ತನ್ನ ಸಂಗಾತಿ ಸತ್ತ ನಂತರ ಎಬ್ಬಿಸಲು ಪ್ರಯತ್ನಿಸಿ, ತಬ್ಬಿಕೊಂಡು ದುಃಖಿಸಿದ ಭಾವುಕ ಆನೆಯ ಅಸಾಧಾರಣ ವೀಡಿಯೊ ವೈರಲ್‌ ; ಕಣ್ಣೀರು ತರಿಸುತ್ತೆ…!

ಸರ್ಕಸ್ ಆನೆಯೊಂದು ಬಹುಕಾಲದಿಂದ ತನ್ನ ಸಂಗಾತಿಯಾಗಿದ್ದ ಮತ್ತೊಂದು ಆನೆಯ ಸಾವಿಗೆ ದುಃಖಿಸುತ್ತಿರುವ ವೀಡಿಯೊ ವೈರಲ್ ಆದ ನಂತರ ಅದನ್ನು ನೋಡಿದ ಬಹುತೇಕರ ಕಣ್ಣಂಚಿನಲ್ಲಿ ನೀರು ಬಂದಿದೆ.
ರಷ್ಯಾದ ಸರ್ಕಸ್‌ ಕಂಪನಿಯಲ್ಲಿ 25 ವರ್ಷಗಳಿಂದ ಜೊತೆಗಿದ್ದ ಜೆನ್ನಿ ಮತ್ತು ಮ್ಯಾಗ್ಡಾ ಎಂಬ ಎರಡು ಭಾರತೀಯ ಹೆಣ್ಣಾನೆಗಳು ಬೇರ್ಪಡಿಸಲಾಗದ ಅನುಬಂಧವನ್ನು ಹೊಂದಿದ್ದವು. ಸರ್ಕಸ್‌ ಕಂಪನಿಯಿಂದ ಪ್ರದರ್ಶನದಿಂದ ದೂರವಾಗಿ ನಿವೃತ್ತಿ ಜೀವನ ಆನಂದಿಸುತ್ತಿದ್ದವು. ಆದರೆ ವಾರದ ಹಿಂದೆ ಜೆನ್ನಿ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವಿಗೀಡಾಗಿದೆ. ಇದರಿಂದ ತೀವ್ರ ದುಃಖಕ್ಕೆ ಒಳಗಾದ ಮಗ್ಡಾ ಆನೆ ಆರಂಭದಲ್ಲಿ ತನ್ನ ಆತ್ಮೀಯ ಆನೆಯನ್ನು ಎಬ್ಬಿಸಲು ಹಲವಾರು ಬಾರಿ ಪ್ರಯತ್ನಿಸಿತು. ತಳ್ಳಿ, ದೂಡಿ ಮೇಲೆತ್ತಲು ಹತಾಶ ಪ್ರಯತ್ನ ನಡೆಸಿತು. ಈ ಹೆಣ್ಣಾನೆಯ ಪ್ರಯತ್ನಗಳು ವಿಫಲವಾದ ನಂತರ, ಅದು ಜೆನ್ನಿಯನ್ನು ತಬ್ಬಿಕೊಂಡು ನಂತರ ವಿದಾಯ ಹೇಳಲು ಮೃತ ಆನೆಯ ಪಕ್ಕದಲ್ಲಿ ನಿಂತುಕೊಂಡಿತು. ಸ್ಥಳೀಯ ಮಾಧ್ಯಮ ವರದಿಗಳು ಮ್ಯಾಗ್ಡಾ ಆನೆ ಮೃತ ಜೆನ್ನಿಯ ಸುತ್ತಲೂ ಹಲವಾರು ಗಂಟೆಗಳ ಕಾಲ ಇತ್ತು. ದುಃಖಿತ ಪ್ರಾಣಿಯು ತನ್ನ ಸ್ನೇಹಿತನ ಶವದ ಬಳಿ ಯೋಚಿಸುತ್ತ ನಿಂತಾಗ ಪಶು ವೈದ್ಯರನ್ನೂ ತನ್ನ ಬಳಿಗೆ ಬರಲು ಬಿಡಲಿಲ್ಲ. ಈ ಎರಡೂ ಹೆಣ್ಣಾನೆಗಳು ಭಾರತದ ಆನೆಗಳಾಗಿವೆ. ಅನೇಕ ವರ್ಷಗಳ ವರೆಗೆ ಸರ್ಕಸ್‌ನಲ್ಲಿ ಜನರನ್ನು ರಂಜಿಸಿದ ನಂತರ ಈ ಆನೆಗಳು ನಾಲ್ಕು ವರ್ಷಗಳ ಹಿಂದೆ ನಿವೃತ್ತಿ ಹೊಂದಿದ್ದವು.

ಆನೆಗಳು ದಶಕಗಳ ಕಾಲ ರಷ್ಯಾದ ಕಜಾನ್‌ನಲ್ಲಿ ಪ್ರದರ್ಶನ ನೀಡಿದ್ದವು. ಆದರೆ ಮಾರ್ಚ್ 2021 ರಲ್ಲಿ ನಡೆದ ಎರಡು ಘಟನೆಗಳ ನಂತರ ಅವುಗಳಿಗೆ ನಿವೃತ್ತಿ ನೀಡಲಾಯಿತು. ಒಂದು ಪ್ರದರ್ಶನದ ಸಮಯದಲ್ಲಿ, ಈ ಎರಡು ದೈತ್ಯ ಹೆಣ್ಣಾನೆಗಳು ಪ್ರದರ್ಶನದ ಮಧ್ಯದಲ್ಲಿ ಇದ್ದಕ್ಕಿದ್ದಂತೆ ಹೊಡೆದಾಡಲು ಪ್ರಾರಂಭಿಸಿದವು. ಇದರಿಂದಾಗಿ ಪ್ರದರ್ಶನ ನೋಡಲು ಬಂದಿದ್ದವರು ಜೀವ ಭಯದಿಂದ ಅಲ್ಲಿಂದ ಓಡಿಹೋದರು. ಭಯಭೀತರಾದ ಜನಸಮೂಹದ ಹತ್ತಿರ ಅಸಹಾಯಕಳಾಗಿ ರಿಂಗ್‌ ಅಂಚಿನಲ್ಲಿ ಮಲಗಿದ್ದ ಜೆನ್ನಿ ಆನೆ ಮ್ಯಾಗ್ಡಾಳನ್ನು ತುಳಿದಾಗ ಜಗಳ ಪ್ರಾರಂಭವಾಗಿತ್ತು. ಸರ್ಕಸ್‌ ಕಂಪನಿಯು ತರಬೇತುದಾರನ ಗಮನವನ್ನು ಸೆಳೆಯಲು ಆನೆಗಳು ಹಾಗೆ ಮಾಡಿರಬಹುದು, ಕೆಲವೊಮ್ಮೆ ಹಾಗೆ ಮಾಡುತ್ತವೆ ಎಂದು ಹೇಳಿತ್ತು.
ಅದಾದ ಒಂದು ವಾರದಲ್ಲಿ ಮತ್ತೊಂದು ಘಟನೆಯಲ್ಲಿ ಈ ಆನೆಗಳು ತಮ್ಮ ತರಬೇತುದಾರನ ಮೇಲೆ ದಾಳಿ ಮಾಡಿದವು, ತರಬೇತುದಾರನ ಎರಡು ಬೆನ್ನುಮೂಳೆ ಹಾಗೂ ಪಕ್ಕೆಲುಬುಗಳು ಮುರಿದವು. ನಂತರ ಆನೆಗಳ ದೀರ್ಘಾವಧಿಯ ಪ್ರದರ್ಶನವನ್ನು ರದ್ದುಗೊಳಿಸಲಾಗಿತ್ತು.

ಆದರೆ ವಿಶೇಷವೆಂದರೆ ಸರ್ಕಸ್‌ ಕಂಪನಿಯಿಂದ ಅವುಗಳಿಗೆ ನಿವೃತ್ತಿ ನೀಡಿದ ನಂತರ ಜೆನ್ನಿ ಮತ್ತು ಮ್ಯಾಗ್ಡಾ ಮತ್ತೆ ಜಗಳವಾಡಿದ್ದನ್ನು ಯಾರೂ ನೋಡಿಲ್ಲ ಮತ್ತು ಯಾವಾಗಲೂ ಒಟ್ಟಿಗೆ ಅನ್ಯೋನ್ಯವಾಗಿ ಇರುತ್ತಿದ್ದವು ಎಂದು ವರದಿಗಳು ತಿಳಿಸಿವೆ.
ಈ ಆನೆಗಳಿಗೆ ತಮ್ಮ ಕೆಲವು ಹಳೆಯ ಸರ್ಕಸ್ ಪ್ರದರ್ಶನಗಳನ್ನು ನೆನಪಿಸಿಕೊಳ್ಳುತ್ತಿದ್ದವು ಎಂದು ಹೇಳಲಾಗಿದೆ. ಆನೆಗಳು ಅತ್ಯಂತ ಭಾವನಾತ್ಮಕ ಜೀವಿಗಳು ಹಾಗೂ ಬುದ್ಧಿವಂತ ಪ್ರಾಣಿಗಳು. ಅವು ತಮ್ಮ ಭಾವನೆಯನ್ನು ವ್ಯಕ್ತಪಡಿಸಲು ಮತ್ತು ನೆನೆಪಿನ ಶಕ್ತಿಗೆ ಹೆಸರುವಾಸಿ.

ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕರು ಆನೆ ವ್ಯಕ್ತಿಪಡಿಸಿದ ನಿರ್ಮಲ ಪ್ರೀತಿ ಹಾಗೂ ದುಃಖಕ್ಕೆ ಭಾವಪರವಶ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
“ಪ್ರೀತಿಗೆ ಯಾವುದೇ ಮಿತಿಯಿಲ್ಲ. ನಾನು ಅಳುತ್ತಿಲ್ಲ, ನೀವು ಅಳುತ್ತಿರುವಿರಿ ಎಂದು ಒಬ್ಬ ಬಳಕೆದಾರರು ಹೇಳಿದರೆ, “ನೀವು ಹೆಚ್ಚು ಇಷ್ಟಪಡುವದನ್ನು ನೋಡುವುದಕ್ಕಿಂತ ದೊಡ್ಡ ನೋವು ಇನ್ನೊಂದಿಲ್ಲ. ಆನೆಗಳಿಗೆ ನನ್ನ ಸಹಾನುಭೂತಿ (ಅವುಗಳ ಮೌಲ್ಯಕ್ಕೆ) ಎಂದು ಮತ್ತೊಬ್ಬರು ಬರೆದಿದ್ದಾರೆ.
“ಮನುಷ್ಯರ ಹೊರತಾಗಿ ಇತರ ಸಸ್ತನಿಗಳಲ್ಲಿ ಆನೆಗಳು ಸಮಾಧಿ ವಿಧಿಗಳನ್ನು ನಡೆಸುವುದನ್ನು ಗಮನಿಸಲಾಗಿದೆ. ಅವುಗಳು ಸೂಪರ್ ಸ್ಮಾರ್ಟ್, ಇದನ್ನು ವೀಕ್ಷಿಸುವುದು ಹೃದಯ ವಿದ್ರಾವಕ ಎಂದು ಬರೆದಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊಗಳು..| ಅಮೆರಿಕ ದಾಳಿಗೆ ಪ್ರತಿ ದಾಳಿ : ಕತಾರ್, ಇರಾಕಿನಲ್ಲಿನ ಅಮೆರಿಕದ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ ಇರಾನ್‌

 

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement