ಜೈಲಿನಲ್ಲಿ 24 ವರ್ಷಗಳು ಕಳೆದ ನಂತರ ಇಸ್ರೇಲ್‌ ವಿರುದ್ಧ ಹಮಾಸ್ ದಾಳಿ ಮುನ್ನಡೆಸಿದ ʼಮಾಸ್ಟರ್ ಮೈಂಡ್ʼ ಈ ಯಾಹ್ಯಾ ಸಿನ್ವಾರ್ ಯಾರು..?

ಇಸ್ರೇಲ್ ನಗರಗಳ ಮೇಲೆ ಹಮಾಸ್‌ನ ಆಘಾತಕಾರಿ ದಾಳಿಯ ನಂತರದಲ್ಲಿ ಯಾಹ್ಯಾ ಸಿನ್ವಾರ್ ಎಂಬ ಹೆಸರು ಈಗ ಸದ್ದು ಮಾಡುತ್ತಿದೆ. ಇಸ್ರೇಲಿ ಅಧಿಕಾರಿಗಳು ಸಿನ್ವಾರ್ ನನ್ನು 1,300 ಇಸ್ರೇಲಿಗಳು, ಬಹುತೇಕವಾಗಿ ಇಸ್ರೇಲ್‌ ನಾಗರಿಕರ ಸಾವಿಗೆ ಕಾರಣವಾದ ದಾಳಿಯ ಹಿಂದಿನ ʼಮಾಸ್ಟರ್ ಮೈಂಡ್ʼ ಎಂದು ಆರೋಪಿಸಿದ್ದಾರೆ.
ಇಸ್ರೇಲ್ ಗಾಜಾ ಪಟ್ಟಿಯಲ್ಲಿ ಭೂ ಆಕ್ರಮಣಕ್ಕೆ ಸಿದ್ಧತೆ ನಡೆಸುತ್ತಿರುವಾಗ, ಇಸ್ರೇಲಿ ಪಡೆಗಳ ವಕ್ತಾರರು ಸಿನ್ವಾರ್ ಮತ್ತು ತಂಡದವರು “ನಮ್ಮ ದಾಳಿಯ ರಾಡಾರ್‌ ನಲ್ಲಿದ್ದಾರೆ” ಎಂದು ಹೇಳಿದ್ದಾರೆ.
1962 ರಲ್ಲಿ ಜನಿಸಿದ ಸಿನ್ವಾರ್ ಆಗ ಈಜಿಪ್ಟ್ ನಿಯಂತ್ರಣದಲ್ಲಿದ್ದ ದಕ್ಷಿಣ ಗಾಜಾದ ಖಾನ್ ಯೂನಿಸ್ ನಗರದಲ್ಲಿ ಬೆಳೆದ. ಇಸ್ರೇಲಿ ಪಡೆಗಳು ಆತನನ್ನು “ಖಾನ್ ಯೂನಿಸ್ ನ ಕಟುಕ” ಎಂದು ಕರೆಯುತ್ತಾರೆ. ವರದಿಗಳ ಪ್ರಕಾರ, ಸಿನ್ವಾರ್ ಕುಟುಂಬವು ಈ ಹಿಂದೆ ದಕ್ಷಿಣ ಇಸ್ರೇಲ್‌ನಲ್ಲಿರುವ ಅಶ್ಕೆಲೋನ್‌ನಲ್ಲಿ ನೆಲೆಸಿತ್ತು, ಆದರೆ ಇಸ್ರೇಲ್ 1948 ರಲ್ಲಿ ಅಲ್-ಮಜ್ದಾಲ್ ಎಂದು ಕರೆಯಲ್ಪಡುವ ಅಶ್ಕೆಲೋನ್ ಪ್ರದೇಶವನ್ನು ವಶಕ್ಕೆ ತೆಗೆದುಕೊಂಡ ನಂತರ ಕುಟುಂಬ ಗಾಜಾಕ್ಕೆ ತೆರಳಬೇಕಾಯಿತು. ಸಿನ್ವಾರ್ ಗಾಜಾದ ಇಸ್ಲಾಮಿಕ್ ವಿಶ್ವವಿದ್ಯಾಲಯದಿಂದ ಅರೇಬಿಕ್ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾನೆ.

ಜೈಲಿನ ವರ್ಷಗಳು….
ಸಿನ್ವಾರ್ ಒಟ್ಟು 24 ವರ್ಷಗಳ ಕಾಲ ಜೈಲಿನಲ್ಲಿ ಕಳೆದಿದ್ದಾನೆ. ವಿಧ್ವಂಸಕ ಚಟುವಟಿಕೆಗಳಿಗಾಗಿ ಆತನನ್ನು 1982 ರಲ್ಲಿ ಮೊದಲ ಬಾರಿಗೆ ಬಂಧಿಸಲಾಯಿತು. ನಂತರದ ವರ್ಷಗಳಲ್ಲಿ, ಆತ ಪ್ಯಾಲೇಸ್ತಿನಿ ಚಳುವಳಿಯೊಳಗೇ ಇಸ್ರೇಲಿನ ಗೂಢಚಾರರನ್ನು ಟಾರ್ಗೆಟ್‌ ಮಾಡುವ ಘಟಕವನ್ನು ರೂಪಿಸಲು ಸಲಾಹ್ ಶೆಹಡೆಯೊಂದಿಗೆ ಒಪ್ಪಂದ ಮಾಡಿಕೊಂಡ. ಇಬ್ಬರು ಸೇರಿ ಅದನ್ನು ಸ್ಫಾಪಿಸಿದರು. 2002ರಲ್ಲಿ ಹಮಾಸ್‌ನ ಸೇನಾ ವಿಭಾಗದ ಮುಖ್ಯಸ್ಥರಾಗಿದ್ದಾಗ ಶೆಹಡೆಯನ್ನು ಇಸ್ರೇಲ್ ಪಡೆಗಳು ಗುಂಡಿಕ್ಕಿ ಕೊಂದವು.
1987ರಲ್ಲಿ ಹಮಾಸ್ ಅನ್ನು ಸ್ಥಾಪಿಸಿದ ನಂತರ, ಸಿನ್ವಾರ್ ಸಹ-ಸ್ಥಾಪಿತ ಘಟಕವು ಹಮಾಸ್‌ ಸಂಘಟನೆಯೊಳಗೆ ಒಂದು ಏಕೀಕೃತ ಅಂಗವಾಯಿತು. 1988 ರಲ್ಲಿ, ಇಬ್ಬರು ಇಸ್ರೇಲಿ ಸೈನಿಕರು ಮತ್ತು ನಾಲ್ವರು ಪ್ಯಾಲೆಸ್ಟೀನಿಯನ್ನರ ಹತ್ಯೆಯಲ್ಲಿ ಸಿನ್ವಾರ್ ನನ್ನು ಬಂಧಿಸಲಾಯಿತು. ಮುಂದಿನ ವರ್ಷ, ಆತನಿಗೆ ನಾಲ್ಕು ಜೀವಾವಧಿ ಶಿಕ್ಷೆ ವಿಧಿಸಲಾಯಿತು.

ಜೈಲಿಂದ ಬಿಡುಗಡೆ…
2006 ರಲ್ಲಿ, ಹಮಾಸ್‌ನ ಮಿಲಿಟರಿ ವಿಂಗ್ ಇಜ್ ಅದ್-ದಿನ್ ಅಲ್-ಕಸ್ಸಾಮ್ ಬ್ರಿಗೇಡ್‌ಗಳ ತಂಡವು ಇಸ್ರೇಲ್ ಭೂಪ್ರದೇಶವನ್ನು ದಾಟಲು ಸುರಂಗವನ್ನು ಬಳಸಿತು ಮತ್ತು ಆರ್ಮಿ ಪೋಸ್ಟ್ ಮೇಲೆ ದಾಳಿ ಮಾಡಿತು. ಅವರು ಇಬ್ಬರು ಇಸ್ರೇಲಿ ಸೈನಿಕರನ್ನು ಕೊಂದರು, ಅನೇಕರು ಗಾಯಗೊಂಡರು ಮತ್ತು ಗಿಲಾಡ್ ಶಾಲಿತ್ ಎಂಬ ಒಬ್ಬ ಸೈನಿಕನನ್ನು ಒತ್ತೆಯಾಳಾಗಿ ಇರಿಸಿಕೊಂಡರು. ಶಾಲಿತ್ ಐದು ವರ್ಷಗಳ ಕಾಲ ಹಮಾಸ್‌ ಸೆರೆಯಲ್ಲಿದ್ದ. 2011 ರಲ್ಲಿ ಖೈದಿಗಳ ವಿನಿಮಯ ಒಪ್ಪಂದದಲ್ಲಿ ಆತನನ್ನು ಬಿಡುಗಡೆ ಮಾಡಲಾಯಿತು. ಶಾಲಿತ್‌ನ ಬಿಡುಗಡೆಗಾಗಿ, ಇಸ್ರೇಲ್ 1027 ಪ್ಯಾಲೇಸ್ತಿನಿ ಖೈದಿಗಳು ಮತ್ತು ಇಸ್ರೇಲಿ ಅರಬ್ ಕೈದಿಗಳನ್ನು ಬಿಡುಗಡೆ ಮಾಡಿತು. ಅವರಲ್ಲಿ ಒಬ್ಬ ಸಿನ್ವಾರ್. ಸಿನ್ವಾರ್‌ ಅಲ್ಲಿಯ ವರೆಗೆ 22 ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದ.

ದಿ ರೈಸ್…
ಬಿಡುಗಡೆಯ ನಂತರದ ವರ್ಷಗಳಲ್ಲಿ, ಹಮಾಸ್ ಶ್ರೇಣಿಯಲ್ಲಿ ವಿಶೇಷವಾಗಿ ಅದರ ಮಿಲಿಟರಿ ವಿಭಾಗದಲ್ಲಿ ಉನ್ನತ ಹುದ್ದೆಗೆ ಏರಿದ ಸಿನ್ವಾರ್, 2015ರಲ್ಲಿ ಅಮೆರಿಕದ ವಾಂಟೆಡ್ ಅಂತಾರಾಷ್ಟ್ರೀಯ ಉಗ್ರರ ಪಟ್ಟಿಗೆ ಸೇರಿದ್ದ. ಸಿನ್ವಾರ್‌ನನ್ನು ಭಯೋತ್ಪಾದಕ ಎಂದು ಘೋಷಿಸುವ ಅಮೆರಿಕದ ಡಿಪಾರ್ಟ್‌ಮೆಂಟ್ ಆಫ್ ಸ್ಟೇಟ್ ಡಾಕ್ಯುಮೆಂಟ್, ಆತ “ಹಮಾಸ್‌ನ ಮಿಲಿಟರಿ ವಿಭಾಗವಾದ ಇಝೆಡಿನ್ ಅಲ್-ಕಸ್ಸಾಮ್ ಬ್ರಿಗೇಡ್ಸ್‌ನ ಮುಂಚೂಣಿ ಪಾತ್ರಕ್ಕೆ ಹೆಸರುವಾಸಿಯಾಗಿದ್ದಾನೆ” ಎಂದು ಹೇಳುತ್ತದೆ. 2017 ರಲ್ಲಿ, ಸಿನ್ವಾರ್ ಗಾಜಾದಲ್ಲಿ ಹಮಾಸ್ ಮುಖ್ಯಸ್ಥನಾಗಿ ಆಯ್ಕೆಯಾದ.

ಗಾಜಾದ ಆಡಳಿತಗಾರ
ಸಂಘಟನೆಯ ರಾಜಕೀಯ ಬ್ಯೂರೋ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ನಂತರ ಸಿನ್ವಾರ್ ಹಮಾಸ್ ನಾಯಕತ್ವದಲ್ಲಿ 2 ನೇ ಸ್ಥಾನದಲ್ಲಿದ್ದಾನೆ. ಹನಿಯೆಹ್ ಸ್ವಯಂಪ್ರೇರಿತ ದೇಶಭ್ರಷ್ಟರಾಗಿ ವಾಸಿಸುತ್ತಿರುವುದರಿಂದ, ಸಿನ್ವಾರ್ ಗಾಜಾದ ವಾಸ್ತವಿಕ ಆಡಳಿತಗಾರನಾಗಿದ್ದಾನೆ. ಆತ ಇಸ್ರೇಲ್ ವಿರುದ್ಧ ಸಶಸ್ತ್ರ ಹೋರಾಟವನ್ನು ನಿರಂತರವಾಗಿ ಪ್ರತಿಪಾದಿಸಿದ್ದಾನೆ ಮತ್ತು ಯಾವುದೇ ರಾಜಿ ಸೂತ್ರದ ವಿರುದ್ಧವಾಗಿದ್ದಾನೆ. ತನ್ನ ಪ್ರಖರ ಭಾಷಣಗಳಿಗೆ ಹೆಸರುವಾಸಿಯಾಗಿದ್ದಾನೆ. ಅಲ್ಲದೆ, ಸಿನ್ವಾರ್ ಹಮಾಸ್ ಕಾರ್ಯಕರ್ತರ ಮೇಲೆ ಯಾವಾಗಲೂ ನಿಗಾದಲ್ಲಿ ಇಡುತ್ತಿದ್ದ. ಅವರಲ್ಲಿ ಏನಾದರೂ ಲೋಪಕಂಡುಬಂದರೆ ಅವರಿಗೆ ಯಾವುದೇ ಅವಕಾಶಗಳನ್ನು ನೀಡುತ್ತಿರಲಿಲ್ಲ ಎಂದು ತಿಳಿದುಬಂದಿದೆ.
ಒಂದು ಉದಾಹರಣೆಯೆಂದರೆ ಹಮಾಸ್ ಕಮಾಂಡರ್ ಮಹಮೂದ್ ಇಶ್ತಿವಿಯ ಹತ್ಯೆ. ಇಶ್ತಿವಿ (Ishtiwi) ಮೇಲೆ 2015 ರಲ್ಲಿ ದುರುಪಯೋಗದ ಆರೋಪ ಹೊರಿಸಲಾಯಿತು. ಮುಂದಿನ ವರ್ಷ, ಆತನನ್ನು ಗಲ್ಲಿಗೇರಿಸಲಾಯಿತು ಮತ್ತು ನಂತರ “ನೈತಿಕ ಅಪರಾಧಗಳ” ಆರೋಪ ಹೊರಿಸಲಾಯಿತು. ಇಶ್ತಿವಿ ಸಲಿಂಗಕಾಮಿ ಎಂದು ವರದಿಗಳು ಹೇಳಿವೆ. ಮತ್ತು ಇದು ಮುಂದುವರಿದರೆ ಇದು ಸುಲಿಗೆಗೆ ಕಾರಣವಾಗಬಹುದು ಮತ್ತು ಹಮಾಸ್ ತನ್ನ ಸಿದ್ಧಾಂತದಲ್ಲಿ ರಾಜಿ ಮಾಡಿಕೊಳ್ಳಬಹುದು ಎಂದು ಸಿನ್ವಾರ್ ಹೆದರಿದ್ದ.

2023ರ ಇಸ್ರೇಲ್ ದಾಳಿಗಳು….
ಕಳೆದ ವಾರಾಂತ್ಯದಲ್ಲಿ ಇಸ್ರೇಲ್ ನಗರಗಳ ಮೇಲಿನ ದಾಳಿಯ ಮಾಸ್ಟರ್ ಮೈಂಡ್ ಇದೇ ಸಿನ್ವಾರ್ ಎಂದು ಇಸ್ರೇಲ್ ಆರೋಪಿಸಿದೆ. ಇಸ್ರೇಲ್ ರಕ್ಷಣಾ ಪಡೆಗಳ ವಕ್ತಾರ ಲೆಫ್ಟಿನೆಂಟ್ ಕರ್ನಲ್ ರಿಚರ್ಡ್ ಹೆಕ್ಟ್ ಶನಿವಾರ ಪತ್ರಕರ್ತರಿಗೆ, “ಯಾಹ್ಯಾ ಸಿನ್ವಾರ್ ದುಷ್ಟರ ಮುಖ. [ಒಸಾಮಾ] ಬಿನ್ ಲಾಡೆನ್ (9/11 ಕ್ಕೆ) ಇದ್ದಂತೆ ಅವರು ಕಳೆದ ವಾರಾಂತ್ಯದಲ್ಲಿ ಇಸ್ರೇಲ್ ನಗರಗಳ ಮೇಲಿನ ದಾಳಿಯ ಹಿಂದಿನ ಮಾಸ್ಟರ್ ಮೈಂಡ್” ಎಂದು ಹೇಳಿದ್ದಾರೆ.
ಯಾರಾದರೂ ತಾವು ಸಹ ಯಾವುದೇ ಕಾರ್ಯಾಚರಣೆಯ ಸಹಕರ್ತೃರು ಎಂದು ಭಾವಿಸಿದರೆ ಪ್ಯಾಲಿಸ್ತಿನಿಯರಾದರೂ ಅವರನ್ನು ಕೊಲೆ ಮಾಡುವ ಮೂಲಕ ತಮ್ಮ ವೃತ್ತಿಜೀವನವನ್ನು ನಿರ್ಮಿಸಿಕೊಂಡಿದ್ದ. ಹೀಗಾಗಿ ಆತ ಖಾನ್ ಯೂನಿಸ್ನ ಕಟುಕ ಎಂದು ಕರೆಯಲ್ಪಟ್ಟ ಎಂದು ಲೆಫ್ಟಿನೆಂಟ್ ಕರ್ನಲ್ ರಿಚರ್ಡ್ ಹೆಕ್ಟ್ ಹೇಳಿದ್ದಾರೆ. ಇಸ್ರೇಲ್ ಸಿನ್ವಾರ್ ನನ್ನು ಬಿಡುವುದಿಲ್ಲ ಎಂದು ರಕ್ಷಣಾ ವಕ್ತಾರರು ಹೇಳಿದ್ದಾರೆ. “ಆ ವ್ಯಕ್ತಿ ಮತ್ತು ಅವನ ಇಡೀ ತಂಡದವರು ನಮ್ಮ ರಾಡಾರ್‌ ದೃಷ್ಟಿಯಲ್ಲಿದ್ದಾರೆ. ಇದು [ಒಂದು] ದೀರ್ಘ [ಅಭಿಯಾನ] ಆಗಿರಬಹುದು. ಆದರೂ ನಾವು ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ.

5 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement