ಸಾವಿನಲ್ಲೂ ಸಾರ್ಥಕತೆ : 10 ತಿಂಗಳ ಕಂದಮ್ಮನ ಅಂಗಾಂಗ ದಾನ ; ನಾಲ್ವರಿಗೆ ಮರುಜೀವ ನೀಡಿದ ಕೇರಳದ ಪುಟ್ಟ ಮಗು

ತಿರುವನಂತಪುರಂ: ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡ (Brain Dead)  10 ತಿಂಗಳ ಪುಟ್ಟ ಹೆಣ್ಣುಮಗುವೊಂದು ತನ್ನ ಅಂಗಾಂಗ ದಾನ ಮಾಡುವ ಮೂಲಕ ಹಲವರ ಬಾಳಿಗೆ ಬೆಳಕಾಗಿರುವ ಅಪರೂಪದ ಹಾಗೂ ಹೃದಯಸ್ಪರ್ಶಿ ಘಟನೆ ಕೇರಳದಲ್ಲಿ ನಡೆದಿದೆ. ಫೆಬ್ರವರಿ 13ರ ಶುಕ್ರವಾರ ನಡೆದ ಈ ಅಂಗಾಂಗ ದಾನವು ಕೇರಳದಾದ್ಯಂತ ಮತ್ತೊಂದು ಶಿಶು ಸೇರಿದಂತೆ  ನಾಲ್ವರಿಗೆ ಹೊಸ ಬದುಕು ನೀಡಲಿದೆ.
.ಪತ್ತನಂತಿಟ್ಟ ಜಿಲ್ಲೆಯ ಮಲ್ಲಪ್ಪಳ್ಳಿಯ ಅರುಣ ಅಬ್ರಹಾಂ ಮತ್ತು ಶೆರಿನ್ ಆನ್ ಜಾನ್ ದಂಪತಿಯ ಪುತ್ರಿ ಆಲಿನ್ ಶೇರಿನ್ ಅಬ್ರಹಾಂ ಈ ಸಾರ್ಥಕತೆ ಮೆರೆದ 10 ತಿಂಗಳ ಕಂದಮ್ಮ. ಫೆಬ್ರವರಿ 5 ರಂದು ಕೊಟ್ಟಾಯಂನಿಂದ ತಿರುವಲ್ಲಾಕ್ಕೆ ಪ್ರಯಾಣಿಸುತ್ತಿದ್ದಾಗ ಪಲ್ಲಂ-ಬೋರ್ಮಾ ಜಂಕ್ಷನ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆಲಿನ್ ತೀವ್ರವಾಗಿ ಗಾಯಗೊಂಡಿದ್ದಳು. ಕಾರಿನಲ್ಲಿದ್ದ ಆಕೆಯ ತಾಯಿ ಮತ್ತು ಅಜ್ಜ-ಅಜ್ಜಿಗೂ ಗಂಭೀರ ಗಾಯಗಳಾಗಿದ್ದವು.
ಸುಮಾರು ಒಂದು ವಾರಗಳ ಕಾಲ ಎರ್ನಾಕುಲಂನ ಅಮೃತಾ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಆಲಿನ್, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮಧ್ಯಾಹ್ನ ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ವೈದ್ಯರು ಘೋಷಿಸಿದರು.
ಹೆತ್ತವರ ಮಹೋನ್ನತ ನಿರ್ಧಾರ
ತಮ್ಮ ಕರುಳ ಕುಡಿಯನ್ನು ಕಳೆದುಕೊಂಡ ಅತೀವ ನೋವಿನ ನಡುವೆಯೂ, ಆಕೆಯ ತಂದೆ ಅರುಣ ಅಬ್ರಹಾಂ ಅವರು ಮಗುವಿನ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿಗೆ ನೀಡಿದರು. ಈ ಮೂಲಕ ಸಮಾಜಕ್ಕೆ ಮಾದರಿಯಾದರು. ಕೇರಳ ರಾಜ್ಯ ಅಂಗಾಂಗ ಮತ್ತು ಅಂಗಾಂಶ ಕಸಿ ಸಂಸ್ಥೆಯ (K-SOTTO) ಸಮನ್ವಯದೊಂದಿಗೆ ಈ ಪ್ರಕ್ರಿಯೆ ನಡೆಯಿತು.
ಕಿಡ್ನಿಗಳು: ತಿರುವನಂತಪುರಂ ವೈದ್ಯಕೀಯ ಕಾಲೇಜಿನ ಎಸ್‌ಎಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 10 ವರ್ಷದ ಮಗುವಿಗೆ ಈ ಪುಟ್ಟ ಮಗುವಿನ ಕಿಡ್ನಿ ಕಸಿ ಮಾಡಲಾಗುವುದು. ಯಕೃತ್ತು (Liver): ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ತಿರುವನಂತಪುರದ ಆರು ತಿಂಗಳ ಬಾಲಕಿಗೆ ಯಕೃತ್ತು ಕಸಿ ಮಾಡಲಾಗುತ್ತದೆ. ಶಸ್ತ್ರಚಿಕಿತ್ಸೆಗಳನ್ನು ತಕ್ಷಣವೇ ನಡೆಸಲಾಗುವುದು ಎಂದು ಆಸ್ಪತ್ರೆ ಮೂಲಗಳು ದೃಢಪಡಿಸಿವೆ.
ಹೃದಯದ ಕವಾಟ (Heart Valve)ಗಳನ್ನು ಶ್ರೀಚಿತ್ರ ತಿರುನಾಳ್ ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗೆ ನೀಡಲಾಗಿದೆ. ಹಾಗೂ ಕಣ್ಣುಗಳನ್ನು ಅಮೃತಾ ಆಸ್ಪತ್ರೆಯ ಕಣ್ಣಿನ ಬ್ಯಾಂಕ್‌ಗೆ ದಾನ ಮಾಡಲಾಗಿದೆ.
ಅಪಘಾತವಾಗಿದ್ದು ಹೇಗೆ..?
ಫೆಬ್ರವರಿ 5 ರಂದು ಮಧ್ಯಾಹ್ನ 2:30 ರ ಸುಮಾರಿಗೆ ಎಂ.ಸಿ. ರಸ್ತೆಯ ಪಲ್ಲಂ ಬೋರ್ಮಲ್ ಜಂಕ್ಷನ್ ಬಳಿ ಪುಟ್ಟ ಮಗು ತನ್ನ ತಾಯಿ ಮತ್ತು ಅಜ್ಜ-ಅಜ್ಜಿಯೊಂದಿಗೆ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿದೆ. ಅವರ ಕಾರು ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದಿದೆ. ಮೊದಲು ಅವರನ್ನು ಚಂಗನಶ್ಶೇರಿ ಮತ್ತು ತಿರುವಲ್ಲಾದ ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು, ನಂತರ ವಿಶೇಷ ಆರೈಕೆಗಾಗಿ ಫೆಬ್ರವರಿ 6 ರ ರಾತ್ರಿ ಕೊಚ್ಚಿಯ ಅಮೃತ ಆಸ್ಪತ್ರೆಗೆ ಕರೆದೊಯ್ಯಲಾಯಿತು. ತೀವ್ರ ಚಿಕಿತ್ಸೆಯ ಹೊರತಾಗಿಯೂ, ವೈದ್ಯರು ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ ಮತ್ತು ಬುಧವಾರ ಮಧ್ಯಾಹ್ನ ಮಿದುಳು ನಿಷ್ಕ್ರಿಯಗೊಂಡಿದೆ ಎಂದು ದೃಢಪಡಿಸಿದರು.
 ನಂತರ ತಂದೆ ಅರುಣ ಅಬ್ರಹಾಂ ಪುಟ್ಟ ಮಗುವಿನ ಅಂಗಾಂಗ ದಾನ ಮಾಡಿ, ಬೇರೆಯವರ ಬದುಕಿಗೆ ಬೆಳಕಾಗುವ ನಿರ್ಧಾರ ತೆಗೆದುಕೊಂಡಿದ್ದಾರೆ. ಪುಟ್ಟ ಆಲಿನ್ ಕೇರಳದ ಅತ್ಯಂತ ಕರಿಯ ವಯಸ್ಸಿನ ಅಂಗಾಂಗ ದಾನಿಯಾಗಿದ್ದಾಳೆ.
“ಅತೀವ ದುಃಖದ ನಡುವೆಯೂ ಇತರರ ಜೀವ ಉಳಿಸಲು ಮುಂದಾದ ಪೋಷಕರ ನಿರ್ಧಾರ ಶ್ಲಾಘನೀಯ. ಅವರ ಈ ಮಾನವೀಯ ಗುಣಕ್ಕೆ ಧನ್ಯವಾದಗಳು,” ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಸಂತಾಪ ಸೂಚಿಸಿದ್ದಾರೆ.ಶುಕ್ರವಾರ ತಡರಾತ್ರಿ ಹಸಿರು ಕಾರಿಡಾರ್ ಮೂಲಕ ಮಗುವಿನ ಅಂಗಾಂಗಗಳನ್ನು ಹೊತ್ತ ಆಂಬ್ಯುಲೆನ್ಸ್ ತಿರುವನಂತಪುರಂ ತಲುಪಿದೆ. ತಾನು ಇಹಲೋಕ ತ್ಯಜಿಸಿದರೂ, ಮತ್ತಷ್ಟು ಜೀವಗಳಲ್ಲಿ ಆಲಿನ್ ಉಸಿರಾಗಿ ಉಳಿಯಲಿದ್ದಾಳೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement