ಮುಂಬೈ: ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಆರಂಭವಾದ ನಂತರ, ಸೌದಿ ಅರೇಬಿಯಾದಿಂದ ಕಚ್ಚಾ ತೈಲವನ್ನು ಹೊತ್ತು ತರುತ್ತಿರುವ ‘ಶೆನ್ಲಾಂಗ್ ಸೂಯೆಜ್‌ಮ್ಯಾಕ್ಸ್’ (Shenlong Suezmax) ಎಂಬ ತೈಲ ನೌಕೆಯು ಸದ್ಯ ಇರಾನ್ ದಾಳಿಗೆ ಒಳಗಾಗಿರುವ ಹಾರ್ಮುಜ್ ಜಲಸಂಧಿಯನ್ನು ದಾಟಿ ಮುಂಬೈ ಬಂದರನ್ನು ಸುರಕ್ಷಿತವಾಗಿ ತಲುಪಿದೆ. ಇರಾನ್ ಯುದ್ಧದ ಹಿನ್ನೆಲೆಯಲ್ಲಿ ಈ ಮಾರ್ಗದ ಮೂಲಕ ಭಾರತಕ್ಕೆ ಬಂದ ಮೊದಲ ನೌಕೆ ಇದಾಗಿದೆ.
ಲೈಬೀರಿಯಾ ಧ್ವಜ ಹೊಂದಿರುವ ಈ ನೌಕೆಯು ಮಾರ್ಚ್ 1 ರಂದು ಸೌದಿಯ ರಾಸ್ ತನುರಾ ಬಂದರಿನಿಂದ ಹೊರಟಿತ್ತು. ಬುಧವಾರ (ಮಾರ್ಚ್ 11) ಮಧ್ಯಾಹ್ನ 1 ಗಂಟೆಗೆ ಮುಂಬೈ ತಲುಪಿದ್ದು, ಸಂಜೆ 6:06 ಕ್ಕೆ ಜವಾಹರ್ ದ್ವೀಪದಲ್ಲಿ ಲಂಗರು ಹಾಕಿದೆ. ಈ ಹಡಗಿನಲ್ಲಿ 1,35,335 ಮೆಟ್ರಿಕ್ ಟನ್ ಕಚ್ಚಾ ತೈಲವಿದ್ದು, ಇದನ್ನು ಮುಂಬೈನ ಮಾಹುಲ್‌ನಲ್ಲಿರುವ ಶುದ್ಧೀಕರಣ ಘಟಕಗಳಿಗೆ ಪೂರೈಸಲಾಗುತ್ತದೆ.
ಅಥೆನ್ಸ್ ಮೂಲದ ಕಂಪನಿಯಿಂದ ನಿರ್ವಹಿಸಲ್ಪಡುತ್ತಿರುವ ಈ ಹಡಗಿನ ಕ್ಯಾಪ್ಟನ್ ಭಾರತೀಯರಾಗಿದ್ದಾರೆ. ಹಡಗಿನಲ್ಲಿ ಭಾರತೀಯರು ಸೇರಿದಂತೆ ಒಟ್ಟು 29 ಸಿಬ್ಬಂದಿಗಳಿದ್ದಾರೆ.
ಹಾರ್ಮುಜ್ ಜಲಸಂಧಿಯನ್ನು ದಾಟಿದ್ದು ಹೇಗೆ?
ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ನಿಯಂತ್ರಣದಲ್ಲಿರುವ ಹಾರ್ಮುಜ್ ಜಲಸಂಧಿಯನ್ನು ದಾಟುವಾಗ ಹಡಗು ತನ್ನ AIS (Automatic Identification System) ಟ್ರಾನ್ಸ್‌ಪಾಂಡರ್ ಅನ್ನು ಆಫ್ ಮಾಡಿತ್ತು. ಮಾರ್ಚ್ 8 ರಂದು ಕಣ್ಮರೆಯಾಗಿದ್ದ ಹಡಗು, ಜಲಸಂಧಿಯನ್ನು ದಾಟಿದ ನಂತರ ಮಾರ್ಚ್ 9 ರಂದು ಮತ್ತೆ ಟ್ರ್ಯಾಕಿಂಗ್ ವ್ಯವಸ್ಥೆಯಲ್ಲಿ ಕಾಣಿಸಿಕೊಂಡಿದೆ. ಯುದ್ಧದ ಸಮಯದಲ್ಲಿ ದಾಳಿಗಳಿಂದ ತಪ್ಪಿಸಿಕೊಳ್ಳಲು ಈ ತಂತ್ರ ಅನುಸರಿಸಲಾಗಿದೆ ಎಂದು ವರದಿಯಾಗಿದೆ.
ಭಾರತದ ಕ್ರಮ:
ಇರಾನ್‌ನ ನೌಕಾಪಡೆಯ ಕಮಾಂಡರ್ ಅಲಿರೆಜಾ ತಂಗ್ಸಿರಿ, “ಹಾರ್ಮುಜ್ ಜಲಸಂಧಿ ಮೂಲಕ ಹಾದುಹೋಗುವ ಹಡಗುಗಳು ಇರಾನ್‌ನ ಅನುಮತಿ ಪಡೆಯುವುದು ಕಡ್ಡಾಯ, ಇಲ್ಲದಿದ್ದರೆ ದಾಳಿ ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಸಿದ್ದಾರೆ. ಈಗಾಗಲೇ ಎಚ್ಚರಿಕೆ ನಿರ್ಲಕ್ಷಿಸಿದ ಎರಡು ಹಡಗುಗಳ ಮೇಲೆ ದಾಳಿ ನಡೆದಿರುವುದಾಗಿ ಇರಾನ್ ತಿಳಿಸಿದೆ.
ಈ ನಡುವೆ, ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿರುವ 28 ಭಾರತೀಯ ಧ್ವಜವಿರುವ ಹಡಗುಗಳ ಸುರಕ್ಷತೆಯನ್ನು ಕೇಂದ್ರ ಸರ್ಕಾರ ಸತತವಾಗಿ ಗಮನಿಸುತ್ತಿದೆ. ಶಿಪ್ಪಿಂಗ್ ಸಚಿವಾಲಯವು ಫೆಬ್ರವರಿ 28 ರಿಂದಲೇ 24 ಗಂಟೆಗಳ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿ ಹಡಗುಗಳ ಚಲನವಲನವನ್ನು ಮೇಲ್ವಿಚಾರಣೆ ಮಾಡುತ್ತಿದೆ.


ನಿಮ್ಮ ಕಾಮೆಂಟ್ ಬರೆಯಿರಿ