ನವದೆಹಲಿ: ದುಬೈ ಏರ್ಶೋ (Dubai Airshow)ದಲ್ಲಿ ಅಪಘಾತಕ್ಕೀಡಾದ ಭಾರತೀಯ ವಾಯುಪಡೆಯ ‘ತೇಜಸ್’ (Tejas) ಯುದ್ಧ ವಿಮಾನ ಪತನದ ಹೊಸ ವೀಡಿಯೊ ಬಿಡುಗಡೆಯಾಗಿದ್ದು, ಅದರಲ್ಲಿ ಪೈಲಟ್ನ ಅಂತಿಮ ಕ್ಷಣಗಳ ಸ್ಪಷ್ಟ ಚಿತ್ರಣವನ್ನು ಒದಗಿಸಿದೆ.
ದುಬೈ ಏರ್ಶೋ ವೇಳೆ ತೇಜಸ್ ಜೆಟ್ ಕಡಿಮೆ ಎತ್ತರದಲ್ಲಿ ವೈಮಾನಿಕ ಪ್ರದರ್ಶನವನ್ನು (Aerobatic Manoeuvre) ನಿರ್ವಹಿಸುತ್ತಿದ್ದಾಗ, ನೆಲಕ್ಕೆ ಅಪ್ಪಳಿಸಿ ದೊಡ್ಡ ಬೆಂಕಿಯ ಚೆಂಡಾಗಿ ಸ್ಫೋಟಗೊಂಡಿತು. ಅಪಘಾತ ಸಂಭವಿಸಿದ ಸ್ಥಳದಿಂದ ದಟ್ಟವಾದ ಕಪ್ಪು ಹೊಗೆ ಆವರಿಸಿದ್ದ ಅನೇಕ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದ್ದವು.
ಪೈಲಟ್ ಕೊನೆಯ ಕ್ಷಣದಲ್ಲಿ ಹೊರಬರಲು ಪ್ರಯತ್ನಿಸಿದ್ದನೇ?
ಲಭ್ಯವಾದ ಹೊಸ ವಿಡಿಯೋವು ಕೊನೆಯ ಸೆಕೆಂಡುಗಳಲ್ಲಿ ಏನಾಯಿತು ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ವಿಡಿಯೋದ 49 ರಿಂದ 52ನೇ ಸೆಕೆಂಡಿನ ನಡುವೆ, ವಿಮಾನವು ಬೆಂಕಿಯಲ್ಲಿ ಸ್ಫೋಟಗೊಳ್ಳುವಾಗಲೇ, ಪ್ಯಾರಾಚೂಟ್ನಂತಹ ವಸ್ತುವು ಗೋಚರಿಸಿದೆ. ಇದು ಪೈಲಟ್ ವಿಮಾನದಿಂದ ಹೊರಬರಲು (Eject) ಪ್ರಯತ್ನಿಸಿದ್ದಾರೆ, ಆದರೆ ಅದು ತಡವಾಯಿತು ಎಂದು ಸೂಚಿಸುತ್ತದೆ.
ಸುರಕ್ಷತಾ ದಾಖಲೆಯಲ್ಲಿ ಉತ್ತಮ ಸಾಧನೆ ಹೊಂದಿರುವ ಈ ವಿಮಾನವನ್ನು ಉಳಿಸಲು ಪೈಲಟ್ ನಿಯಂತ್ರಣ ಸಾಧಿಸಲು ಪ್ರಯತ್ನಿಸಿದ ಕಾರಣದಿಂದಲೂ ಹೊರಬರುವುದು ತಡವಾಗಿರಬಹುದು ಎನ್ನಲಾಗಿದೆ. ಭಾರತದ ಮೊದಲ ಸ್ವದೇಶಿ ನಿರ್ಮಿತ ಹಗುರ ಬಹು-ಪಾತ್ರದ ಫೈಟರ್ ಜೆಟ್ ಆದ ತೇಜಸ್, ಅದರ 10 ವರ್ಷಗಳ ಸೇವೆಯಲ್ಲಿ ದಾಖಲಾದ ಮೊದಲ ಸಾವು ಇದಾಗಿದೆ. ಕಳೆದ ವರ್ಷ ಮಾರ್ಚ್ನಲ್ಲಿ ಜೈಸಾಲ್ಮೀರ್ ಬಳಿ ಮತ್ತೊಂದು ತೇಜಸ್ ವಿಮಾನ ಅಪಘಾತಕ್ಕೀಡಾಗಿತ್ತು, ಆದರೆ ಆಗ ಪೈಲಟ್ ಸುರಕ್ಷಿತವಾಗಿ ಹೊರಬಂದಿದ್ದರು.
ಕಡಿಮೆ ಎತ್ತರದಲ್ಲಿದ್ದ ವಿಮಾನ
ಏರ್ಶೋನಲ್ಲಿ ವೀಕ್ಷಕರೊಬ್ಬರು ಸೆರೆಹಿಡಿದಿರುವ ಈ ಹೊಸ ವೀಡಿಯೊದಲ್ಲಿ, ತೇಜಸ್ ಯುದ್ಧ ವಿಮಾನವು ‘ಬ್ಯಾರೆಲ್ ರೋಲ್’ ಎಂಬ ವೈಮಾನಿಕ ಚಲನೆಯನ್ನು (Jet turns over and then back up) ನಿರ್ವಹಿಸುತ್ತಿರುವುದು ಕಂಡುಬಂದಿದೆ. ಕೆಳಗೆ ಬೀಳುವ ಸ್ವಲ್ಪ ಮೊದಲು, ಜೆಟ್ ‘ನೆಗೆಟಿವ್-ಜಿ ಟರ್ನ್’ ಅನ್ನು ನಿರ್ವಹಿಸುತ್ತಿತ್ತು. ಆದರೆ, ಆ ಸಮಯದಲ್ಲಿ ಜೆಟ್ ಅತ್ಯಂತ ಕಡಿಮೆ ಎತ್ತರದಲ್ಲಿ ಹಾರುತ್ತಿತ್ತು.
ಜೆಟ್ ನೆಲಕ್ಕೆ ಅಪ್ಪಳಿಸುವ ಮೊದಲು ಅದು ಕಡಿಮೆ ಎತ್ತರಕ್ಕೆ ಇಳಿಯುತ್ತಲೇ ಇತ್ತು. ವಿಮಾನಯಾನ ತಜ್ಞರ ಪ್ರಕಾರ, ಜೆಟ್ನ ಎತ್ತರವನ್ನು ಹೆಚ್ಚಿಸಲು ಮತ್ತು ನಿಯಂತ್ರಣಕ್ಕೆ ತರಲು ಯಾವುದೇ ಅವಕಾಶವಿರಲಿಲ್ಲ.
ಆದಾಗ್ಯೂ, ಅಪಘಾತಕ್ಕೆ ನಿಖರವಾದ ಕಾರಣ ಏನು ಎಂಬುದು ತನಿಖೆಯ ನಂತರವೇ ತಿಳಿದುಬರಲಿದೆ. ಈ ದುರಂತದ ಕಾರಣವನ್ನು ಪತ್ತೆಹಚ್ಚಲು ಭಾರತೀಯ ವಾಯುಪಡೆಯು (IAF) ಈಗಾಗಲೇ ತನಿಖಾ ನ್ಯಾಯಾಲಯವನ್ನು (Court of Inquiry) ರಚಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ