ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಎರಡೂ ದೇಶಗಳು ಪರಸ್ಪರ ಕ್ಷಿಪಣಿ ದಾಳಿ ನಡೆಸುತ್ತಿವೆ. ಈ ನಡುವೆ, ಹತ್ತಕ್ಕೂ ಹೆಚ್ಚು ಪ್ರತಿರೋಧಕ (Interceptor) ಕ್ಷಿಪಣಿಗಳಿಂದ ತಪ್ಪಿಸಿಕೊಂಡು ಇರಾನ್ನ ಕ್ಷಿಪಣಿಯೊಂದು ಗುರಿ ತಲುಪುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ವಿಡಿಯೋ ಜೆರುಸಲೇಂನದ್ದು ಎಂದು ಹೇಳಲಾಗುತ್ತಿದ್ದು, ಪ್ರತಿರೋಧಕ ಕ್ಷಿಪಣಿಗಳ ಕಣ್ತಪ್ಪಿಸಿ ಇರಾನ್ ಕ್ಷಿಪಣಿಯು ಯಶಸ್ವಿಯಾಗಿ ಗುರಿಯನ್ನು ಅಪ್ಪಳಿಸುವುದನ್ನು ಇದರಲ್ಲಿ ಕಾಣಬಹುದು.
ಟೆರೇಸ್ ಒಂದರ ಮೇಲೆ ಈ ದೃಶ್ಯವನ್ನು ಚಿತ್ರೀಕರಿಸಲಾಗಿದ್ದು, ಹಿನ್ನೆಲೆಯಲ್ಲಿ ಜನರ ಆಶ್ಚರ್ಯದ ಉದ್ಗಾರಗಳು ಕೇಳಿಬರುತ್ತಿವೆ. ಕ್ಷಿಪಣಿಯು ವೇಗವಾಗಿ ಬಂದು ಸ್ಫೋಟಗೊಳ್ಳುವ ದೃಶ್ಯ ಸೆರೆಯಾಗಿದೆ. ಆದರೂ, ಈ ವಿಡಿಯೋದ ನಿಖರ ಸಮಯ ಮತ್ತು ಸ್ಥಳದ ಅಧಿಕೃತ ಖಚಿತತೆ ಇನ್ನೂ ಇಲ್ಲ.
ಫತ್ತಾಹ್ (Fattah) ಕ್ಷಿಪಣಿಯ ವಿಶೇಷತೆ:
ವೈರಲ್ ವಿಡಿಯೋದಲ್ಲಿರುವುದು ಇರಾನ್ನ ‘ಫತ್ತಾಹ್’ ಕ್ಷಿಪಣಿ ಇರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಇದು ಶತ್ರು ದೇಶದ ವಾಯು ರಕ್ಷಣಾ ವ್ಯವಸ್ಥೆಯನ್ನು (Air Defence System) ತಪ್ಪಿಸಿಕೊಂಡು ಮುನ್ನುಗ್ಗಲು ‘ಗ್ಲೈಡ್’ ಮಾಡುವ ಸಾಮರ್ಥ್ಯ ಹೊಂದಿದೆ.
ಯುದ್ಧದಲ್ಲಿ ‘ಫತ್ತಾಹ್ 2’ ಕ್ಷಿಪಣಿ ಬಳಸಲಾಗಿದೆ ಎಂಬ ಸುದ್ದಿಯಿದ್ದರೂ ಇದು ದೃಢಪಟ್ಟಿಲ್ಲ. ‘ಮಿಲಿಟರಿ ವಾಚ್ ಮ್ಯಾಗಜೀನ್’ ಪ್ರಕಾರ, ಇದು ಹೈಪರ್ಸಾನಿಕ್ ಗ್ಲೈಡ್ ವಾಹನ ತಂತ್ರಜ್ಞಾನವನ್ನು ಬಳಸುತ್ತದೆ. ಇದು ವಿವಿಧ ದಿಕ್ಕುಗಳಿಂದ ವೇಗವಾಗಿ ಗುರಿಯತ್ತ ನುಗ್ಗುವ ಮತ್ತು ದಿಕ್ಕನ್ನು ಬದಲಿಸುವ ವಿಶೇಷ ಶಕ್ತಿ ಹೊಂದಿದೆ.
ಇಸ್ರೇಲ್ನ ವಾಯು ರಕ್ಷಣಾ ವ್ಯವಸ್ಥೆಯು ಕೇವಲ ಒಂದು “ಮಿಥ್ಯೆ” (Myth) ಎಂದು ಹೇಳಿರುವ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್, ಫತ್ತಾಹ್ ಕ್ಷಿಪಣಿಗಳು ಇಸ್ರೇಲ್ನ ವಿನಾಶದ ಆರಂಭ ಎಂದು ಕರೆದಿದೆ.
ಮಧ್ಯಪ್ರಾಚ್ಯದಲ್ಲಿ ಸಂಘರ್ಷ
ಶನಿವಾರದಂದು ಅಮೆರಿಕ ಮತ್ತು ಇಸ್ರೇಲ್ ಸಂಘಟಿತವಾಗಿ ಇರಾನ್ ರಾಜಧಾನಿ ತೆಹ್ರಾನ್ ಸೇರಿದಂತೆ ಪ್ರಮುಖ ನಗರಗಳ ಮೇಲೆ ವೈಮಾನಿಕ ದಾಳಿ ನಡೆಸಿವೆ. ಈ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಖಮೇನಿ ಸಾವಿನ ನಂತರ ಇರಾನ್ ಆಕ್ರೋಶಗೊಂಡಿದ್ದು, ಪ್ರತೀಕಾರವಾಗಿ ಅಮೆರಿಕದ ಮಿಲಿಟರಿ ನೆಲೆಗಳು (ಖತಾರ್ ಮತ್ತು ಯುಎಇಯಲ್ಲಿರುವ ನೆಲೆಗಳು) ಹಾಗೂ ಇಸ್ರೇಲ್ ಮೇಲೆ ಭಾರಿ ಕ್ಷಿಪಣಿ ದಾಳಿ ನಡೆಸುತ್ತಿದೆ.
ಭಾನುವಾರ ತಡರಾತ್ರಿ ಜೆರುಸಲೇಂನ ಮುಖ್ಯ ರಸ್ತೆಯೊಂದಕ್ಕೆ ಇರಾನ್ ಕ್ಷಿಪಣಿ ಅಪ್ಪಳಿಸಿದ ಪರಿಣಾಮ ಹಲವರು ಗಾಯಗೊಂಡಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ