ಢಾಕಾ: ಕಳೆದ ವರ್ಷ ನಡೆದ ವಿದ್ಯಾರ್ಥಿ ಬಂಡಾಯದಲ್ಲಿ ಹಲವರ ಹತ್ಯೆ ಸೇರಿದಂತೆ ಮಾನವೀಯತೆ ವಿರುದ್ಧದ ಅಪರಾಧಗಳನ್ನು ಎಸಗಿದ ಆರೋಪದ ಮೇಲೆ, ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ದೇಶದ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ (ICT) ಗಲ್ಲು ಶಿಕ್ಷೆ ವಿಧಿಸಿದೆ. ವಿದ್ಯಾರ್ಥಿ ದಂಗೆಯೇ ಅಂತಿಮವಾಗಿ ಅವರ ಸರ್ಕಾರದ ಪತನಕ್ಕೆ ಕಾರಣವಾಗಿತ್ತು.
ತಿಂಗಳುಗಳ ಕಾಲ ಹಸೀನಾ ಅವರ ಗೈರು ಹಾಜರಿಯಲ್ಲಿ ನಡೆದ ಈ ವಿಚಾರಣೆಯ ತೀರ್ಪನ್ನು ಹಸೀನಾ ಅವರು ಪಕ್ಷಪಾತದಿಂದ ಕೂಡಿದ ಮತ್ತು ರಾಜಕೀಯ ಪ್ರೇರಿತ ಎಂದು ಕರೆದಿದ್ದಾರೆ. ಹಾಲಿ ಹಂಗಾಮಿ ಸರ್ಕಾರ ಮತ್ತು ಅದರ ನೇತೃತ್ವ ವಹಿಸಿರುವ ಮುಹಮ್ಮದ್ ಯೂನಸ್ ಅವರ ಮೇಲೆ ಅವರು ಆರೋಪ ಹೊರಿಸಿದ್ದಾರೆ.
ಆಗಸ್ಟ್ 5, 2024 ರಂದು ಅಧಿಕಾರದಿಂದ ಕೆಳಗಿಳಿದ ನಂತರ ಪ್ರಸ್ತುತ ಗಡಿಪಾರಾಗಿ ಭಾರತದ ದೆಹಲಿಯಲ್ಲಿರುವ 78 ವರ್ಷದ ಆವಾಮಿ ಲೀಗ್ ನಾಯಕಿ ಶೇಖ್ ಹಸೀನಾ, ಮೂರು ಪ್ರಮುಖ ಆರೋಪಗಳಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಹಿಂಸಾಚಾರಕ್ಕೆ ಪ್ರಚೋದನೆ, ಪ್ರತಿಭಟನಾಕಾರರನ್ನು ಕೊಲ್ಲಲು ಆದೇಶ ನೀಡಿರುವುದು ಹಾಗೂ ವಿದ್ಯಾರ್ಥಿ ನೇತೃತ್ವದ ದಂಗೆಯ ಸಮಯದಲ್ಲಿ ನಡೆದ ದೌರ್ಜನ್ಯಗಳನ್ನು ತಡೆಯಲು ವಿಫಲವಾಗಿರುವುದು ಈ ಮೂರು ಆರೋಪಗಳಲ್ಲಿ ಶೇಖ್ ಹಸೀನಾ ತಪ್ಪಿತಸ್ಥರೆಂದು ಸಾಬೀತಾಗಿದೆ ಎಂದು ಕೋರ್ಟ್ ಹೇಳಿದೆ.
ಇದೇ ಪ್ರಕರಣದಲ್ಲಿ ಮಾಜಿ ಗೃಹ ಸಚಿವ ಅಸಾದುಜ್ಜಮಾನ್ ಖಾನ್ ಅವರಿಗೂ ಮರಣದಂಡನೆ ವಿಧಿಸಲಾಗಿದ್ದು, ಮಾಜಿ ಪೊಲೀಸ್ ಮುಖ್ಯಸ್ಥರೊಬ್ಬರು ಸರ್ಕಾರಿ ಸಾಕ್ಷಿಯಾಗಿ ಒಪ್ಪಿಕೊಂಡು ತಪ್ಪೊಪ್ಪಿಕೊಂಡ ಕಾರಣ ಐದು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಫೆಬ್ರವರಿ ತಿಂಗಳ ಆರಂಭದಲ್ಲಿ ಸಂಸದೀಯ ಚುನಾವಣೆಗಳು ನಡೆಯಲಿರುವ ಕೆಲವೇ ತಿಂಗಳ ಮುಂಚೆ ಬಂದಿರುವ ಈ ಮಹತ್ವದ ತೀರ್ಪು ಬಾಂಗ್ಲಾದೇಶದ ರಾಜಕೀಯ ಚಿತ್ರಣವನ್ನು ಬದಲಾಯಿಸುವ ನಿರೀಕ್ಷೆಯಿದೆ. ಹಸೀನಾ ಅವರ ಆವಾಮಿ ಲೀಗ್ ಪಕ್ಷಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧ ಹೇರಲಾಗಿದೆ. ಈ ತೀರ್ಪು ದೇಶದಲ್ಲಿ ಹೊಸ ಅಶಾಂತಿಗೆ ಕಾರಣವಾಗಬಹುದು ಎಂದು ರಾಜಕೀಯ ವಿಶ್ಲೇಷಕರು ಎಚ್ಚರಿಸಿದ್ದಾರೆ.
ಮೂರು ಆರೋಪಗಳಲ್ಲಿ ದೋಷಿ
ಮೂವರು ಸದಸ್ಯರ ನ್ಯಾಯಮಂಡಳಿಯು ಮಾರಣಾಂತಿಕ ದಮನಕಾರ್ಯವನ್ನು ಸಂಘಟಿಸುವಲ್ಲಿ ಹಸೀನಾ ಅವರ ಪಾತ್ರವನ್ನು ವಿವರವಾಗಿ ದಾಖಲಿಸಿದೆ. ನಿರಾಯುಧ ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲೆ ಸಂಘಟಿತ ದಾಳಿಗಳಿಗೆ ಪ್ರಚೋದನೆ ನೀಡಿದ ಮತ್ತು ಪ್ರದರ್ಶನಕಾರರನ್ನು “ನಿರ್ಮೂಲನೆ” ಮಾಡಲು ಮಾರಕ ಶಸ್ತ್ರಾಸ್ತ್ರಗಳು, ಡ್ರೋನ್ಗಳು ಮತ್ತು ಹೆಲಿಕಾಪ್ಟರ್ಗಳನ್ನು ಬಳಸುವಂತೆ ನೇರ ಆದೇಶಗಳನ್ನು ನೀಡಿದ ಆರೋಪ ಶೇಖ್ ಹಸೀನಾ ಮೇಲಿದೆ.
ಕೊಲೆ, ಚಿತ್ರಹಿಂಸೆ, ನಾಪತ್ತೆ ಮತ್ತು ಸರ್ಕಾರಿ ಪಡೆಗಳು ನಡೆಸಿದ ಬೆಂಕಿ ಹಚ್ಚುವ ಕೃತ್ಯಗಳಿಗೆ ಹಸೀನಾ ಅವರೇ ಹೊಣೆ ಎಂದು ನ್ಯಾಯಾಲಯ ತೀರ್ಪು ನೀಡಿದೆ, ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಅವರು ವಿಫಲರಾಗಿದ್ದಾರೆ ಎಂದು ಗಮನಿಸಿದೆ. ಈ ದಾಳಿಗಳು “ನಾಗರಿಕ ಜನಸಮೂಹದ ವಿರುದ್ಧ ನಿರ್ದೇಶಿಸಲ್ಪಟ್ಟಿವೆ” ಮತ್ತು “ವ್ಯಾಪಕ ಹಾಗೂ ವ್ಯವಸ್ಥಿತ” ನಡೆದಿವೆ, ಇದು ಮಾನವೀಯತೆ ವಿರುದ್ಧದ ಅಪರಾಧಗಳ ಕಾನೂನು ವ್ಯಾಖ್ಯಾನಕ್ಕೆ ಸರಿಹೊಂದುತ್ತದೆ ಎಂದು ನ್ಯಾಯಮಂಡಳಿ ಹೇಳಿದೆ.
“ಆರೋಪಿ ಶೇಖ್ ಹಸೀನಾ ಅವರು ತಮ್ಮ ಪ್ರಚೋದನೆಯ ಆದೇಶದ ಮೂಲಕ ಮತ್ತು ಆರೋಪ 1 ರ ಅಡಿಯಲ್ಲಿ ತಡೆಗಟ್ಟುವ ಮತ್ತು ಶಿಕ್ಷಾರ್ಹ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ವಿಫಲರಾಗುವ ಮೂಲಕ ಮಾನವೀಯತೆ ವಿರುದ್ಧದ ಅಪರಾಧಗಳನ್ನು ಮಾಡಿದ್ದಾರೆ,” ಎಂದು ನ್ಯಾಯಮಂಡಳಿ ತಿಳಿಸಿದೆ.
ಪಕ್ಷಪಾತದ ತೀರ್ಪು: ಹಸೀನಾ ಹೇಳಿಕೆ
ಶೇಖ್ ಹಸೀನಾ ಅವರು ಈ ತೀರ್ಪನ್ನು ರಾಜಕೀಯ ಪ್ರೇರಿತ ಎಂದು ಹೇಳಿ ತಳ್ಳಿಹಾಕಿದ್ದಾರೆ. “ಪ್ರಜಾಪ್ರಭುತ್ವದ ಆದೇಶವಿಲ್ಲದ, ನ್ಯಾಯಮಂಡಳಿಯು ನೀಡಿರುವ ಈ ಆದೇಶವು ಪಕ್ಷಪಾತದಿಂದ ಕೂಡಿದ ಮತ್ತು ರಾಜಕೀಯ ಪ್ರೇರಿತ ತೀರ್ಪು,” ಎಂದು ಅವರು ಬಣ್ಣಿಸಿದ್ದಾರೆ.
“ಸಾಕ್ಷ್ಯಗಳನ್ನು ನ್ಯಾಯಯುತವಾಗಿ ಪರಿಗಣಿಸಬಹುದಾದ ಸರಿಯಾದ ನ್ಯಾಯಮಂಡಳಿಯಲ್ಲಿ ನನ್ನ ಮೇಲೆ ಆರೋಪ ಮಾಡಿದವರನ್ನು ಎದುರಿಸಲು ನಾನು ಹೆದರುವುದಿಲ್ಲ,” ಎಂದು ಅವರು ಹೇಳಿದ್ದಾರೆ. ಹಸೀನಾ ಮತ್ತು ಅವರ ಪಕ್ಷವು ಈ ನ್ಯಾಯಮಂಡಳಿಯನ್ನು “ಕಾಂಗರೂ ಕೋರ್ಟ್” ಎಂದು ಖಂಡಿಸಿದ್ದು, ಅವರನ್ನು ಪ್ರತಿನಿಧಿಸಲು ಸರ್ಕಾರಿ-ನೇಮಕದ ವಕೀಲರನ್ನು ನೇಮಿಸಿರುವುದನ್ನು ಟೀಕಿಸಿದೆ. ಢಾಕಾದಲ್ಲಿರುವ ಬಾಂಗ್ಲಾದೇಶದ ನ್ಯಾಯಮಂಡಳಿಯ ತೀರ್ಪನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲು ಅವಕಾಶವಿದೆ.
ಢಾಕಾದಲ್ಲಿ ಬಿಗಿ ಬಂದೋಬಸ್ತ್
ಸೋಮವಾರದ ತೀರ್ಪಿನ ಹಿನ್ನೆಲೆಯಲ್ಲಿ, ಹಸೀನಾ ಅವರು ತಮ್ಮ ಬೆಂಬಲಿಗರಿಗೆ “ಹೆದರಬೇಡಿ” ಎಂದು ಕರೆ ನೀಡಿದ್ದರು ಮತ್ತು ಬಂದ್ಗೆ ಕರೆ ಕೊಟ್ಟಿದ್ದರು. ಢಾಕಾ ಮತ್ತು ರಾಷ್ಟ್ರದಾದ್ಯಂತ ಭದ್ರತೆಯನ್ನು ಅಭೂತಪೂರ್ವ ಮಟ್ಟಕ್ಕೆ ಹೆಚ್ಚಿಸಲಾಗಿದ್ದು, ಸಾವಿರಾರು ಸೈನಿಕರು, ಅರೆಸೇನಾ ಪಡೆಗಳು ಮತ್ತು ಪೊಲೀಸರನ್ನು ನಿಯೋಜಿಸಲಾಗಿದೆ.
ಕಳೆದ ವಾರದಲ್ಲಿ ದೇಶಾದ್ಯಂತ ಸುಮಾರು 50 ವಾಹನಗಳಿಗೆ ಬೆಂಕಿ ಹಚ್ಚಿದ ಘಟನೆಗಳು ಮತ್ತು ಡಜನ್ಗಟ್ಟಲೆ ಬಾಂಬ್ ಸ್ಫೋಟಗಳ ನಂತರ, ಢಾಕಾ ಪೊಲೀಸ್ ಮುಖ್ಯಸ್ಥ ಶೇಖ್ ಮೊಹಮ್ಮದ್ ಸಜ್ಜತ್ ಅಲಿ ಅವರು ಬೆಂಕಿ ಹಚ್ಚಲು ಅಥವಾ ಕಚ್ಚಾ ಬಾಂಬ್ಗಳೊಂದಿಗೆ ದಾಳಿ ಮಾಡಲು ಪ್ರಯತ್ನಿಸುವ ಯಾರಾದರೂ ಕಂಡರೆ “ಗುಂಡು ಹಾರಿಸುವ” ಆದೇಶವನ್ನು ಹೊರಡಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ