ಹುಬೈ: ಚೀನಾದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಪ್ರಾಯೋಗಿಕ ಮ್ಯಾಗ್ಲೆವ್ ರೈಲು ( experimental maglev train) ಅತಿ ಕಡಿಮೆ ಅವಧಿಯಲ್ಲಿ ಅತ್ಯಂತ ವೇಗವನ್ನು ತಲುಪಿದ್ದು, ತನ್ನದೇ ದಾಖಲೆಯನ್ನು ಮತ್ತೊಮ್ಮೆ ಮುರಿದಿದೆ. ಕೇವಲ 5.3 ಸೆಕೆಂಡ್ಗಳಲ್ಲಿ ಶೂನ್ಯದಿಂದ ಅದು ಗಂಟೆಗೆ 800 ಕಿಲೋಮೀಟರ್ ವೇಗಕ್ಕೆ ತಲುಪುವ ಮೂಲಕ ನೂತನ ಸಾಧನೆ ಮಾಡಿದೆ. ಕಳೆದ ಆರು ತಿಂಗಳಲ್ಲಿ ಇದು ಮೂರನೇ ಬಾರಿಗೆ ತನ್ನವೇಗದ ದಾಖಲೆಯನ್ನು ದಾಖಲೆಯನ್ನು ತಾನೇ ಮುರಿದುಕೊಂಡಿದೆ.
ದಿ ಇಂಡಿಪೆಂಡೆಂಟ್ ವರದಿ ಪ್ರಕಾರ, ಸುಮಾರು 1.1 ಟನ್ ತೂಕದ ಈ ಪ್ರಾಯೋಗಿಕ ರೈಲನ್ನು ಚೀನಾದ ಹುಬೈ ಪ್ರಾಂತ್ಯದಲ್ಲಿರುವ ಡೋಂಗ್ಹು ಪ್ರಯೋಗಾಲಯದ 1 ಕಿಲೋ ಮೀಟರ್ ಉದ್ದದ ಪರೀಕ್ಷಾ ಹಳಿಯಲ್ಲಿ ಪರೀಕ್ಷಿಸಲಾಯಿತು. ಇದು ಸಾಮಾನ್ಯ ಪ್ರಯಾಣಿಕ ರೈಲಿನಂತೆ ಜನರನ್ನು ಸಾಗಿಸಲು ವಿನ್ಯಾಸಗೊಳಿಸಲಾಗಿಲ್ಲ. ಬದಲಿಗೆ, ರಾಕೆಟ್ ತಂತ್ರಜ್ಞಾನ, ಏರೋಸ್ಪೇಸ್ ಹಾಗೂ ಇತರ ಅತಿ ವೇಗದ ವ್ಯವಸ್ಥೆಗಳಲ್ಲಿ ಭವಿಷ್ಯದಲ್ಲಿ ಬಳಸಬಹುದಾದ ತಂತ್ರಜ್ಞಾನಗಳನ್ನು ಪರೀಕ್ಷಿಸಲು ಸಂಶೋಧಕರು ಇದನ್ನು ಬಳಸುತ್ತಿದ್ದಾರೆ.
ಘರ್ಷಣೆಯನ್ನು ಕಡಿಮೆ ಮಾಡುವ ಮ್ಯಾಗ್ಲೆವ್ ತಂತ್ರಜ್ಞಾನ
ಮ್ಯಾಗ್ಲೆವ್ ರೈಲುಗಳಲ್ಲಿ ಕಾಂತೀಯ ಶಕ್ತಿಯನ್ನು ಬಳಸಿಕೊಂಡು ವಾಹನವನ್ನು ಹಳಿಯಿಂದ ಸ್ವಲ್ಪ ಮೇಲಕ್ಕೆ ಎತ್ತಲಾಗುತ್ತದೆ. ಇದರಿಂದ ಸಾಮಾನ್ಯ ರೈಲುಗಳಲ್ಲಿ ಚಕ್ರ ಮತ್ತು ಹಳಿಯ ನಡುವೆ ಉಂಟಾಗುವ ಘರ್ಷಣೆಯ ಬಹುಪಾಲು ನಿವಾರಣೆಯಾಗುತ್ತದೆ. ಹಳಿಯಲ್ಲಿರುವ ವಿಶೇಷ ಕಾಯಿಲ್ಗಳು ಕಾಂತೀಯ ಕ್ಷೇತ್ರಗಳನ್ನು ಸೃಷ್ಟಿಸಿ ವಾಹನವನ್ನು ಮುಂದಕ್ಕೆ ಚಲಿಸುವಂತೆ ಮಾಡುತ್ತವೆ.
ಇತ್ತೀಚಿನ ಪರೀಕ್ಷೆಯಲ್ಲಿ ವಾಹನವು 5.3 ಸೆಕೆಂಡ್ಗಳಲ್ಲಿ 800 ಕಿಮೀ ವೇಗ ತಲುಪಿದ ಬಳಿಕ, ಅದನ್ನು ನಿಯಂತ್ರಿತವಾಗಿ ನಿಲ್ಲಿಸಲಾಯಿತು. ಸುಮಾರು 200 ಮೀಟರ್ಗಳ ಅಂತರದಲ್ಲಿ ವಾಹನವನ್ನು ಬ್ರೇಕ್ ಮಾಡಿ ನಿಲ್ಲಿಸಲಾಯಿತು. ಇಷ್ಟು ಭಾರೀ ವೇಗದಲ್ಲಿ ಚಲಿಸುವ ವಾಹನವನ್ನು ಸುರಕ್ಷಿತವಾಗಿ ನಿಧಾನಗೊಳಿಸುವ ಸಾಮರ್ಥ್ಯವನ್ನು ಪರೀಕ್ಷಿಸುವುದು ಈ ಪ್ರಯೋಗದ ಪ್ರಮುಖ ಉದ್ದೇಶವಾಗಿತ್ತು.
ಆರು ತಿಂಗಳಲ್ಲಿ ಮೂರನೇ ದಾಖಲೆ
ಈ ಪ್ರಾಯೋಗಿಕ ವಾಹನವು ಮೊದಲ ಬಾರಿಗೆ ಜೂನ್ 2025ರಲ್ಲಿ ಸುಮಾರು 650 ಕಿಮೀ ವೇಗವನ್ನು 7 ಸೆಕೆಂಡ್ಗಳಲ್ಲಿ ತಲುಪುವ ಮೂಲಕ ದಾಖಲೆ ನಿರ್ಮಿಸಿತ್ತು. ನಂತರ ಸಂಶೋಧಕರು ಅದರ ವೇಗವನ್ನು ಸುಮಾರು 700 ಕಿಮೀಗೆ ಹೆಚ್ಚಿಸಿದರು. ಬಳಿಕ 798 ಕಿಮೀ ವೇಗವನ್ನು ತಲುಪುವಲ್ಲಿಯೂ ಯಶಸ್ವಿಯಾದರು. ಪ್ರತಿ ಹಂತದಲ್ಲೂ ಗರಿಷ್ಠ ವೇಗವನ್ನು ಹೆಚ್ಚಿಸುವುದರ ಜೊತೆಗೆ, ಆ ವೇಗವನ್ನು ತಲುಪಲು ಬೇಕಾದ ಸಮಯವನ್ನೂ ಕಡಿಮೆ ಮಾಡಲಾಗಿದೆ. ಹಾಗೂ ಅದನ್ನು ನಿಖರವಾಗಿ ನಿಯಂತ್ರಿಸಲಾಗಿದೆ.
ಚೀನಾದ ಸರ್ಕಾರಿ ಪ್ರಸಾರ ಸಂಸ್ಥೆ ಸಿಸಿಟಿವಿ (CCTV) ಪ್ರಕಾರ, ಈ ಪರೀಕ್ಷೆಗಳಲ್ಲಿ ಹೆಚ್ಚಿನ ಸಾಮರ್ಥ್ಯದ ವಿದ್ಯುತ್ ಪೂರೈಕೆ, ವಿದ್ಯುತ್ಕಾಂತೀಯ ಪ್ರೊಪಲ್ಷನ್, ಅತಿ ವೇಗದ ಲೆವಿಟೇಶನ್ ನಿಯಂತ್ರಣ ಮತ್ತು ತುರ್ತು ಬ್ರೇಕಿಂಗ್ ಸೇರಿದಂತೆ ಹಲವು ಪ್ರಮುಖ ತಂತ್ರಜ್ಞಾನಗಳನ್ನು ಪರೀಕ್ಷಿಸಲಾಗುತ್ತಿದೆ.
ವಾಣಿಜ್ಯ ಮ್ಯಾಗ್ಲೆವ್ ರೈಲುಗಳಿಗಿಂತ ದುಪ್ಪಟ್ಟು ವೇಗ
ಪ್ರಯೋಗಾತ್ಮಕ ವಾಹನ ಸಾಧಿಸಿರುವ ವೇಗವು ಪ್ರಸ್ತುತ ವಾಣಿಜ್ಯ ಮ್ಯಾಗ್ಲೆವ್ ರೈಲುಗಳ ವೇಗಕ್ಕಿಂತ ಬಹಳ ಹೆಚ್ಚಾಗಿದೆ. ಚೀನಾ ಮತ್ತು ಜಪಾನ್ನ ಸಾಮಾನ್ಯ ವಾಣಿಜ್ಯ ಮ್ಯಾಗ್ಲೆವ್ ಸೇವೆಗಳು ಸಾಮಾನ್ಯವಾಗಿ ಗಂಟೆಗೆ ಸುಮಾರು 320 ಕಿಮೀ ವೇಗದಲ್ಲಿ ಸಂಚರಿಸುತ್ತವೆ. ಚೀನಾದ ಅತ್ಯಂತ ವೇಗದ ವಾಣಿಜ್ಯ ಹೈಸ್ಪೀಡ್ ರೈಲುಗಳು ಸುಮಾರು 350 ಕಿಮೀ ವೇಗ ತಲುಪಬಲ್ಲವು.
ಇದೇ ವೇಳೆ, ಚೀನಾದ ನ್ಯಾಷನಲ್ ಯೂನಿವರ್ಸಿಟಿ ಆಫ್ ಡಿಫೆನ್ಸ್ ಟೆಕ್ನಾಲಜಿಯ ಸಂಶೋಧಕರೂ ಅತಿ ವೇಗದ ಮ್ಯಾಗ್ಲೆವ್ ತಂತ್ರಜ್ಞಾನಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಪ್ರಯೋಗವೊಂದರಲ್ಲಿ ವಾಹನವು ಕೇವಲ 2 ಸೆಕೆಂಡ್ಗಳಲ್ಲಿ 697 ಕಿಮೀ ವೇಗ ತಲುಪಿದೆ ಎಂದು ವರದಿಯಾಗಿದೆ.
ಪ್ರಯಾಣಿಕರಿಗಾಗಿ ಇನ್ನೂ ಸಿದ್ಧವಾಗಿಲ್ಲ
ಆದರೆ, ಇದು ಗಮನ ಸೆಳೆಯುವಂತಿದ್ದರೂ, ಇಂತಹ ಪ್ರಾಯೋಗಿಕ ಮ್ಯಾಗ್ಲೆವ್ ವಾಹನಗಳು ಸದ್ಯಕ್ಕೆ ಪ್ರಯಾಣಿಕರನ್ನು ಸಾಗಿಸಲು ಸಿದ್ಧವಾಗಿಲ್ಲ. ಸಂಶೋಧಕರ ಮುಖ್ಯ ಉದ್ದೇಶ ಅತಿ ವೇಗದಲ್ಲಿ ವಾಹನವನ್ನು ವೇಗಗೊಳಿಸುವುದು, ಸ್ಥಿರವಾಗಿ ಲೆವಿಟೇಟ್ ಮಾಡುವುದು ಮತ್ತು ಸುರಕ್ಷಿತವಾಗಿ ನಿಲ್ಲಿಸುವ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದಾಗಿದೆ.
ಚೀನಾ ಇಂತಹ ತಂತ್ರಜ್ಞಾನವನ್ನು ಭವಿಷ್ಯದ ಅತಿ ವೇಗದ ಉಡಾವಣಾ ವ್ಯವಸ್ಥೆಗಳಲ್ಲಿ ಬಳಸುವ ಸಾಧ್ಯತೆಯನ್ನೂ ಪರಿಶೀಲಿಸುತ್ತಿದೆ. ಸಿಜಿಟಿಎನ್ (CGTN) ವರದಿ ಪ್ರಕಾರ, ರಾಕೆಟ್ಗಳು ಮತ್ತು ಯುದ್ಧವಿಮಾನಗಳಂತಹ ವ್ಯವಸ್ಥೆಗಳಿಗೆ ವೇಗದ ಉಡಾವಣಾ ತಂತ್ರಜ್ಞಾನವಾಗಿ ಇದನ್ನು ಬಳಸುವ ಪರಿಕಲ್ಪನೆಗಳ ಕುರಿತು ಸಂಶೋಧನೆ ನಡೆಯುತ್ತಿದೆ.
ಇದರ ಜೊತೆಗೆ, ಕಡಿಮೆ ಒತ್ತಡದ ಅಥವಾ ಬಹುತೇಕ ನಿರ್ವಾತ ಪರಿಸರ ಹೊಂದಿರುವ ವ್ಯಾಕ್ಯೂಮ್/ಲೋ-ಪ್ರೆಶರ್ ಟ್ಯೂಬ್ಗಳೊಳಗೆ ಅತ್ಯಂತ ವೇಗದಲ್ಲಿ ಸಂಚರಿಸುವ ರೈಲುಗಳ ಅಭಿವೃದ್ಧಿಯಲ್ಲಿಯೂ ಇದೇ ರೀತಿಯ ತಂತ್ರಜ್ಞಾನವನ್ನು ಬಳಸುವ ಸಾಧ್ಯತೆಗಳ ಕುರಿತು ವಿಶ್ವದ ವಿವಿಧ ಸಂಶೋಧನಾ ತಂಡಗಳು ಕೆಲಸ ಮಾಡುತ್ತಿವೆ.
ಆದರೆ ಪ್ರಯೋಗಾಲಯದ ಪರೀಕ್ಷೆಯಲ್ಲಿ 800 ಕಿಮೀ ವೇಗ ತಲುಪುವುದು ಮತ್ತು ಅದೇ ತಂತ್ರಜ್ಞಾನವನ್ನು ವಾಣಿಜ್ಯ ಸಾರಿಗೆಯಲ್ಲಿ ಅಳವಡಿಸುವುದು ಎರಡು ವಿಭಿನ್ನ ವಿಷಯಗಳಾಗಿವೆ. ಇಂತಹ ವ್ಯವಸ್ಥೆಗಳಿಗೆ ಬಹಳ ಉದ್ದದ ಮತ್ತು ಅತ್ಯಂತ ನಿಖರವಾಗಿ ಜೋಡಿಸಲಾದ ಹಳಿಗಳ ಅಗತ್ಯವಿರುತ್ತದೆ. ಅವುಗಳ ನಿರ್ಮಾಣ ಮತ್ತು ನಿರ್ವಹಣೆ ಅತ್ಯಂತ ದುಬಾರಿಯಾಗಬಹುದು.


ನಿಮ್ಮ ಕಾಮೆಂಟ್ ಬರೆಯಿರಿ