ವಾಷಿಂಗ್ಟನ್ : ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು “ಅಮೆರಿಕನ್ನರಿಗೆ ಅನ್ಯಾಯವಾಗುವ ವ್ಯಾಪಾರ ನೀತಿಗಳನ್ನು ಜಾರಿಗೆ ತಂದಿದ್ದಕ್ಕಾಗಿ” ಭಾರತ ಸೇರಿದಂತೆ ಅಮೆರಿಕದ ಬಹುತೇಕ ವ್ಯಾಪಾರ ಪಾಲುದಾರರ ಮೇಲೆ ಏಪ್ರಿಲ್ 2 ರಿಂದ ಸುಂಕವನ್ನು ವಿಧಿಸುವುದಾಗಿ ಹೇಳಿದ್ದಾರೆ.
ಕೆನಡಾ ಮತ್ತು ಮೆಕ್ಸಿಕೊ ದೇಶಗಳ ಆಮದುಗಳ ಮೇಲಿನ ಟ್ರಂಪ್ ಅವರು ಹೊಸದಾಗಿ ವಿಧಿಸಿರುವ 25% ಸುಂಕಗಳು ಜಾರಿಗೆ ಬಂದ ಒಂದು ದಿನದ ನಂತರ ಟ್ರಂಪ್ ಅವರ ಈ ಹೇಳಿಕೆ ಬಂದಿದೆ. ಅಮೆರಿಕವು ಚೀನಾದ ಸರಕುಗಳ ಮೇಲಿನ ಸುಂಕವನ್ನು ಶೇಕಡಾ 20 ಕ್ಕೆ ಹೆಚ್ಚಿಸಿ ದ್ವಿಗುಣಗೊಳಿಸಿತು. ಇದರ ಪರಿಣಾಮವಾಗಿ, ಅಮೆರಿಕದ ಈ ಮೂರು ದೊಡ್ಡ ವ್ಯಾಪಾರ ಪಾಲುದಾರ ದೇಶಗಳು ಅಮೆರಿಕದ ವಿರುದ್ಧ ಪ್ರತೀಕಾರದ ಕ್ರಮಗಳನ್ನು ಘೋಷಿಸಿದ್ದಾರೆ.
“ಇತರ ದೇಶಗಳು ದಶಕಗಳಿಂದ ನಮ್ಮ ಸರಕುಗಳ ವಿರುದ್ಧ ಸುಂಕಗಳನ್ನು ಬಳಸುತ್ತಿವೆ ಮತ್ತು ಈಗ ಅವುಗಳನ್ನು ಇತರ ದೇಶಗಳ ವಿರುದ್ಧ ಬಳಸಲು ಪ್ರಾರಂಭಿಸುವುದು ನಮ್ಮ ಸರದಿಯಾಗಿದೆ. ಯುರೋಪಿಯನ್ ಯೂನಿಯನ್, ಚೀನಾ, ಬ್ರೆಜಿಲ್, ಭಾರತ ಮತ್ತು ಅಸಂಖ್ಯಾತ ಇತರ ರಾಷ್ಟ್ರಗಳು ನಾವು ವಿಧಿಸುವುದಕ್ಕಿಂತ ಹೆಚ್ಚಿನ ಸುಂಕಗಳನ್ನು ವಿಧಿಸುತ್ತವೆ. ಇದು ತುಂಬಾ ಅನ್ಯಾಯವಾಗಿದೆ” ಎಂದು ಅವರು ಅಮೆರಿಕದ ಕಾಂಗ್ರೆಸ್ನಲ್ಲಿ ಜಂಟಿ ಭಾಷಣದಲ್ಲಿ ಹೇಳಿದರು.
“ಭಾರತವು ನಮಗೆ ಶೇಕಡಾ 100 ಕ್ಕಿಂತ ಹೆಚ್ಚು ಸುಂಕವನ್ನು ವಿಧಿಸುತ್ತದೆ, ನಮ್ಮ ಉತ್ಪನ್ನಗಳ ಮೇಲೆ ಚೀನಾದ ಸರಾಸರಿ ಸುಂಕವು ನಾವು ವಿಧಿಸುವುದಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ ಮತ್ತು ದಕ್ಷಿಣ ಕೊರಿಯಾದ ಸರಾಸರಿ ಸುಂಕವು ನಾಲ್ಕು ಪಟ್ಟು ಹೆಚ್ಚಾಗಿದೆ. ಈ ವ್ಯವಸ್ಥೆಯು ಅಮೆರಿಕಕ್ಕೆ ನ್ಯಾಯಯುತವಾಗಿಲ್ಲ; ಇದು ಎಂದಿಗೂ ಇರಲಿಲ್ಲ. ಈಗ ಇದಕ್ಕೆ ಪ್ರತಿಯಾಗಿ ಏಪ್ರಿಲ್ 2 ರಂದು ಈ ದೇಶಗಳ ಸರಕುಗಳಿಗೆ ನಾವು ವಿಧಿಸುವ ಸುಂಕಗಳು ಜಾರಿಗೆ ಬರಲಿವೆ ಎಂದು ಹೇಳಿದರು.
ವ್ಯಾಪಾರ ಪಾಲುದಾರ ದೇಶಗಳು “ಅವರ ಮಾರುಕಟ್ಟೆಯಿಂದ ನಮ್ಮನ್ನು ಹೊರಗಿಡಲು ವಿತ್ತೀಯವಲ್ಲದ ಸುಂಕಗಳನ್ನು ಬಳಸಿದರೆ, ನಮ್ಮ ಮಾರುಕಟ್ಟೆಯಿಂದ ಅವರನ್ನು ಹೊರಗಿಡಲು ನಾವೂ ವಿತ್ತೀಯವಲ್ಲದ ಸುಂಕಗಳನ್ನು ಬಳಸುತ್ತೇವೆ” ಎಂದು ಅವರು ಪ್ರತಿಪಾದಿಸಿದರು.
“ನಾವು ಟ್ರಿಲಿಯನ್ಗಟ್ಟಲೆ ಡಾಲರ್ಗಳನ್ನು ತೆಗೆದುಕೊಳ್ಳುತ್ತೇವೆ ಮತ್ತು ನಾವು ಹಿಂದೆಂದೂ ನೋಡಿರದಂತಹ ಉದ್ಯೋಗಗಳನ್ನು ಸೃಷ್ಟಿಸುತ್ತೇವೆ” ಮತ್ತು “ಭೂಮಿಯ ಮೇಲಿನ ಪ್ರತಿಯೊಂದು ದೇಶದಿಂದ ದಶಕಗಳಿಂದ ನಮ್ಮ ಮೇಲೆ ಸುಂಕ ವಿಧಿಸಿತ್ತು. ಮತ್ತು ಇನ್ನು ಮುಂದೆ ನಾವು ಅದನ್ನು ಮಾಡಲು ಬಿಡುವುದಿಲ್ಲ ಎಂದು ಅಧ್ಯಕ್ಷರು ಹೇಳಿದರು.
ಮಂಗಳವಾರ ಮಧ್ಯರಾತ್ರಿಯ ನಂತರ, ಟ್ರಂಪ್ ಅವರು ಮೆಕ್ಸಿಕೋ ಮತ್ತು ಕೆನಡಾದ ಆಮದುಗಳ ಮೇಲೆ 25 ಪ್ರತಿಶತ ತೆರಿಗೆಗಳು ಅಥವಾ ಸುಂಕಗಳನ್ನು ವಿಧಿಸಿದರು. ಆದರೂ ಅವರು ಕೆನಡಾದ ಶಕ್ತಿ ಕ್ಷೇತ್ರದ ಮೇಲೆ 10 ಪ್ರತಿಶತಕ್ಕೆ ತೆರಿಗೆಯನ್ನು ಸೀಮಿತಗೊಳಿಸಿದರು. ಟ್ರಂಪ್ ಅವರು ಚೀನಾ ಉತ್ಪನ್ನಗಳ ಮೇಲೆ ಕಳೆದ ತಿಂಗಳು 20 ಪ್ರತಿಶತ ಸುಂಕ ವಿಧಿಸಿದರು.
ಇದಕ್ಕೆ ಪ್ರತಿಯಾಗಿ ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ತನ್ನ ಸರ್ಕಾರವು 21 ದಿನಗಳ ಅವಧಿಯಲ್ಲಿ ಅಮೆರಿಕನ್ ಸರಕುಗಳ ಮೇಲೆ ಸುಂಕವನ್ನು ವಿಧಿಸುತ್ತದೆ ಎಂದು ಘೋಷಿಸಿದರೆ, ಮೆಕ್ಸಿಕನ್ ಅಧ್ಯಕ್ಷ ಕ್ಲೌಡಿಯಾ ಶೆನ್ಬಾಮ್ ಭಾನುವಾರ ಅಮೆರಿಕ ಸರಕುಗಳ ಮೇಲೆ ಹೊಸ ತೆರಿಗೆಗಳಿಗೆ ವಿಧಿಸಿವುದಾಗಿ ಹೇಳಿದರು. ಏತನ್ಮಧ್ಯೆ, ಚೀನಾವು ಅಮೇರಿಕನ್ ಫಾರ್ಮ್ ರಫ್ತುಗಳ ಮೇಲೆ 15 ಪ್ರತಿಶತದಷ್ಟು ಸುಂಕಗಳೊಂದಿಗೆ ಪ್ರತೀಕಾರದ ಕ್ರಮ ಕೈಗೊಂಡಿದೆ.
ನಿಮ್ಮ ಕಾಮೆಂಟ್ ಬರೆಯಿರಿ