48 ಗಂಟೆಗಳ ಒಳಗೆ ಹಾರ್ಮುಜ್ ಜಲಸಂಧಿ ತೆರೆಯದಿದ್ದರೆ ವಿದ್ಯುತ್‌ ಸ್ಥಾವರಗಳ ಮೇಲೆ ದಾಳಿ ; ಇರಾನಿಗೆ ಟ್ರಂಪ್ ಎಚ್ಚರಿಕೆ

ವಾಷಿಂಗ್ಟನ್/ತೆಹ್ರಾನ್: ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದ್ದು, ವಿಶ್ವದ ತೈಲ ಪೂರೈಕೆಯ ಪ್ರಮುಖ ಕೇಂದ್ರವಾದ ‘ಹಾರ್ಮುಜ್ ಜಲಸಂಧಿ’ಯನ್ನು (Strait of Hormuz) ಕೂಡಲೇ ಸಂಪೂರ್ಣವಾಗಿ ತೆರೆಯಬೇಕು. ಇಲ್ಲದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ತಮ್ಮ ‘ಟ್ರೂತ್ ಸೋಶಿಯಲ್’ ಖಾತೆಯಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, “ಇರಾನ್ ಯಾವುದೇ ಬೆದರಿಕೆ ಇಲ್ಲದೆ ಹಾರ್ಮುಜ್ ಜಲಸಂಧಿಯನ್ನು ಮುಂದಿನ 48 ಗಂಟೆಗಳ ಒಳಗಾಗಿ ಸಂಪೂರ್ಣವಾಗಿ ತೆರೆಯಬೇಕು. ಒಂದು ವೇಳೆ ಹಾಗೆ ಮಾಡದಿದ್ದರೆ, ಅಮೆರಿಕವು ಇರಾನ್‌ನ ವಿದ್ಯುತ್ ಸ್ಥಾವರಗಳ ಮೇಲೆ ದಾಳಿ ಮಾಡಿ ಅವುಗಳನ್ನು ಧ್ವಂಸಗೊಳಿಸಲಿದೆ. ಈ ದಾಳಿಯು ಇರಾನ್‌ನ ಅತಿ ದೊಡ್ಡ ವಿದ್ಯುತ್ ಸ್ಥಾವರದಿಂದಲೇ ಆರಂಭವಾಗಲಿದೆ” ಎಂದು ಗುಡುಗಿದ್ದಾರೆ. ಭಾರತೀಯ ಕಾಲಮಾನದ ಪ್ರಕಾರ ಮಂಗಳವಾರ ಬೆಳಿಗ್ಗೆ ಈ ಗಡುವು ಮುಕ್ತಾಯವಾಗಲಿದೆ.

ಇರಾನ್‌ನ ಪ್ರತಿ ಬೆದರಿಕೆ:
ಟ್ರಂಪ್ ಅವರ ಈ ಎಚ್ಚರಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಇರಾನ್ ಸೇನೆ, “ಒಂದು ವೇಳೆ ನಮ್ಮ ದೇಶದ ಇಂಧನ ಮೂಲಸೌಕರ್ಯಗಳ ಮೇಲೆ ದಾಳಿಯಾದರೆ, ಈ ಭಾಗದಲ್ಲಿರುವ ಅಮೆರಿಕದ ಎಲ್ಲಾ ಇಂಧನ, ತಂತ್ರಜ್ಞಾನ ಮತ್ತು ನೀರು ಶುದ್ಧೀಕರಣ ಘಟಕಗಳ ಮೇಲೆ ದಾಳಿ ಮಾಡಲಾಗುವುದು” ಎಂದು ತಿರುಗೇಟು ನೀಡಿದೆ.
ಹಾರ್ಮುಜ್ ಜಲಸಂಧಿ ಬಂದ್:
ಕಳೆದ ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ದಾಳಿಯ ನಂತರ, ಇರಾನ್ ಈ ಪ್ರಮುಖ ಜಲಸಂಧಿಯನ್ನು ಬಂದ್ ಮಾಡಿದೆ. ವಿಶ್ವದ ಶೇ. 20ರಷ್ಟು ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ ಇದೇ ಮಾರ್ಗವಾಗಿ ಸಾಗುವುದರಿಂದ ಜಾಗತಿಕವಾಗಿ ತೈಲ ಬೆಲೆ ಗಗನಕ್ಕೇರಿದೆ. ಬ್ರಿಟನ್, ಫ್ರಾನ್ಸ್, ಜರ್ಮನಿ ಮತ್ತು ಯುಎಇ ಸೇರಿದಂತೆ ಹಲವು ರಾಷ್ಟ್ರಗಳು ಇರಾನ್‌ನ ಈ ಕ್ರಮವನ್ನು ಖಂಡಿಸಿದ್ದು, ಇದು ಜಾಗತಿಕ ಆರ್ಥಿಕತೆಯ ಮೇಲೆ ದೊಡ್ಡ ಹೊಡೆತ ನೀಡಲಿದೆ ಎಂದು ಆತಂಕ ವ್ಯಕ್ತಪಡಿಸಿವೆ.
ಶನಿವಾರ ಇರಾನ್‌ನ ಪ್ರಮುಖ ‘ನತಾಂಜ್’ ಅಣು ಸ್ಥಾವರದ ಮೇಲೆ ವೈಮಾನಿಕ ದಾಳಿ ನಡೆದಿದೆ. ಇದಕ್ಕೆ ಪ್ರತಿಯಾಗಿ ಇರಾನ್, ಇಸ್ರೇಲ್‌ನ ಅಣು ಸಂಶೋಧನಾ ಕೇಂದ್ರವಿರುವ ‘ಡಿಮೋನಾ’ ಮತ್ತು ‘ಅರಾದ್’ ಪಟ್ಟಣಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದು, ಈ ಘಟನೆಯಲ್ಲಿ 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಯುದ್ಧವನ್ನು ಕೊನೆಗೊಳಿಸುವ ಮಾತುಗಳನ್ನಾಡುತ್ತಿದ್ದ ಟ್ರಂಪ್, ಈಗ ದಿಢೀರನೆ ದಾಳಿಯ ಎಚ್ಚರಿಕೆ ನೀಡಿರುವುದು ಇಡೀ ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿಯನ್ನು ಮತ್ತಷ್ಟು ಹೆಚ್ಚಿಸಿದೆ.

ಪ್ರಮುಖ ಸುದ್ದಿ :-   ಟ್ರಂಪ್ ಹತ್ಯೆ ಮಾಡಿದವರಿಗೆ ₹96 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿದ ಇರಾನ್ ಬೆಂಬಲಿತ ಇರಾಕಿನ ಬಂಡುಕೋರರ ಗುಂಪು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement