
ಉಮಾರಿಯಾ: ಮಧ್ಯಪ್ರದೇಶದ ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶದ ಅಂಚಿನಲ್ಲಿರುವ ಹಳ್ಳಿಯೊಂದಕ್ಕೆ ಸೋಮವಾರ ಹುಲಿಯೊಂದು ನುಗ್ಗಿ ಆತಂಕ ಸೃಷ್ಟಿಸಿದೆ. ಯುವಕನ ಮೇಲೆ ದಾಳಿ ಮಾಡಿದ ಹುಲಿ, ನಂತರ ಮನೆಯೊಂದರೊಳಗೆ ನುಗ್ಗಿ ಮಂಚದ ಮೇಲೆ ಆರಾಮವಾಗಿ ಕುಳಿತುಕೊಂಡ ಘಟನೆ ವರದಿಯಾಗಿದೆ. ಇದರಿಂದ ಹೆದರಿದ ಗ್ರಾಮಸ್ಥರು ಪ್ರಾಣ ಉಳಿಸಿಕೊಳ್ಳಲು ಮನೆಯ ಮೇಲ್ಛಾವಣಿಗಳನ್ನು ಏರಿ ಕುಳಿತಿದ್ದರು.
ಸೋಮವಾರ (ಡಿಸೆಂಬರ್ 29) ಬೆಳಿಗ್ಗೆ 10 ಗಂಟೆ ಸುಮಾರಿಗೆ ಪನ್ಪಥಾ ಬಫರ್ ವಲಯದಿಂದ ಬಂದ ಹುಲಿ ಮೊದಲು ಹೊಲಗಳಲ್ಲಿ ಕಾಣಿಸಿಕೊಂಡಿತ್ತು. ಗ್ರಾಮಸ್ಥರು ಹುಲಿಯನ್ನು ಕಾಡಿಗೆ ಅಟ್ಟಲು ಪ್ರಯತ್ನಿಸಿದಾಗ, ಅದು ತಿರುಗಿ ಬಿದ್ದು ಗೋಪಾಲ ಕೋಲ್ ಎಂಬ ಯುವಕನ ಮೇಲೆ ದಾಳಿ ಮಾಡಿದೆ. ಹುಲಿಯ ಪೆಟ್ಟಿನಿಂದ ಗೋಪಾಲ್ ಕಾಲಿಗೆ ತೀವ್ರ ಗಾಯಗಳಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಟ್ನಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಯುವಕನ ಮೇಲೆ ದಾಳಿ ಮಾಡಿದ ನಂತರ ಹುಲಿಯು ದುರ್ಗಾ ಪ್ರಸಾದ ದ್ವಿವೇದಿ ಎಂಬವರ ಮನೆಗೆ ನುಗ್ಗಿದೆ. ಅಲ್ಲಿ ಮಂಚದ ಮೇಲೆ ಹುಲಿ ಕುಳಿತಿದ್ದನ್ನು ಕಂಡು ಮನೆಯವರು ಮತ್ತು ಗ್ರಾಮಸ್ಥರು ದಿಕ್ಕಾಪಾಲಾಗಿ ಓಡಿದ್ದಾರೆ.
ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪಶುವೈದ್ಯರ ತಂಡ ಸತತ 8 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿತು. ಸಂಜೆ ವೇಳೆಗೆ ಹುಲಿಗೆ ಅರಿವಳಿಕೆ ಮದ್ದು ನೀಡಿ (Tranquilise) ಯಶಸ್ವಿಯಾಗಿ ಸೆರೆಹಿಡಿಯಲಾಯಿತು. ನಂತರ ಅದನ್ನು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲಾಗಿದೆ ಎಂದು ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶದ ಉಪ ನಿರ್ದೇಶಕ ಪಿ.ಕೆ. ವರ್ಮಾ ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಇಂತಹ ಘಟನೆ ಇದೇ ಮೊದಲಲ್ಲ. ಚಿಲ್ಹಾರಿ ಗ್ರಾಮದ ಗದರಿಯಾ ಹರ್ ಪ್ರದೇಶದಲ್ಲಿ ಈ ಹಿಂದೆ ಹುಲಿ ಕಾಣಿಸಿಕೊಂಡಿದ್ದು, ಡಿಸೆಂಬರ್ 26 ರಂದು ಅದನ್ನು ರಕ್ಷಿಸಿ ಮಾಧವ ಹುಲಿ ಮೀಸಲು ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು.
ಭಾರತದ “ಹುಲಿ ರಾಜ್ಯ” ಎಂದು ಕರೆಯಲ್ಪಡುವ ಮಧ್ಯಪ್ರದೇಶವು ಹುಲಿ ರಕ್ಷಣೆ ಮತ್ತು ಹೆಚ್ಚುತ್ತಿರುವ ಮಾನವ-ವನ್ಯಜೀವಿ ಸಂಘರ್ಷದ ಬಗ್ಗೆ ಗಂಭೀರ ಕಳವಳಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಈ ಘಟನೆ ನಡೆದಿದೆ. 2025 ರಲ್ಲಿ ರಾಜ್ಯವು 55 ಹುಲಿಗಳ ಸಾವುಗಳನ್ನು ದಾಖಲಿಸಿದೆ, ಇದು 1973 ರಲ್ಲಿ ಪ್ರಾಜೆಕ್ಟ್ ಟೈಗರ್ ಅನ್ನು ಪ್ರಾರಂಭಿಸಿದ ನಂತರ ಒಂದೇ ವರ್ಷದಲ್ಲಿ ಇದುವರೆಗಿನ ಅತಿ ಹೆಚ್ಚು ಸಾವಾಗಿದೆ.



ನಿಮ್ಮ ಕಾಮೆಂಟ್ ಬರೆಯಿರಿ