ಕ್ರಿಕೆಟ್‌ ವಿಶ್ವಕಪ್ 2023 : ಇಂಗ್ಲೆಂಡಿಗೆ ಆಘಾತ, ಅಫ್ಘಾನಿಸ್ತಾನದ ವಿರುದ್ಧ ಹೀನಾಯವಾಗಿ ಸೋತ ಹಾಲಿ ವಿಶ್ವ ಚಾಂಪಿಯನ್….!

ನವದೆಹಲಿ: ಭಾನುವಾರ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್‌ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 69 ರನ್‌ಗಳ ಅಂತರದಿಂದ ಗೆಲ್ಲುವ ಮೂಲಕ ಅಫ್ಘಾನಿಸ್ತಾನ ತಂಡವು ವಿಶ್ವಕಪ್ ಇತಿಹಾಸದಲ್ಲಿ ಅತಿ ದೊಡ್ಡ ಬುಡಮೇಲು ಫಲಿತಾಂಶವನ್ನು ದಾಖಲಿಸಿದೆ. ಬ್ಯಾಟಿಂಗ್ ಆಗಿರಲಿ ಅಥವಾ ಬೌಲಿಂಗ್ ಆಗಿರಲಿ, ಎಲ್ಲದರಲ್ಲಿಯೂ ಅಫ್ಘಾನಿಸ್ತಾನ ತಂಡವು ಇಂಗ್ಲಿಷ್ ತಂಡಕ್ಕೆ ಪುನರಾಗಮನಕ್ಕೆ ಅವಕಾಶವನ್ನೇ ನೀಡಲಿಲ್ಲ. ಅಫ್ಘಾನಿಸ್ತಾನದ 284 ರನ್‌ಗಳಿಗೆ ಉತ್ತರವಾಗಿ ವಿಶ್ವ ಚಾಂಪಿಯನ್‌ ಇಂಗ್ಲೆಂಡ್ 40.3 ಓವರ್‌ಗಳಲ್ಲಿ ಕೇವಲ 215 ರನ್‌ಗಳಿಗೆ ಆಲೌಟ್‌ ಆಯಿತು.
ರಶೀದ್ ಖಾನ್ ಮತ್ತು ಮುಜೀಬ್ ಉರ್ ರೆಹಮಾನ್ ತಲಾ ಮೂರು ವಿಕೆಟ್ ಪಡೆದರು ಮತ್ತು ಮೊಹಮ್ಮದ್ ನಬಿ ಎರಡು ವಿಕೆಟ್ ಪಡೆದರು. 35ನೇ ಓವರ್‌ನಲ್ಲಿ ಔಟಾಗುವ ಮೊದಲು ಹ್ಯಾರಿ ಬ್ರೂಕ್ 66 ರನ್ ಗಳಿಸಿ ಇಂಗ್ಲೆಂಡ್‌ ಪರವಾಗಿ ಏಕಾಂಗಿಯಾಗಿ ಹೋರಾಟ ನಡೆಸಿದರು.
ಇದಕ್ಕೂ ಮೊದಲು, ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ ನಂತರ, ಅಫ್ಘಾನಿಸ್ತಾನ ಶನಿವಾರ ದೆಹಲಿಯಲ್ಲಿ 284 ರನ್‌ಗಳ ಹೋರಾಟದ ಮೊತ್ತವನ್ನು ಕಲೆಹಾಕಿತು. ಅಫ್ಘಾನಿಸ್ತಾನದ ಆರಂಭಿಕರಾದ ರಹಮಾನುಲ್ಲಾ ಗುರ್ಬಾಜ್ ಮತ್ತು ಇಬ್ರಾಹಿಂ ಝದ್ರಾನ್ ಮೊದಲ ವಿಕೆಟ್‌ಗೆ 16.1 ಓವರ್‌ಗಳಲ್ಲಿ 114 ರನ್‌ಗಳನ್ನು ಸೇರಿಸುವ ಮೂಲಕ ಗಟ್ಟಿಯಾದ ಆರಂಭವನ್ನು ನೀಡಿದರು. ಝದ್ರಾನ್ 28 ರನ್ ಗಳಿಸಿ ನಿರ್ಗಮಿಸಿದರು. ಗುರ್ಬಾಜ್ ಕೇವಲ 57 ಎಸೆತಗಳಲ್ಲಿ 80 ರನ್ ಗಳಿಸಿ ಔಟಾಗುವ ವರೆಗೆ ಇಂಗ್ಲಿಷ್ ಬೌಲರ್‌ಗಳನ್ನು ಕಾಡುತ್ತಲೇ ಇದ್ದರು.
ನಂತರ ಅಫ್ಘಾನಿಸ್ತಾನ ಮೂರು ವಿಕೆಟ್ ಕಳೆದುಕೊಂಡು 18.5 ಓವರ್‌ಗಳಲ್ಲಿ 122/3 ಗಳಿಸಿತ್ತು. ಆದರೆ ನಂತರ ಬಂದ ಇಕ್ರಮ್ ಅಲಿಖಿಲ್ ತಮ್ಮ ಬ್ಯಾಟಿಂಗ್‌ ಮೂಲಕ ಹಿಡಿತ ಸಾಧಿಸಿದರು ಮತ್ತು ಅವರು ರೀಸ್ ಟೋಪ್ಲೆಗೆ ಔಟಾಗುವ ಮೊದಲು 58 ರನ್ ಗಳಿಸಿದರು, ಮುಜೀಬ್ ಉರ್ ರೆಹಮಾನ್ 16 ಎಸೆತಗಳಲ್ಲಿ 28 ರನ್ ಗಳಿಸಿದರು, ಅವರ ತಂಡವು 284 ರನ್‌ ಗಳಿಸಲು ಸಹಾಯ ಮಾಡಿದರು.
ಇಂಗ್ಲೆಂಡ್ ಪರ, ಆದಿಲ್ ರಶೀದ್ ಮೂರು ವಿಕೆಟ್ ಪಡೆದರು. ವೇಗಿ ಮಾರ್ಕ್ ವುಡ್ ಎರಡು ವಿಕೆಟ್ ಕಬಳಿಸಿದರೆ, ಜೋ ರೂಟ್ ಮತ್ತು ರೀಸ್ ಟೋಪ್ಲಿ ತಲಾ ಒಂದು ವಿಕೆಟ್‌ ಪಡೆದರು.
ಪ್ರತ್ಯುತ್ತರವಾಗಿ, ಇಂಗ್ಲಿಷ್ ತಂಡವು ಜಾನಿ ಬೈರ್‌ಸ್ಟೋ ಮತ್ತು ಜೋ ರೂಟ್ ಅವರನ್ನು ಆರಂಭದಲ್ಲೇ ಕಡಿಮೆ ಮೊತ್ತಕ್ಕೆ ಕಳೆದುಕೊಂಡಿತು. ಬೈರ್‌ಸ್ಟೋವ್ 2 ರನ್‌ಗಳಿಗೆ ಫಜಲ್‌ಹಕ್ ಫಾರೂಕಿಗೆ ಔಟಾದರೆ, ಮುಜೀಬ್ ಉರ್ ರೆಹಮಾನ್ 11(17) ಕ್ಕೆ ಜೋ ರೂಟ್‌ ಅವರನ್ನು ಔಟ್‌ ಮಾಡಿದರು. ಹ್ಯಾರಿ ಬ್ರೂಕ್ ಅವರು 66 ರನ್ ಗಳಿಸಿದರು ಆದರೆ ಅವರ ತಂಡದ ಇತರ ಆಟಗಾರರು ಹೋರಾಟ ನೀಡಲಿಲ್ಲ.

ಪ್ರಮುಖ ಸುದ್ದಿ :-   ಆಘಾತಕಾರಿ : ಗುಂಡು ಹಾರಿಸಿ ಪ್ರಾಂಶುಪಾಲರನ್ನು ಕೊಂದ ವಿದ್ಯಾರ್ಥಿ, ನಂತರ ಪ್ರಾಂಶುಪಾಲರ ಬೈಕ್‌ ನಲ್ಲಿ ಪರಾರಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement