ಪ್ಯಾರಿಸ್‌ ನಿಂದ ʼತಿಗಣೆʼಗಳು ದೇಶದೊಳಕ್ಕೆ ನುಸುಳದಂತೆ ತಡೆಯಲು ವಿಮಾನ ನಿಲ್ದಾಣದಲ್ಲಿ ʼನಾಯಿʼಯನ್ನು ನಿಯೋಜನೆ ಮಾಡಿದ ದಕ್ಷಿಣ ಕೊರಿಯಾ…!

ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಕ್ರೀಡಾಪಟುಗಳು, ಅಧಿಕಾರಿಗಳು ಮತ್ತು ಅಭಿಮಾನಿಗಳು ಹಿಂದಿರುಗಿದಾಗ ಅವರೊಟ್ಟಿಗೆ ದೇಶವನ್ನು ಪ್ರವೇಶಿಸಬಹುದಾದ ತಿಗಣೆ (bedbugs)ಗಳನ್ನು ಪತ್ತೆ ಹಚ್ಚಲು ದಕ್ಷಿಣ ಕೊರಿಯಾ ತನ್ನ ಪ್ರಮುಖ ವಿಮಾನ ನಿಲ್ದಾಣವಾದ ಇಂಚಿಯಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಡ್‌ಬಗ್ ಸ್ನಿಫರ್ ನಾಯಿಯನ್ನು ನಿಯೋಜಿಸಿದೆ…!
ಸೆಕೊ ಎಂಬ ಹೆಸರಿನ ಎರಡು ವರ್ಷದ ಬೀಗಲ್ ತಳಿಯ ಈ ನಾಯಿ ತಿಗಣೆ ಪತ್ತೆ ಹಚ್ಚುವ ಅಭಿಯಾನದ ಭಾಗವಾಗಿದೆ. ಇದು ತಿಗಣೆ ಪತ್ತೆಹಚ್ಚಲು ದೇಶದಲ್ಲಿ ತರಬೇತಿ ಪಡೆದ ಮೊದಲ ನಾಯಿಯಾಗಿದ್ದು, ನಾಯಿಯು ತಿಗಣೆ ಬಿಡುಗಡೆ ಮಾಡುವ ರಾಸಾಯನಿಕಗಳಾದ ಫೆರೋಮೋನ್‌ಗಳ ವಾಸನೆ ಕಂಡುಹಿಡಿಯುವ ಮೂಲಕ ತಿಗಣೆಯನ್ನು ಪತ್ತೆ ಮಾಡುತ್ತದೆ. ಸೆಕೊ (Ceco) ಎರಡು ನಿಮಿಷಗಳಲ್ಲಿ ಹೋಟೆಲ್ ಕೋಣೆಯನ್ನು ತಪಾಸಣೆ ಮಾಡಿ ಮುಗಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಸೆಸ್ಕೊ ಕಂಪನಿಯ ಅಧಿಕಾರಿ ಕಿಮ್ ಮಿನ್-ಸು ಹೇಳಿದ್ದಾರೆ.
ಕೀಟ ನಿಯಂತ್ರಣ ಕಂಪನಿಯಾದ ಸೆಸ್ಕೊ ಜೊತೆ ದಕ್ಷಿಣ ಕೊರಿಯಾದ ಭದ್ರತೆ ಮತ್ತು ಸಾರಿಗೆ ಸಚಿವಾಲಯಗಳು ಕೈಜೋಡಿಸಿವೆ. ಪ್ಯಾರಿಸ್‌ ನಿಂದ ಬರುವ ಪ್ರಯಾಣಿಕರನ್ನು ಪರೀಕ್ಷಿಸಲು ಈ ಕಂಪನಿ ವಿಮಾನಯಾನ ಸಂಸ್ಥೆಗಳು ಮತ್ತು ಇಂಚಿಯಾನ್ ವಿಮಾನ ನಿಲ್ದಾಣದ ಜೊತೆ ಸೇರಿ ಕೆಲಸ ಮಾಡುತ್ತಿದೆ.

ಕಳೆದ ವರ್ಷ, ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಯುತ್ತಿದ್ದಾಗ ತಿಗಣೆಗಳ ಕಾಟದ ಕುರಿತು ಪ್ಯಾರಿಸ್‌ನಲ್ಲಿ ಆತಂಕ ವ್ಯಕ್ತವಾಗಿತ್ತು. ಮತ್ತು ಇದು ಫ್ರಾನ್ಸ್‌ನಾದ್ಯಂತ ಹರಡುವ ಭೀತಿ ಎದುರಾಗಿತ್ತು. ನಂತರ ಈ ತಿಗಣೆಗಳ ನಿರ್ಮೂಲನೆಗೆ ಅಧಿಕಾರಿಗಳು ದೊಡ್ಡ ಅಭಿಯಾನವನ್ನೇ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ದಕ್ಷಿಣ ಕೊರಿಯಾ ಈ ಕ್ರಮಕ್ಕೆ ಮುಂದಾಗಿದೆ.
“2024 ರ ಬೇಸಿಗೆ ಒಲಿಂಪಿಕ್ ಕ್ರೀಡಾಕೂಟದ ಸಂದರ್ಭದಲ್ಲಿ ಜಗತ್ತಿನ ಬೇರೆ ಬೇರೆ ಪ್ರದೇಶದಿಂದ ಬಂದವರು ಪ್ಯಾರಿಸ್‌ನಲ್ಲಿ ಒಟ್ಟುಗೂಡುತ್ತಿರುವ ಕಾರಣ, ಕ್ರೀಡಾಕೂಟದ ನಂತರ ತಿಗಣೆಗಳು ದೇಶವನ್ನು ಪ್ರವೇಶಿಸಲು ಅವಕಾಶವಿದೆ” ಎಂದು ಕೊರಿಯಾ ಸರ್ಕಾರದ ಪತ್ರಿಕಾ ಪ್ರಕಟಣೆ ತಿಳಿಸಿದೆ. ಆದ್ದರಿಂದ, ದೇಶಕ್ಕೆ ಅಂತಾರಾಷ್ಟ್ರೀಯವಾಗಿ ಮುಖ್ಯದ್ವಾರವಾಗಿರುವ ಇಂಚಿಯಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ತಿಗಣೆಯು ದೇಶ ಪ್ರವೇಶಿಸುವುದನ್ನು ತಡೆಯಲು ನಾವು ಪೂರ್ವಭಾವಿ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಸರ್ಕಾರ ಹೇಳಿದೆ.

ಪ್ಯಾರಿಸ್‌ನಿಂದ ಹೆಚ್ಚಿನ ಕ್ರೀಡಾಪಟುಗಳು ಮತ್ತು ಅಧಿಕಾರಿಗಳು, ವೀಕ್ಷಿಸಲು ಹೋದವರು ಆಗಮಿಸಲು ಪ್ರಾರಂಭಿಸಿದ್ದರಿಂದ ಸೆಕೊ (ನಾಯಿ) ಮತ್ತು ತಂಡವನ್ನು ಶುಕ್ರವಾರ ನಿಯೋಜಿಸಲಾಗಿದೆ ಮತ್ತು ಈ ತಂಡವು ಸೆಪ್ಟೆಂಬರ್ 8ರ ವರೆಗೆ ತಿಗಣೆ ಪತ್ತೆ ಹಚ್ಚುವ ಕಾರ್ಯವನ್ನು ಮುಂದುವರಿಸಲಿದೆ ಎಂದು ಸರ್ಕಾರ ತಿಳಿಸಿದೆ.
ಭಾನುವಾರ ಮುಕ್ತಾಯಗೊಂಡ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ದಕ್ಷಿಣ ಕೊರಿಯಾ 144 ಕ್ರೀಡಾಪಟುಗಳನ್ನು ಕಳುಹಿಸಿದೆ. ಪ್ಯಾರಿಸ್‌ನಿಂದ ನೇರವಾಗಿ ಬರುವ ವಿಮಾನಗಳಲ್ಲಿ ಅಥವಾ ಪ್ರಯಾಣಿಕರಲ್ಲಿ ತಿಗಣೆಗಳು ಪತ್ತೆಯಾದರೆ ವಿಮಾನ ನಿಲ್ದಾಣವು ಕ್ವಾರಂಟೈನ್ ಸೇರಿದಂತೆ ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧತೆ ನಡೆಸಿದೆ.
2023 ರಲ್ಲಿ ತಿಗಣೆಯಿಂದ ಬರುವ ಸೋಂಕು ಉಲ್ಬಣಗೊಂಡ ನಂತರ ದಕ್ಷಿಣ ಕೊರಿಯಾದಲ್ಲಿ ಮೈಕ್ರೋ-ಅಪಾರ್ಟ್‌ಮೆಂಟ್‌ಗಳು, ಮೋಟೆಲ್ ಕೊಠಡಿಗಳು ಮತ್ತು “ಜ್ಜಿಮ್‌ಜಿಲ್‌ಬಂಗ್” ಎಂಬ ಸಾಂಪ್ರದಾಯಿಕ ಸ್ಪಾಗಳಲ್ಲಿ ವ್ಯಾಪಕವಾದ ಸೋಂಕುನಿವಾರಕ ಅಭಿಯಾನ ನಡೆಸಬೇಕಾಯಿತು. ತಿಗಣೆ ನಿರ್ಮೂಲನೆ ಅಲ್ಲೆಲ್ಲ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿತ್ತು. ಹೀಗಾಗಿ ಈಗ ದೇಶವು ತಿಗಣೆಗಳು ದೇಶ ಪ್ರವೇಶಿಸುವ ಮೊದಲೇ ಫೂರ್ವಭಾವಿ ಕ್ರಮಕ್ಕೆ ಮುಂದಾಗಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement