ಗಾಜಾ ಪಟ್ಟಿಯಲ್ಲಿ ಸಂಪೂರ್ಣ ಭೂ ದಾಳಿಗೆ ಇಸ್ರೇಲ್ ಸಜ್ಜಾಗುತ್ತಿರುವಾಗ, ಅವರು ಎದುರಿಸುತ್ತಿರುವ ದೊಡ್ಡ ಸವಾಲುಗಳೆಂದರೆ ಗಾಜಾದ ಅಡಿಯಲ್ಲಿ ಹಮಾಸ್ ನಿರ್ಮಾಣ ಮಾಡಿರುವ ವ್ಯಾಪಕ ಸುರಂಗ ಜಾಲ. ಭೂ ಆಕ್ರಮಣದಲ್ಲಿ, ಇಸ್ರೇಲ್ ಅದರ ವೈರಿ ಪ್ರಬಲವಾಗಿರುವ ಭೂಪ್ರದೇಶದಲ್ಲಿ ಶತ್ರುಗಳೊಂದಿಗೆ ಹೋರಾಡಬೇಕಾಗುತ್ತದೆ ಎಂದು ಹಲವಾರು ತಜ್ಞರು ಎಚ್ಚರಿಸಿದ್ದಾರೆ. ವ್ಯಾಪಕ ಸುರಂಗಗಳ ಜಾಲವನ್ನು ಹೊಂದಿರುವ ಗಾಜಾದ ಜನನಿಬಿಡ ಪ್ರದೇಶವು ಇಸ್ರೇಲ್‌ನ ಭದ್ರತಾ ಸವಾಲಿನ ಪ್ರಮುಖ ಅಂಶವಾಗಿದೆ. ಇಸ್ರೇಲ್ ರಕ್ಷಣಾ ಪಡೆಗಳ ವಕ್ತಾರರು ಗುರುವಾರ ಹಮಾಸ್‌ನ ಸುರಂಗ ಜಾಲದ ಭಾಗಗಳನ್ನು ವಾಯು ದಾಳಿಗಳ ಮೂಲಕ ನಾಶಪಡಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಆದರೆ ಅವರಿಗೂ ಈ ಬಗ್ಗೆ ಕಲ್ಪನೆಯಿದೆ ವೈರಿ ನೆಲ ಹೊಕ್ಕು ಭೂ ಯುದ್ಧ ನಡೆಸುವುದು ಸುಲಭವಾದ ಯುದ್ಧವಲ್ಲ ಎಂಬುದು.
ಹಮಾಸ್ ಸುರಂಗಗಳು: ‘ಗಾಜಾ ಮೆಟ್ರೋ’
2021 ರಲ್ಲಿ, ಇಸ್ರೇಲ್ ರಕ್ಷಣಾ ಪಡೆಗಳು ಹಮಾಸ್‌ನ 100 ಕಿಲೋಮೀಟರ್‌ಗಿಂತಲೂ ಹೆಚ್ಚು ಸುರಂಗ ಜಾಲಗಳನ್ನು ನಾಶಪಡಿಸಿದೆ ಎಂದು ಹೇಳಿಕೊಂಡಿತ್ತು. ಗಾಜಾದಲ್ಲಿನ ಸುರಂಗ ಜಾಲವು 500 ಕಿಮೀ ಉದ್ದವಿದ್ದು, ಕೇವಲ 5 ಪ್ರತಿಶತದಷ್ಟು ಮಾತ್ರ ನಾಶವಾಗಿದೆ ಎಂದು ಹಮಾಸ್ ನಾಯಕ ಯಾಹ್ಯಾ ಸಿನ್ವಾರ್ ಹೇಳಿಕೊಂಡಿದ್ದರು. ಈ ದೃಷ್ಟಿಕೋನದಿಂದ ಹೇಳುವುದಾದರೆ, ಇಡೀ ದೆಹಲಿ ಮೆಟ್ರೋ ಜಾಲವು ಸುಮಾರು 392 ಕಿ.ಮೀ ಉದ್ದವಿದೆ. ಮತ್ತು ಇದೇವೇಳೆ ದೆಹಲಿಯು ಗಾಜಾಕ್ಕಿಂತ ನಾಲ್ಕು ಪಟ್ಟು ದೊಡ್ಡದಾಗಿದೆ, ಇದು ಗಾಜಾ ಪಟ್ಟಿಯಲ್ಲಿರುವ ಭೂಗತ ಜಾಲವು ಎಷ್ಟು ವಿಸ್ತಾರವಾಗಿದೆ ಎಂಬುದನ್ನು ಸೂಚಿಸುತ್ತದೆ.
ನಾಗರಿಕ ಕಟ್ಟಡಗಳ ಗುರಿಯ ಬಗ್ಗೆ ಜಾಗತಿಕ ಟೀಕೆಗಳಿಗೆ ಪ್ರತಿಕ್ರಿಯಿಸಿರುವ ಇಸ್ರೇಲಿ ಪಡೆಗಳು ಹಮಾಸ್ ಕಾರ್ಯಕರ್ತರು ನಾಗರಿಕ ಕಟ್ಟಡಗಳ ಕೆಳಗಿನ ಸುರಂಗಗಳಲ್ಲಿ ಅಡಗಿಕೊಳ್ಳುತ್ತಾರೆ ಎಂದು ಪದೇ ಪದೇ ವಾದಿಸಿದ್ದಾರೆ. 2007 ರಲ್ಲಿ ಗಾಜಾ ಪಟ್ಟಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಾಗಿನಿಂದ, ನಗರದೊಳಗೆ ಮತ್ತು ಗಾಜಾ-ಇಸ್ರೇಲ್ ಗಡಿಯಾದ್ಯಂತ ಸುರಂಗ ಜಾಲಗಳನ್ನು ನಿರ್ಮಿಸಲು ಹಾಗೂ ವಿಸ್ತರಿಸುವತ್ತ ಹಮಾಸ್ ಕೆಲಸ ಮಾಡಿದೆ.
ಸುರಂಗ ಅಥವಾ ಟನೆಲ್ ನ ವಿಸ್ತಾರವಾದ ಜಾಲದಿಂದಾಗಿ, ಇಸ್ರೇಲಿ ಪಡೆಗಳು ಅದನ್ನು ಸುರಂಗಗಳನ್ನು ‘ಗಾಜಾ ಮೆಟ್ರೋ’ ಎಂದು ಉಲ್ಲೇಖಿಸುತ್ತವೆ. ಈ ಸುರಂಗಗಳ ಹಿಂದಿನ ವೀಡಿಯೊಗಳು ಒಳಗೆ ಅಳವಡಿಸಲಾಗಿರುವ ದೀಪಗಳು ಮತ್ತು ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಮರೆಮಾಡಿ ಇಡಲು ಬೇಕಾದ ಸಾಕಷ್ಟು ಸ್ಥಳವನ್ನು ತೋರಿಸುತ್ತವೆ. ಗೋಡೆಗಳನ್ನು ಸಿಮೆಂಟ್‌ನಿಂದ ಮಾಡಲಾಗಿದ್ದು, ಹಮಾಸ್ ನ ಕಾರ್ಯಚಟುವಟಿಕೆಗಳಿಗೆ ಮೂಲಸೌಕರ್ಯಗಳನ್ನು ನಿರ್ಮಿಸಲು ಗಾಜಾಕ್ಕೆ ವಿವಿಧ ದೇಶಗಳು ನೀಡುತ್ತಿರುವ ಮಾನವೀಯ ನೆರವನ್ನು ತಿರುಗಿಸಲಾಗಿದೆ ಎಂಬ ಆರೋಪವೂ ಇದೆ. ಯಾಕೆಂದರೆ ಗಾಜಾಪಟ್ಟಿಯ ಆಡಳಿತವು ಸದ್ಯ ಹಮಾಸ್‌ನ ಹಿಡಿತದಲ್ಲಿದೆ. ಹಾಗೂ 2016ರಿಂದ ಅಲ್ಲಿ ಚುನಾವಣೆಯೇ ನಡೆದಿಲ್ಲ. ನಡೆಯುವುದು ಹಮಾಸ್‌ಗಳಿಗೆ ಇಷ್ಟವೂ ಇಲ್ಲ..
ಅಕ್ಟೋಬರ್ 7 ರ ದಾಳಿಯಲ್ಲಿ ಸುರಂಗಗಳ ಪಾತ್ರ ಏನು..?
ಕಳೆದ ವಾರಾಂತ್ಯದಲ್ಲಿ ಇಸ್ರೇಲ್ ಗಡಿ ಪ್ರದೇಶದ ಒಳಗೆ ನಡೆದ ಹಮಾಸ್‌ನ ಆಘಾತಕಾರಿ ದಾಳಿಗಳು ಬೃಹತ್ ರಾಕೆಟ್ ದಾಳಿ ಮತ್ತು ಭೂ ಮತ್ತು ಜಲ ಮಾರ್ಗದ ಮೂಲಕ ಏಕಕಾಲದಲ್ಲಿ ನಡೆದ ದಾಳಿಯ ಸಂಯೋಜನೆಯಾಗಿದೆ. ಗಾಜಾದೊಂದಿಗಿನ ಇಸ್ರೇಲ್‌ನ ಗಡಿಯು ಬೇಲಿಯಿಂದ ಸುತ್ತುವರಿದಿದೆ ಮತ್ತು ಚಲನೆಯನ್ನು ಪತ್ತೆಹಚ್ಚಲು ಈ ಬೇಲಿಗಳು ಸಂವೇದಕಗಳನ್ನು ಹೊಂದಿವೆ. ಅಲ್ಲದೆ, ಹಮಾಸ್ ಇಸ್ರೇಲಿನ ನಾಗರಿಕರ ಮೇಲೆ ಹಠಾತ್ ದಾಳಿ ನಡೆಸುವ ಬಗ್ಗೆ ಯಾವುದೇ ಮುನ್ಸೂಚನೆ ಇರಲಿಲ್ಲ. ಇಸ್ರೇಲಿಯ ಹಬ್ಬದ ಸಮಯದಲ್ಲಿ ಹಮಾಸ್ ಕಾರ್ಯಕರ್ತರು ಯಾರಿಗೂ ಪತ್ತೆಯಾಗದೆ ಇಸ್ರೇಲ್‌ಗೆ ಪ್ರವೇಶಿಸುವಲ್ಲಿ ಈ ಸುರಂಗಗಳು ಪ್ರಮುಖ ಪಾತ್ರವಹಿಸಿವೆ ಎಂದು ನಂಬಲಾಗಿದೆ.
ಈಗ ಎದುರಾಗುವ ಪ್ರಶ್ನೆಯೆಂದರೆ ಗಾಜಾದೊಂದಿಗಿನ ಇಸ್ರೇಲ್‌ನ ಬೇಲಿಯು 30 ಅಡಿ ಎತ್ತರದಲ್ಲಿದೆ, ನೆಲದಡಿಯಲ್ಲಿ ಕಾಂಕ್ರೀಟ್ ತಡೆಗೋಡೆ ಇದೆ. ಹಮಾಸ್ ಕಾರ್ಯಕರ್ತರು ಬೇಲಿ ಮತ್ತು ತಡೆಗೋಡೆಯ ಕೆಳಗೆ ಸುರಂಗಗಳನ್ನು ತೋಡಿದ ಹೊರತು ಯಾರಿಗೂ ಪತ್ತೆಯಾಗದೆ ಇಸ್ರೇಲ್ ಅನ್ನು ಹೇಗೆ ಪ್ರವೇಶಿಸಿದರು ಎಂಬುದು..? ಗಾಜಾ ನಗರದೊಳಗಿನ ಅತ್ಯಾಧುನಿಕ ಸುರಂಗಗಳ ಹೊರತಾಗಿ ಗಡಿಯಾಚೆಗಿನ ಸುರಂಗಗಳು ಭೂ ಆಕ್ರಮಣದ ಸಮಯದಲ್ಲಿ ಮಹತ್ವದ್ದಾಗಿದೆ ಎಂದು ರೀಚ್‌ಮನ್ ವಿಶ್ವವಿದ್ಯಾಲಯದ ಅಧ್ಯಾಪಕ ಸದಸ್ಯ ಡಾ.ಡಾಫ್ನೆ ರಿಚೆಮಂಡ್-ಬರಾಕ್ ಬಿಬಿಸಿಗೆ ತಿಳಿಸಿದ್ದಾರೆ. “ಕ್ರಾಸ್ ಬಾರ್ಡರ್ ಸುರಂಗಗಳು ಮೂಲಭೂತವಾಗಿರುತ್ತವೆ, ಅಂದರೆ ಅವುಗಳು ಯಾವುದೇ ಕೋಟೆ ಹೊಂದಿಲ್ಲ. ಹಾಗೂ ಅವುಗಳನ್ನು ಒಂದು-ಬಾರಿಯ ಉದ್ದೇಶಕ್ಕಾಗಿ ಅಗೆಯಲಾಗುತ್ತದೆ – ಆ ಉದ್ದೇಶ ಇಸ್ರೇಲಿ ಪ್ರದೇಶವನ್ನು ಆಕ್ರಮಿಸುವುದು” ಎಂದು ಅವರು ಹೇಳುತ್ತಾರೆ.
ಒಳಗಿನ ಸುರಂಗಗಳು, “ಉದ್ದವಾದ ಸುರಂಗವಾಗಿದೆ, ಅಲ್ಲಿ ನಿರಂತರವಾಗಿ ಇರಬಹುದಾದ ರೀತಿಯಲ್ಲಿ ಸಜ್ಜುಗೊಂಡಿವೆ” ಎಂದು ಅನೇಕರು ಭಾವಿಸಿದ್ದಾರೆ. ” ಹಮಾಸ್ ನಾಯಕರು ಅಲ್ಲಿ ಅಡಗಿಕೊಂಡಿದ್ದಾರೆ, ಅವರು ಅಲ್ಲಿ ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರಗಳನ್ನು ಹೊಂದಿದ್ದಾರೆ, ಅವರು ಅವುಗಳನ್ನು ಸಾರಿಗೆ ಮತ್ತು ಸಂವಹನ ಮಾರ್ಗಗಳಿಗಾಗಿ ಬಳಸುತ್ತಾರೆ” ಎಂದು ಕೆಲವರು ನಂಬುತ್ತಾರೆ.
ಗಾಜಾ ಸುರಂಗಗಳ ಇತಿಹಾಸ
ಹಮಾಸ್ ಗಾಜಾ ಪಟ್ಟಿಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಮೊದಲು, ಸುರಂಗ ಜಾಲವನ್ನು ಕಳ್ಳಸಾಗಣೆಗಾಗಿ ಬಳಸಲಾಗುತ್ತಿತ್ತು. 2005 ರಲ್ಲಿ ಇಸ್ರೇಲ್ ಗಾಜಾದಿಂದ ನಿರ್ಗಮಿಸಿದ ನಂತರ ಮತ್ತು ಹಮಾಸ್ 2006 ರ ಚುನಾವಣೆಯನ್ನು ಗೆದ್ದ ನಂತರ, ಇಸ್ರೇಲ್ ಮತ್ತು ಈಜಿಪ್ಟ್ ಗಾಜಾದೊಂದಿಗಿನ ತಮ್ಮ ಗಡಿಯುದ್ದಕ್ಕೂ ಸರಕು ಮತ್ತು ಜನರ ಚಲನೆಯನ್ನು ನಿರ್ಬಂಧಿಸಲು ಪ್ರಾರಂಭಿಸಿದವು.
ಗಡಿಯನ್ನು ನಿರ್ಬಂಧಿಸಿದ ಕಾಋಣ ಕಾಲಾನಂತರದಲ್ಲಿ ಕಳ್ಳಸಾಗಣೆ ಈ ಸುರಂಗ ಮಾರ್ಗಗಳು ಮಹತ್ವ ಕಳೆದುಕೊಳ್ಳಲು ಆರಂಭಿಸಿದವು. ಈಜಿಪ್ಟ್ ತನ್ನ ಭಾಗದ ಗಾಜಾದ ಗಡಿಯುದ್ದಕ್ಕೂ ಇದ್ದ ಸುರಂಗಗಳನ್ನು ನಾಶಪಡಿಸಿತು. ಆದಾಗ್ಯೂ, ಇಸ್ರೇಲ್‌ಗೆ ಸುರಂಗಗಳನ್ನು ವಿಸ್ತರಿಸಲಾಯಿತು ಮತ್ತು ಹೆಚ್ಚು ಹೆಚ್ಚು ದಾಳಿಗಳಿಗಾಗಿ ಬಳಸಲು ಪ್ರಾರಂಭಿಸಲಾಯಿತು. 2006 ರಲ್ಲಿ, ಇಸ್ರೇಲಿ ಸೈನಿಕ ಗಿಲಾಡ್ ಶಾಲಿದ್ ಸೆರೆಹಿಡಿಯಲ್ಪಟ್ಟ ಮತ್ತು ಅವನ ಇಬ್ಬರು ಸಹೋದ್ಯೋಗಿಗಳು ಸುರಂಗಗಳ ಮೂಲಕ ನಡೆದ ಗಡಿಯಾಚೆಗಿನ ದಾಳಿಯಲ್ಲಿ ಕೊಲ್ಲಲ್ಪಟ್ಟರು. ಖೈದಿಗಳ ವಿನಿಮಯ ಒಪ್ಪಂದದ ಅಡಿಯಲ್ಲಿ ಆತನನ್ನು ಬಿಡುಗಡೆ ಮಾಡುವ ಮೊದಲು ಹಮಾಸ್ ಎರಡು ವರ್ಷಗಳ ಕಾಲ ಸೈನಿಕನನ್ನು ಹಿಡಿದಿಟ್ಟುಕೊಂಡಿತು.
ನಂತರದ ವರ್ಷಗಳಲ್ಲಿ, ಇಸ್ರೇಲಿಯು ಸುರಂಗಗಳನ್ನು “ಭಯೋತ್ಪಾದಕ ಸುರಂಗಗಳು” ಎಂದು ಉಲ್ಲೇಖಿಸಲು ಪ್ರಾರಂಭಿಸಿತು ಮತ್ತು ಗಾಜಾ ಪಟ್ಟಿಯೊಳಗೆ ನಿರ್ಮಾಣ ಸಾಮಗ್ರಿಗಳ ಪ್ರವೇಶವನ್ನು ನಿರ್ಬಂಧಿಸಿತು. 2014 ರಲ್ಲಿ, ಇಸ್ರೇಲ್ ರಕ್ಷಣಾ ಪಡೆಗಳು ಬಿಡುಗಡೆ ಮಾಡಿದ ಚಿತ್ರಣವು ಗಡಿಯುದ್ದಕ್ಕೂ ಅನೇಕ ಸುರಂಗಗಳನ್ನು ತೋರಿಸಿದೆ.
ಭೂ ದಾಳಿಯಲ್ಲಿ ಈ ಸುರಂಗಗಳ ಕಾರ್ಯ…
ತಾನು ಭೂ ದಾಳಿಗೆ ಸಿದ್ಧವಾಗುತ್ತಿದ್ದಂತೆ, ಹಮಾಸ್ ಕಾರ್ಯಕರ್ತರು ಒತ್ತೆಯಾಳಗಿ ಹಿಡಿದಿಟ್ಟುಕೊಂಡಿರುವ 150ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಬಿಡುಗಡೆ ಮಾಡುವುದನ್ನು ಖಚಿತಪಡಿಸಿಕೊಳ್ಳುವುದು ಇಸ್ರೇಲ್‌ನ ಪ್ರಮುಖ ಕಾಳಜಿ ಹಾಗೂ ಉದ್ದೇಶವಾಗಿದೆ. ಒತ್ತೆಯಾಳುಗಳನ್ನು ನೆಲದಡಿಯಲ್ಲಿ ಈ ಸುರಂಗಗಳಲ್ಲಿ ಇರಿಸಿರುವ ಸಾಧ್ಯತೆಯಿದೆ ಎಂದು ಇಸ್ರೇಲಿ ಭದ್ರತಾ ಮೂಲವೊಂದು ಸುದ್ದಿ ಸಂಸ್ಥೆ ರಾಯಿಟರ್ಸ್‌ಗೆ ತಿಳಿಸಿದೆ.
ಹೆಚ್ಚಿನ ಟಾರ್ಗೆಟ್‌ಗಳು, ಜನರು, ವಿವಿಧ ಉಪಕರಣಗಳು, ಲಾಜಿಸ್ಟಿಕ್ಸ್ ಭೂಮಿ ಅಡಿಯಲ್ಲಿ ನೆಲೆಗೊಂಡಿವೆ ಮತ್ತು ಒತ್ತೆಯಾಳುಗಳು ನೆಲದಡಿಯಲ್ಲಿ ನೆಲೆಗೊಂಡಿರುವ ಸಾಧ್ಯತೆಯಿದೆ. ಹೀಗಾಗಿ ಇಸ್ರೇಲಿ ಸೇನೆಯ ಉದ್ದೇಶವು ಈ ಸುರಂಗ ಮಾರ್ಗಗಳನ್ನು ಹಾಳು ಮಾಡುವುದು, ನಂತರ ಭೂಗತ ಬಂಕರ್ ಗಳಿಗೆ ಹೋಗಲು ಸೇನೆಗೆ ಸಾಧ್ಯವಾಗುತ್ತದೆ” ಎಂದು ಮೂಲಗಳು ತಿಳಿಸಿವೆ. ಇಸ್ರೇಲ್ ಪಡೆಗಳು ಬಂಕರ್ ಬಸ್ಟರ್ ಬಾಂಬ್‌ಗಳು ಮತ್ತು ಅದರ ಮರ್ಕವಾ ಟ್ಯಾಂಕ್‌ಗಳನ್ನು ಅವಲಂಬಿಸಿದ್ದರೂ, ಅದು ಬೂಬಿ ಟ್ರ್ಯಾಪ್‌ಗಳನ್ನು ಮತ್ತು ಗಾಜಾಪಟ್ಟಿಯಲ್ಲಿ ಇರುವ ಭೂಗತ ಬಂಕರ್‌ಗಳು ಹಾಗೂ ಸುರಂಗ ಮಾರ್ಗಗಳ ಬಗ್ಗೆ ಚೆನ್ನಾಗಿ ತಿಳಿದಿರುವ ಮತ್ತು ಅದನ್ನು ದಾಳಿ ಮಾಡಲು, ಅಡಗಿಕೊಳ್ಳಲು ಮತ್ತು ತಪ್ಪಿಸಿಕೊಳ್ಳಲು ಬಳಸುವ ಬಗ್ಗೆ ಸಂಪೂರ್ಣ ತಿಳಿದಿರುವ ಹಮಾಸ್ ಕಾರ್ಯಕರ್ತರನ್ನು ನಿಭಾಯಿಸಬೇಕಾಗುತ್ತದೆ. ಸುರಂಗ ಜಾಲವನ್ನು ಬೂಬಿ-ಟ್ರ್ಯಾಪ್ ಮಾಡಲು ಹಮಾಸ್‌ಗೆ ಹೇಗೆ ಸಾಕಷ್ಟು ಸಮಯ ಸಿಕ್ಕಿತು ಎಂದು ಡಾ ರಿಚೆಮಂಡ್-ಬರಾಕ್ ಬಿಬಿಸಿಗೆ ತಿಳಿಸಿದ್ದಾರೆ. “ಅವರು ಇಸ್ರೇಲಿ ಸೈನಿಕರನ್ನು ಸುರಂಗ ಜಾಲಕ್ಕೆ ಪ್ರವೇಶಿಸಲು ಅವಕಾಶ ನೀಡಬಹುದು ಮತ್ತು ನಂತರ ಅಂತಿಮವಾಗಿ ಇಡೀ ಸುರಂಗವನ್ನು ಸ್ಫೋಟಿಸಬಹುದಾಗಿದೆ” ಎಂದು ಅವರು ಹೇಳಿದರು.
ಹಮಾಸ್ ಪೊಲಿಟ್‌ಬ್ಯುರೊದ ಉಪ ಮುಖ್ಯಸ್ಥ ಸಲೇಹ್ ಅಲ್-ಅರೂರಿ ಅವರು ಅಲ್ ಜಜೀರಾ ಟಿವಿಗೆ ಹಮಾಸ್ ಇಸ್ರೇಲ್ ಮೇಲೆ ದಾಳಿ ಮಾಡುವ ಮೊದಲು, ಅದರ ರಕ್ಷಣಾ ಯೋಜನೆಯು ಅದರ ದಾಳಿ ಯೋಜನೆಗಿಂತ “ಬಲಶಾಲಿಯಾಗಿದೆ” ಎಂದು ಹೇಳಿದ್ದಾರೆ. ಇಸ್ರೇಲ್ ವಿಮಾನಗಳು ಗಾಜಾ ಕಟ್ಟಡಗಳ ಮೇಲೆ ದಾಳಿ ಮಾಡುತ್ತಿದ್ದಂತೆ, ವಿಶ್ವಸಂಸ್ಥೆಯು ಎರಡು ಮಿಲಿಯನ್ ಜನಸಂಖ್ಯೆಯನ್ನು ಎದುರಿಸುತ್ತಿರುವ ಮಾನವೀಯ ಬಿಕ್ಕಟ್ಟಿನ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಸಾವಿನ ಸಂಖ್ಯೆ ಏರುತ್ತಿದ್ದಂತೆ, ಇಸ್ರೇಲ್ ಅಂತಾರಾಷ್ಟ್ರೀಯ ಒತ್ತಡವನ್ನು ಎದುರಿಸುವ ಸಾಧ್ಯತೆಯಿದೆ. ಗಾಜಾ ಸುರಂಗಗಳು ಇಸ್ರೇಲ್ ಮುಂದೆ ದೀರ್ಘ ಯುದ್ಧ ನಡೆಸಬೇಕಾಗುತ್ತದೆ ಮತ್ತು ಸಾಕಷ್ಟು ಸಮಯವಿಲ್ಲ ಎಂದೂ ಖಚಿತಪಡಿಸಿಕೊಳ್ಳಬಹುದು. ಸದ್ಯದ ಸ್ಥಿತಿಯಲ್ಲಿ ಹಮಾಸ್ ಸಾಮರ್ಥ್ಯ ಅದರ ಶಸ್ತ್ರಾಸ್ತ್ರಕ್ಕಿಂತ ಹೆಚ್ಚಾಗಿ ಈ ಸುರಂಗಗಳ ವ್ಯಾಪಕ ಜಾಲದಿಂದಾಗಿ ಅವರ ಬಗ್ಗೆ ಊಹಿಸಲು ಇಸ್ರೇಲ್‌ಗೆ ಕಷ್ಟವಾಗಬಹುದು. ಜೊತೆಯಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಿದ್ದಂತೆ ಅಂತಾರಾಷ್ಟ್ರೀಯ ಒತ್ತಡಗಳನ್ನೂ ನಿಭಾಯಿಸಬೇಕಾಗಿ ಬರಬಹುದು. ಆದರೆ ಇಸ್ರೇಲ್ ಯುದ್ಧತಂತ್ರದಲ್ಲಿ ನಿಪುಣರು. ಹಾಗೂ ಸುರಂಮಾರ್ಗಗಳನ್ನು ಭೇದಿಸಲು ಸಫಲವಾದರೆ ಹಮಾಸ್‌ನ ಅರ್ಧ ಸಾಮರ್ಥ್ಯವನ್ನು ಮುರಿದಂತೆಯೇ.
ನಿಮ್ಮ ಕಾಮೆಂಟ್ ಬರೆಯಿರಿ