ಇಸ್ಲಾಮಾಬಾದ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿ ಮುಂದುವರಿದಿರುವ ಅಶಾಂತಿ ನಡುವೆ, ಇದುವರೆಗೆ ಹಲವಾರು ಮಂದಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ, ಜಂಟಿ ಅವಾಮಿ ಆಕ್ಷನ್ ಸಮಿತಿ (JAAC) ನಾಯಕ ಸರ್ದಾರ್ ಅಮನ್ ಖಾನ್ ಭಾರತ ಜತೆ ನಿಕಟ ಸಂಪರ್ಕ ಬೆಳೆಸುವಂತೆ ಜನತೆಗೆ ಮನವಿ ಮಾಡಿದ್ದಾರೆ.
ಪ್ರತಿಭಟನಾಕಾರರ ವಿರುದ್ಧ ಪಾಕಿಸ್ತಾನ ಸರ್ಕಾರ ವ್ಯಾಪಕ ದಮನ ಕಾರ್ಯಾಚರಣೆ ನಡೆಸಿದ ಬಳಿಕ ಪಾಕಿಸ್ತಾನ ಆಡಳಿತವು ಈ ಪ್ರದೇಶದ ಮೇಲೆ ಆರ್ಥಿಕ ದಿಗ್ಬಂಧನ ಹೇರಿದೆ ಎಂದು ಅವರು ಆರೋಪಿಸಿದ್ದಾರೆ. ಅಲ್ಲದೆ, ಭಾರತವು ತಮಗೆ ಮಾನವೀಯ ನೆರವು ಒದಗಿಸಬೇಕು ಹಾಗೂ ನಿಯಂತ್ರಣ ರೇಖೆ (LoC)ಯ ಗಡಿಯನ್ನು ತೆರೆಯಬೇಕು ಎಂದು ಒತ್ತಾಯಿಸಿದ್ದಾರೆ. ಪರಿಸ್ಥಿತಿ ಮತ್ತಷ್ಟು ಹದಗೆಟ್ಟರೆ ಜನರಿಗೆ ಭಾರತಕ್ಕೆ ತೆರಳುವ ಆಯ್ಕೆಯೂ ಇರಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
“ನಮಗೆ ಭಾರತದ ಸಹಾಯ ಬೇಕಾಗಿದೆ. ಇಲ್ಲಿ ಆಹಾರ ಸಾಮಗ್ರಿಗಳ ಕೊರತೆಯಿದ್ದು, ನಿಮ್ಮ ನೆರವು ಅಗತ್ಯವಾಗಿದೆ,” ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ವಿಡಿಯೊದಲ್ಲಿ ಅಮನ್ ಖಾನ್ ಹೇಳಿರುವುದು ಕೇಳಿಬಂದಿದೆ. ಭದ್ರತಾ ಪಡೆಗಳು ಪ್ರತಿಭಟನಾಕಾರರ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿರುವ ಪರಿಣಾಮ ಆಹಾರ ಮತ್ತು ಔಷಧಿಗಳ ಕೊರತೆ ಉಂಟಾಗಿದ್ದು, ಮಾನವೀಯ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂದು ಅವರು ಆರೋಪಿಸಿದ್ದಾರೆ.
ರಾವಲಕೋಟ್ನ ಈದ್ಗಾ ಮೈದಾನದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅಮನ್ ಖಾನ್, “ನಾವು ನಿಯಂತ್ರಣ ರೇಖೆಯತ್ತ ಸಾಗಬೇಕೇ?” ಎಂದು ಜನರನ್ನು ಪ್ರಶ್ನಿಸಿದರು. ಇದಕ್ಕೆ ನೆರೆದಿದ್ದ ಜನರು “ಮುಂದೆ ಸಾಗೋಣ” ಎಂದು ಘೋಷಣೆ ಕೂಗಿದರು. “ಜನರ ಬೇಡಿಕೆಗಳಿಗೆ ಸರ್ಕಾರ ಗುಂಡಿನ ಮೂಲಕ ಉತ್ತರಿಸಿದರೆ, ನಮ್ಮ ಮುಂದೆ ಬೇರೆ ದಾರಿಗಳೂ ಇವೆ” ಎಂದು ಅವರು ಎಚ್ಚರಿಕೆ ನೀಡಿದರು.
ಪೂಂಚ್ ಮತ್ತು ದೋಡಾ ವಲಯಗಳಲ್ಲಿಯೂ ನಿಯಂತ್ರಣ ರೇಖೆಯನ್ನು ತೆರೆಯುವಂತೆ ಅವರು ಆಗ್ರಹಿಸಿದರು. ಪಾಕಿಸ್ತಾನ ನಡೆಸುತ್ತಿರುವ ದಮನ ಕ್ರಮಗಳು ಅಲ್ಲಿನ ಜನರ ಸಂಕಷ್ಟವನ್ನು ಇನ್ನಷ್ಟು ಹೆಚ್ಚಿಸುತ್ತಿವೆ ಎಂದು ಅವರು ಆರೋಪಿಸಿದರು.
ಜೂನ್ 30ರಂದು ಅಮನ್ ಖಾನ್ ನಡೆಸಿದ ರ್ಯಾಲಿಯ ವಿಡಿಯೊ ಎಂದು ಹೇಳಲಾಗುತ್ತಿರುವ ದೃಶ್ಯಾವಳಿಯ ಸತ್ಯಾಸತ್ಯತೆಯನ್ನು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಿಲ್ಲ.
ಪಿಒಕೆಯಲ್ಲಿ ಹೆಚ್ಚುತ್ತಿರುವ ಅಶಾಂತಿ
ಕಳೆದ ತಿಂಗಳಿನಿಂದ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನ ಆಡಳಿತದ ವಿರುದ್ಧ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ. ಕಳೆದ ವಾರ ರಾವಲಕೋಟ್ನ ಈದ್ಗಾ ಮೈದಾನದಲ್ಲಿ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ “ಪಿಒಕೆ ಪಾಕಿಸ್ತಾನದ ಭಾಗವಲ್ಲ” ಮತ್ತು “ನಮಗೆ ಸ್ವಾತಂತ್ರ್ಯ ಬೇಕು” ಎಂಬ ಘೋಷಣೆಗಳು ಮೊಳಗಿದವು. ಆರಂಭದಲ್ಲಿ ಸ್ಥಳೀಯ ಸುಧಾರಣೆಗಳನ್ನು ಒತ್ತಾಯಿಸಿ ಆರಂಭಗೊಂಡಿದ್ದ ಪ್ರತಿಭಟನೆಗಳು ಈಗ ಪಾಕಿಸ್ತಾನದ ದೀರ್ಘಕಾಲದ ನಿಯಂತ್ರಣದಿಂದ ಹೊರಬರುವ ಸಂಪೂರ್ಣ ಸ್ವಾತಂತ್ರ್ಯದ ಬೇಡಿಕೆಯಾಗಿವೆ ಎಂದು ವರದಿಗಳು ಸೂಚಿಸಿವೆ.
ತಜ್ಞರ ಪ್ರಕಾರ, ಪಿಒಕೆನಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು ಅಲ್ಲಿನ ಜನತೆ ಮತ್ತು ಪಾಕಿಸ್ತಾನಕ್ಕೆ ಸಂಪೂರ್ಣ ಅಧೀನವಾಗಿರುವ ಅಧಿಕಾರವಿಲ್ಲದ (“ಟೂತ್ಲೆಸ್”) ಪ್ರಾದೇಶಿಕ ಆಡಳಿತದ ನಡುವಿನ ಆಳವಾದ ಅಂತರವನ್ನು ಬಹಿರಂಗಪಡಿಸಿದೆ.
ಜಂಟಿ ಅವಾಮಿ ಆಕ್ಷನ್ ಸಮಿತಿಯನ್ನು (JAAC) ನಿಷೇಧಿಸಿ, ಪ್ರತಿಭಟನೆಗಳನ್ನು ಹತ್ತಿಕ್ಕಲು ಪಾಕಿಸ್ತಾನ ಸೇನಾ ಬೆಂಬಲಿತ ಆಡಳಿತ ಮಾರಕ ಬಲಪ್ರಯೋಗ ನಡೆಸಿರುವುದು, ಅಲ್ಲಿನ ಹೆಚ್ಚುತ್ತಿರುವ ಅಸಮಾಧಾನವನ್ನು ಹತ್ತಿಕ್ಕುವ ಮಿಲಿಟರಿ ತಂತ್ರದ ಭಾಗವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಜೂನ್ 5ರಂದು ಪಾಕಿಸ್ತಾನ ಸರ್ಕಾರ ಜಂಟಿ ಅವಾಮಿ ಆಕ್ಷನ್ ಸಮಿತಿಯನ್ನು “ಭಯೋತ್ಪಾದಕ ಸಂಘಟನೆ” ಎಂದು ಘೋಷಿಸಿ ನಿಷೇಧಿಸಿದ ಬಳಿಕ ಪಿಒಕೆನಲ್ಲಿ ಅಶಾಂತಿ ಮತ್ತಷ್ಟು ತೀವ್ರಗೊಂಡಿದೆ. ಹಲವು ದಶಕಗಳಿಂದ ಪಾಕಿಸ್ತಾನದ ಪ್ರಮುಖ ರಾಜಕೀಯ ಪಕ್ಷಗಳು ಪಿಒಕೆ ಮತ್ತು ಪಾಕಿಸ್ತಾನ ಆಕ್ರಮಿತ ಗಿಲ್ಗಿತ್–ಬಾಲ್ಟಿಸ್ತಾನ್ (PoGB) ಪ್ರದೇಶಗಳಲ್ಲಿ ಆಡಳಿತ ನಡೆಸುತ್ತಿದ್ದು, ಸ್ಥಳೀಯ ರಾಜಕೀಯ ಸಂಘಟನೆಗಳ ಕಾರ್ಯಕ್ಷೇತ್ರವನ್ನು ಕ್ರಮೇಣ ಕುಂಠಿತಗೊಳಿಸುತ್ತಿವೆ ಎಂದು ‘ಇಂಟರ್ನ್ಯಾಷನಲ್ ಸೆಂಟರ್ ಫಾರ್ ಪೀಸ್ ಸ್ಟಡೀಸ್’ (International Centre for Peace Studies) ಇತ್ತೀಚಿನ ವರದಿಯಲ್ಲಿ ಉಲ್ಲೇಖಿಸಿದೆ.
ಆ ವರದಿಯ ಪ್ರಕಾರ, ಪಾಕಿಸ್ತಾನದಲ್ಲಿ ಯಾವ ಪಕ್ಷ ಅಧಿಕಾರದಲ್ಲಿರುತ್ತದೆಯೋ ಅದೇ ಪಕ್ಷವು ಪಿಒಕೆ ಹಾಗೂ ಪಾಕಿಸ್ತಾನ ಆಕ್ರಮಿತ ಗಿಲ್ಗಿತ್–ಬಾಲ್ಟಿಸ್ತಾನ್ನ ಚುನಾವಣೆಯಲ್ಲಿಯೂ ನಿರಂತರವಾಗಿ ಜಯ ಸಾಧಿಸುತ್ತ ಬಂದಿದೆ. ಇದು ಕೇವಲ ಕಾಕತಾಳೀಯ ಎಂದು ಹೇಳಲಾಗದು ಎಂದು ವರದಿ ಅಭಿಪ್ರಾಯಪಟ್ಟಿದೆ.


ನಿಮ್ಮ ಕಾಮೆಂಟ್ ಬರೆಯಿರಿ