ಕಾರುಗಳನ್ನು ಮೇಲಕ್ಕೆತ್ತಿ ನಂತರ ಒಯ್ದು ಪಾರ್ಕಿಂಗ್ ಸ್ಥಳಗಳ ಕ್ಲಿಷ್ಟಕರ ಜಾಗದಲ್ಲಿ ಅಚ್ಚುಕಟ್ಟಾಗಿ ಹಾಗೂ ಕರಾರುವಕ್ಕಾಗಿ ಇರಿಸುವ ಸಂಪೂರ್ಣ ತಾನೇ ಸ್ವಯಂ ಕಾರ್ಯನಿರ್ವಹಿಸುವ ರೋಬೋಟ್ ವ್ಯಾಲೆಟ್ ತಂತ್ರಜ್ಞಾನದ ವೀಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ಬೆರಗುಗೊಳಿಸಿದೆ.
ತಾನೇ ಸ್ವಯಂ ಆಗಿ ಕಾರ್ಯನಿರ್ವಹಿಸುವ ರೋಬೋಟ್ ವ್ಯಾಲೆಟ್ ವಾಹನಗಳ ಕೆಳಗೆ ತೂರಿಕೊಳ್ಳುತ್ತದೆ, ಚಕ್ರಗಳ ಮೂಲಕ ವಾಹನವನ್ನು ಮೇಲಕ್ಕೆ ಎತ್ತುತ್ತದೆ ಮತ್ತು ನಿಗದಿತ ಸ್ಥಳಕ್ಕೆ ಒಯ್ಯುತ್ತದೆ. ಹಾಗೂ ಮಾನವ ಚಾಲಕನ ಅಗತ್ಯವಿಲ್ಲದೆ ಕ್ಲಿಷ್ಟವಾದ ಸ್ಥಳಗಳಲ್ಲಿ ಅವುಗಳನ್ನು ನಿರ್ವಹಿಸಿ ತಾನೇ ನೂರಕ್ಕೆ ನೂರರಷ್ಟು ಸರಿಯಾಗಿ ಪಾರ್ಕಿಂಗ್ ಮಾಡುತ್ತದೆ…!
ಗ್ರೋಕ್ ಪ್ರಕಾರ, ವೀಡಿಯೊದಲ್ಲಿರುವ ʼರೋಬೋಟ್ ಪಾರ್ಕಿʼ ಹೆಸರಿನ ರೋಬೋಟ್, ದಕ್ಷಿಣ ಕೊರಿಯಾದ ಎಚ್‌ಎಲ್ (HL) ಮಾಂಡೋ ಅಭಿವೃದ್ಧಿಪಡಿಸಿದ ಸ್ವಯಂ-ಆಗಿ ತಾನೇ ಕಾರ್ಯನಿರ್ವಹಿಸುವ ವ್ಯಾಲೆಟ್ ಆಗಿದೆ.
ಇದು ಗ್ಯಾರೇಜ್‌ಗಳನ್ನು ನ್ಯಾವಿಗೇಟ್ ಮಾಡುವ, ನಂಬರ್ ಪ್ಲೇಟ್‌ಗಳು ಅಥವಾ ಟೈರ್‌ಗಳನ್ನು ಗುರುತಿಸುವ ಮತ್ತು ಕಾರುಗಳನ್ನು ನಿಖರವಾಗಿ ಸಾಗಿಸುವ ಸಾಮರ್ಥ್ಯವಿರುವ ಸ್ಮಾರ್ಟ್ ಪಾರ್ಕಿಂಗ್ ಬಾಟ್‌ಗಳ ಬೆಳೆಯುತ್ತಿರುವ ವರ್ಗದ ಭಾಗವಾಗಿದೆ. ರೋಬೋಟ್ ಪಾರ್ಕಿಯನ್ನು ಈಗಾಗಲೇ 2024 ರಿಂದ ಚೀನಾ ಮತ್ತು ಯುರೋಪಿನ ಕೆಲವು ಭಾಗಗಳಲ್ಲಿ ವಾಹನ ಪಾರ್ಕಿಂಗ್ ಕೆಲಸಕ್ಕಾಗಿ ನಿಯೋಜನೆ ಮಾಡಲಾಗಿದೆ.
ಲೆವೆಲ್ 4 ಸ್ವಯಂ ಕಾರ್ಯನಿರ್ವಹಿಸುವ ವ್ಯವಸ್ಥೆಯ ಕೃತಕ ಬುದ್ಧಿಮತ್ತೆ(ಎಐ)ಯೊಂದಿಗೆ ನಿರ್ಮಿಸಲಾದ ಈ ರೋಬೋಟ್, ನಿಯಂತ್ರಿತ ಪರಿಸರದಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಲಿಡಾರ್, ರಾಡಾರ್ ಮತ್ತು ಆಪ್ಟಿಕಲ್ ಸಂವೇದಕಗಳ ಸಂಯೋಜನೆಯನ್ನು ಬಳಸುತ್ತದೆ. ಇದು ಪ್ರತಿಯೊಂದು ವಾಹನದ ಆಯಾಮಗಳನ್ನು ಗುರುತಿಸುತ್ತದೆ, ಚಕ್ರ ಎತ್ತುವ ಕಾರ್ಯವಿಧಾನವನ್ನು ಬಳಸಿಕೊಂಡು ಅವುಗಳನ್ನು ನಿಧಾನವಾಗಿ ಎತ್ತುತ್ತದೆ ಮತ್ತು ಲಭ್ಯವಿರುವ ಮುಂದಿನ ಪಾರ್ಕಿಂಗ್ ಸ್ಲಾಟ್‌ಗೆ ಅವುಗಳನ್ನು ತಾನೇ ಸ್ವಯಂ ಆಗಿ ಒಯ್ಯುತ್ತದೆ.
ಇದುವರೆಗೆ ಚಾಲಕರು ಸಂಕೀರ್ಣವಾದ ಹಾಗೂ ಸ್ಥಳದ ಮೂಲೆಗಳಲ್ಲಿ ಎಚ್ಚರಿಕೆಯಿಂದ ಹಿಮ್ಮುಖವಾಗಿ ಚಲಿಸಿ ವಾಹನ ಪಾರ್ಕಿಂಗ್ ಮಾಡುವ ಕೆಲಸವನ್ನು ಇದು ಸುಲಲಿತವಾಗಿ, ಕರಾರುವಕ್ಕಾಗಿ ಹಾಗೂ ಕ್ಷಿಪ್ರವಾಗಿ ಮಾಡುತ್ತದೆ.
ಪ್ರತಿ ಜೋಡಿ ರೋಬೋಟ್ ಪಾರ್ಕಿಗೆ ಸರಿಸುಮಾರು $200,000 ಬೆಲೆಯಿದ್ದು, ಇದನ್ನು ಉನ್ನತ-ಮಟ್ಟದ ಗ್ಯಾರೇಜ್‌ಗಳು, ವಿಮಾನ ನಿಲ್ದಾಣಗಳು ಅಥವಾ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುವ ವಾಣಿಜ್ಯ ಸ್ಥಳಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದು ಕಾರ್ಯನಿರ್ವಹಿಸಲು ಸಮತಟ್ಟಾದ, ಸಮ ಮೇಲ್ಮೈಗಳ ಅಗತ್ಯವಿರುತ್ತದೆ ಮತ್ತು ಅಸಮ ಅಥವಾ ಒರಟಾದ ಭೂಪ್ರದೇಶಕ್ಕೆ ಇದು ಸೂಕ್ತವಲ್ಲ ಎಂದು ಹೇಳಲಾಗಿದೆ.
ಈ ವೀಡಿಯೊ ಆನ್‌ಲೈನ್‌ನಲ್ಲಿ ಕುತೂಹಲವನ್ನು ಸೃಷ್ಟಿದೆ, ಅನೇಕ ಬಳಕೆದಾರರು ಅಂತಹ ಭವಿಷ್ಯದ ಗ್ಯಾಜೆಟ್‌ಗಳು ತಮ್ಮದೇ ಆದ ನಗರಗಳಲ್ಲಿ ಯಾವಾಗ ಬರಬಹುದು ಎಂದು ಆಶ್ಚರ್ಯ ಪಡುತ್ತಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ