ತೆಹ್ರಾನ್: ಇರಾನ್ ಸಂಘರ್ಷದಿಂದ ಕಚ್ಚಾ ತೈಲದ ಬಗ್ಗೆ ಜಾಗತಿಕವಾಗಿ ಅನಿಶ್ಚಿತತೆ ಉಂಟಾಗಿರುವ ಬೆನ್ನಲ್ಲೇ, ಇರಾನ್ ಭಾನುವಾರ ಮಹತ್ವದ ಹೇಳಿಕೆ ನೀಡಿದೆ. ಹಾರ್ಮುಜ್ ಜಲಸಂಧಿಯು (Strait of Hormuz) ತೆರೆದಿದೆ, ಆದರೆ ಅದು ಇರಾನ್ ಶತ್ರುಗಳಿಗೆ ಮಾತ್ರ ಮುಚ್ಚಲ್ಪಟ್ಟಿದೆ ಎಂದು ಇರಾನ್ ತಿಳಿಸಿದೆ. ವಿದೇಶಿ ಹಡಗುಗಳು ‘ಸುರಕ್ಷತೆ ಮತ್ತು ಭದ್ರತೆ’ಗಾಗಿ ಇರಾನ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿದರೆ, ಈ ಜಲಸಂಧಿಯ ಮೂಲಕ ಸಂಚರಿಸಬಹುದು ಎಂದು ಇರಾನ್ನ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಕಡಲ ಸಂಸ್ಥೆಯ (IMO) ಇರಾನ್ ಪ್ರತಿನಿಧಿ ಅಲಿ ಮೂಸವಿ ಮಾತನಾಡಿ, “ಇರಾನಿನ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ರಕ್ಷಿಸಬೇಕು. ಆದರೂ, ಕಡಲ ಭದ್ರತೆಯನ್ನು ಹೆಚ್ಚಿಸಲು ಮತ್ತು ನಾವಿಕರನ್ನು ರಕ್ಷಿಸಲು ಜಾಗತಿಕ ಸಂಸ್ಥೆಗಳು ಮತ್ತು ಇತರ ರಾಷ್ಟ್ರಗಳೊಂದಿಗೆ ಸಮನ್ವಯ ಸಾಧಿಸಲು ಇರಾನ್ ಸಿದ್ಧವಾಗಿದೆ,” ಎಂದು ಹೇಳಿದ್ದಾರೆ.
“ರಾಜತಾಂತ್ರಿಕತೆಯೇ ಇರಾನ್ನ ಆದ್ಯತೆಯಾಗಿದೆ. ಆದರೆ, ಆಕ್ರಮಣಗಳ ಸಂಪೂರ್ಣ ಸ್ಥಗಿತ ಹಾಗೂ ಪರಸ್ಪರ ನಂಬಿಕೆ ಮತ್ತು ವಿಶ್ವಾಸವು ಹೆಚ್ಚು ಮುಖ್ಯವಾಗಿದೆ,” ಎಂದು ಮೂಸವಿ ಹೇಳಿರುವುದಾಗಿ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಪರ್ಷಿಯನ್ ಗಲ್ಫ್ ಪ್ರದೇಶ ಮತ್ತು ಹಾರ್ಮುಜ್ ಜಲಸಂಧಿಯಲ್ಲಿನ ಪ್ರಸ್ತುತ ಪರಿಸ್ಥಿತಿಗೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಗಳೇ ಮೂಲ ಕಾರಣ ಎಂದು ಅವರು ಹೇಳಿದ್ದಾರೆ.
ಇರಾನ್ಗೆ ಟ್ರಂಪ್ 48 ಗಂಟೆಗಳ ಗಡುವು
ಇರಾನ್ ರಾಯಭಾರಿಯ ಈ ಹೇಳಿಕೆಗಳು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ 48 ಗಂಟೆಗಳ ಗಡುವಿನ ಬೆನ್ನಲ್ಲೇ ಬಂದಿವೆ. ಮುಂದಿನ ಎರಡು ದಿನಗಳಲ್ಲಿ ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ತೆರೆಯದಿದ್ದರೆ, ಇರಾನ್ನ ವಿದ್ಯುತ್ ಸ್ಥಾವರಗಳನ್ನು ಅಮೆರಿಕ ‘ಧ್ವಂಸ’ (obliterate) ಮಾಡಲಿದೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ. ಟ್ರಂಪ್ ಅವರ ಈ ಹೇಳಿಕೆಯು ಯುದ್ಧವು ತನ್ನ ನಾಲ್ಕನೇ ವಾರದಲ್ಲಿ ಅಪಾಯಕಾರಿ ಹಂತಕ್ಕೆ ತಲುಪುತ್ತಿರುವುದರ ಸೂಚನೆಯಾಗಿದೆ.
“ಈ ಕ್ಷಣದಿಂದ ಸರಿಯಾಗಿ 48 ಗಂಟೆಗಳ ಒಳಗೆ ಇರಾನ್ ಯಾವುದೇ ಬೆದರಿಕೆಯಿಲ್ಲದೆ ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ತೆರೆಯದಿದ್ದರೆ, ಅಮೆರಿಕಾವು ಇರಾನಿನ ವಿವಿಧ ವಿದ್ಯುತ್ ಸ್ಥಾವರಗಳ ಮೇಲೆ ದಾಳಿ ಮಾಡಿ ಅವುಗಳನ್ನು ನಾಶಪಡಿಸುತ್ತದೆ. ಮೊದಲು ಅತಿ ದೊಡ್ಡ ಸ್ಥಾವರದಿಂದಲೇ ಇದು ಆರಂಭವಾಗಲಿದೆ ಎಂದು ಟ್ರಂಪ್ ಹೇಳಿದ್ದಾರೆ.
ಹಾರ್ಮುಜ್ ಜಲಸಂಧಿಯನ್ನು ಇರಾನ್ ದಿಗ್ಬಂಧನ ಮಾಡಿರುವ ಕಾರಣದಿಂದಾಗಿ ಜಾಗತಿಕ ಕಚ್ಚಾ ತೈಲ ದರದಲ್ಲಿ ತೀವ್ರ ಏರಿಕೆಯಾಗಿದೆ. ಜಗತ್ತಿನ ಸುಮಾರು ಶೇಕಡಾ 20 ರಷ್ಟು ತೈಲ ಮತ್ತು ಅನಿಲ ಈ ಜಲಸಂಧಿಯ ಮೂಲಕವೇ ಸಾಗುತ್ತದೆ. ಇದಲ್ಲದೆ, ಇರಾನ್ ತನ್ನ ನೆರೆಯ ರಾಷ್ಟ್ರಗಳ ತೈಲ ಸ್ಥಾವರಗಳ ಮೇಲೆಯೂ ದಾಳಿ ನಡೆಸಿದ್ದು, ಇದು ಅನಿಶ್ಚಿತತೆಯನ್ನು ಮತ್ತಷ್ಟು ಹೆಚ್ಚಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ