ಸಮುದ್ರದ ಒಳಗೆ ಚೀನಾದ ಎಐ(AI) ಕ್ರಾಂತಿ ! ಸಮುದ್ರದಾಳದಲ್ಲಿ 2000 ಸರ್ವರ್‌ಗಳ ಹಸಿರು ಎಐ ಡೇಟಾ ಸೆಂಟರ್ ಆರಂಭಿಸಿದ ಚೀನಾ !!

ಬೀಜಿಂಗ್: ಜಾಗತಿಕವಾಗಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಉಂಟಾಗುತ್ತಿರುವ ವಿದ್ಯುತ್ ಅಭಾವದ ಸಮಸ್ಯೆಗೆ ಚೀನಾ ವಿಶಿಷ್ಟ ಪರ್ಯಾಯವೊಂದನ್ನು ಕಂಡುಕೊಂಡಿದೆ. ಸಮುದ್ರದ ಆಳದಲ್ಲಿ ಸೀಲ್ ಮಾಡಲಾದ ಸರ್ವರ್ ಮಾಡ್ಯೂಲ್‌ಗಳನ್ನು ಇರಿಸಿ, ಅಲ್ಲಿನ ತಂಪಾದ ನೀರನ್ನೇ ಬಳಸಿ ನಿಷ್ಕ್ರಿಯ ಕೂಲಿಂಗ್ (Passive Cooling) ವ್ಯವಸ್ಥೆಯ ಮೂಲಕ ಕಾರ್ಯನಿರ್ವಹಿಸುವ ವಿಶ್ವದ ಮೊದಲ ವಾಣಿಜ್ಯ ಬಳಕೆಯ ನೀರಿನ ಅಡಿಯ (underwater) ಡೇಟಾ ಸೆಂಟರ್ ಅನ್ನು ಚೀನಾ ಯಶಸ್ವಿಯಾಗಿ ಆರಂಭಿಸಿದೆ.
ಈ ಮಹತ್ವಾಕಾಂಕ್ಷಿ ಯೋಜನೆಯು ಕರಾವಳಿ ತೀರದ ಪವನ ವಿದ್ಯುತ್ (Offshore Wind) ಉತ್ಪಾದನೆ ಮತ್ತು ಸಮುದ್ರದಾಳದ ಕಂಪ್ಯೂಟಿಂಗ್ ಮೂಲಸೌಕರ್ಯವನ್ನು ಒಟ್ಟಿಗೆ ಜೋಡಿಸುವ ಮೂಲಕ ಜಾಗತಿಕ ಡಿಜಿಟಲ್ ಲೋಕದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದೆ.  ಈ ಯೋಜನೆಯನ್ನು ಪ್ರಮುಖವಾಗಿ AI ವರ್ಕ್‌ಲೋಡ್‌ಗಳು, ಕ್ಲೌಡ್ ಕಂಪ್ಯೂಟಿಂಗ್, ಬಿಗ್ ಡೇಟಾ ಪ್ರೊಸೆಸಿಂಗ್ ಮತ್ತು ಚೀನಾದ ದೇಶೀಯ ಬೃಹತ್ ಭಾಷಾ ಮಾದರಿಗಳ (LLM) ಅಭಿವೃದ್ಧಿಗಾಗಿ ವಿನ್ಯಾಸಗೊಳಿಸಲಾಗಿದೆ.
ಚೀನಾದ ಶಾಂಘೈನ ಲಿಂಗಾಂಗ್ ವಿಶೇಷ ವಲಯದ (Lingang Special Area) ಸಮುದ್ರದ ಮೇಲ್ಮೈಯಿಂದ ಸುಮಾರು 35 ಮೀಟರ್ ಆಳದಲ್ಲಿ ಈ ಡೇಟಾ ಸೆಂಟರ್ ಅನ್ನು ಸ್ಥಾಪಿಸಲಾಗಿದೆ. ಚೀನಾ ಟೆಲಿಕಾಂ ಮತ್ತು ಲಿಂಕ್‌ವೈಸ್ ಕಂಪನಿಗಳ ಜಿಪಿಯು (GPU) ಕ್ಲಸ್ಟರ್‌ಗಳು ಸೇರಿದಂತೆ ಸುಮಾರು 2,000 ಅತ್ಯಾಧುನಿಕ ಸರ್ವರ್‌ಗಳನ್ನು ಇದು ಒಳಗೊಂಡಿದೆ.
ಚೀನಾ ಸರ್ಕಾರಿ ಅಧಿಕಾರಿಗಳು ಮತ್ತು ಖಾಸಗಿ ಎಂಜಿನಿಯರಿಂಗ್ ಸಂಸ್ಥೆಯಾದ ‘ಹೈಕ್ಲೌಡ್ ಟೆಕ್ನಾಲಜಿ’ ಜಂಟಿಯಾಗಿ ಸುಮಾರು 226 ಮಿಲಿಯನ್ ಡಾಲರ್ (ಅಂದಾಜು ₹1,800 ಕೋಟಿಗೂ ಅಧಿಕ) ವೆಚ್ಚದಲ್ಲಿ ಈ ಬೃಹತ್ ಯೋಜನೆಯನ್ನು ಅಭಿವೃದ್ಧಿಪಡಿಸಿವೆ.  ಈ ಯೋಜನೆಯ ನಿರ್ಮಾಣ ಕಾರ್ಯವು 2025 ರಲ್ಲಿ ಪ್ರಾರಂಭವಾಗಿತ್ತು. ಈ ವರ್ಷದ ಆರಂಭದಲ್ಲಿ ಪ್ರಾಯೋಗಿಕ ಕಾರ್ಯಾಚರಣೆಗಳನ್ನು ನಡೆಸಲಾಗಿದ್ದು, ಮೇ 2026 ರಲ್ಲಿ ಅಧಿಕೃತವಾಗಿ ಪೂರ್ಣ ಪ್ರಮಾಣದ ವಾಣಿಜ್ಯ ಕಾರ್ಯಾಚರಣೆಯನ್ನು ಆರಂಭಿಸಿದೆ. ಆರಂಭದಲ್ಲಿ ಕೇವಲ 2.3 ಮೆಗಾವ್ಯಾಟ್ (MW) ಪ್ರಾಯೋಗಿಕ ಯೋಜನೆಯಾಗಿ ಆರಂಭವಾದ ಇದು, ಈಗ 24 ಮೆಗಾವ್ಯಾಟ್ (MW) ಸಾಮರ್ಥ್ಯದ ಪೂರ್ಣ ಪ್ರಮಾಣದ ವಾಣಿಜ್ಯ ಕಾರ್ಯಾಚರಣೆಯಾಗಿ ಮಾರ್ಪಟ್ಟಿದೆ.
ಸ್ಥಿರ ಸಮುದ್ರ ತಾಪಮಾನ ಮತ್ತು ತಂಪಾಗಿಸುವಿಕೆ (Cooling)
24-ಮೆಗಾವ್ಯಾಟ್ ಸಾಮರ್ಥ್ಯದ ಈ ಪ್ಲಾಂಟ್, ಕೃತಕ ಬುದ್ಧಿಮತ್ತೆ (AI) ಕೆಲಸಗಳು, 5G ಸೇವೆಗಳು ಮತ್ತು ಬೃಹತ್ ಪ್ರಮಾಣದ ಡೇಟಾ ಅನೋಟೇಶನ್ ಕಾರ್ಯಾಚರಣೆಗಳನ್ನು ನಿಭಾಯಿಸಲಿದೆ.
ಸಾಮಾನ್ಯವಾಗಿ ಭೂಮಿಯ ಮೇಲಿರುವ ಡೇಟಾ ಸೆಂಟರ್‌ಗಳು ಸರ್ವರ್‌ಗಳನ್ನು ತಂಪಾಗಿಸಲು ಬೃಹತ್ ಕೈಗಾರಿಕಾ ಕೂಲಿಂಗ್ ವ್ಯವಸ್ಥೆಗಳನ್ನು ಅವಲಂಬಿಸಿರುತ್ತವೆ. ಏಕೆಂದರೆ, ಹಗಲಿರುಳು ಕೆಲಸ ಮಾಡುವ ಜಿಪಿಯು ಕ್ಲಸ್ಟರ್‌ಗಳು ಅತಿಯಾದ ಶಾಖವನ್ನು ಉತ್ಪಾದಿಸುತ್ತವೆ. ಇದು ಪ್ರಸ್ತುತ ತಂತ್ರಜ್ಞಾನ ಲೋಕಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಆದರೆ, ಚೀನಾದ ಈ ಸಬ್-ಸೀ ಸೆಂಟರ್ ಒತ್ತಡ ನಿರೋಧಕ ಸರ್ವರ್ ಮಾಡ್ಯೂಲ್‌ಗಳನ್ನು ಹೊಂದಿದ್ದು, ಸುತ್ತಲಿನ ಸಮುದ್ರದ ಸ್ವಾಭಾವಿಕ ಸ್ಥಿರ ತಾಪಮಾನವನ್ನೇ ಬಳಸಿಕೊಂಡು ತಂಪಾಗುತ್ತದೆ.
ಹೈಕ್ಲೌಡ್ ಟೆಕ್ನಾಲಜಿ ಪ್ರಕಾರ, ಸರ್ವರ್‌ಗಳಿಂದ ಹೊರಹೊಮ್ಮುವ ಶಾಖವು ತಾಮ್ರದ ಪೈಪ್‌ಗಳ ಒಳಗಿರುವ ರೆಫ್ರಿಜರೆಂಟ್ ಅನ್ನು ದ್ರವದಿಂದ ಅನಿಲ ರೂಪಕ್ಕೆ ಬದಲಾಯಿಸುತ್ತದೆ. ಬಳಿಕ ಸುತ್ತಲಿನ ಸಮುದ್ರದ ನೀರು ‘ಹೀಟ್ ಎಕ್ಸ್‌ಚೇಂಜರ್’ ಮೂಲಕ ಈ ಶಾಖವನ್ನು ಹೀರಿಕೊಳ್ಳುತ್ತದೆ. ತದನಂತರ ರೆಫ್ರಿಜರೆಂಟ್ ಮತ್ತೆ ದ್ರವೀಕೃತಗೊಂಡು ಮರುಬಳಕೆಗೆ ಒಳಪಡುತ್ತದೆ.
ವಿದ್ಯುತ್ ಉಳಿತಾಯದಲ್ಲಿ ದಾಖಲೆ 
ಚೀನಾ ಮಾಧ್ಯಮಗಳ ವರದಿ ಪ್ರಕಾರ, ಈ ಅಂಡರ್‌ವಾಟರ್ ಸ್ಥಾವರವು 1.15 ಕ್ಕಿಂತ ಕಡಿಮೆ ಪವರ್ ಯೂಸೇಜ್ ಎಫೆಕ್ಟಿವ್‌ನೆಸ್ (PUE) ರೇಟಿಂಗ್ ಸಾಧಿಸಿದೆ. ಸಾಮಾನ್ಯವಾಗಿ ಜಾಗತಿಕವಾಗಿ ಈ ರೇಟಿಂಗ್ 1.5 ರಷ್ಟಿರುತ್ತದೆ. PUE ರೇಟಿಂಗ್ ಎಷ್ಟು ಕಡಿಮೆಯಿರುತ್ತದೆಯೋ, ಅಷ್ಟು ಹೆಚ್ಚು ವಿದ್ಯುತ್ ನೇರವಾಗಿ ಕಂಪ್ಯೂಟಿಂಗ್ ಕೆಲಸಗಳಿಗೆ ಬಳಕೆಯಾಗುತ್ತದೆ ಮತ್ತು ಕೂಲಿಂಗ್ ಅಥವಾ ಇತರೆ ನಿರ್ವಹಣಾ ವ್ಯವಸ್ಥೆಗಳಿಗೆ ವ್ಯರ್ಥವಾಗುವ ವಿದ್ಯುತ್ ಉಳಿತಾಯವಾಗುತ್ತದೆ.
ನವೀಕರಿಸಬಹುದಾದ ಇಂಧನದ ಬಳಕೆ
ಡಿಜಿಟಲ್ ಮೂಲಸೌಕರ್ಯದೊಂದಿಗೆ ನವೀಕರಿಸಬಹುದಾದ ಇಂಧನವನ್ನು ಸಂಯೋಜಿಸುವ ಚೀನಾದ ದೂರದೃಷ್ಟಿಗೆ ಈ ಪ್ರಾಜೆಕ್ಟ್ ಅತ್ಯುತ್ತಮ ಉದಾಹರಣೆಯಾಗಿದೆ. ಸಮುದ್ರದ ಮೇಲಿರುವ ಪವನ ವಿದ್ಯುತ್ ಸ್ಥಾವರಗಳಿಂದ (Offshore Wind Farms) ಉತ್ಪಾದನೆಯಾಗುವ ಹಸಿರು ವಿದ್ಯುತ್ ಅನ್ನು ಈ ಡೇಟಾ ಸೆಂಟರ್‌ಗೆ ನೇರವಾಗಿ ಬಳಸಲಾಗುತ್ತಿದ್ದು, ಇದು ಸಾಂಪ್ರದಾಯಿಕ ವಿದ್ಯುತ್ ಗ್ರಿಡ್‌ಗಳ ಮೇಲಿನ ಅವಲಂಬನೆಯನ್ನು ಗಣನೀಯವಾಗಿ ಕಡಿಮೆ ಮಾಡಿದೆ.
ಈ ನೀರೊಳಗಿನ ಡೇಟಾ ಸೆಂಟರ್ ಸಾಂಪ್ರದಾಯಿಕ ಕೇಂದ್ರಗಳಿಗಿಂತ ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ಹೇಳಲಾಗಿದೆ. ಇದು ವಿದ್ಯುತ್ ಬಳಕೆಯನ್ನು ಶೇಕಡಾ 22.8% ರಷ್ಟು ಕಡಿತಗೊಳಿಸುತ್ತದೆ. ಈ ತಂತ್ರಜ್ಞಾನವು ಶುದ್ಧ ನೀರು (Freshwater) ಬಳಕೆಯನ್ನು ಸಂಪೂರ್ಣವಾಗಿ ಇಲ್ಲವಾಗಿಸುತ್ತದೆ ಮತ್ತು ಭೂಮಿಯ ಅಗತ್ಯವನ್ನು 90% ಕ್ಕಿಂತ ಹೆಚ್ಚು ಕಡಿಮೆ ಮಾಡುತ್ತದೆ.
ಮೈಕ್ರೋಸಾಫ್ಟ್‌ನ ಹಿಂದಿನ ಪ್ರಯತ್ನಗಳು:
ಈ ಹಿಂದೆ ಅಮೆರಿಕದ ದೈತ್ಯ ತಂತ್ರಜ್ಞಾನ ಸಂಸ್ಥೆ ಮೈಕ್ರೋಸಾಫ್ಟ್ ತನ್ನ ‘ಪ್ರಾಜೆಕ್ಟ್ ನ್ಯಾಟಿಕ್’ (Project Natick) ಮೂಲಕ ಕ್ಯಾಲಿಫೋರ್ನಿಯಾ ಮತ್ತು ಸ್ಕಾಟ್‌ಲ್ಯಾಂಡ್ ಕರಾವಳಿಯಲ್ಲಿ ಇಂತಹ ಪ್ರಯೋಗಗಳನ್ನು ನಡೆಸಿತ್ತಾದರೂ, ನಂತರದ ದಿನಗಳಲ್ಲಿ ಅದರ ವಾಣಿಜ್ಯ ಅಭಿವೃದ್ಧಿಯನ್ನು ಸ್ಥಗಿತಗೊಳಿಸಿತ್ತು. ಆದಾಗ್ಯೂ, ಸಮುದ್ರದಾಳದ ಆಮ್ಲಜನಕ ರಹಿತ ಸೀಲ್ಡ್ ಪರಿಸರ ಮತ್ತು ಸ್ಥಿರ ತಾಪಮಾನದ ಕಾರಣದಿಂದಾಗಿ ಹಾರ್ಡ್‌ವೇರ್ ವೈಫಲ್ಯದ ಪ್ರಮಾಣ ಅತ್ಯಂತ ಕಡಿಮೆ ಇರುತ್ತದೆ ಎಂಬುದನ್ನು ಆ ಪ್ರಯೋಗಗಳು ಸಾಬೀತುಪಡಿಸಿದ್ದವು.
ಮುಂದಿರುವ ಎಂಜಿನಿಯರಿಂಗ್ ಸವಾಲುಗಳೇನು?
ಸಮುದ್ರದಾಳದ ಇಂತಹ ಬೃಹತ್ ಯೋಜನೆಗಳು ಹಲವು ಕಠಿಣ ಸವಾಲುಗಳನ್ನು ಎದುರಿಸಬೇಕಾಗುತ್ತದೆ.
ಉಪ್ಪುನೀರಿನ ಕಾರಣದಿಂದ ತುಕ್ಕು ಹಿಡಿಯುವಿಕೆ (Corrosion)ಯುವುದರಿಂದ  ಹಾರ್ಡ್‌ವೇರ್ ಅನ್ನು ಕಾಪಾಡಬೇಕಾಗುತ್ತದೆ.
ಸಮುದ್ರದಾಳದ ಕೇಬಲ್‌ಗಳ ದೀರ್ಘಕಾಲ ಬಾಳಿಕೆ ಬರುವಂತೆ ಉತ್ಪಾದನೆ ಮಾಡಬೇಕಾಗುತ್ತದೆ.
ಭೂಮಿಯ ಮೇಲಿನ ಸರ್ವರ್‌ಗಳಲ್ಲಿ ದೋಷ ಕಂಡುಬಂದರೆ ತಂತ್ರಜ್ಞರು ಕೆಲವೇ ನಿಮಿಷಗಳಲ್ಲಿ ಸರಿಪಡಿಸಬಹುದು. ಆದರೆ, ಸಮುದ್ರದಾಳದಲ್ಲಿ ತಾಂತ್ರಿಕ ದೋಷಗಳನ್ನು ಸರಿಪಡಿಸುವುದು ಅತ್ಯಂತ ಸಂಕೀರ್ಣ ಪ್ರಕ್ರಿಯೆ. ಹೀಗಾಗಿ ಇದರ ತುರ್ತು ನಿರ್ವಹಣೆ ಮಾಡುವುದು ಸವಾಲಿನ ಕೆಲಸವಾಗಿದೆ. ಈ ಕಾರಣಕ್ಕಾಗಿ ಆಪರೇಟರ್‌ಗಳು ಸಂಪೂರ್ಣವಾಗಿ ರಿಮೋಟ್ ಮಾನಿಟರಿಂಗ್ ತಂತ್ರಜ್ಞಾನಗಳು ಮತ್ತು ಹೆಚ್ಚುವರಿ ಬ್ಯಾಕ್-ಅಪ್ (Redundant) ಸೌಕರ್ಯಗಳನ್ನೇ ಅವಲಂಬಿಸಿದ್ದಾರೆ.
ಜಾಗತಿಕವಾಗಿ ಹೆಚ್ಚುತ್ತಿರುವ ಟ್ರೆಂಡ್
ಭೂಮಿಯ ಮೇಲಿನ ಸಂಪನ್ಮೂಲಗಳಿಗೆ ಧಕ್ಕೆಯಾಗದಂತೆ AI ಮೂಲಸೌಕರ್ಯಗಳನ್ನು ಬೆಳೆಸಲು ಜಗತ್ತಿನಾದ್ಯಂತ ಇಂತಹ ವಿನೂತನ ಪ್ರಯೋಗಗಳು ನಡೆಯುತ್ತಿವೆ. ಇತ್ತೀಚಿನ ವರದಿಗಳ ಪ್ರಕಾರ, ಪೀಟರ್ ಥೀಲ್ ಬೆಂಬಲಿತ ‘ಪ್ಯಾಂಥಲಾಸಾ’ (Panthalassa) ಎಂಬ ಸ್ಟಾರ್ಟ್-ಅಪ್ ಸಂಸ್ಥೆಯು ಅಲೆಗಳ ಶಕ್ತಿ (Wave Energy) ಮತ್ತು ಸಮುದ್ರದ ನೀರನ್ನು ಬಳಸಿ ಕಾರ್ಯನಿರ್ವಹಿಸುವ ತೇಲುವ ಡೇಟಾ ಸೆಂಟರ್‌ಗಳನ್ನು (Floating Data Centers) ಅಭಿವೃದ್ಧಿಪಡಿಸುತ್ತಿದೆ.
ಸಮುದ್ರದಾಳದ ಇಂತಹ ತಂತ್ರಜ್ಞಾನಗಳು ಕೂಲಿಂಗ್ ವೆಚ್ಚವನ್ನು ಗಣನೀಯವಾಗಿ ತಗ್ಗಿಸುತ್ತವೆಯಾದರೂ, ಇವುಗಳ ದೀರ್ಘಕಾಲೀನ ಬಾಳಿಕೆ ಮತ್ತು ಯಶಸ್ಸು ಹೇಗಿರಲಿದೆ ಎಂಬುದನ್ನು ಕಾಲವೇ ನಿರ್ಣಯಿಸಬೇಕಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement