ವೀಡಿಯೊ | ರಾಡಾರ್‌ಗಳಿಗೂ ಸಿಗದ ಇರಾನಿನ ‘ಮಾಯಾವಿ’ ಕ್ಷಿಪಣಿ; ಯುದ್ಧದಲ್ಲಿ ಮೊದಲ ಬಾರಿಗೆ ‘ಡ್ಯಾನ್ಸಿಂಗ್ ಮಿಸೈಲ್’ ಬಳಕೆ

ಇರಾನ್ ಹಾಗೂ ಅಮೆರಿಕ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಿದ್ದು, ಭಾನುವಾರ ಇರಾನ್ ರಾಜಧಾನಿ ತೆಹ್ರಾನ್‌ನಿಂದ ಇಸ್ರೇಲ್‌ ಮತ್ತು ಅಮೆರಿಕಕ್ಕೆ ಸಂಬಂಧಿಸಿದ ನೆಲೆಗಳನ್ನು ಗುರಿಯಾಗಿಸಿಕೊಂಡು ಸುಧಾರಿತ ಕ್ಷಿಪಣಿಗಳನ್ನು ಉಡಾಯಿಸಿದೆ. ಇದರಲ್ಲಿ ಇರಾನ್ ದೇಶೀಯವಾಗಿ ಅಭಿವೃದ್ಧಿಪಡಿಸಿದ ‘ಸೆಜ್ಜಿಲ್’ (Sejjil) ಕ್ಷಿಪಣಿಯೂ ಸೇರಿದೆ. ಫೆಬ್ರವರಿ 28 ರಂದು ಯುದ್ಧ ಆರಂಭವಾದ ನಂತರ ಈ ಕ್ಷಿಪಣಿಯನ್ನು ಇರಾನ್‌ ಇದೇ ಮೊದಲ ಬಾರಿಗೆ ಬಳಸಿದೆ ಎಂದು ವರದಿಯಾಗಿದೆ.
ಇರಾನ್‌ನ ಸುದ್ದಿ ಸಂಸ್ಥೆ ‘ಪ್ರೆಸ್ ಟಿವಿ’ ಪ್ರಕಾರ, ಮಧ್ಯಪ್ರಾಚ್ಯದಲ್ಲಿ ಸಂಘರ್ಷವು ಮೂರನೇ ವಾರಕ್ಕೆ ಕಾಲಿಡುತ್ತಿರುವಾಗ ಉಡಾಯಿಸಲಾದ ಕ್ಷಿಪಣಿಗಳಲ್ಲಿ ʼಸೆಜ್ಜಿಲ್ʼ ಕ್ಷಿಪಣಿ ಪ್ರಮುಖವಾಗಿದೆ.
ಏನಿದು ಸೆಜ್ಜಿಲ್ ಕ್ಷಿಪಣಿ?
ಸೆಜ್ಜಿಲ್ (ಇದನ್ನು ಸಜ್ಜೀಲ್, ಆಶೌರಾ ಅಥವಾ ಆಶುರಾ ಎಂದೂ ಕರೆಯಲಾಗುತ್ತದೆ) ಇರಾನ್ ಸ್ವದೇಶಿಯಾಗಿ ಅಭಿವೃದ್ಧಿಪಡಿಸಿದ, ಘನ ಇಂಧನದಿಂದ (solid propellant) ಚಲಿಸುವ ಎರಡು ಹಂತದ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದೆ. ಇದು ಮಧ್ಯಮ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ (MRBM) ಗುಂಪಿಗೆ ಸೇರುತ್ತದೆ.
ಇದು ಸುಮಾರು 2,000 ಕಿಲೋಮೀಟರ್ ದೂರದ ವರೆಗೆ ಕ್ರಮಿಸುವ ವ್ಯಾಪ್ತಿಯನ್ನು ಹೊಂದಿದ್ದು, ಸರಿಸುಮಾರು 700 ಕಿಲೋಗ್ರಾಂ ತೂಕದ ಸ್ಫೋಟಕಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.
ವೇಗ ಮತ್ತು ರಹಸ್ಯ
ಈ ಕ್ಷಿಪಣಿಯು ಘನ ಇಂಧನ ವಿನ್ಯಾಸವನ್ನು ಹೊಂದಿರುವುದರಿಂದ, ಹಳೆಯ ದ್ರವ ಇಂಧನ ವ್ಯವಸ್ಥೆಗಳಿಗಿಂತ (ಶಹಾಬ್ ಸರಣಿಯಂತಹವು) ಅತಿ ವೇಗವಾಗಿ ಉಡಾವಣೆಗೆ ಸಿದ್ಧಪಡಿಸಬಹುದು. ಇದರಿಂದಾಗಿ ಶತ್ರು ರಾಷ್ಟ್ರಗಳು ಇದನ್ನು ಪತ್ತೆಹಚ್ಚಲು ಮತ್ತು ತಡೆಯಲು ಲಭ್ಯವಿರುವ ಸಮಯ ಕಡಿಮೆಯಾಗುತ್ತದೆ.
ಈ ಕ್ಷಿಪಣಿಯು ಹೆಚ್ಚಿನ ಎತ್ತರವನ್ನು ತಲುಪಿದ ನಂತರ ತನ್ನ ಪಥವನ್ನು ಬದಲಿಸುವ (manoeuvre) ಸಾಮರ್ಥ್ಯ ಮತ್ತು ಇಸ್ರೇಲ್‌ನ ‘ಐರನ್ ಡೋಮ್’ನಂತಹ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳಿಂದ ಪಾರಾಗಿ ಮುನ್ನುಗ್ಗುವ ಶಕ್ತಿ ಇರುವುದರಿಂದ ಇದು “ಡ್ಯಾನ್ಸಿಂಗ್ ಮಿಸೈಲ್” (ನೃತ್ಯ ಮಾಡುವ ಕ್ಷಿಪಣಿ) ಎಂಬ ಅಡ್ಡಹೆಸರು ಇದೆ.
ತಾಂತ್ರಿಕ ವಿವರಗಳು (CSIS ವರದಿ ಪ್ರಕಾರ):
‘ಸೆಜ್ಜಿಲ್’ ಕ್ಷಿಪಣಿಯ ಉದ್ದ  ಸುಮಾರು 18 ಮೀಟರ್  ಹಾಗೂ ವ್ಯಾಸ ಸುಮಾರು 1.25 ಮೀಟರ್ ಆಗಿದೆ. ಉಡಾವಣಾ ತೂಕ  ಸರಿಸುಮಾರು 23,600 ಕಿಲೋಗ್ರಾಂ.
ಅಭಿವೃದ್ಧಿ: ಸೆಜ್ಜಿಲ್ ಕ್ಷಿಪಣಿಯ ಅಭಿವೃದ್ಧಿಪಡಿಸುವ ಕೆಲಸಗಳು 1990 ರ ದಶಕದ ಆರಂಭದಲ್ಲಿ ಪ್ರಾರಂಭವಾದವು. ಇದರ ಮೊದಲ ಪರೀಕ್ಷಾರ್ಥ ಉಡಾವಣೆ 2008 ರಲ್ಲಿ ನಡೆಯಿತು (800 ಕಿ.ಮೀ ವ್ಯಾಪ್ತಿ). 2009 ರ ಎರಡನೇ ಪರೀಕ್ಷೆಯಲ್ಲಿ ಇದನ್ನು ಇನ್ನಷ್ಟು  ಸುಧಾರಿಸಲಾಯಿತು. ನಂತರದ ಪರೀಕ್ಷೆಗಳು ಇದು 1,900 ಕಿಮೀ ವರೆಗಿನ ವ್ಯಾಪ್ತಿಯನ್ನು ಹೊಂದಿದೆ ಎಂದು ಸಾಬೀತುಪಡಿಸಿವೆ. ಇರಾನ್ ಈಗಾಗಲೇ ‘ಸೆಜ್ಜಿಲ್-2’ ಆವೃತ್ತಿಯನ್ನು ಅಭಿವೃದ್ಧಿಪಡಿಸಿದೆ ಮತ್ತು ‘ಸೆಜ್ಜಿಲ್-3’ ಅಭಿವೃದ್ಧಿಯ ಹಂತದಲ್ಲಿದೆ ಎಂದು ವರದಿಗಳು ಸೂಚಿಸಿವೆ.
ಇರಾನ್ ಹಾಗೂ ಅಮೆರಿಕ-ಇಸ್ರೇಲ್ ಯುದ್ಧ
ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಸಂಘರ್ಷ ಈಗ ಮೂರನೇ ವಾರಕ್ಕೆ ಕಾಲಿಟ್ಟಿದೆ. ಕಳೆದ ತಿಂಗಳು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್‌ನ ಮಿಲಿಟರಿ ಮತ್ತು ಪರಮಾಣು ನೆಲೆಗಳ ಮೇಲೆ ದಾಳಿ ನಡೆಸಿದ ನಂತರ ಯುದ್ಧ ತೀವ್ರಗೊಂಡಿತು. ಇದಕ್ಕೆ ಪ್ರತಿಯಾಗಿ ಇರಾನ್, ಇಸ್ರೇಲ್ ಮತ್ತು ಗಲ್ಫ್ ಪ್ರದೇಶದಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ.
ಈ ಸಂಘರ್ಷದಿಂದಾಗಿ ಪಶ್ಚಿಮ ಏಷ್ಯಾದಾದ್ಯಂತ ಭಾರಿ ಸಾವುನೋವು ಸಂಭವಿಸಿದೆ. ವಾಯುಯಾನ ಮಾರ್ಗಗಳು ಮತ್ತು ತೈಲ ಸಾಗಣೆಗೆ ತೀವ್ರ ಅಡಚಣೆಯಾಗಿದೆ. ವರದಿಗಳ ಪ್ರಕಾರ, ಈ ಯುದ್ಧದಲ್ಲಿ ಈಗಾಗಲೇ 2,000 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ, ಅವರಲ್ಲಿ ಹೆಚ್ಚಿನವರು ಇರಾನ್‌ನವರು.
ಪೆಂಟಗನ್ ಮಾಹಿತಿ ನೀಡಿದಂತೆ, ಯುದ್ಧ ಆರಂಭವಾದಾಗಿನಿಂದ ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್‌ನಾದ್ಯಂತ 15,000 ಕ್ಕೂ ಹೆಚ್ಚು ಟಾರ್ಗೆಟ್‌ಗಳ ಮೇಲೆ ದಾಳಿ ನಡೆಸಿವೆ. ಅಮೆರಿಕದ ಮಾಧ್ಯಮಗಳ ಪ್ರಕಾರ, ಯುದ್ಧ ಮುಂದುವರಿಯುತ್ತಿದ್ದಂತೆ USS ಟ್ರಿಪೋಲಿ (LHA-7) ಎಂಬ ಯುದ್ಧನೌಕೆ ಮತ್ತು ಸುಮಾರು 2,500 ಮರೀನ್ ಸೈನಿಕರನ್ನು ಈ ಪ್ರದೇಶಕ್ಕೆ ನಿಯೋಜಿಸಲಾಗಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement