ಭಾರತಕ್ಕೆ ತೈಲದ ಭರವಸೆ ? ಹಾರ್ಮುಜ್ ಜಲಸಂಧಿ ಮಾರ್ಗ ಕೇವಲ ಅಮೆರಿಕ, ಇಸ್ರೇಲ್, ಯುರೋಪ್‌ಗೆ ಮಾತ್ರ ಬಂದ್ ಎಂದ ಇರಾನ್

ನವದೆಹಲಿ: ಹಾರ್ಮುಜ್ ಜಲಸಂಧಿಯನ್ನು (Strait of Hormuz) ಅಮೆರಿಕ, ಇಸ್ರೇಲ್, ಯುರೋಪ್ ಮತ್ತು ಅಮೆರಿಕದ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳ ಹಡಗುಗಳಿಗೆ ಮಾತ್ರ ಸಂಪೂರ್ಣವಾಗಿ ಮುಚ್ಚಲಾಗಿದೆ ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಪ್ರಕಟಿಸಿದೆ.
ಇರಾನ್‌ನ ಸರ್ಕಾರಿ ಪ್ರಸಾರ ಸಂಸ್ಥೆ ಐಆರ್‌ಐಬಿ (IRIB) ಮೂಲಕ ಗುರುವಾರ ಈ ಪ್ರಕಟಣೆ ಹೊರಬಿದ್ದಿದೆ. ಗಲ್ಫ್ ಪ್ರದೇಶದಲ್ಲಿ ಸಂಘರ್ಷ ಆರಂಭವಾದಾಗಿನಿಂದ ವಿಶ್ವದ ಅತ್ಯಂತ ಜನನಿಬಿಡ ಹಡಗು ಮಾರ್ಗಗಳಲ್ಲಿ ಒಂದಾದ ಈ ಜಲಸಂಧಿಯಲ್ಲಿ ವಾಣಿಜ್ಯ ಸಂಚಾರ ಸ್ಥಗಿತಗೊಂಡಿದ್ದು, ಈ ಬಗ್ಗೆ ಇದ್ದ ಅನಿಶ್ಚಿತತೆಗೆ ಈಗ ಸ್ಪಷ್ಟನೆ ಸಿಕ್ಕಂತಾಗಿದೆ.
ಅಂತಾರಾಷ್ಟ್ರೀಯ ಕಾನೂನು ಮತ್ತು ಸಂಬಂಧಿತ ನಿರ್ಣಯಗಳಿಗೆ ಅನುಗುಣವಾಗಿ, ಯುದ್ಧದ ಸಮಯದಲ್ಲಿ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಸಂಚಾರವನ್ನು ನಿಯಂತ್ರಿಸುವ ಹಕ್ಕನ್ನು ಇರಾನ್ ಹೊಂದಿದೆ ಎಂದು ರೆವಲ್ಯೂಷನರಿ ಗಾರ್ಡ್ಸ್ ಹೇಳಿದೆ. ಅಮೆರಿಕ, ಇಸ್ರೇಲ್, ಯುರೋಪ್ “ಮತ್ತು ಅವರ ಬೆಂಬಲಿಗರಿಗೆ” ಸೇರಿದ ಯಾವುದೇ ಹಡಗುಗಳು ಈ ಜಲಮಾರ್ಗದಲ್ಲಿ ಕಂಡುಬಂದಲ್ಲಿ ಅವುಗಳ ಮೇಲೆ “ಖಂಡಿತವಾಗಿಯೂ ದಾಳಿ ನಡೆಸಲಾಗುವುದು” ಎಂದು ಹೇಳಿಕೆ ಎಚ್ಚರಿಸಿದೆ.
ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ
ಶನಿವಾರ ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ಜಂಟಿ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗಿನಿಂದ, ಪ್ರಾಯೋಗಿಕವಾಗಿ ಈ ಜಲಸಂಧಿಯು ಮುಚ್ಚಲ್ಪಟ್ಟಿದೆ. ಈ ಕ್ರಮದಿಂದಾಗಿ ತೈಲ ಬೆಲೆಗಳು ತೀವ್ರವಾಗಿ ಏರಿಕೆಯಾಗಿದ್ದು, ಜಾಗತಿಕ ಆರ್ಥಿಕತೆಗೆ ಹೆಚ್ಚಿನ ತೊಂದರೆಯಾಗುವ ಭೀತಿ ಎದುರಾಗಿದೆ.
ಮಂಗಳವಾರವಷ್ಟೇ ಇರಾನ್, ಕೇವಲ ಚೀನಾ ಧ್ವಜ ಹೊಂದಿರುವ ಹಡಗುಗಳಿಗೆ ಮಾತ್ರ ಜಲಸಂಧಿಯನ್ನು ಬಳಸಲು ಅನುಮತಿ ನೀಡುವುದಾಗಿ ಸೂಚಿಸಿತ್ತು. ಮಧ್ಯಪ್ರಾಚ್ಯ ಸಂಘರ್ಷದ ಸಮಯದಲ್ಲಿ ಟೆಹ್ರಾನ್ ಪರವಾಗಿ ಚೀನಾ ತಳೆದಿರುವ ನಿಲುವಿಗೆ ಕೃತಜ್ಞತೆಯಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಬಣ್ಣಿಸಿದ್ದಾರೆ. ಪರ್ಷಿಯನ್ ಗಲ್ಫ್‌ನಲ್ಲಿರುವ ಬಂದರುಗಳಿಗೆ ಹಾರ್ಮುಜ್ ಜಲಸಂಧಿಯು ಏಕೈಕ ಸಮುದ್ರ ನಿರ್ಗಮನ ಮಾರ್ಗವಾಗಿರುವುದರಿಂದ ಇರಾನ್‌ ಈಗ ತೆಗೆದುಕೊಂಡಿರುವ ನಿರ್ಧಾರವು ಬಹಳ ಮಹತ್ವದ್ದಾಗಿದೆ.
ಸಮುದ್ರದ ಮೂಲಕ ಸಾಗಣೆಯಾಗುವ ವಿಶ್ವದ ಒಟ್ಟು ತೈಲದ ಸುಮಾರು ಐದನೇ ಒಂದು ಭಾಗ ಈ ಜಲಸಂಧಿಯ ಮೂಲಕವೇ ಸಾಗುತ್ತದೆ. ಇದು ಜಾಗತಿಕ ಇಂಧನ ಪೂರೈಕೆಯ ಬೆನ್ನೆಲುಬಾಗಿದೆ. ಪರ್ಷಿಯನ್ ಗಲ್ಫ್ ಪ್ರದೇಶದ ವ್ಯಾಪಾರಕ್ಕೆ ಇದು ಅತ್ಯಗತ್ಯ ಮಾರ್ಗವಾಗಿದೆ. ವಿಶ್ವದ 10ನೇ ಅತಿದೊಡ್ಡ ಕಂಟೈನರ್ ಟರ್ಮಿನಲ್ ಆಗಿರುವ ದುಬೈನ ಜೆಬೆಲ್ ಅಲಿ ಬಂದರಿಗೆ ತಲುಪಲು ಇದು ಒಂದೇ ದಾರಿಯಾಗಿದೆ.
ದಿಗ್ಬಂಧನವು ಗಲ್ಫ್ ರಫ್ತಿನ ಮೇಲೆ ತೀವ್ರವಾಗಿ ಪರಿಣಾಮ ಬೀರುತ್ತದೆಯಾದರೂ, ಏಷ್ಯಾ ಮತ್ತು ಯುರೋಪ್ ಅನ್ನು ಸಂಪರ್ಕಿಸುವ ಪ್ರಮುಖ ಪೂರ್ವ-ಪಶ್ಚಿಮ ಸಮುದ್ರ ಕಾರಿಡಾರ್‌ಗಳಿಗೆ ಅನಿವಾರ್ಯ ಅಡ್ಡಿಯಾಗುವುದಿಲ್ಲ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.
ಇತಿಹಾಸದಲ್ಲೇ ಮೊದಲು:
 ಹಾರ್ಮುಜ್ ಜಲಸಂಧಿಯನ್ನು ವಾಣಿಜ್ಯ ಹಡಗುಗಳ ಸಂಚಾರಕ್ಕೆ ಈ ಹಿಂದೆ ಎಂದೂ ಮುಚ್ಚಿರಲಿಲ್ಲ. 1980 ರಿಂದ 1988 ರವರೆಗೆ ನಡೆದ ಇರಾನ್-ಇರಾಕ್ ಯುದ್ಧದ ಸಮಯದಲ್ಲಿಯೂ ಸಹ ಟ್ಯಾಂಕರ್‌ಗಳ ಮೇಲೆ ದಾಳಿ ನಡೆದಿದ್ದರೂ ಸಂಚಾರ ಮುಂದುವರಿದಿತ್ತು.
ಪ್ರಸ್ತುತ, ‘ಮೆರೈನ್ ಟ್ರಾಫಿಕ್’ (Marine Traffic) ವೆಬ್‌ಸೈಟ್‌ನ ಲೈವ್ ಟ್ರ್ಯಾಕಿಂಗ್ ಪ್ರಕಾರ, ಕುವೈತ್ ಮತ್ತು ದುಬೈ ತೀರದ ಬಳಿ ನೂರಾರು ತೈಲ ಟ್ಯಾಂಕರ್‌ಗಳು ಸ್ಥಗಿತಗೊಂಡಿವೆ. ಇರಾನ್‌ನ ಸ್ವಂತ ವಾಣಿಜ್ಯ ಹಡಗುಗಳು ಪೋರ್ಟ್‌ ಅಬ್ಬಾಸ್ ಬಂದರಿನ ಬಳಿ ಲಂಗರು ಹಾಕಿ ನಿಂತಿರುವುದು ಕಂಡುಬಂದಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement