ಜಾಂಜ್‌ಗೀರ್-ಚಾಂಪಾ (ಛತ್ತೀಸ್‌ಗಢ): ಆ ಮನೆಯ ಅಂಗಳದಲ್ಲಿದ್ದ ಬೇವು ಕೇವಲ ನೆರಳನ್ನಷ್ಟೇ ನೀಡುತ್ತಿರಲಿಲ್ಲ, ಆ ಕುಟುಂಬದ ನಗು-ಅಳುವಿಗೆ ಸಾಕ್ಷಿಯಾಗಿತ್ತು. ಆದರೆ ಸೋಮವಾರ ಬೆಳಿಗ್ಗೆ ಅದೇ ಬೇವಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಕೃಷ್ಣ ಪಟೇಲ್ ಮತ್ತು ರಮಾ ಬಾಯಿ ಅವರ ಮೃತದೇಹಗಳು ಇಡೀ ಗ್ರಾಮವನ್ನೇ ಮೌನಕ್ಕೆ ಶರಣಾಗುವಂತೆ ಮಾಡಿವೆ. ಛತ್ತೀಸ್‌ಗಢದ ಜಾಂಜ್‌ಗೀರ್-ಚಾಂಪಾ ಜಿಲ್ಲೆಯ ಧರ್ದೇಯಿ ಗ್ರಾಮದಲ್ಲಿ ನಡೆದ ಈ ಘಟನೆ ಅತ್ಯಂತ ಕರುಣಾಜನಕವಾಗಿದೆ.
ಶಿವರಿನಾರಾಯಣ್ ಪೊಲೀಸ್ ಠಾಣಾ ವ್ಯಾಪ್ತಿಯ ಧರ್ದೇಯಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವೃತ್ತಿಯಲ್ಲಿ ಮೇಸ್ತ್ರಿಯಾಗಿದ್ದ ಕೃಷ್ಣ ಪಟೇಲ್ (48) ಮತ್ತು ಅವರ ಪತ್ನಿ ರಮಾ ಬಾಯಿ (47) ಭಾನುವಾರ ತಡರಾತ್ರಿ ತಮ್ಮ ಮನೆಯ ಅಂಗಳದ ಬೇವಿ ಮರಕ್ಕೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜೀವ ಹಿಂಡಿದ ಮಗನ ಸಾವು
ಈ ದಂಪತಿಯ ಏಕೈಕ ಪುತ್ರ ಆದಿತ್ಯ ಪಟೇಲ್ (21), 2024ರಲ್ಲಿ ಮಸ್ತೂರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ. ಮಗನ ಅಗಲಿಕೆಯ ನಂತರ ಈ ದಂಪತಿಗಳು ತೀವ್ರ ಖಿನ್ನತೆಗೆ ಒಳಗಾಗಿದ್ದರು. ಅವರಿಗೆ ಅವರ ಮಗ ಆದಿತ್ಯನೇ ಅವರ ಪ್ರಪಂಚವಾಗಿತ್ತು.
ತಮ್ಮ ನಾಲ್ಕು ಪುಟಗಳ ಡೆತ್ ನೋಟ್‌ನಲ್ಲಿ ಕೃಷ್ಣ ಪಟೇಲ್ ಅತೀವ ನೋವನ್ನು ಹೊರಹಾಕಿದ್ದಾರೆ. “ಆದಿತ್ಯ ನಮ್ಮ ಬದುಕಿನ ತಳಹದಿಯಾಗಿದ್ದ. ದೇವರು ನಮಗೆ ನೀಡಿದ ವರ ಅವನು. ಆತ ನಮ್ಮ ಜಗತ್ತು… ವಿಧೇಯ ಮಗ ಮತ್ತು ಸ್ನೇಹಿತ” ಎಂದು ಬರೆದಿದ್ದಾರೆ. ಅವರು ತಮ್ಮ ಮನೆಯನ್ನು ನಗುವಿನಿಂದ ತುಂಬಿದ ಮತ್ತು ಪೋಷಕರಂತೆ ತಮ್ಮನ್ನು ನೋಡಿಕೊಂಡ ಮಗನ ಬಗ್ಗೆ ಆತ ದೇವರ ಆಶೀರ್ವಾದ ಎಂದು ವಿವರಿಸಿದ್ದಾರೆ.
ಆದಿತ್ಯ ದೇವಾಲಯದ ಕೆಲಸ ಮತ್ತು ಯಜ್ಞಕ್ಕೆ ಸಹಾಯ ಮಾಡಲು ಗ್ರಾಮದ ಪುರೋಹಿತರೊಂದಿಗೆ ಹೊರಟ ದಿನದ ಬಗ್ಗೆ ಕೃಷ್ಣ ಬರೆದಿದ್ದಾರೆ. ಆದರೆ ಅಪಘಾತದ ನಂತರ, ಮನೆ ಶಾಂತವಾಯಿತು. ಆದಿತ್ಯ ಹಿಂಜರಿದಿದ್ದ, ಇದು ದೇವರ ಕೆಲಸ ಎಂದು ನಾನೇ ಒತ್ತಾಯಿಸಿದೆ. ಇದು “ನನ್ನ ಜೀವನದ ದೊಡ್ಡ ತಪ್ಪು. ಅವನು ನನ್ನನ್ನು ಶಾಶ್ವತವಾಗಿ ತೊರೆದ”. “ನಾವು ಜೀವಂತವಾಗಿದ್ದೆವು… ಆದರೆ ನಾನು ಬದುಕಿರಲಿಲ್ಲ” ಎಂದು ಅವರು ಬರೆದಿದ್ದಾರೆ.
“ಯಾರೂ ಕಾರಣರಲ್ಲ, ನಗುಮುಖದಿಂದ ವಿದಾಯ ಹೇಳಿ”
ತಮ್ಮ ಸಾವಿಗೆ ಯಾರನ್ನೂ ಹೊಣೆ ಮಾಡದ ದಂಪತಿ, ತಾವು ಸ್ವಇಚ್ಛೆಯಿಂದ ಭಗವಂತನ ಪಾದ ಸೇರುತ್ತಿರುವುದಾಗಿ ಬರೆದಿದ್ದಾರೆ. “ನಾವು ಸಂಪೂರ್ಣ ಶಾಂತಿಯಿಂದ, ಯಾವುದೇ ಆಸೆಗಳಿಲ್ಲದೆ ಈ ಲೋಕವನ್ನು ಬಿಡುತ್ತಿದ್ದೇವೆ. ನಮಗಾಗಿ ಯಾರೂ ಶೋಕಿಸಬೇಡಿ, ನಗುಮುಖದಿಂದ ನಮಗೆ ವಿದಾಯ ನೀಡಿ” ಎಂದು ಅವರು ಪತ್ರದಲ್ಲಿ ಕೋರಿದ್ದಾರೆ.
“ದೇವರು ದಯಾಳು”. “ದೀರ್ಘಕಾಲದ ನೋವಿನ ನಂತರ, ನನ್ನ ಮನಸ್ಸು ಈಗ ಶಾಂತವಾಗಿದೆ. ನಾನು ಅವನ ಕಡೆಗೆ ಆಕರ್ಷಿತನಾಗಿದ್ದೇನೆ. ದೇವರೊಂದಿಗೆ ವಿಲೀನವಾಗುವುದು ನನ್ನ ಹಣೆಬರಹ” ಎಂದು ಅವರು ಬರೆದಿದ್ದಾರೆ.
“ನಾವಿಬ್ಬರೂ ಪ್ರಜ್ಞಾಪೂರ್ವಕವಾಗಿ ಮತ್ತು ಸ್ವಇಚ್ಛೆಯಿಂದ ಶಿವನಿಗೆ ನಮ್ಮನ್ನು ಅರ್ಪಿಸಿಕೊಳ್ಳುತ್ತಿದ್ದೇವೆ. ಇದಕ್ಕೆ ಯಾರೂ ಕಾರಣರಲ್ಲ. ದಯವಿಟ್ಟು ಸಂತೋಷದ ಹೃದಯದಿಂದ ನಮಗೆ ವಿದಾಯ ಹೇಳಿ” ಎಂದು ಬರೆದಿದ್ದಾರೆ. “ನಮಗಾಗಿ ದುಃಖಿಸಬೇಡಿ. ನಾವು ಸಂಪೂರ್ಣ ಶಾಂತಿಯಿಂದ, ಯಾವುದೇ ಆಸೆಯಿಲ್ಲದೆ ಮತ್ತು ಸಂತೋಷದ ಮನೋಭಾವದಿಂದ ಈ ಲೋಕವನ್ನು ತೊರೆಯುತ್ತಿದ್ದೇವೆ” ಎಂದು ಡೆತ್‌ನೋಟ್‌ನಲ್ಲಿ ಬರೆದುಕೊಂಡಿದ್ದಾರೆ.
ವಿಡಿಯೋ ಸಂದೇಶ ಮತ್ತು ಅಂತಿಮ ಇಚ್ಛೆ
ಆತ್ಮಹತ್ಯೆಗೂ ಮುನ್ನ ಈ ದಂಪತಿ ವಿಡಿಯೋವೊಂದನ್ನು ರೆಕಾರ್ಡ್ ಮಾಡಿದ್ದಾರೆ. ಅದರಲ್ಲಿ ತಮ್ಮ ವಕೀಲರನ್ನು ಉದ್ದೇಶಿಸಿ ಮಾತನಾಡಿರುವ ಅವರು, “ನಮ್ಮ ಮಗನ ಅಪಘಾತದ ನಂತರ ಬರಬೇಕಾದ ಪರಿಹಾರದ ಹಣವನ್ನು ನಮ್ಮ ಅಣ್ಣಂದಿರಾದ ಕುಲಭಾರ ಪಟೇಲ್ ಮತ್ತು ಜಲಭಾರ ಪಟೇಲ್ ಅವರಿಗೆ ಹಸ್ತಾಂತರಿಸಬೇಕು” ಎಂದು ಶಾಂತಚಿತ್ತರಾಗಿ ವಿನಂತಿಸಿದ್ದಾರೆ.
ಸೋಮವಾರ ಬೆಳಿಗ್ಗೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದನ್ನು ನೋಡಿದ ನೆರೆಹೊರೆಯವರು ತಿಳಿಸಿದ ನಂತರ ಪೊಲೀಸರು ಬಂದರು. ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. “ಪುತ್ರನ ಸಾವಿನ ನಂತರ ದಂಪತಿಗಳು ತೀವ್ರ ಮಾನಸಿಕ ವೇದನೆಯಲ್ಲಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿದಿದೆ” ಎಂದು ಠಾಣಾಧಿಕಾರಿ ತಿಳಿಸಿದ್ದಾರೆ.
ಒಂದು ವರ್ಷದ ಸುದೀರ್ಘ ಮೌನದ ನಂತರ, ಆ ದಂಪತಿ ಮಗನಿಲ್ಲದ ಲೋಕಕ್ಕಿಂತ ಮಗನಿರುವ ಪರಲೋಕವೇ ಲೇಸೆಂದು ಭಾವಿಸಿ ಇಹಲೋಕ ತ್ಯಜಿಸಿದ್ದು ಗ್ರಾಮಸ್ಥರ ಕಣ್ಣಾಲಿಗಳನ್ನು ತೇವಗೊಳಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ