ಹೊಟೇಲ್‌, ರೆಸ್ಟೋರೆಂಟ್​​ಗಳಿಗೆ ಗುಡ್ ನ್ಯೂಸ್: ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆ ಹೆಚ್ಚಳ ಮಾಡಿದ ಕೇಂದ್ರ

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ದೇಶದ ಇಂಧನ ಭದ್ರತೆ ಮತ್ತು ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಹಲವಾರು ಮಹತ್ವದ ಕ್ರಮಗಳನ್ನು ಕೈಗೊಂಡಿದೆ.
ವಾಣಿಜ್ಯ ಬಳಕೆಯ ಎಲ್‌ಪಿಜಿ (LPG) ಪೂರೈಕೆಯಲ್ಲಿ ರಾಜ್ಯಗಳಿಗೆ ಹೆಚ್ಚುವರಿ ಶೇ. 20ರಷ್ಟು ಸಿಲಿಂಡರ್‌ಗಳನ್ನು ನೀಡಲು ಸರ್ಕಾರ ಅನುಮೋದನೆ ನೀಡಿದೆ. ಇದರಿಂದಾಗಿ ಒಟ್ಟಾರೆ ಹಂಚಿಕೆಯು ಶೇ. 50ಕ್ಕೆ ಏರಿಕೆಯಾಗಲಿದೆ. ಇದರಲ್ಲಿ ಪೈಪ್ಡ್ ನೈಸರ್ಗಿಕ ಅನಿಲ (PNG) ವಿಸ್ತರಣೆಗಾಗಿ ಕೈಗೊಂಡ ‘Ease of Doing Business’ ಸುಧಾರಣೆಗಳ ಆಧಾರದ ಮೇಲೆ ನೀಡಲಾಗುವ ಶೇ. 10ರಷ್ಟು ಹಂಚಿಕೆಯೂ ಸೇರಿದೆ. ಮಾರ್ಚ್ 23, 2026ರಿಂದ (ಸೋಮವಾರ) ಜಾರಿಗೆ ಬರುವಂತೆ ರಾಜ್ಯಗಳಿಗೆ ಹೆಚ್ಚುವರಿ ಶೇ. 20ರಷ್ಟು LPG ಹಂಚಿಕೆ ಮಾಡಲಾಗುವುದು. ಮುಂದಿನ ಆದೇಶದವರೆಗೆ ಈ ವ್ಯವಸ್ಥೆ ಜಾರಿಯಲ್ಲಿರುತ್ತದೆ.
ಈ ಹೆಚ್ಚುವರಿ ಅನಿಲ ಪೂರೈಕೆಯನ್ನು ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಧಾಬಾಗಳು, ಕೈಗಾರಿಕಾ ಕ್ಯಾಂಟೀನ್‌ಗಳು ಮತ್ತು ಡೈರಿಗಳು,  ಸರ್ಕಾರಿ ಅಥವಾ ಸ್ಥಳೀಯ ಸಂಸ್ಥೆಗಳು ನಡೆಸುವ ಸಬ್ಸಿಡಿ ದರದ ಕ್ಯಾಂಟೀನ್‌ಗಳಿಗೆ ಆದ್ಯತೆಯ ಮೇರೆಗೆ ನೀಡಲು ಸೂಚಿಸಲಾಗಿದೆ.
ದೇಶದಲ್ಲಿ ಪೆಟ್ರೋಲ್, ಡೀಸೆಲ್ ಅಥವಾ ಎಲ್‌ಪಿಜಿ ಕೊರತೆಯಿಲ್ಲ ಎಂದು ಸರ್ಕಾರ ನಾಗರಿಕರಿಗೆ ಭರವಸೆ ನೀಡಿದ್ದು, ಯಾರೂ ಆತಂಕಕ್ಕೊಳಗಾಗಬಾರದು (Panic buying) ಎಂದು ಮನವಿ ಮಾಡಿದೆ.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ದೇಶೀಯ ಸಂಸ್ಕರಣಾಗಾರಗಳಿಂದ ಎಲ್‌ಪಿಜಿ ಉತ್ಪಾದನೆಯನ್ನು ಹೆಚ್ಚಿಸಿದೆ. ಪ್ರಮುಖ ನಗರಗಳಲ್ಲಿ ವಾಣಿಜ್ಯ ಗ್ರಾಹಕರು ಪೈಪ್ಡ್ ಗ್ಯಾಸ್ (PNG) ಸಂಪರ್ಕಕ್ಕೆ ಬದಲಾಗುವಂತೆ ಸೂಚಿಸಲಾಗಿದೆ.
ಕಾಳಸಂತೆ ಮಾರಾಟದ ವಿರುದ್ಧ ಕ್ರಮ: 
ಎಲ್‌ಪಿಜಿ ಸಿಲಿಂಡರ್‌ಗಳ ಕಾಳಸಂತೆ ಮಾರಾಟ ಮತ್ತು ಅಕ್ರಮ ದಾಸ್ತಾನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ರಾಜ್ಯಗಳಿಗೆ ಸೂಚಿಸಲಾಗಿದೆ. ಈಗಾಗಲೇ ವಿವಿಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ದಾಳಿಗಳು ಮುಂದುವರಿದಿವೆ.
ಭಾರತೀಯ ನಾವಿಕರ ಸುರಕ್ಷತೆ
ಬಂದರು ಮತ್ತು ಹಡಗು ಸಚಿವಾಲಯವು ಸಮುದ್ರ ವ್ಯಾಪಾರ ಮತ್ತು ಭಾರತೀಯ ನಾವಿಕರ ಸುರಕ್ಷತೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.
ಪ್ರಸ್ತುತ ಪಶ್ಚಿಮ ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿ 22 ಭಾರತೀಯ ಧ್ವಜ ಇರುವ ಹಡಗುಗಳು ಮತ್ತು 611 ಭಾರತೀಯ ನಾವಿಕರು ಇದ್ದಾರೆ. ಕಳೆದ 24 ಗಂಟೆಗಳಲ್ಲಿ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ ಮತ್ತು ಎಲ್ಲಾ ನಾವಿಕರು ಸುರಕ್ಷಿತವಾಗಿದ್ದಾರೆ.
ಈಗಾಗಲೇ 500ಕ್ಕೂ ಹೆಚ್ಚು ನಾವಿಕರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗಿದ್ದು, ಇದರಲ್ಲಿ ಇರಾಕ್‌ನಿಂದ ಮರಳಿದ ‘MT ಸಫೀಸಿಯಾ ವಿಷ್ಣು’ ಹಡಗಿನ 15 ಸಿಬ್ಬಂದಿಯೂ ಸೇರಿದ್ದಾರೆ.
 ಪಶ್ಚಿಮ ಏಷ್ಯಾದಲ್ಲಿರುವ ಭಾರತೀಯರ ರಕ್ಷಣೆಗಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಶ್ರಮಿಸುತ್ತಿದೆ. ಫೆಬ್ರವರಿ ಅಂತ್ಯದಿಂದ ಈವರೆಗೆ ಸುಮಾರು 3.3 ಲಕ್ಷ ಜನರು ಭಾರತಕ್ಕೆ ಮರಳಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement