ವೀಡಿಯೊ…| ಇದು ಕಾಶ್ಮೀರವಲ್ಲ, ರಾಜಸ್ಥಾನ…ಮರುಭೂಮಿಯಲ್ಲಿ ಎಲ್ಲೆಲ್ಲೂ ನೆಲಕ್ಕೆ ಹಿಮದ ಹಾಸು…!

ಜೈಪುರ: ಮರುಭೂಮಿ ಹಾಗೂ ಒಣಹವೆಗೆ ಹೆಸರುವಾಸಿಯಾಗಿರುವ ಹಾಗೂ ಬೇಸಿಗೆಯಲ್ಲಿ 50 ಡಿಗ್ರಿ ತಾಪಮಾನ ಇರುವ ರಾಜಸ್ಥಾನ ಕಳೆದ ಕೆಲ ದಿನಗಳಿಂದ ಕಾಶ್ಮೀರದಂತೆ ಕಾಣಲಾರಂಭಿಸಿದೆ. ರಾಜಸ್ಥಾನದಲ್ಲಿ ಭಾರಿ ಹವಾಮಾನ ಬದಲಾವಣೆ ಕಾಣಿಸಲಾರಂಭಿಸಿದೆ. ಬಿರು ಬಿಸಿಲಿಗೆ ಹೆಸರಾಗಿದ್ದ ರಾಜಸ್ಥಾನದ ಚುರು ಮತ್ತು ಸರ್ದರ್ಶಹರ್ ಸೇರಿದಂತೆ ಹಲವು ಪ್ರದೇಶಗಳು ಹಿಮದಿಂದ ಆವೃತವಾಗಿವೆ. ಮಳೆಯಿಂದಾಗಿ ವಿಪರೀತ ಆಲಿಕಲ್ಲುಗಳು ಬಿದ್ದಿದ್ದು ಆಲಿಕಲ್ಲುಗಳಿಂದ ಆವೃತವಾಗಿರುವ ಬೀದಿಗಳ ಚಿತ್ರಗಳು ಮತ್ತು ವೀಡಿಯೊಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ. ಕಾಶ್ಮೀರದಲ್ಲಿ ಕಂಡು ಬರುವ ಈ ದೃಶ್ಯ ಈಗ ರಾಜಸ್ಥಾನದ ಮರು ಭೂಮಿಯಲ್ಲೂ ಕಂಡುಬಂದಿದ್ದು ಇದು ಹವಾಮಾನ ಬದಲಾವಣೆಯ ಸ್ಪಷ್ಟ ನಿದರ್ಶನವಾಗಿದೆ.
ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಶನಿವಾರದಂದು ಮನೆಗಳು ಮತ್ತು ಬೀದಿಗಳಲ್ಲಿ ಹಿಮದಂತೆ ಕಾಣುವ ಆಲಿಕಲ್ಲುಗಳು ಹಾಗೂ ಮಂಜು ಆವರಿಸಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಕ್ಲಿಪ್ ಅನ್ನು ಹಂಚಿಕೊಂಡ ಅವರು, “ಇದು ಕಾಶ್ಮೀರವಲ್ಲ. ಇದು ರಾಜಸ್ಥಾನದ ಚುರು. ಇಲ್ಲಿ ಬೇಸಿಗೆಯಲ್ಲಿ ಶಾಖ 50 ಡಿಗ್ರಿಗಳವರೆಗೆ ತಲುಪುತ್ತದೆ. ಅಂತಹ ವಿಪರೀತ ಹವಾಮಾನ ಎಂದು ಬರೆದಿದ್ದಾರೆ. ಕಸ್ವಾನ್ ಒಬ್ಬ ವ್ಯಕ್ತಿ ತನ್ನ ಮನೆ ಬಾಗಿಲಿನಿಂದ ಮುಂದೆ ಬಿದ್ದ ಹಿಮದಂತೆ ಕಾಣುವ ಆಲಿಕಲ್ಲುಗಳನ್ನು ತೆಗೆಯುವ ವೀಡಿಯೊವನ್ನು ಸಹ ಹಂಚಿಕೊಂಡಿದ್ದಾರೆ.
ವಾರಾಂತ್ಯದಲ್ಲಿ ಈ ಪ್ರದೇಶದಲ್ಲಿ ಹಠಾತ್ ಆಲಿಕಲ್ಲು ಮಳೆಯಾಗಿದೆ. ಬದಲಾದ ಹವಾಮಾನ ಪರಿಸ್ಥಿತಿಗಳಿಂದಾಗಿ ಶ್ರೀಗಂಗಾನಗರ, ಚುರು, ಕೊಟ್‌ಪುಟ್ಲಿ-ಬೆಹ್ರೋರ್, ಬಿಕಾನೇರ್ ಮತ್ತು ಅಲ್ವಾರ್‌ನಂತಹ ಪ್ರದೇಶಗಳಲ್ಲಿ ಗಮನಾರ್ಹ ಮಳೆಯಾಗಿ ಬೆಳೆ ಹಾನಿಯನ್ನುಂಟುಮಾಡಿದೆ. ಶೇಖಾವತಿ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ತಾಪಮಾನದಲ್ಲಿ 2-3 ಡಿಗ್ರಿ ಸೆಲ್ಸಿಯಸ್ ಇಳಿಕೆಯಾಗಿದೆ.

ಜೈಪುರದ ಹವಾಮಾನ ಕೇಂದ್ರವು ಜೈಪುರ ಮತ್ತು ಭರತಪುರ ವಿಭಾಗಗಳ ಹಲವು ಜಿಲ್ಲೆಗಳಲ್ಲಿ ಶನಿವಾರ ಮತ್ತಷ್ಟು ಮಳೆಯಾಗುವ ಮುನ್ಸೂಚನೆ ನೀಡಿದೆ.
ಮಾರ್ಚ್ 2 ರಿಂದ ಪರಿಸ್ಥಿತಿ ಸುಧಾರಿಸಲಿದೆ ಎಂದು ಹೇಳಲಾಗುತ್ತಿದೆ. ಮಾರ್ಚ್‌ನಿಂದ ರಾಜ್ಯದಲ್ಲಿ ತೀವ್ರವಾದ ತಾಪಮಾನ ಹೆಚ್ಚಳವಾಗಲಿದೆ ಎಂದು ಇಲಾಖೆ ಹೇಳಿದೆ. ಇಲಾಖೆಯು ಮುಂಬರುವ ತಿಂಗಳುಗಳಲ್ಲಿ ಬಿಸಿ ಗಾಳಿಯ ಎಚ್ಚರಿಕೆಯನ್ನು ನೀಡಿದೆ, ಮಾರ್ಚ್ ನಿಂದ ಮೇ ವರೆಗೆ ತಾಪಮಾನವು ಸರಾಸರಿಗಿಂತ ಹೆಚ್ಚಾಗಿರುತ್ತದೆ ಎಂದು ಹೇಳಿದೆ.

ಪ್ರಮುಖ ಸುದ್ದಿ :-   ಚಿನ್ನ ಕಳ್ಳಸಾಗಣೆ ಪ್ರಕರಣ : ಕಸ್ಟಡಿಯಲ್ಲಿ ನನಗೆ ಚಿತ್ರಹಿಂಸೆ, 10-15 ಬಾರಿ ಕಪಾಳಮೋಕ್ಷ ; ರನ್ಯಾ ರಾವ್ ಆರೋಪ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement