ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಹಾರಿದ ಮಹಿಳೆಯ ಜೀವ ಉಳಿಸಿದ ಮೊಸಳೆ…!

ಕಾನ್ಪುರ : ವಿಧಿಯ ವಿಚಿತ್ರ ತಿರುವು ನೋಡಿ, ತನ್ನ ಪ್ರಾಣವನ್ನು ಕಳೆದುಕೊಳ್ಳಲು ಗಂಗಾ ನದಿಗೆ ಹಾರಿದ್ದ ಮಹಿಳೆಯ ಜೀವವನ್ನು ಮೊಸಳೆಯೊಂದು ಕಾಪಾಡಿದೆ…! ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ಈ ಆಘಾತಕಾರಿ ಆದರೆ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಘಟನೆಯ ವಿಚಿತ್ರ ತಿರುವಿನಿಂದಾಗಿ ಪತಿ-ಪತ್ನಿಯರ ನಡುವಿನ ಜಗಳ ಈಗ ಸುದ್ದಿಗೆ ಕಾರಣವಾಗಿದೆ
ಮಾಲ್ತಿ ಎಂಬ ಮಧ್ಯವಯಸ್ಕ ಮಹಿಳೆ ತನ್ನ ಪತಿಯೊಂದಿಗೆ ಉಂಟಾದ ತೀವ್ರ ಜಗಳದ ನಂತರ ನದಿಗೆ ಹಾರಿ ಸಾಯುವ ನಿರ್ಧಾರ ತೆಗೆದುಕೊಂಡಿದ್ದರು ಎನ್ನಲಾಗಿದೆ.
ವರದಿಗಳ ಪ್ರಕಾರ, ಅಹಿರ್ವಾನ್ ನಿವಾಸಿ ಸುರೇಶ ತಮ್ಮ ಪತ್ನಿ ಮಾಲ್ತಿ ಜೊತೆ ಒಂದಲ್ಲ ಒಂದು ವಿಷಯದ ಬಗ್ಗೆ ಆಗಾಗ್ಗೆ ಜಗಳವಾಡುತ್ತಿದ್ದರು. ಸೆಪ್ಟೆಂಬರ್ 6 ರ ಶನಿವಾರ ರಾತ್ರಿ ದಂಪತಿ ಜಗಳವಾಡಿದರು. ಸುರೇಶ ತನ್ನ ಪತ್ನಿಗೆ ಚಹಾ ಮಾಡಲು ಹೇಳಿದ್ದಾರೆ, ಆದರೆ ಕೆಲಸ ಮಾಡಿ ದಣಿದಿದ್ದ ಮಾಲ್ತಿ ʼನೀವೇ ಮಾಡಿಕೊಳ್ಳಿʼ ಎಂದು ಹೇಳಿದ್ದಾರೆ. ಈ ವಿಷಯಕ್ಕೆ ಆರಂಭವಾದ ವಾಗ್ವಾದ ನಂತರ ಜಗಳವಾಗಿ ಬದಲಾಯಿತು. ನಂತರ ಮಾಲ್ತಿ ಕೋಪದಿಂದ ಮನೆಯಿಂದ ಹೊರಟುಹೋಗಿದ್ದಾರೆ.

ಕೋಪ ಹಾಗೂ ಹತಾಶೆಯಿಂದ ಮಾಲ್ತಿ, ಜಜ್ಮೌನಲ್ಲಿರುವ ಗಂಗಾ ಸೇತುವೆಗೆ ಬಂದಿದ್ದಾರೆ. ಕೋಪದ ಭರದಲ್ಲಿ ಸಾಯಲು ನಿರ್ಧರಿಸಿ ಸೇತುವೆಯಿಂದ ಗಂಗಾ ನದಿಗೆ ಹಾರಿದ್ದಾರೆ. ನದಿಗೆ ಹಾರಿದ ತಕ್ಷಣ, ಅವರಿಗೆ ನೀರಿನಲ್ಲಿ ಮೊಸಳೆಯೊಂದು ಕಂಡಿದೆ. ಇದರಿಂದ ಭಯಭೀತರಾದ ಅವರು ತನ್ನ ಸಾಯುವ ಪ್ರಯತ್ನ ಕೈಬಿಟ್ಟು ತನ್ನನ್ನು ತಾನು ಉಳಿಸಿಕೊಳ್ಳಲು ಈಜಲು ಪ್ರಾರಂಭಿಸಿದ್ದಾರೆ. ಹೇಗೋ ಈಜಿ ನದಿಯ ದಡವನ್ನು ತಲುಪುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಮೊಸಳೆಯಿಂದ ಬಚಾವ್‌ ಆಗಲು ಅಲ್ಲಿಯೇ ಇದ್ದ ಮರವನ್ನು ಏರಿದ್ದಾರೆ. ಮೊಸಳೆಯ ಹೆದರಿಕೆಯಿಂದ ಇಡೀ ರಾತ್ರಿ ಮರದ ಮೇಲೆಯೇ ಕಳೆದಿದ್ದಾರೆ. ಮಾರನೇ ದಿನ ಬೆಳಿಗ್ಗೆ, ಹತ್ತಿರದ ಹಳ್ಳಿಯ ಜನರು ಗಂಗಾ ನದಿಯ ದಡದಲ್ಲಿ ಹಾದುಹೋಗುತ್ತಿದ್ದಾಗ, ಮಾಲ್ತಿ ಮರದ ಮೇಲಿಂದ ಸಹಾಯಕ್ಕಾಗಿ ಕೂಗಿದ್ದಾರೆ. ಮಹಿಳೆ ಮರದ ಮೇಲಿರುವುದನ್ನು ನೋಡಿ ಗ್ರಾಮಸ್ಥರು ದಿಗ್ಭ್ರಮೆಗೊಂಡಿದ್ದಾರೆ.

ಪ್ರಮುಖ ಸುದ್ದಿ :-   ಮೊದಲು ಹಾಲಿನಲ್ಲಿ ನಿದ್ದೆ ಮಾತ್ರೆ...ನಂತರ ಹಾಸಿಗೆ ಮೇಲೆ ವಿಷದ ಹಾವು ! ಗಂಡನ ಕೊಲೆಗೆ ಪತ್ನಿಯ ಭಯಾನಕ ಸಂಚು...!

ಮಾಲ್ತಿ ಅಳುತ್ತಾ ಇಡೀ ಕಥೆಯನ್ನು ಹೇಳಿದಾಗ, ಗ್ರಾಮಸ್ಥರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಬಂದ ತಕ್ಷಣ, ಜಜ್ಮೌ ಪೊಲೀಸ್ ಪೋಸ್ಟ್ ಇನ್‌ಚಾರ್ಜ್ ವಿನಯ ಯಾದವ್ ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತಲುಪಿದರು. ಮಹಿಳೆಯನ್ನು ಸುರಕ್ಷಿತವಾಗಿ ಕೆಳಗಿಳಿಸಿದರು. ಪೊಲೀಸರ ಪ್ರಕಾರ, ಮಾಲ್ತಿ ಇಡೀ ರಾತ್ರಿ ಮರದ ಮೇಲೆ ಕುಳಿತುಕೊಂಡಿದ್ದಾರೆ, ಮೊಸಳೆ ಕೆಳಗೆ ನೀರಿನಲ್ಲಿ ಇದ್ದರಿಂದ ಕೆಳಗೆ ಬರಲು ಅವರು ಹೆದರಿಕೊಂಡಿದ್ದರು. ಅವರು ಆಘಾತಕ್ಕೊಳಗಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳೀಯರು ಈ ಘಟನೆಯನ್ನು ಪವಾಡಕ್ಕಿಂತ ಕಡಿಮೆಯಿಲ್ಲ ಎಂದು ಬಣ್ಣಿಸಿದ್ದಾರೆ, ಕೆಲವರು ಇದನ್ನು ಮಾಲ್ತಿಗೆ ‘ಎರಡನೇ ಜೀವನ’ ಎಂದು ಕರೆದಿದ್ದಾರೆ. ವಿಪರ್ಯಾಸವೆಂದರೆ, ಮೊಸಳೆ ಬಗ್ಗೆ ಇದ್ದ ಹೆದರಿಕೆಯೇ ಮಹಿಳೆಯ ಆತ್ಮಹತ್ಯಾ ಪ್ರಯತ್ನವನ್ನು ತಡೆಯಿತು ಮತ್ತು ಮತ್ತೆ ಬದುಕಲು ಅವಕಾಶವನ್ನು ನೀಡಿತು.

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement