ಕ್ಯಾಲಿಫೋರ್ನಿಯಾದ ಹಂಟಿಂಗ್ಟನ್ ಬೀಚ್ನಲ್ಲಿ ಹೃದಯ ಕಲಕುವ ಘಟನೆಯೊಂದು ನಡೆದಿದ್ದು, ಹೆಲಿಕ್ಯಾಪ್ಟರ್ ಸಮೀಪದ ಬೀಚ್ ಬಳಿ ಬಿದ್ದಿದ್ದು, ಅದು ಬೀಚ್ನಲ್ಲಿ ಕುಳಿತಿದ್ದ ಬಾಲಕನ ಮೇಲೆ ಬಿದ್ದಿದೆ. ಬಾಲಕ ಸೇರಿದಂತೆ ಐವರು ತೀವ್ರವಾಗಿ ಗಾಯಗೊಂಡಿದ್ದು, ಘಟನೆಯ ಕ್ಷಣದ ವೀಡಿಯೊ ವೈರಲ್ ಆಗಿದೆ.
ಅಕ್ಟೋಬರ್ 11 ರಂದು ‘ಕಾರ್ಸ್ ಎನ್ ಕಾಪ್ಟರ್ಸ್’ ಎಂಬ ಕಾರ್ಯಕ್ರಮದ ವೇಳೆ ಈ ಭಯಾನಕ ಘಟನೆ ನಡೆದಿದೆ. ವಾಯುಯಾನ ಕ್ಷೇತ್ರದ ಪ್ರಭಾವಿ (influencer) ಎರಿಕ್ ನಿಕ್ಸನ್ ಅವರಿಗೆ ಸೇರಿದ 1980ರ ಬೆಲ್ 222 (Bell 222) ಹೆಲಿಕ್ಯಾಪ್ಟರ್, ನೆಲಕ್ಕೆ ಅಪ್ಪಳಿಸುವ ಮುನ್ನ ನಿಯಂತ್ರಣ ತಪ್ಪಿ ತಿರುಗುತ್ತ ನೆಲಕ್ಕೆ ಅಪ್ಪಳಿಸಿದೆ.
ವೀಡಿಯೊದಲ್ಲಿ ಭಯಾನಕ ದೃಶ್ಯ:
ಲಭ್ಯವಾಗಿರುವ ವೀಡಿಯೊ ತುಣುಕುಗಳಲ್ಲಿ, ಹೆಲಿಕ್ಯಾಪ್ಟರ್ ಗಾಳಿಯಲ್ಲಿ ಸಮತೋಲನ ಕಳೆದುಕೊಂಡು ಕಟ್ಟಡದ ಮೆಟ್ಟಿಲುಗಳ ಬಳಿ ಬೀಳುವುದನ್ನು ನೋಡಬಹುದು. ಹೆಲಿಕಾಪ್ಟರ್ ನೆಲಕ್ಕೆ ಬಡಿದ ತಕ್ಷಣ, ಅದರ ಭಾಗಗಳು ಚೆಲ್ಲಾಪಿಲ್ಲಿಯಾಗಿ ಹಾರಿ ಬಿದ್ದಿದ್ದು, ಜನರು ಕಿರುಚುತ್ತಾ ಓಡಿ ಹೋಗಿದ್ದಾರೆ.
ಕೆಲವೇ ಕ್ಷಣಗಳಲ್ಲಿ, ಸ್ಥಳೀಯರು ಅಪಘಾತ ಸಂಭವಿಸಿದ ಸ್ಥಳದತ್ತ ಧಾವಿಸಿದ್ದಾರೆ ಹಾಗೂ ಅವಶೇಷಗಳಡಿ ಸಿಲುಕಿದ್ದ ಆಲಿವರ್ ಹಾಲೆಂಡ್ ಎಂಬ ಬಾಲಕನನ್ನು ಬಚಾವ್ ಮಾಡಿದ್ದಾರೆ. ತುಂಡು ತುಂಡಾಗಿ ಬಿದ್ದ ವಿಮಾನದಿಂದ ಹೊಗೆ ಏಳುತ್ತಿದ್ದಾಗ, ಇಬ್ಬರು ವ್ಯಕ್ತಿಗಳು ಧಾವಿಸಿ ಬಂದು ಹೆಲಿಕಾಪ್ಟರ್ ಕೆಳಗೆ ಸಿಲುಕಿದ್ದ ಬಾಲಕನನ್ನು ಬಗ್ಗಿ ಹೊರಗೆ ಎಳೆಯಲು ಪ್ರಯತ್ನಿಸುತ್ತಿರುವುದು ವೀಡಿಯೊದಲ್ಲಿ ದಾಖಲಾಗಿದೆ.
ಬೀಚ್ನಲ್ಲಿ ಕುಳಿತಿದ್ದವನ ಮೇಲೆ ಬಿತ್ತು ಹೆಲಿಕಾಪ್ಟರ್…!
ವರದಿಗಳ ಪ್ರಕಾರ, ಈ ಅಪಘಾತದಲ್ಲಿ ಪೈಲಟ್, ಒಬ್ಬ ಪ್ರಯಾಣಿಕ ಹಾಗೂ ಮೂವರು ಸ್ಥಳೀಯರು ಸೇರಿದಂತೆ ಒಟ್ಟು ಐವರಿಗೆ ಗಾಯಗಳಾಗಿವೆ. ಆದರೆ, ಅವಶೇಷಗಳಡಿ ಸಿಲುಕಿದ್ದ ಬಾಲಕ ಆಲಿವರ್ ತೀವ್ರವಾಗಿ ಗಾಯಗೊಂಡಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಲಿವರ್ನ ಸಹೋದರಿ ಮ್ಯಾಡೆಲಿನ್ ಅವರು ಆತನ ಚೇತರಿಕೆಗಾಗಿ ಸಹಾಯ ಮಾಡಲು ‘GoFundMe’ ಪುಟವನ್ನು ಪ್ರಾರಂಭಿಸಿದ್ದಾರೆ. “ಆಲಿವರ್ ಬೀಚ್ನಲ್ಲಿ ಸಂತೋಷದಿಂದ ಕಳೆಯುತ್ತಿದ್ದಾಗ, ಅನಿರೀಕ್ಷಿತವಾಗಿ ಹೆಲಿಕ್ಯಾಪ್ಟರ್ ತಾಂತ್ರಿಕ ದೋಷದಿಂದಾಗಿ ಅಪ್ಪಳಿಸಿ ಆತನ ಮೇಲೆ ಬಿತ್ತು. ಸದ್ಯಕ್ಕೆ ಆತ ಆಸ್ಪತ್ರೆಯಲ್ಲಿದ್ದು, ಶಸ್ತ್ರಚಿಕಿತ್ಸೆ ನಡೆಯುತ್ತಿದೆ. ಅವನ ಒಂದು ಶ್ವಾಸಕೋಶಕ್ಕೆ ಹಾನಿಯಾಗಿದೆ ಮತ್ತು ಮೆದುಳಿನಲ್ಲಿ ರಕ್ತಸ್ರಾವವಾಗಿದೆ” ಎಂದು ಅವರು ಬರೆದುಕೊಂಡಿದ್ದಾರೆ.
“ಆಲಿವರ್ ನನಗೆ ತಿಳಿದಿರುವ ಅತ್ಯಂತ ಬುದ್ಧಿವಂತ ಮತ್ತು ತಮಾಷೆಯ ಹುಡುಗ. ನನ್ನ ಸಹೋದರ ಬೇಗ ಗುಣಮುಖನಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಈ ಬಗ್ಗೆ ಜಾಗೃತಿ ಮೂಡಿಸಲು ನಾವು ಬಯಸುತ್ತೇವೆ. ದಯವಿಟ್ಟು ಆಲಿವರ್ಗಾಗಿ ಪ್ರಾರ್ಥಿಸಿ” ಎಂದು ಮ್ಯಾಡೆಲಿನ್ ಮನವಿ ಮಾಡಿದ್ದಾರೆ. ಈ ನಿಧಿಸಂಗ್ರಹವು ಅವನ ವೈದ್ಯಕೀಯ ವೆಚ್ಚಗಳಿಗೆ ಸಹಾಯ ಮಾಡಲಿದೆ. ಅಧಿಕಾರಿಗಳ ಪ್ರಕಾರ, ಈ ಹೆಲಿಕಾಪ್ಟರ್ ‘ಕಾರ್ಸ್ ಎನ್ ಕಾಪ್ಟರ್ಸ್ ಆನ್ ದಿ ಕೋಸ್ಟ್’ ಕಾರ್ಯಕ್ರಮದ ಭಾಗವಾಗಿತ್ತು.


ನಿಮ್ಮ ಕಾಮೆಂಟ್ ಬರೆಯಿರಿ