ದುಬೈನಲ್ಲಿ ಭಾನುವಾರ ನಡೆದ ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಚಾಂಪಿಯನ್ ಆದರೂ ಭಾರತದ ಕ್ರಿಕೆಟ್ ತಂಡವು ಪಾಕಿಸ್ತಾನದ ಸಚಿವರೂ ಆಗಿರುವ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಚೇರ್ಮನ್ ಅವರಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ ಘಟನೆ ನಡೆದಿದೆ. ಇದಕ್ಕೆ ಕಾರಣರಾದವರು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಹಾಗೂ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (PCB) ಮುಖ್ಯಸ್ಥರೂ ಆಗಿರುವ ಮೊಹ್ಸಿನ್ ನಕ್ವಿ.
ಸೂರ್ಯಕುಮಾರ ಯಾದವ್ ಅವರ ನಾಯಕತ್ವದ ಭಾರತೀಯ ತಂಡವು ಪಾಕಿಸ್ತಾನವನ್ನು ಎರಡು ವಾರಗಳೊಳಗೆ ಮೂರನೇ ಬಾರಿ ಸೋಲಿಸಿದೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಐದು ವಿಕೆಟ್‌ಗಳಿಂದ ಸೋಲಿಸಿ ಚಾಂಪಿಯನ್ ಆದ ಭಾರತ ತಂಡಕ್ಕೆ ಟ್ರೋಫಿ ವಿತರಣೆ ಮಾಡುವ ಸಮಾರಂಭ ನಡೆಯಬೇಕಾಗಿತ್ತು. ಆದರೆ, ತೀವ್ರ ತೆರನಾದ ಭಾರತದ ವಿರೋಧಿ ನಿಲುವಿಗೆ ಕುಖ್ಯಾತರಾದ ನಕ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ಭಾರತ ಸ್ಪಷ್ಟವಾಗಿ ನಿರಾಕರಿಸಿತು. ಪರಿಣಾಮ, ನಕ್ವಿ ವೇದಿಕೆಯಿಂದ ಟ್ರೋಫಿ ಜೊತೆ ಹೊರಟುಹೋದರು.
ಮೊಹ್ಸಿನ್ ನಕ್ವಿ ಎಸಿಸಿ (ACC) ಅಧ್ಯಕ್ಷರಾಗಿರುವುದಲ್ಲದೆ ಪಾಕಿಸ್ತಾನ ಗೃಹ ಸಚಿವರೂಆಗಿದ್ದಾರೆ. ಅವರು ತಮ್ಮ ತೀವ್ರ ಭಾರತ ವಿರೋಧಿ ನಿಲುವುಗಳಿಂದ ಗುರುತಿಸಿಕೊಂಡಿದ್ದಾರೆ. ಹಾಗೂ ಭಾರತದ ವಿರುದ್ಧ ಪದೇಪದೇ ಹರಿಹಾಯುತ್ತಲೇ ಇರುತ್ತಾರೆ.
ಟ್ರೋಫಿ ಪ್ರದಾನ ಸಮಾರಂಭ ಪ್ರಾರಂಭವಾಗುವ ಮೊದಲು ಭಾರಿ ಬಿಕ್ಕಟ್ಟು ಉಂಟಾಯಿತು. ಪಿಸಿಬಿ ಮುಖ್ಯಸ್ಥರಾದ ನಕ್ವಿ ಪ್ರಶಸ್ತಿಗಳನ್ನು ನೀಡಬೇಕಿದ್ದ ಇತರ ಗಣ್ಯರೊಂದಿಗೆ ಒಂದು ಗಂಟೆಗೂ ಹೆಚ್ಚು ಕಾಲ, ವೇದಿಕೆಯ ಮೇಲೆ ನಿಂತಿದ್ದರು. ಭಾರತೀಯ ತಂಡವು ಹತ್ತಿರದಲ್ಲಿ ನಿಂತಿತ್ತು ಮತ್ತು ಪಾಕಿಸ್ತಾನಿ ತಂಡವು ಡ್ರೆಸ್ಸಿಂಗ್ ಕೋಣೆಯಲ್ಲಿತ್ತು. ವರದಿಯ ಪ್ರಕಾರ, ಪಾಕಿಸ್ತಾನ ಸಚಿವರು ಟ್ರೋಫಿಯನ್ನು ಹಸ್ತಾಂತರಿಸುತ್ತಾರೆ ಎಂದು ಭಾರತೀಯರಿಗೆ ತಿಳಿಸಲಾಯಿತು ಮತ್ತು ಭಾರತದ ತಂಡವು ಅವರಿಂದ ಪ್ರಶಸ್ತಿ ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿತು. ಹಾಗೂ ನಿರೂಪಕರು ಪ್ರಕಟಣೆ ಮಾಡಿದರೂ ಭಾರತ ತಂಡದವರು ಟ್ರೋಫಿ ಸ್ವೀಕರಿಸಲು ಹೋಗಲಿಲ್ಲ.
ನಖ್ವಿ ವೇದಿಕೆ ಏರುತ್ತಿದ್ದಂತೆ, ಬಲವಂತವಾಗಿ ಟ್ರೋಫಿ ಪ್ರದಾನ ಮಾಡಲು ಮುಂದಾದರೆ ಭಾರತದ ತಂಡ ಟ್ರೋಫಿಯನ್ನು ಸ್ವೀಕರಿಸುವುದಿಲ್ಲ ಮತ್ತು ಅಧಿಕೃತವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರಿಗೆ ತಿಳಿಸಲಾಯಿತು. ನಂತರ ಇದ್ದಕ್ಕಿದ್ದಂತೆ, ಆಯೋಜಕರಲ್ಲಿ ಯಾರೋ ಒಬ್ಬರು ಟ್ರೋಫಿಯನ್ನು ಡ್ರೆಸ್ಸಿಂಗ್ ಕೋಣೆಯೊಳಗೆ ತೆಗೆದುಕೊಂಡು ಹೋದರು.
ಈ ವಿಚಿತ್ರ ಘಟನೆಗಳಿಗೆ ಪ್ರತಿಕ್ರಿಯಿಸಿರುವ ಬಿಸಿಸಿಐ, ನವೆಂಬರ್‌ನಲ್ಲಿ ನಡೆಯಲಿರುವ ಮುಂದಿನ ಐಸಿಸಿ (ICC) ಸಭೆಯಲ್ಲಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರು ಟ್ರೋಫಿಯನ್ನು ತೆಗೆದುಕೊಂಡು ಹೋಗಿದ್ದಕ್ಕಾಗಿ “ತೀವ್ರ ಆಕ್ಷೇಪ” ಸಲ್ಲಿಸುವುದಾಗಿ ಬಿಸಿಸಿಐ ಹೇಳಿದೆ.
ಏಷ್ಯಾ ಕಪ್ 2025ರ ಫೈನಲ್ ಪಂದ್ಯದಲ್ಲಿ ಭಾರತವು 5 ವಿಕೆಟ್‌ಗಳಿಂದ ಪಾಕಿಸ್ತಾನವನ್ನು ಸೋಲಿಸಿದೆ. ತೀವ್ರ ಹೋರಾಟದ ಪಂದ್ಯ ಕೊನೆಯ ಓವರಿಗೂ ಹೋಗಿದ್ದು, ತಿಲಕ್ ವರ್ಮಾ ಅವರ ಅಜೇಯ ಅರ್ಧಶತಕ ಮತ್ತು ಕುಲದೀಪ್ ಯಾದವ್ ಅವರ 4 ವಿಕೆಟ್‌ಗಳು ಭಾರತದ ಗೆಲುವಿಗೆ ಕಾರಣವಾದ ಪ್ರಮುಖ ಅಂಶಗಳಾಗಿವೆ.


ನಿಮ್ಮ ಕಾಮೆಂಟ್ ಬರೆಯಿರಿ