ಗ್ರಂಥಾಲಯದಿಂದ ಸಾಲವಾಗಿ ಪಡೆದಿದ್ದ 1858ರಲ್ಲಿ ಪ್ರಕಟವಾದ ಅಪರೂಪದ ಪುಸ್ತಕವೊಂದು ಸುಮಾರು 150 ವರ್ಷಗಳ ಬಳಿಕ ಅದೇ ಗ್ರಂಥಾಲಯಕ್ಕೆ ಮರಳಿರುವ ಅಪರೂಪದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಗ್ರೀಕ್ ಪ್ರಾಚೀನ ಅವಶೇಷಗಳ ಕುರಿತ ‘Antiquities of Athens’ ಎಂಬ ಈ ಐತಿಹಾಸಿಕ ಪುಸ್ತಕವು ಆಸ್ಟ್ರೇಲಿಯಾದ ಕಿಯಾಮಾ ಸಾರ್ವಜನಿಕ ಗ್ರಂಥಾಲಯಕ್ಕೆ ಸುದೀರ್ಘ ಅವಧಿಯ ಬಳಿಕ ವಾಪಸ್ ಬಂದಿದೆ.
ಪುಸ್ತಕವನ್ನು ಇಷ್ಟು ವರ್ಷಗಳ ಕಾಲ ಹಿಂದಿರುಗಿಸದೇ ಇದ್ದ ಕಾರಣ, ಅಂದಿನ ನಿಯಮದ ಪ್ರಕಾರ ಲೆಕ್ಕ ಹಾಕಿದರೆ ಅದಕ್ಕೆ ವಿಧಿಸಬೇಕಿದ್ದ ತಡ ದಂಡದ ಮೊತ್ತ ಸುಮಾರು 28,000 ಆಸ್ಟ್ರೇಲಿಯನ್ ಡಾಲರ್ಗಳು (ಸುಮಾರು ₹18.7 ರಿಂದ ₹19 ಲಕ್ಷ) ಆಗುತ್ತದೆ ಎಂದು ಅಂದಾಜಿಸಲಾಗಿದೆ.
ಸುಮಾರು ಒಂದೂವರೆ ಶತಮಾನದ ವರೆಗೆ ಗ್ರಂಥಾಲಯಕ್ಕೆ ವಾಪಸ್ ಬಾರದೇ ಇದ್ದ ಈ ಅಪರೂಪದ ಪುಸ್ತಕ ಹಲವು ದಶಕಗಳ ಕಾಲ ಮನೆಯ ಬೆಂಕಿಗೂಡಿನ (ಫೈರ್ಪ್ಲೇಸ್) ಇಟ್ಟಿಗೆಯ ಹಿಂದೆ ಮುಚ್ಚಿಟ್ಟಿದ್ದ ಚಹಾ ಪೆಟ್ಟಿಗೆಯೊಳಗೆ ಸುರಕ್ಷಿತವಾಗಿ ಇತ್ತು. ಮನೆ ನವೀಕರಣದ ವೇಳೆ ಅದು ಪತ್ತೆಯಾಗಿದ್ದು, ಈ ಅಪರೂಪದ ಘಟನೆ ಈಗ ವ್ಯಾಪಕ ಗಮನ ಸೆಳೆದಿದೆ.
ಆಸ್ಟ್ರೇಲಿಯಾದ ಸಮುದ್ರ ತೀರದ ಕಿಯಾಮಾ ಪಟ್ಟಣದಲ್ಲಿ ಮನೆ ನವೀಕರಣ ನಡೆಸುತ್ತಿದ್ದ ವೇಳೆ ನಿವಾಸಿ ರಾಸ್ ಸಿಮನ್ಸ್ ಅವರಿಗೆ ಈ ಪುಸ್ತಕ ಸಿಕ್ಕಿದೆ. ಬೆಂಕಿಗೂಡನ್ನು ತೆರೆಯುವಾಗ ಅದರ ಹಿಂದೆ ಇಟ್ಟಿಗೆಯಿಂದ ಮುಚ್ಚಿದ್ದ ಚಹಾ ಪೆಟ್ಟಿಗೆಯೊಳಗೆ ಪುಸ್ತಕ ಪತ್ತೆಯಾಯಿತು. ಬಳಿಕ ಅವರು ಕಳೆದ ವಾರ ಅದನ್ನು ಕಿಯಾಮಾ ಸಾರ್ವಜನಿಕ ಗ್ರಂಥಾಲಯಕ್ಕೆ ಹಿಂತಿರುಗಿಸಿದ್ದಾರೆ ಎಂದು ಗ್ರಂಥಾಲಯದ ವ್ಯವಸ್ಥಾಪಕಿ ಮಿಶೆಲ್ ಹಡ್ಸನ್ ತಿಳಿಸಿದ್ದಾರೆ.
“ಇಷ್ಟು ವರ್ಷಗಳ ಬಳಿಕ ಪುಸ್ತಕವೊಂದು ಗ್ರಂಥಾಲಯಕ್ಕೆ ಹಿಂದಿರುಗಿ ಬಂದಿರುವುದು ಇದೇ ಮೊದಲು. ಸಾಮಾನ್ಯವಾಗಿ ಕಳೆದುಹೋದ ಪುಸ್ತಕಗಳು ಕೆಲ ದಶಕಗಳ ಬಳಿಕ ಸಿಗುತ್ತವೆ. ಆದರೆ ಇದು ಸುಮಾರು 150 ವರ್ಷಗಳ ನಂತರ ಮರಳಿದೆ” ಎಂದು ಮಿಶೆಲ್ ಹಡ್ಸನ್ ಹೇಳಿದ್ದಾರೆ.
ಈ ಪುಸ್ತಕವನ್ನು ತಮ್ಮ ಮುತ್ತಾತನ ಮುತ್ತಾತ ಜಾನ್ ಸಿಮನ್ಸ್ ಅವರು ಗ್ರಂಥಾಲಯದಿಂದ ಪಡೆದಿರಬಹುದು ಎಂದು ರಾಸ್ ಸಿಮನ್ಸ್ ಊಹಿಸಿದ್ದಾರೆ. “ಇದು ನನ್ನ ಊಹೆ ಮಾತ್ರ. ಗ್ರಂಥಾಲಯ ಆರಂಭವಾದ ಸಮಯದಲ್ಲಿ ನನ್ನ ಪೂರ್ವಜರು ಇದೇ ಮನೆಯಲ್ಲಿ ವಾಸಿಸುತ್ತಿದ್ದರು” ಎಂದು ಅವರು ತಿಳಿಸಿದ್ದಾರೆ.
1872ರಲ್ಲಿ ಸ್ಥಾಪನೆಯಾದ ಕಿಯಾಮಾ ಗ್ರಂಥಾಲಯದ ಆರಂಭಿಕ ಸಂಗ್ರಹದಲ್ಲಿದ್ದ 1858ರಲ್ಲಿ ಪ್ರಕಟವಾದ ‘Antiquities of Athens’ ಪುಸ್ತಕವು ಗ್ರಂಥಾಲಯ ಆರಂಭವಾದ ಕೆಲವೇ ವರ್ಷಗಳಲ್ಲಿ ಕಾಣೆಯಾಗಿರಬಹುದು ಎಂದು ಮಿಶೆಲ್ ಹಡ್ಸನ್ ಶಂಕಿಸಿದ್ದಾರೆ.
ಆ ಕಾಲದಲ್ಲಿ ಪುಸ್ತಕವನ್ನು ತಡವಾಗಿ ಹಿಂದಿರುಗಿಸಿದರೆ ವಾರಕ್ಕೆ ಮೂರು ಪೆನ್ಸ್ ದಂಡ ವಿಧಿಸಲಾಗುತ್ತಿತ್ತು. ಈ ನಿಯಮವನ್ನು ಪುಸ್ತಕದ ಒಳಪುಟದಲ್ಲೇ ಮುದ್ರಿಸಲಾಗಿತ್ತು. ಅದೇ ಲೆಕ್ಕದ ಪ್ರಕಾರ ಈಗ ದಂಡವನ್ನು ಲೆಕ್ಕ ಹಾಕಿದರೆ ಸುಮಾರು 28,000 ಆಸ್ಟ್ರೇಲಿಯನ್ ಡಾಲರ್ಗಳು (ಸುಮಾರು ₹18.7–19 ಲಕ್ಷ) ಆಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಆದರೆ, 1870ರ ದಶಕದ ಗ್ರಂಥಾಲಯದ ಸಾಲಗಾರರ ದಾಖಲೆಗಳು ಈಗ ಲಭ್ಯವಿಲ್ಲ. “ನಮ್ಮ ಬಳಿ ಒಂದು ಪ್ರಮುಖ ಕೊಂಡಿ ಕಳೆದುಹೋಗಿದೆ. ಈ ಪುಸ್ತಕವನ್ನು ಕೊನೆಯದಾಗಿ ಯಾರು ಪಡೆದಿದ್ದರು ಎಂಬುದಕ್ಕೆ ಯಾವುದೇ ದಾಖಲೆ ಇಲ್ಲ” ಎಂದು ಮಿಶೆಲ್ ಹಡ್ಸನ್ ತಿಳಿಸಿದ್ದಾರೆ.
ಆ ಕಾಲದ ಗ್ರಂಥಾಲಯದ ನಿಯಮಗಳ ಪ್ರಕಾರ, ಸಾಲವಾಗಿ ಪಡೆದ ಪುಸ್ತಕಗಳನ್ನು ಹಿಂದಿರುಗಿಸಿದರೆ ಹಾಗೂ ತಡವಾದರೆ ಅದಕ್ಕೆ ದಂಡವನ್ನು ಪಾವತಿಸಿದ ಬಳಿಕವೇ ಮತ್ತೊಮ್ಮೆ ಪುಸ್ತಕ ಪಡೆಯಲು ಅವಕಾಶವಿತ್ತು. “ಬಹುಶಃ ಇದೇ ಕಾರಣಕ್ಕೆ ಆ ವ್ಯಕ್ತಿ ಮತ್ತೆ ಗ್ರಂಥಾಲಯಕ್ಕೆ ಬರಲೇ ಇಲ್ಲವೋ!” ಎಂದು ಮಿಶೆಲ್ ಹಡ್ಸನ್ ಹಾಸ್ಯವಾಗಿ ಹೇಳಿದ್ದಾರೆ.
ಅಂದಿನ ಮತ್ತೊಂದು ಕುತೂಹಲಕಾರಿ ನಿಯಮವೆಂದರೆ, ಓದಲು ಬಲ್ಲ ಕನಿಷ್ಠ ಆರು ಸದಸ್ಯರಿರುವ ಕುಟುಂಬಗಳಿಗೆ ಮಾತ್ರ ಪುಸ್ತಕಗಳನ್ನು ನೀಡಲಾಗುತ್ತಿತ್ತು. ಅಲ್ಲದೆ, ಮದ್ಯದ ಅಮಲಿನಲ್ಲಿರುವವರಿಗೆ ಗ್ರಂಥಾಲಯದ ಸೇವೆಯನ್ನು ನಿರಾಕರಿಸಲಾಗುತ್ತಿತ್ತು.
ತಮ್ಮ ಪೂರ್ವಜರು ಪುಸ್ತಕವನ್ನು ಏಕೆ ಹಿಂದಿರುಗಿಸಲಿಲ್ಲ ಎಂಬುದು ತಿಳಿದಿಲ್ಲ ಎಂದು ರಾಸ್ ಸಿಮನ್ಸ್ ಹೇಳಿದ್ದಾರೆ. ಆದರೆ ಇಷ್ಟೊಂದು ವರ್ಷಗಳ ಬಳಿಕವೂ ದಂಡದ ಬಗ್ಗೆ ಯಾವುದೇ ಆತಂಕ ಇಲ್ಲ ಎಂದು 77 ವರ್ಷದ ಸಿಮನ್ಸ್ ಹಾಸ್ಯವಾಗಿ ಪ್ರತಿಕ್ರಿಯಿಸಿದ್ದಾರೆ.
ಇದೀಗ ಈ ಐತಿಹಾಸಿಕ ಪುಸ್ತಕವನ್ನು ಕಿಯಾಮಾ ಗ್ರಂಥಾಲಯದ ಸ್ಥಳೀಯ ಇತಿಹಾಸ ಸಂಗ್ರಹದಲ್ಲಿ ಶಾಶ್ವತವಾಗಿ ಸಂರಕ್ಷಿಸಲು ನಿರ್ಧರಿಸಲಾಗಿದೆ.
“ಈ ಪುಸ್ತಕವನ್ನು ಮತ್ತೆ ಯಾರಿಗೂ ಒಯ್ಯಲು ನೀಡುವುದಿಲ್ಲ. ಮತ್ತೊಂದು 150 ವರ್ಷ ಕಾಯುವ ಪರಿಸ್ಥಿತಿ ನಮಗೆ ಬೇಡ!” ಎಂದು ಮಿಶೆಲ್ ಹಡ್ಸನ್ ಹಾಸ್ಯ ಮಾಡಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ