು ‘ಆಪರೇಷನ್ ಸಿಂಧೂರ’ ನಂತಹ ಮಿಲಿಟರಿ ಕ್ರಮವನ್ನು ಕೈಗೊಂಡರೆ, ಪಾಕಿಸ್ತಾನವು ಭಾರತದ ಒಳಭಾಗಕ್ಕೆ ಮತ್ತು ಪೂರ್ವ ಭಾಗದಿಂದಲೇ ದಾಳಿ ನಡೆಸಲಿದೆ” ಎಂದು ಹೇಳಿದ್ದರು.

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement