ಮಂಗಳೂರು | ಬಂದೂಕು ತೋರಿಸಿ ಬ್ಯಾಂಕ್‌ ದರೋಡೆ ; ₹10 ಕೋಟಿಗೂ ಹೆಚ್ಚು ಮೌಲ್ಯದ ಚಿನ್ನಾಭರಣ, ನಗದು ದೋಚಿ ಪರಾರಿ

ಮಂಗಳೂರು : ಬೀದರಿನಲ್ಲಿ ಗುರುವಾರ ನಡೆದಿರುವ ಎಟಿಎಂ ವ್ಯಾನ್ ದರೋಡೆ ಪ್ರಕರಣ ನಡೆದ ಮಾರನೇ ದಿನ ಶುಕ್ರವಾರ ಮಂಗಳೂರಿನಲ್ಲೂ ಬ್ಯಾಂಕ್ ದರೋಡೆ ನಡೆದಿದೆ ಎಂದು ವರದಿಯಾಗಿದೆ.
ಮಂಗಳೂರು ಹೊರವಲಯದ ಉಳ್ಳಾಲ ತಾಲೂಕಿನ ಕೆ.ಸಿ ರೋಡ್ ಜಂಕ್ಷನ್ ನಲ್ಲಿರುವ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಶಾಖೆಯಲ್ಲಿ ಹಾಡಹಾಗಲೇ ದರೋಡೆ ನಡೆದಿದ್ದು, ಬ್ಯಾಂಕ್ ಶಾಖೆಗೆ ನುಗ್ಗಿದ ಐವರು ಮುಸುಕುಧಾರಿಗಳು ಒಳಗಿದ್ದ ಐವರು ಸಿಬ್ಬಂದಿಗೆ ಬಂದೂಕು, ತಲ್ವಾರ್ ತೋರಿಸಿ ಹೆದರಿಸಿ ಬ್ಯಾಂಕ್‌ ದರೋಡೆ ಮಾಡಿದ್ದಾರೆ.ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ಬೆಳಿಗ್ಗೆ 11:30 ರಿಂದ ಮಧ್ಯಾಹ್ನ 12:30 ರ ನಡುವೆ ಶಸ್ತ್ರಸಜ್ಜಿತ ತಂಡದಿಂದ ದರೋಡೆ ನಡೆದಿದೆ.
ಮಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯಕ್ರಮ ಹಿನ್ನಲೆಯಲ್ಲಿ ಮಂಗಳೂರು ನಗರದಲ್ಲಿ ಪೊಲೀಸರ ಹೆಚ್ಚಿನ ಭದ್ರತೆಯಲ್ಲಿದ್ದರು.

ಕಾರಿನಲ್ಲಿ ಬಂದ ಐವರು ದರೋಡೆಕೋರರು ಶಾಖಾ ಕಚೇರಿಗೆ ನುಗ್ಗಿ ಬಂದೂಕು ತೋರಿಸಿ ಸಿಬ್ಬಂದಿಗೆ ಹೆದರಿಸಿದ್ದಾರೆ. ಈ ವೇಳೆ ಕೆಲಸದಲ್ಲಿ ನಿರತರಾಗಿದ್ದ ಮಹಿಳಾ ಸಿಬ್ಬಂದಿ ಬೊಬ್ಬೆ ಹೊಡೆಯಲು ಮುಂದಾದಾಗ ಅವರಿಗೆ ಬಂದೂಕು ತೋರಿಸಿ ಹೆದರಿಸಿದ ಬಾಯ್ಮುಚ್ಚಿಸಿದ ದರೋಡೆಕೋರರು ಚಿನ್ನ, ಒಡವೆ, ನಗದುಗಳನ್ನು ಲೂಟಿ ಮಾಡಿ ಪರಾರಿಯಾಗಿದೆ. ದರೋಡೆಕೋರರ ತಂಡವು ಮಂಗಳೂರು ಕಡೆಗೆ ಪರಾರಿಯಾಗಿದೆ ಎನ್ನಲಾಗಿದೆ.
ದರೋಡೆಕೋರರು ಹಿಂದಿಯಲ್ಲಿ ಮಾತನಾಡುತ್ತಿದ್ದು, ಸಿಬ್ಬಂದಿಗೆ ಬೆದರಿಸಿ ಚಿನ್ನಾಭರಣ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಹೊಂದಿದ್ದ ಕಪಾಟನ್ನು ತೆರೆಸಿ, ದರೋಡೆ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಛತ್ತೀಸ​ಗಢದಲ್ಲಿ ಎರಡು ಪ್ರತ್ಯೇಕ ಎನ್​ಕೌಂಟರ್​ ; 22 ನಕ್ಸಲರ ಹತ್ಯೆ

ಕದ್ದ ವಸ್ತುಗಳ ಮೌಲ್ಯ ಸುಮಾರು 10 ರಿಂದ 12 ಕೋಟಿಗಳಾಗಬಹುದು ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ಈ ಬಗ್ಗೆ ಸರಿಯಾದ ಮೌಲ್ಯಮಾಪನ ಮಾಡಿದ ನಂತರ ನಿಖರ ಮಾಹಿತಿ ತಿಳಿಯಲಿದೆ.
ಕೆ.ಸಿ. ರೋಡ್ ಜಂಕ್ಷನ್‌ನಲ್ಲಿ ವಾಣಿಜ್ಯ ಕಟ್ಟಡದ ಮೊದಲ ಮಹಡಿಯಲ್ಲಿ ಬ್ಯಾಂಕ್ ಕಾರ್ಯಾಚರಿಸುತ್ತಿದೆ. ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಎಸಿಪಿ ಧನ್ಯ ನಾಯಕ್ ನೇತೃತ್ವದ ಪೊಲೀಸರ ತಂಡ ಸ್ಥಳ ಪರಿಶೀಲನೆ ನಡೆಸಿ ತನಿಖೆಯನ್ನು ಆರಂಭಿಸಿದೆ. ಎಲ್ಲಾ ದಿಕ್ಕುಗಳಲ್ಲಿರುವ ಪೊಲೀಸ್‌ ಠಾಣೆಗಳಿಗೂ ಮಾಹಿತಿ ನೀಡಿದ್ದು, ದರೋಡೆಕೋರರ ಪತ್ತೆಗೆ ಬಲೆ ಬೀಸಲಾಗಿದೆ.
ಸ್ಥಳೀಯ ಶಾಸಕರಾಗಿರುವ ಸ್ಪೀಕರ್‌ ಯುಟಿ ಖಾದರ್‌ ಬ್ಯಾಂಕಿಗೆ ಆಗಮಿಸಿ ಸಿಬ್ಬಂದಿ ಜೊತೆ ಮಾತನಾಡಿದ್ದಾರೆ.

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement