ವೀಡಿಯೊ..| ಇಸ್ರೇಲ್ ಪ್ರಧಾನಿ ಕಿಡ್ನ್ಯಾಪ್ ಮಾಡಿ ಎಂದು ಅಮೆರಿಕಕ್ಕೆ ಸೂಚಿಸಿದ ಪಾಕ್ ಸಚಿವ ; ಗಾಬರಿಬಿದ್ದು ಬ್ರೇಕ್‌ ತೆಗೆದುಕೊಂಡ ಟಿವಿ ನಿರೂಪಕ…!

ಇಸ್ಲಾಮಾಬಾದ್: ಗಾಜಾ ಮೇಲಿನ ಇಸ್ರೇಲ್ ದಾಳಿಯನ್ನು ಖಂಡಿಸುವ ಭರದಲ್ಲಿ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು “ಅಪಹರಿಸುವಂತೆ” ಕರೆ ನೀಡುವ ಮೂಲಕ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಜಿಯೋ ನ್ಯೂಸ್ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಖವಾಜಾ ಆಸಿಫ್, “ನೆತನ್ಯಾಹು ಮಾನವಕುಲದ ಅತಿದೊಡ್ಡ ಅಪರಾಧಿ. ಅಮೆರಿಕ ಮತ್ತು ಟರ್ಕಿ ದೇಶಗಳು ಅವರನ್ನು ಅಪಹರಿಸಿ ಶಿಕ್ಷಿಸಬೇಕು” ಎಂದು ಹೇಳಿದ್ದಾರೆ.
ಖ್ಯಾತ ನಿರೂಪಕ ಹಮೀದ್ ಮಿರ್ ಅವರೊಂದಿಗೆ ಮಾತನಾಡುತ್ತಿದ್ದ ಸಚಿವ ಖವಾಜಾ ಆಸಿಫ್ , ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (ICC) ನೆತನ್ಯಾಹು ವಿರುದ್ಧ ಹೊರಡಿಸಿರುವ ಬಂಧನ ವಾರಂಟ್ ಅನ್ನು ಉಲ್ಲೇಖಿಸಿ ಈ ಮಾತುಗಳನ್ನು ಆಡಿದ್ದಾರೆ. “ಅಮೆರಿಕವು ಮಾನವೀಯತೆಯ ಪರವಾಗಿದ್ದರೆ, ಕೂಡಲೇ ನೆತನ್ಯಾಹು ಅವರನ್ನು ಅಬ್ದಕ್ಟ್ (ಅಪಹರಣ) ಮಾಡಿ ವಿಚಾರಣೆಗೆ ಒಳಪಡಿಸಲಿ. ಕಳೆದ 4-5 ಸಾವಿರ ವರ್ಷಗಳಲ್ಲಿ ಇಸ್ರೇಲ್ ಪ್ಯಾಲೆಸ್ತೀನಿಯನ್ನರಿಗೆ ನೀಡಿದಷ್ಟು ಹಿಂಸೆಯನ್ನು ಯಾರೂ ನೀಡಿಲ್ಲ” ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ, ಒಂದು ವೇಳೆ ಟರ್ಕಿ ದೇಶವು ನೆತನ್ಯಾಹು ಅವರನ್ನು ಅಪಹರಿಸಿ ಅಂಕಾರಾಕ್ಕೆ ಕರೆತಂದರೆ, ಅದಕ್ಕಾಗಿ ಇಡೀ ಪಾಕಿಸ್ತಾನ ಪ್ರಾರ್ಥಿಸುತ್ತದೆ ಎಂದೂ ಅವರು ಹೇಳಿದ್ದಾರೆ.
ಲೈವ್ ಶೋನಲ್ಲಿ ಆತಂಕಗೊಂಡ ನಿರೂಪಕ!
ಸಂದರ್ಶನದ ವೇಳೆ ಖವಾಜಾ ಆಸಿಫ್ ಅವರು ಇಸ್ರೇಲ್‌ಗೆ ಬೆಂಬಲ ನೀಡುತ್ತಿರುವವರನ್ನು (ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಪರೋಕ್ಷವಾಗಿ ಉದ್ದೇಶಿಸಿ) ಶಿಕ್ಷಿಸಬೇಕು ಎಂದು ಹೇಳಲು ಮುಂದಾದಾಗ, ನಿರೂಪಕ ತಕ್ಷಣವೇ ಮಧ್ಯಪ್ರವೇಶಿಸಿ ಕಾರ್ಯಕ್ರಮಕ್ಕೆ ವಿರಾಮ (ಬ್ರೇಕ್‌) ತೆಗೆದುಕೊಂಡರು.
“ಖವಾಜಾ ಸಾಹೇಬರೇ, ನೀವು ಪಾಕಿಸ್ತಾನದ ರಕ್ಷಣಾ ಸಚಿವರಾಗಿರುವುದರಿಂದ ನಾನು ಇಲ್ಲಿ ಬ್ರೇಕ್‌ ತೆಗೆದುಕೊಳ್ಳುತ್ತೇನೆ.  ನಿಮ್ಮ ಮಾತುಗಳನ್ನು ಕೇಳಿದ ನಂತರ, ಅನೇಕ ಜನರು ನೀವು (ಅಮೆರಿಕ ಅಧ್ಯಕ್ಷ ಡೊನಾಲ್ಡ್) ಟ್ರಂಪ್ ಬಗ್ಗೆ ಮಾತನಾಡುತ್ತಿದ್ದೀರಿ ಎಂದು ಭಾವಿಸುತ್ತಾರೆ. ನೀವು ಯಾರ ಬಗ್ಗೆ ಮಾತನಾಡುತ್ತಿದ್ದೀರಿ ಎಂದು ನನಗೆ ತಿಳಿದಿಲ್ಲ ಆದರೆ ನಾನು ಬ್ರೇಕ್‌ ತೆಗೆದುಕೊಳ್ಳುತ್ತೇನೆ” ಎಂದು ಹೇಳಿ ನಿರೂಪಕರು ಪರಿಸ್ಥಿತಿ ನಿಭಾಯಿಸಿದರು.
ಜೆರುಸಲೆಮ್ ಪೋಸ್ಟ್ ಪ್ರಕಾರ, ವಿರಾಮದ ನಂತರ ಆಸಿಫ್ ಪ್ರಸಾರದಲ್ಲಿ ಇರುವುದಿಲ್ಲ ಎಂದು ಸುದ್ದಿ
ನಿರೂಪಕ ಹೇಳುವುದರೊಂದಿಗೆ ಈ ಭಾಗವು ಕೊನೆಗೊಂಡಿತು.
ಪಾಕಿಸ್ತಾನದ ಸಂಕಷ್ಟ
ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನವು ಅಮೆರಿಕದೊಂದಿಗೆ ಬಾಂಧವ್ಯ ಸುಧಾರಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ವಿಶೇಷವಾಗಿ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ನಂತರ ಡೊನಾಲ್ಡ್ ಟ್ರಂಪ್ ಅವರ ಮನ ಗೆಲ್ಲಲು ಪಾಕಿಸ್ತಾನದ ನಾಯಕರು ಹರಸಾಹಸ ಪಡುತ್ತಿದ್ದಾರೆ. ಇಂತಹ ಸಮಯದಲ್ಲಿ ರಕ್ಷಣಾ ಸಚಿವರ ಈ ಹೇಳಿಕೆಯು ಅಮೆರಿಕದ ಕೆಂಗಣ್ಣಿಗೆ ಗುರಿಯಾಗುವ ಆತಂಕವನ್ನು ಸೃಷ್ಟಿಸಿದೆ.
ಪಾಕಿಸ್ತಾನವು ಇಸ್ರೇಲ್ ಅನ್ನು ರಾಷ್ಟ್ರವೆಂದು ಮಾನ್ಯ ಮಾಡಿಲ್ಲ ಮತ್ತು ತನ್ನ ಪಾಸ್‌ಪೋರ್ಟ್‌ನಲ್ಲಿಯೂ ಇಸ್ರೇಲ್ ಪ್ರಯಾಣವನ್ನು ನಿರ್ಬಂಧಿಸಿದೆ. ಆದರೆ ಸಚಿವರು ನೀಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು “ಕಿಡ್ನ್ಯಾಪ್” ಹೇಳಿಕೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement