ನ್ಯೂಜೆರ್ಸಿ : ಅಮೆರಿಕದ ನ್ಯೂಜೆರ್ಸಿಯ ಹಳೆಯ ಸಂಗೀತ ವಾದ್ಯಗಳ ಮಳಿಗೆಯೊಂದರಲ್ಲಿ ನಡೆದ ವಿಚಿತ್ರ ಕಳ್ಳತನವೊಂದು ಭಾರೀ ಸುದ್ದಿಯಲ್ಲಿದೆ. ಮಳಿಗೆಯಿಂದ ಕಳ್ಳತನವಾಗಿದ್ದ ಎರಡು ಅಮೂಲ್ಯ ಮ್ಯಾಂಡೊಲಿನ್ ವಾದ್ಯಗಳನ್ನು ಕಳುವು ಮಾಡಿದ್ದ ಕಳ್ಳನೇ ಮರಳಿ ತಂದುಕೊಟ್ಟಿದ್ದು, ಜೊತೆಗೆ ಕೈಬರಹದಲ್ಲಿ ಕ್ಷಮಾಪಣಾ ಪತ್ರವನ್ನೂ ಬರೆದಿಟ್ಟು ಹೋಗಿದ್ದಾನೆ….!
ಈ ತಿಂಗಳ ಆರಂಭದಲ್ಲಿ ನ್ಯೂಜೆರ್ಸಿಯ ‘ಲಾರ್ಕ್ ಸ್ಟ್ರೀಟ್ ಮ್ಯೂಸಿಕ್’ (Lark Street Music) ಮಳಿಗೆಯಿಂದ ಎರಡು ದುಬಾರಿ ಮ್ಯಾಂಡೊಲಿನ್ ವಾದ್ಯಗಳು ಕಳ್ಳತನವಾಗಿದ್ದವು. ಆದರೆ ಕೆಲವೇ ದಿನಗಳ ನಂತರ, ಕಳ್ಳನೇ ಆ ವಾದ್ಯಗಳನ್ನು ಎರಡು ಶಾಪಿಂಗ್ ಬ್ಯಾಗ್ಗಳಲ್ಲಿ ತುಂಬಿಸಿಕೊಂಡು ಬಂದು ಅಂಗಡಿಯ ಮುಂಭಾಗದ ಮೆಟ್ಟಿಲುಗಳ ಮೇಲೆ ಇಟ್ಟು ಹೋಗಿದ್ದಾನೆ.
ವಾದ್ಯಗಳ ಜೊತೆಗಿದ್ದ ಕೈಬರಹದ ಚೀಟಿಯನ್ನೂ ಬಿಟ್ಟು ಹೋಗಿದ್ದಾನೆ. “ಕ್ಷಮಿಸಿ, ನಾನು ಕುಡಿದ ಅಮಲಿನಲ್ಲಿ ಈ ಕೆಲಸ ಮಾಡಿದ್ದೆ. ನಿಮಗೆ ಕ್ರಿಸ್ಮಸ್ ಹಬ್ಬದ ಶುಭಾಶಯಗಳು. ನೀವು ಒಳ್ಳೆಯ ಮನುಷ್ಯರು ಎಂದು ಅದರಲ್ಲಿ ಬರೆದಿದ್ದಾನೆ.
ಕಳ್ಳನ ಬೆನ್ನಟ್ಟಿದ ಮಾಲೀಕ: ತಪ್ಪಿಸಿಕೊಂಡು ಹೋದ ಕಳ್ಳ
ಈ ಕುರಿತು ಮಾಹಿತಿ ನೀಡಿದ ಅಂಗಡಿಯ ಮಾಲೀಕ ಬಝಿ ಲೆವಿನ್, “ಇದು ನಂಬಲಸಾಧ್ಯವಾಗಿತ್ತು. ಅಂಗಡಿಯ ಮುಂದೆ ಬ್ಯಾಗ್ ಇರುವುದನ್ನು ನೋಡಿ ನಾನು ಹೊರಗೆ ಓಡಿ ಬಂದಾಗ, ವ್ಯಕ್ತಿಯೊಬ್ಬ ಓಡಿ ಹೋಗುತ್ತಿರುವುದು ಕಂಡಿತು. ನಾನು ಅವನನ್ನು ಸ್ವಲ್ಪ ದೂರ ಬೆನ್ನಟ್ಟಿದರೂ ಅವನು ತಪ್ಪಿಸಿಕೊಂಡು ಹೋದ,” ಎಂದು ತಿಳಿಸಿದ್ದಾರೆ.
ಡಿಸೆಂಬರ್ 22 ರಂದು ವ್ಯಕ್ತಿಯೊಬ್ಬ ತನ್ನ ಜಾಕೆಟ್ ಒಳಗೆ ವಾದ್ಯಗಳನ್ನು ಅಡಗಿಸಿಟ್ಟುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿತ್ತು. ಸಾರ್ವಜನಿಕರ ಒತ್ತಡ ಮತ್ತು ಪೊಲೀಸರ ತನಿಖೆಗೆ ಹೆದರಿ ಕಳ್ಳನು ಈ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಹೇಳಲಾಗುತ್ತಿದೆ.
₹6 ಲಕ್ಷಕ್ಕೂ ಅಧಿಕ ಮೌಲ್ಯದ ವಾದ್ಯಗಳು:
ಹಿರಿಯ ವ್ಯಾಪಾರಿ ಲೆವಿನ್ ಅವರಿಗೆ ಸೇರಿದ ಈ ಎರಡು ಮ್ಯಾಂಡೊಲಿನ್ ವಾದ್ಯಗಳ ಒಟ್ಟು ಮೌಲ್ಯ ಸುಮಾರು 7,750 ಡಾಲರ್ (ಅಂದಾಜು 6.40 ಲಕ್ಷ ರೂಪಾಯಿಗಳು). “ಒಂದು ವಿಚಿತ್ರ ಸಿನಿಮಾ ಸುಖಾಂತ್ಯ ಕಂಡಂತೆ ನನಗೆ ಭಾಸವಾಗುತ್ತಿದೆ,” ಎಂದು ಲೆವಿನ್ ಹರ್ಷ ವ್ಯಕ್ತಪಡಿಸಿದ್ದಾರೆ.
ಸದ್ಯ ವಾದ್ಯಗಳು ಸುರಕ್ಷಿತವಾಗಿ ಮಾಲೀಕರ ಕೈ ಸೇರಿದ್ದು, ಪೊಲೀಸರು ತಪ್ಪಿಸಿಕೊಂಡ ಕಳ್ಳನಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ