ವಿಡಿಯೊ | 50 ವರ್ಷಗಳ ಹಿಂದೆ ಕಂಡಿದ್ದ ರಹಸ್ಯಮಯ ವಸ್ತು ನೆನಪಿಸಿದ ಈಗ ತೆಹ್ರಾನ್‌ ಆಕಾಶದಲ್ಲಿ ಕಂಡ ನಿಗೂಢ ವಸ್ತು !

ತೆಹ್ರಾನ್‌: ರಾತ್ರಿ ವೇಳೆ ಇರಾನ್‌ನ ರಾಜಧಾನಿ ತೆಹ್ರಾನ್‌ನ ಆಕಾಶದಲ್ಲಿ ಹಲವು ಬಣ್ಣಗಳ ಬೆಳಕು ಹೊತ್ತ ನಿಗೂಢ ವಸ್ತುವೊಂದು ಹಾರಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಈ ದೃಶ್ಯಗಳು ಆ ವಸ್ತು ಏನಿರಬಹುದು ಎಂಬ ಬಗ್ಗೆ ಹಲವು ಊಹಾಪೋಹಗಳಿಗೆ ಕಾರಣವಾಗಿವೆ.
ಸೆಪ್ಟೆಂಬರ್‌ 20ರಂದು ಈ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದ್ದು, ವಿಡಿಯೋದಲ್ಲಿ ಕಡಿಮೆ ಎತ್ತರದಲ್ಲಿ ಚಲಿಸುತ್ತಿರುವಂತೆ ಕಾಣುವ ಬೆಳಕಿನ ವಸ್ತು ಕಾಣಿಸುತ್ತದೆ. ‘ಎಕ್ಸ್‌’ನಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ವೊಂದರ ಪ್ರಕಾರ, ತೆಹ್ರಾನ್‌ನ ಅಜಾದೆಗನ್‌ ಎಕ್ಸ್‌ಪ್ರೆಸ್‌ವೇ ಬಳಿ ಈ ವಸ್ತು ಕಾಣಿಸಿಕೊಂಡಿದೆ.
ಆದರೆ, ಅದು ನಿಖರವಾಗಿ ಎಲ್ಲಿದೆ, ಎಷ್ಟು ಎತ್ತರದಲ್ಲಿ ಹಾರುತ್ತಿತ್ತು, ಅದರ ವೇಗ ಎಷ್ಟಿತ್ತು ಅಥವಾ ಅದರ ಗಾತ್ರ ಎಷ್ಟು ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಇರಾನ್‌ ಅಧಿಕಾರಿಗಳೂ ಈ ವಸ್ತು ಏನೆಂಬುದರ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಇದರಿಂದ ಯಾವುದೇ ಅಪಾಯವಿದೆ ಎಂಬ ಸೂಚನೆಯನ್ನೂ ಅಧಿಕಾರಿಗಳು ನೀಡಿಲ್ಲ. ಇರಾನ್‌, ಅಮೆರಿಕ ಮತ್ತು ಇಸ್ರೇಲ್‌ ನಡುವೆ ಉದ್ವಿಗ್ನತೆ ಹೆಚ್ಚಿರುವ ಸಂದರ್ಭದಲ್ಲೇ ಈ ವಿಡಿಯೋಗಳು ಹೊರಬಂದಿರುವುದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

ವಿಡಿಯೋಗಳು ವೈರಲ್‌ ಆದ ಬಳಿಕ ಆಕಾಶದಲ್ಲಿ ಕಾಣಿಸಿಕೊಂಡ ಬೆಳಕಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಚರ್ಚೆಗಳು ನಡೆಯುತ್ತಿವೆ. ಕೆಲವರು ಇದು ಮಿಲಿಟರಿ ಡ್ರೋನ್‌ ಆಗಿರಬಹುದು ಅಥವಾ ಹಲವು ಡ್ರೋನ್‌ಗಳು ಒಟ್ಟಿಗೆ ಹಾರುತ್ತಿರಬಹುದು ಎಂದು ಹೇಳಿದ್ದಾರೆ. ಇನ್ನು ಕೆಲವರು ದೂರದಿಂದ ನೋಡಿದಾಗ ಗಾಳಿಪಟ ಅಥವಾ ಬೇರೆ ಯಾವುದಾದರೂ ವಸ್ತು ಹೀಗೆ ಕಾಣಿಸಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ‘ಸೈಬರ್‌ ನ್ಯೂಸ್‌’ ಈ ರೀತಿಯ ಹಲವು ಊಹಾಪೋಹಗಳನ್ನು ವರದಿ ಮಾಡಿದೆ.
ಇದೇ ವೇಳೆ, ಸೆಪ್ಟೆಂಬರ್‌ 20ರಂದು ಇರಾನ್‌ ಮತ್ತು ಅಮೆರಿಕ ನಡುವೆ ಮತ್ತೊಮ್ಮೆ ಯುದ್ಧದ ಎಚ್ಚರಿಕೆಗಳು ಕೇಳಿಬಂದಿವೆ. ಇರಾನ್‌ ಮೇಲೆ ಮತ್ತೆ ದಾಳಿ ನಡೆದರೆ, ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಸೇನಾ ನೆಲೆಗಳು ಮತ್ತು ಅಮೆರಿಕದ ಆಸ್ತಿಗಳ ವಿರುದ್ಧ ಪ್ರತೀಕಾರದ ದಾಳಿ ನಡೆಸುವುದಾಗಿ ಇರಾನ್‌ ಸೇನೆ ಎಚ್ಚರಿಸಿದೆ ಎಂದು ರಾಯಿಟರ್ಸ್‌ ವರದಿ ಮಾಡಿದೆ.
ಪ್ರಾದೇಶಿಕ ಪರಿಸ್ಥಿತಿ ಹಿನ್ನೆಲೆಯಲ್ಲಿ ಅಮೆರಿಕದ ವಿದೇಶಾಂಗ ಇಲಾಖೆಯೂ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದೆ. ವಿಮಾನಗಳ ರದ್ದತಿ, ವಾಯುಪ್ರದೇಶ ಬಂದ್‌ ಸೇರಿದಂತೆ ಹಲವು ರೀತಿಯ ಪ್ರಯಾಣ ವ್ಯತ್ಯಯಗಳು ಉಂಟಾಗಬಹುದು ಎಂದು ತಿಳಿಸಿದೆ.

ಪ್ರಮುಖ ಸುದ್ದಿ :-   3 ಮಾಧ್ಯಮಗಳಿಗೆ ಶ್ವೇತಭವನ ಪ್ರವೇಶ ನಿಷೇಧಿಸಿದ್ದಕ್ಕೆ ಅಮೆರಿಕದ ಟಿವಿ ಜಾಲಗಳ ತಿರುಗೇಟು ; ಟ್ರಂಪ್ ಕಾರ್ಯಕ್ರಮಗಳ ಪ್ರಸಾರ ಬಹಿಷ್ಕಾರ

1976ರ ‘ಯುಎಫ್‌ಒ’ ಪ್ರಕರಣ ಮತ್ತೆ ನೆನಪು
ತೆಹ್ರಾನ್‌ ಆಕಾಶದಲ್ಲಿನ ಈ ಹೊಸ ವಿಡಿಯೋಗಳು 1976ರಲ್ಲಿ ನಡೆದಿದ್ದ ಪ್ರಸಿದ್ಧ ವೈಮಾನಿಕ ಘಟನೆಯನ್ನು ಮತ್ತೆ ನೆನಪಿಸಿವೆ. 1976ರ ಸೆಪ್ಟೆಂಬರ್‌ 19ರಂದು ತೆಹ್ರಾನ್‌ ಆಕಾಶದಲ್ಲಿ ಪ್ರಕಾಶಮಾನವಾದ ವಸ್ತುವೊಂದು ಕಾಣಿಸಿಕೊಂಡಿರುವುದಾಗಿ ಇರಾನ್‌ ಅಧಿಕಾರಿಗಳು ವರದಿ ಮಾಡಿದ್ದರು. ಅದನ್ನು ಪರಿಶೀಲಿಸಲು ಇರಾನ್‌ನ ಎಫ್‌-4 ಯುದ್ಧವಿಮಾನಗಳನ್ನು ಕಳುಹಿಸಲಾಗಿತ್ತು ಎಂದು ವರದಿಗಳು ಹೇಳುತ್ತವೆ. ಈ ಘಟನೆ ಬಳಿಕ ಯುಎಫ್‌ಒ ಕುರಿತು ಸಂಶೋಧನೆ ನಡೆಸುವವರಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.
ಈ ಘಟನೆಯ ಕುರಿತ ದಾಖಲೆಗಳು ಅಮೆರಿಕ ಸರ್ಕಾರದ ರಹಸ್ಯಮುಕ್ತ ದಾಖಲೆಗಳಲ್ಲೂ ಲಭ್ಯವಿವೆ. 1976ರಲ್ಲಿ ತೆಹ್ರಾನ್‌ನಲ್ಲಿ ಕಾಣಿಸಿಕೊಂಡ ವಸ್ತುವಿನ ಬಗ್ಗೆ ಅಧಿಕೃತವಾಗಿ ವರದಿ ಮಾಡಲಾಗಿತ್ತು ಮತ್ತು ತನಿಖೆಯನ್ನೂ ನಡೆಸಲಾಗಿತ್ತು ಎಂಬುದು ಈ ದಾಖಲೆಗಳಿಂದ ತಿಳಿದುಬರುತ್ತದೆ.
ಆದರೆ, 1976ರಲ್ಲಿ ಕಾಣಿಸಿಕೊಂಡ ವಸ್ತುವಿಗೂ ಇದೀಗ ತೆಹ್ರಾನ್‌ನಲ್ಲಿ ಚಿತ್ರೀಕರಿಸಲಾಗಿದೆ ಎನ್ನಲಾಗುತ್ತಿರುವ ಬೆಳಕುಗಳಿಗೂ ಯಾವುದೇ ಸಂಬಂಧವಿದೆ ಎಂಬುದಕ್ಕೆ ಸಾಕ್ಷ್ಯವಿಲ್ಲ.
ಇದೀಗ ವೈರಲ್‌ ಆಗಿರುವ ವಿಡಿಯೋಗಳನ್ನೂ ಸ್ವತಂತ್ರವಾಗಿ ಪರಿಶೀಲಿಸಿ ದೃಢಪಡಿಸಲಾಗಿಲ್ಲ. ಹೀಗಾಗಿ, ವಿಡಿಯೋದಲ್ಲಿರುವುದು ಅಪರಿಚಿತ ವಿಮಾನವೇ, ಮಿಲಿಟರಿ ಡ್ರೋನ್‌ವೇ ಅಥವಾ ಬೇರೆ ಯಾವುದಾದರೂ ಅಸಾಮಾನ್ಯ ವಸ್ತುವೇ ಎಂಬುದು ಸದ್ಯಕ್ಕೆ ಖಚಿತವಾಗಿಲ್ಲ.

ಪ್ರಮುಖ ಸುದ್ದಿ :-   3 ಮಾಧ್ಯಮಗಳಿಗೆ ಶ್ವೇತಭವನ ಪ್ರವೇಶ ನಿಷೇಧಿಸಿದ್ದಕ್ಕೆ ಅಮೆರಿಕದ ಟಿವಿ ಜಾಲಗಳ ತಿರುಗೇಟು ; ಟ್ರಂಪ್ ಕಾರ್ಯಕ್ರಮಗಳ ಪ್ರಸಾರ ಬಹಿಷ್ಕಾರ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement