ವೀಡಿಯೊ..| ಏಲಿಯನ್ ದೇವಾಲಯ….! ತಮಿಳುನಾಡಿನಲ್ಲಿ ಅನ್ಯಗ್ರಹ ಜೀವಿ ʼಏಲಿಯನ್ ದೇವತೆʼಗೆ ದೇವಸ್ಥಾನ ನಿರ್ಮಾಣ

ಭಾರತದಲ್ಲಿ ಇತಿಹಾಸ, ವಾಸ್ತುಶಿಲ್ಪ ಇತ್ಯಾದಿ ಸಂಗತಿಗಳಿಂದಾಗಿ ವಿಶಿಷ್ಟವಾಗಿ ನಿಲ್ಲುವ ಅನೇಕ ದೇವಾಲಯಗಳಿವೆ. ಆದರೆ, ಭಾರತದಲ್ಲಿ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ, ಏಲಿಯನ್‌(ಅನ್ಯಗ್ರಹ ಜೀವಿ)ಗಳಿಗೆ ಸಮರ್ಪಿತವಾದ ದೇವಾಲಯವೊಂದು ಗಮನ ಸೆಳೆದಿದೆ.
ಇದನ್ನು ಸಾಮಾನ್ಯವಾಗಿ “ಏಲಿಯನ್ ದೇವಾಲಯ” ಅಥವಾ “ಏಲಿಯನ್ ಸಿದ್ಧರ್ ದೇವಾಲಯ” ಎಂದು ಕರೆಯಲಾಗುತ್ತದೆ. ಸಾಮಾನ್ಯ ದೇವಾಲಯಗಳಿಗಿಂತ ಇದು ಸಂಪೂರ್ಣವಾಗಿ ಭಿನ್ನವಾಗಿದೆ. ಸಾಂಪ್ರದಾಯಿಕ ದೇವತೆಯ ಬದಲಿಗೆ, ಈ ದೇವಾಲಯವು ಕಪ್ಪು ಬಣ್ಣದ ಏಲಿಯನ್ ದೇವರ ಪ್ರತಿಮೆಯನ್ನು ಹೊಂದಿದೆ. ಈ ದೇವಾಲಯವನ್ನು ನೆಲದಿಂದ 11 ಅಡಿ ಕೆಳಗೆ ನಿರ್ಮಿಸಲಾಗಿದೆ. ಈ ದೇವಾಲಯವು “ಕೈಲಾಯ ಶಿವ ದೇವಾಲಯ” ಸಂಕೀರ್ಣದ ಒಳಗೆ ಇದ್ದು, “ಏಲಿಯನ್ ದೇವರ” ವಿಗ್ರಹವನ್ನು ನೆಲದಡಿಯಲ್ಲಿ ಹನ್ನೊಂದು ಅಡಿ ಆಳದಲ್ಲಿರುವ ಧ್ಯಾನ ಮಂದಿರದಲ್ಲಿ ಪ್ರತಿಷ್ಠಾಪಿಸಲಾಗಿದೆ. ಇದನ್ನು ಅನ್ಯಗ್ರಹ ದೇವತೆಯನ್ನು ಗೌರವಿಸುವ ವಿಶ್ವದ ಮೊದಲ ಔಪಚಾರಿಕ ದೇವಾಲಯ ಇದು ಎಂದು ಹೇಳಲಾಗುತ್ತಿದೆ.

ವರದಿಗಳ ಪ್ರಕಾರ, ಈ ದೇವಾಲಯವನ್ನು ಮಲ್ಲಮೂಪ್ಪಂಪಟ್ಟಿಯ ರಾಮಗೌಂಡನೂರಿನ ನಿವಾಸಿ ಲೋಕನಾಥನ್ ಎಂಬವರು ನಿರ್ಮಿಸಿದ್ದಾರೆ. ತಮ್ಮ ಕನಸಿನಲ್ಲಿ ಏಲಿಯನ್ ದೇವರನ್ನು ಕಂಡಿದ್ದರಿಂದ ದೇವಾಲಯ ನಿರ್ಮಿಸಲು ಸ್ಫೂರ್ತಿ ಸಿಕ್ಕಿತು ಎಂದು ಅವರು ಹೇಳುತ್ತಾರೆ. ಈ ಕಪ್ಪು ವಿಗ್ರಹಕ್ಕೆ ಲೋಕನಾಥನ್ ಅವರು ಪ್ರತಿದಿನ ಪೂಜೆ ಸಲ್ಲಿಸುತ್ತಾರೆ.
ಈ ಏಲಿಯನ್ ಭಗವಾನ್‌ ಶಿವನಿಂದ ಸೃಷ್ಟಿಸಲ್ಪಟ್ಟ ಮೊದಲ ದೇವತೆ ಮತ್ತು ಭಕ್ತರನ್ನು ಹಾಗೂ ಜಗತ್ತನ್ನು ನೈಸರ್ಗಿಕ ವಿಕೋಪಗಳಿಂದ ರಕ್ಷಿಸುವ ಅಪಾರ ಶಕ್ತಿಯನ್ನು ಹೊಂದಿದೆ ಎಂದು ಲೋಕನಾಥನ್‌ ನಂಬಿದ್ದಾರೆ. ತಾನು ಏಲಿಯನ್‌ಗಳೊಂದಿಗೆ ಸಂವಹನ ನಡೆಸಿದ್ದು, ಅವರು ಜಗತ್ತನ್ನು ರಕ್ಷಿಸಲು ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದೂ ಲೋಕನಾಥನ್ ಹೇಳಿಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ; ಕಕ್ಷೆ ತಲುಪಿದ ಸ್ಕೈರೂಟ್‌ನ ಖಾಸಗಿ ರಾಕೆಟ್ ‘ವಿಕ್ರಂ-1’

https://x.com/i/status/1958490382397784280

ಗಮನ ಸೆಳೆದ ದೇವಾಲಯ
ದೇವಾಲಯದ ಒಳಭಾಗವನ್ನು ತೋರಿಸುವ ವೀಡಿಯೊವೊಂದು ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದು, ದೇವಾಲಯದ ನಿಖರ ವಿಳಾಸವನ್ನು ಸಹ ವೀಡಿಯೊದ ಶೀರ್ಷಿಕೆಯಲ್ಲಿ ನೀಡಲಾಗಿದೆ. . ಇದು ಈಗ ಕುತೂಹಲ, ಚರ್ಚೆ ಮತ್ತು ಕೆಲವು ಜನರಿಗೆ ಪ್ರವಾಸದ ವಿಷಯವಾಗಿ ಮಾರ್ಪಟ್ಟಿದೆ.
ಲೋಕನಾಥನ್  ಅವರ  ಪ್ರಯಾಣ
ಲೋಕನಾಥನ್ ಅವರು ಕೇವಲ 10ನೇ ತರಗತಿಯವರೆಗೆ ಓದಿದ್ದಾರೆ. ಕೆಲವು ವರ್ಷಗಳ ಹಿಂದೆ ಕೆಫೆ ನಡೆಸುತ್ತಿದ್ದ ಅವರಿಗೆ ಕಾಲು ನೋವಿನ ಸಮಸ್ಯೆ ಕಾಣಿಸಿಕೊಂಡಿತ್ತು. ಇದಕ್ಕೆ ಸೂಕ್ತ ಚಿಕಿತ್ಸೆ ಹುಡುಕುವಾಗ ಅವರಿಗೆ ಸಿದ್ಧರ್ ಭಾಗ್ಯ ಎಂಬುವವರು ಪರಿಚಯವಾಗಿ ಅವರ ಶಿಷ್ಯರಾದರು ಮತ್ತು ಅವರ ಹೆಸರನ್ನೇ ಅಳವಡಿಸಿಕೊಂಡರು. ಮತ್ತೊಬ್ಬ ಗುರುಗಳಾದ ಗುರುನಾಥರ್ ಅವರ ಮಾರ್ಗದರ್ಶನದಲ್ಲಿ ಅವರು ದೇವಾಲಯವನ್ನು ನಿರ್ಮಿಸಲು ಪ್ರಾರಂಭಿಸಿದರು.
ಪುರಾತನ ಸಿದ್ಧ ತಾಳೆಗರಿ ಹಸ್ತಪ್ರತಿಗಳಲ್ಲಿ ಏಲಿಯನ್‌ಗಳ ಬಗ್ಗೆ ಉಲ್ಲೇಖವಿದೆ ಮತ್ತು ಭವಿಷ್ಯದಲ್ಲಿ ಜನರು ಅವರನ್ನು ಪೂಜಿಸಬಹುದು ಎಂದು ಲೋಕನಾಥನ್‌ ನಂಬಿದ್ದಾರೆ. ಈ ದೇವಾಲಯ ನಿರ್ಮಾಣಕ್ಕೆ ಯಾವುದೇ ದೇಣಿಗೆಯನ್ನು ಸಂಗ್ರಹಿಸಲಾಗಿಲ್ಲ ಮತ್ತು ಯೋಜನೆಯನ್ನು ಪೂರ್ಣಗೊಳಿಸಲು ಲೋಕನಾಥನ್ ಅವರು ತಮ್ಮ ಶಿಷ್ಯರ ಸಹಾಯದಿಂದ ಮಾಡಿದ್ದಾರೆ.
ಸೇಲಂ ಜಿಲ್ಲೆಯ ಮಲ್ಲಮುಪಂಪಟ್ಟಿಯಲ್ಲಿರುವ ಈ “ಏಲಿಯನ್ ದೇವಾಲಯ”ವು ಆಧುನಿಕ ಯುಗದಲ್ಲಿ ನಂಬಿಕೆಯು ಸಮಯ ಮತ್ತು ಸಂದರ್ಭಗಳಿಗೆ ಹೇಗೆ ಹೊಂದಿಕೊಳ್ಳಬಹುದು ಎಂಬುದಕ್ಕೆ ಒಂದು ಮಹತ್ವದ ಸಂಕೇತವಾಗಿದೆ.

ಪ್ರಮುಖ ಸುದ್ದಿ :-   ಉದ್ಧವ್‌ಗೆ ಭಾರಿ ಹಿನ್ನಡೆ ; ಶಿಂಧೆ ಬಣದ ಜೊತೆ ಶಿವಸೇನೆ(ಯುಬಿಟಿ) 6 ಸಂಸದರ ವಿಲೀನಕ್ಕೆ ಲೋಕಸಭೆ ಸ್ಪೀಕರ್ ಅನುಮೋದನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement