ಕೊಚ್ಚಿ : ವೈದ್ಯಕೀಯ ಕೌಶಲ್ಯ ಮತ್ತು ಮಾನವೀಯತೆಯ ಅಪರೂಪದ ಸಂಗಮಕ್ಕೆ ಕೇರಳದ ರಸ್ತೆಯೊಂದು ಸಾಕ್ಷಿಯಾಗಿದೆ. ಆಸ್ಪತ್ರೆಗೆ ತಲುಪಲು ಸಮಯವಿಲ್ಲದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿಗೆ, ರಸ್ತೆಯ ಪಕ್ಕದಲ್ಲೇ ತುರ್ತು ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಕೇರಳದ ವೈದ್ಯರ ತಂಡವೊಂದು ಆ ವ್ಯಕ್ತಿಯ ಜೀವ ಉಳಿಸಿ ಮಹತ್ಕಾರ್ಯ ಮಾಡಿದೆ.
ಯಾವುದೇ ಆಪರೇಷನ್ ಥಿಯೇಟರ್ ಇಲ್ಲದೆ, ಅತ್ಯಾಧುನಿಕ ವೈದ್ಯಕೀಯ ಉಪಕರಣಗಳ ಲಭ್ಯತೆಯೂ ಇಲ್ಲದೆ, ಕೇವಲ ಮೊಬೈಲ್ ಫೋನ್ಗಳ ಬೆಳಕಿನಲ್ಲೇ ವೈದ್ಯರು ಈ ಸಾಹಸ ಮಾಡಿದ್ದಾರೆ. ಸ್ಥಳೀಯರು ಮತ್ತು ಪೊಲೀಸರ ಸಹಕಾರದೊಂದಿಗೆ ಇಡೀ ರಸ್ತೆಯನ್ನೇ ತಾತ್ಕಾಲಿಕ ಶಸ್ತ್ರಚಿಕಿತ್ಸಾ ಕೇಂದ್ರವನ್ನಾಗಿ ಪರಿವರ್ತಿಸಿ ಈ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಈ ರೋಚಕ ಮತ್ತು ಮಾನವೀಯ ಘಟನೆಯನ್ನು ಕೇರಳದ ಪ್ರತಿಪಕ್ಷ ನಾಯಕ ವಿ.ಡಿ. ಸತೀಶನ್ ಅವರು ಮಂಗಳವಾರ ತಮ್ಮ ಫೇಸ್ಬುಕ್ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ. ಎಂತಹ ಕಠಿಣ ಪರಿಸ್ಥಿತಿಯಲ್ಲೂ ಧೈರ್ಯ ಮತ್ತು ಸಮಯಪ್ರಜ್ಞೆ ಇದ್ದರೆ ಜೀವಗಳನ್ನು ಉಳಿಸಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ ಎಂದು ಅವರು ಬಣ್ಣಿಸಿದ್ದಾರೆ. ಸತೀಶನ್ ಅವರು ಈ ಘಟನೆಯನ್ನು “ದೇವರ ಹಸ್ತಾಕ್ಷರ” ಎಂದು ಕರೆದಿದ್ದಾರೆ.
ಹೀಗಿದೆ ವೈದ್ಯರ ಸಾಹಸಗಾಥೆ
ಈ ಜೀವ ಉಳಿಸುವ ಕಾಯಕದಲ್ಲಿ ತೊಡಗಿದ್ದವರು ಎರ್ನಾಕುಲಂನ ವೈದ್ಯ ದಂಪತಿ ಡಾ. ಥಾಮಸ್ ಪೀಟರ್ ಮತ್ತು ಡಾ. ದಿಧಿಯಾ ಥಾಮಸ್, ಹಾಗೂ ಕೊಟ್ಟಾಯಂ ವೈದ್ಯಕೀಯ ಕಾಲೇಜಿನ ಕಾರ್ಡಿಯೋಥೊರಾಸಿಕ್ ಸರ್ಜರಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಬಿ. ಮನೂಪ್ ಅವರು.
ವೈದ್ಯ ದಂಪತಿ ಚರ್ಚ್ಗೆ ಹೋಗುತ್ತಿದ್ದಾಗ ಉದಯಂಪೇರೂರ್ ಬಳಿ ರಸ್ತೆ ಅಪಘಾತ ಸಂಭವಿಸಿರುವುದು ಕಂಡುಬಂದಿದೆ. ರಸ್ತೆಯ ಮೇಲೆ ಗಾಯಾಳುಗಳು ರಕ್ತದ ಮಡುವಿನಲ್ಲಿ ಬಿದ್ದಿದ್ದರು, ಅವರಲ್ಲಿ ಒಬ್ಬರ ಸ್ಥಿತಿ ಅತ್ಯಂತ ಚಿಂತಾಜನಕವಾಗಿತ್ತು. ಇದೇ ಸಮಯದಲ್ಲಿ ಡಾ. ಮನೂಪ್ ಕೂಡ ಕಾಕತಾಳೀಯವಾಗಿ ಅಲ್ಲಿಗೆ ಬಂದು ತಲುಪಿದ್ದರು.
ಕೇವಲ 4 ನಿಮಿಷಗಳಲ್ಲಿ ನಡೆದ ಪವಾಡ
ಗಾಯಾಳುಗಳನ್ನು ಆಂಬ್ಯುಲೆನ್ಸ್ ಬರುವವರೆಗೆ ಕಾಯುವುದು ಅಥವಾ ಆಸ್ಪತ್ರೆಗೆ ಸಾಗಿಸುವುದು ಅಸಾಧ್ಯ. ಇದು ಅವರ ಜೀವಕ್ಕೆ ಅಪಾಯವಾಗಬಹುದು ಎಂದು ಮನಗಂಡ ವೈದ್ಯರು, ಕ್ಷಣಾರ್ಧದಲ್ಲಿ ರಸ್ತೆಯಲ್ಲೇ ಚಿಕಿತ್ಸೆ ನೀಡಲು ನಿರ್ಧರಿಸಿದರು. ಕೇವಲ ನಾಲ್ಕು ನಿಮಿಷಗಳಲ್ಲಿ ಅತ್ಯಂತ ಕೌಶಲ್ಯದಿಂದ ಶಸ್ತ್ರಚಿಕಿತ್ಸೆ ನಡೆಸಿ ವ್ಯಕ್ತಿಯ ಸ್ಥಿತಿಯನ್ನು ಸ್ಥಿರಗೊಳಿಸುವಲ್ಲಿ ಯಶಸ್ವಿಯಾದರು. ಎರ್ನಾಕುಲಂನ ಉದಯಂಪೇರೂರ್ ಬಳಿ ಭಾನುವಾರ ರಾತ್ರಿ ರಸ್ತೆ ಅಪಘಾತದಲ್ಲಿ ಲಿನು ಎಂಬ ಯುವಕನ ಮುಖಕ್ಕೆ ತೀವ್ರ ಗಾಯಗಳಾಗಿತ್ತು ಮತ್ತು ರಕ್ತ ಹೆಪ್ಪುಗಟ್ಟುವಿಕೆಯಿಂದಾಗಿ ಶ್ವಾಸಕೋಶದ ಉಸಿರಾಟದ ಮಾರ್ಗವು ಬಂದ್ ಆಗಿತ್ತು. ತಕ್ಷಣವೇ ಅವರು ಜೀವ ಉಳಿಸುವ ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಿದರು. ಅವರು ಕ್ರಿಕೊಥೈರೋಟಮಿ ಶಸ್ತ್ರಚಿಕಿತ್ಸೆ ನಡೆಸಿದರು, ಇದು ಕುತ್ತಿಗೆಯಲ್ಲಿ ಸಣ್ಣ ಛೇದನದ ಮೂಲಕ ಉಸಿರಾಟದ ಮಾರ್ಗವನ್ನು ರಚಿಸುವ ತುರ್ತು ವಿಧಾನವಾಗಿದೆ, ಇದನ್ನು ಸಾಮಾನ್ಯವಾಗಿ ಆಸ್ಪತ್ರೆಯ ತುರ್ತು ಚಿಕಿತ್ಸೆ ಕೋಣೆಯಲ್ಲಿ ಮಾತ್ರ ಮಾಡಲಾಗುತ್ತದೆ.
ಯಾವುದೇ ವೈದ್ಯಕೀಯ ಉಪಕರಣಗಳಿಲ್ಲದ ಕಾರಣದಿಂದ ಸ್ಥಳೀಯ ನಿವಾಸಿಗಳು ಮತ್ತು ಪೊಲೀಸರು ನೀಡಿದ ರೇಜರ್ ಬ್ಲೇಡ್ ಮತ್ತು ಕಾಗದದ ಸ್ಟ್ರಾವನ್ನು ಬಳಸಿ ಅವರು ಆಪರೇಶನ್ ಮಾಡಿದರು. ಆದರೆ ಕಾಗದದ ಸ್ಟ್ರಾ ರಕ್ತದಿಂದ ನೆನೆದಿದ್ದರಿಂದ ನಂತರ ಅದನ್ನು “ಫ್ರೂಟಿ” ಜ್ಯೂಸ್ ಬಾಕ್ಸ್ನ ಗಟ್ಟಿಮುಟ್ಟಾದ ಪ್ಲಾಸ್ಟಿಕ್ ಸ್ಟ್ರಾದಿಂದ ಬದಲಾಯಿಸಲಾಯಿತು. ಈ ಶಸ್ತ್ರಚಿಕಿತ್ಸೆಯು ಗಾಯಾಳುವಿಗೆ ಮತ್ತೆ ಉಸಿರಾಡಲು ಅವಕಾಶ ಮಾಡಿಕೊಟ್ಟಿತು.
ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು ಮತ್ತು ಪೊಲೀಸರು ಮೊಬೈಲ್ ಲೈಟ್ ಹಿಡಿಯುವ ಮೂಲಕ ಮತ್ತು ಜನದಟ್ಟಣೆಯನ್ನು ನಿಯಂತ್ರಿಸುವ ಮೂಲಕ ವೈದ್ಯರಿಗೆ ಬೆಂಬಲ ನೀಡಿದರು. ಹತ್ತಿರದ ವೈಟ್ಟಿಲಾದ ವೆಲ್ಕೇರ್ ಆಸ್ಪತ್ರೆಗೆ ಕರೆದೊಯ್ದಾಗ ಡಾ. ಮನೂಪ್ ಅವರು ರೋಗಿ ಜೊತೆಗೇ ಹೋದರು. ಹಾಗೂ ವೃತ್ತಿಪರ ಉಪಕರಣಗಳನ್ನು ಬಳಸುವವರೆಗೂ ಅವರ ಉಸಿರಾಟಕ್ಕೆ ಸಹಾಯ ಮಾಡುವುದನ್ನು ಮುಂದುವರೆಸಿದರು. ಕೊಟ್ಟಾಯದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಕಾರ್ಡಿಯೋಥೊರಾಸಿಕ್ ಸರ್ಜರಿಯ ಸಹಾಯಕ ಪ್ರಾಧ್ಯಾಪಕರಾದ ಡಾ. ಮನೂಪ್ ಬಿ.ಸುಮಾರು 13 ವರ್ಷಗಳ ಶಸ್ತ್ರಚಿಕಿತ್ಸಾ ಅನುಭವ ಹೊಂದಿರುವ ವೈದ್ಯರಾಗಿದ್ದಾರೆ.
ಪ್ರತಿಪಕ್ಷ ನಾಯಕರಿಂದ ಶ್ಲಾಘನೆ
ಈ ವಿಚಾರ ತಿಳಿಯುತ್ತಿದ್ದಂತೆಯೇ ವಿ.ಡಿ. ಸತೀಶನ್ ಅವರು ವೈದ್ಯರಿಗೆ ವೈಯಕ್ತಿಕವಾಗಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. “ಒಬ್ಬರ ಕೈ ಹಿಡಿದು ಸಾವಿನ ದವಡೆಯಿಂದ ವಾಪಸ್ ತರುವುದು ದೈವಿಕ ಕೆಲಸ. ಮಾನವೀಯತೆ, ಧೈರ್ಯ ಮತ್ತು ಕೌಶಲ್ಯದ ಸಂಗಮವಾದ ಇಂತಹ ವೈದ್ಯರು ವೈದ್ಯಕೀಯ ವೃತ್ತಿಯ ಘನತೆಯನ್ನು ಹೆಚ್ಚಿಸಿದ್ದಾರೆ” ಎಂದು ಅವರು ಶ್ಲಾಘಿಸಿದ್ದಾರೆ.
ವೈದ್ಯರ ತ್ವರಿತ ಚಿಂತನೆ ಮತ್ತು ನಿಸ್ವಾರ್ಥ ಕ್ರಮಗಳನ್ನು ಸಾರ್ವಜನಿಕರು, ಪೊಲೀಸರು ಮತ್ತು ಭಾರತೀಯ ವೈದ್ಯಕೀಯ ಸಂಘವು ವ್ಯಾಪಕವಾಗಿ ಶ್ಲಾಘಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ